ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಲ್ಲಿ ಬಂದ್ ಬಹುತೇಕ ಯಶಸ್ವಿ

Last Updated 17 ಜುಲೈ 2012, 5:35 IST
ಅಕ್ಷರ ಗಾತ್ರ

ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಅವರ ಅಭಿಮಾನಿ ಬಳಗ ಕರೆ ನೀಡಿದ್ದ `ಸಾಗರ ಬಂದ್~ ಅಂಗವಾಗಿ ಸೋಮವಾರ ಬಹುತೇಕ ಯಶಸ್ವಿಯಾಯಿತು.
ಆದರೆ, ಬೇಳೂರು ಅಭಿಮಾನಿ ಬಳಗದವರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಬೆಳಿಗ್ಗೆ ನಗರದಲ್ಲಿ ಹಾಲು ಹಾಗೂ ಪತ್ರಿಕೆಗಳ ಸರಬರಾಜು ಎಂದಿನಂತೆ ಇತ್ತು. ಖಾಸಗಿ ಹಾಗೂ ಸರ್ಕಾರಿ ಬಸ್ ಸಂಚಾರವೂ ಸುಗಮವಾಗಿತ್ತು. ಕೆಲವು ಶಾಲೆಗಳಿಗೆ ಹಿಂದಿನ ದಿನವೇ ರಜೆ ಘೋಷಿಸಲಾಗಿತ್ತು. ಯಾವ ಕಾಲೇಜು ಹಾಗೂ ಶಾಲೆಗಳಲ್ಲಿ ತರಗತಿಗಳು ನಡೆಯುತ್ತಿತ್ತೋ ಅಲ್ಲಿಗೆ ತೆರಳಿದ ಬೇಳೂರು ಅಭಿಮಾನಿ ಬಳಗದವರು ತರಗತಿ ನಡೆಸದಂತೆ ತಾಕೀತು ಮಾಡಿದ್ದರಿಂದ ರಜೆ ಘೋಷಿಸಬೇಕಾಯಿತು.

ಪ್ರತಿಭಟನಾಕಾರರು ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ 10ರ ಸುಮಾರಿಗೆ ತೆರಳಿ ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಾಕಿದರು. ಎಲ್ಲೆಲ್ಲಿ ಅಂಗಡಿಗಳನ್ನು ತೆರೆಯಲಾಗಿತ್ತೋ ಅಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಅವರು ಒತ್ತಾಯಪಡಿಸಿದರು. ಕೆಲವೆಡೆ ಅಂಗಡಿ ಮಾಲೀಕರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಖಾಸಗಿ ಬಸ್‌ನಿಲ್ದಾಣದಲ್ಲಿ ಈ ಹಿಂದೆ ಬೇಳೂರು ಜತೆಗಿದ್ದು, ಈಗ ದೂರವಾಗಿರುವ ಒಂದು ಗುಂಪು ಹಾಗೂ ಬೇಳೂರು ಅಭಿಮಾನಿ ಬಳಗದ ಗುಂಪಿನ ನಡುವೆ ಬಸ್ ಸಂಚಾರದ ವಿಷಯದಲ್ಲಿ ತೀವ್ರ ವಾಗ್ವಾದ ನಡೆಯಿತು. ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸಲು ಬಸ್ ಸಂಚಾರ ಆರಂಭಿಸಿ ಎಂದು ಒಂದು ಗುಂಪು ವಾದಿಸಿತು. ಮತ್ತೊಂದು ಗುಂಪು ಇದಕ್ಕೆ ವಿರೋಧ ಸೂಚಿಸಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳನ್ನು ಮುಚ್ಚುವಂತೆ ಬೇಳೂರು ಅಭಿಮಾನಿ ಬಳಗದವರು ತಾಕೀತು ಮಾಡಿದ್ದರಿಂದ ಕೆಲವು ಕಾಲ ಅಲ್ಲಿ ವ್ಯವಹಾರ ನಡೆಯಲಿಲ್ಲ. ಈ ಪ್ರತಿಭಟನಾಕಾರರು ನಗರಸಭಾ ಕಚೇರಿ ಬಳಿ ಧಾವಿಸಿ ಕಚೇರಿಯ ಬಾಗಿಲು ಮುಚ್ಚುವಂತೆ ಒತ್ತಾಯಪಡಿಸಿದರು. ಕೆಲವು ವ್ಯಕ್ತಿಗಳು ಕಚೇರಿಯ ಒಳಗೆ ನುಗ್ಗಿ ಗಾಜನ್ನು ಒಡೆದರು.

ನ್ಯಾಯಾಲಯದಲ್ಲಿ ಎಂದಿನಂತೆ ಕಾರ್ಯಕಲಾಪ ನಡೆಯಿತು. ಸರ್ಕಾರಿ ಕಚೇರಿಗಳಿಗೆ ಬರುವ ಸಿಬ್ಬಂದಿ ವರ್ಗದವರಿಗೆ ಬಸ್‌ನ ಸೌಕರ್ಯ ಸಕಾಲದಲ್ಲಿ ದೊರಕದೆ ಪರದಾಡುವಂತಾಯಿತು. ಪ್ರತಿಭಟನಾಕಾರರು ಗಣಪತಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟು ಖಾಸಗಿ ಬಸ್‌ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ಈ ಸಭೆ ಮುಗಿಯುತ್ತಿದ್ದಂತೆ ಬಸ್‌ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಯಿತು. ಮಧ್ಯಾಹ್ನದ ನಂತರ ಅಂಗಡಿ, ಹೋಟೆಲ್‌ಗಳು ತೆರೆದಿದ್ದವು.

ಪ್ರತಿಭಟನೆಯಲ್ಲಿ ಬೇಳೂರು ಅಭಿಮಾನಿ ಬಳಗದ ಚಂದ್ರಶೇಖರ ಅದರಂತೆ, ಆರ್.ಸಿ.ಮಂಜುನಾಥ್, ರೋಹಿಣಿ ನಾಗರಾಜ್, ಸುವರ್ಣ ಟೇಕಪ್ಪ, ನಗರಸಭಾ ಉಪಾಧ್ಯಕ್ಷ ಡಿ.ರವಿ, ಸದಸ್ಯರಾದ ಡಿ.ಎಸ್. ಸುಧೀಂದ್ರ, ಎಸ್.ವಿ. ಕೃಷ್ಣಮೂರ್ತಿ, ಗಂಗಮ್ಮ, ಹಸೀನಾ ಫರ್ವೇಜ್, ಫ್ರಾನ್ಸೀಸ್ ಗೋಮ್ಸ, ಟಿಪ್‌ಟಾಪ್ ಬಶೀರ್, ಕಸ್ತೂರಿ ನಾಗರಾಜ್, ಮಾಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್, ಆಪ್ಸ್‌ಕೋಸ್ ಉಪಾಧ್ಯಕ್ಷ ಬಿ.ಎ. ಇಂದೂಧರ ಗೌಡ, ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಂಡಗಳಲೆ ಗಣಪತಿ, ಬೆಳೆಯೂರು ವೆಂಕಟೇಶ್  ಪಾಲ್ಗೊಂಡಿದ್ದರು.

ತಾಳಗುಪ್ಪದಲ್ಲೂ ಬಂದ್
ತಾಲ್ಲೂಕಿನ ತಾಳಗುಪ್ಪದಲ್ಲೂ ಬಂದ್ ಆಚರಿಸಲಾಯಿತು. ಇಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಗುರುರಾಜ, ಓಂಕಾರ, ರಾಮು, ಜಗನ್ನಾಥ್ ಇನ್ನಿತರರು ಪಾಲ್ಗೊಂಡಿದ್ದರು.ತಾಲ್ಲೂಕಿನ ಆನಂದಪುರಂನಲ್ಲಿ ಬಂದ್ ಮಾಡುವಂತೆ ಯಾರೂ ಒತ್ತಾಯಪಡಿಸದ ಹಿನ್ನೆಲೆಯಲ್ಲಿ ಅಲ್ಲಿ ಯಾವುದೆ ಬಂದ್ ಆಚರಣೆ ನಡೆಯಲಿಲ್ಲ. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಹೊಸನಗರ ಬಂದ್ 
ಹೊಸನಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಅವರ ಅಭಿಮಾನಿಗಳು ಸೋಮವಾರ ನೀಡಿದ ಹೊಸನಗರ ಬಂದ್ ಕರೆ ಯಶಸ್ವಿಯಾಯಿತು.ಪಟ್ಟಣದ ಅಂಗಡಿ, ಮುಂಗಟ್ಟು, ಹೋಟೆಲ್‌ಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಖಾಸಗಿ ಹಾಗೂ ಸರ್ಕಾರಿ  ಶಾಲೆಗಳು ಬಂದ್ ಆಗಿದ್ದವು, ಬಸ್ ಸಂಚಾರ ಸ್ವಲ್ಪ ಕಾಲ ಅಸ್ತವ್ಯಸ್ತವಾಗಿತ್ತು. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಹ ಜನರಿಲ್ಲದೆ ಬಿಕೋ ಅನ್ನುತ್ತಿತ್ತು.

ಬೇಳೂರು ಅಭಿಮಾನಿಗಳು `ಮಂತ್ರಿ ಪದವಿ~ ನೀಡುವಂತೆ ಒತ್ತಾಯಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ರಸ್ತೆತಡೆ ಹಾಗೂ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.ನಂತರ, ಕೋರ್ಟ್ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಬಿ. ಯುವರಾಜ್, ಸಣ್ಣಕ್ಕಿ ಮಂಜು, ಕಾಯಿ ತಿಮ್ಮಪ್ಪ, ಎಂ.ಪಿ. ಶಿವಪ್ಪ  ಹಾಜರಿದ್ದರು.
 

ಶಾಸಕ ಬೇಳೂರು ವಿರುದ್ಧ ರಾಜಕೀಯ ಪಿತೂರಿ

ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯ ಪ್ರಭಾವಿ ನಾಯಕರಾಗಿ ಬೆಳೆಯುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡರೇ ವ್ಯವಸ್ಥಿತ ಪಿತೂರಿ ನಡೆಸಿ ಅದಕ್ಕೆ ತಡೆಯೊಡ್ಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೋಹಿಣಿ ನಾಗರಾಜ್ ಹೇಳಿದರು.

ಬೇಳೂರು ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಅವರ ಅಭಿಮಾನಿ ಬಳಗ ಸೋಮವಾರ ಕರೆ ನೀಡಿದ್ದ `ಸಾಗರ ಬಂದ್~ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಭೂನ್ಯಾಯ ಮಂಡಳಿ ಸದಸ್ಯ ಆರ್.ಸಿ. ಮಂಜುನಾಥ್ ಮಾತನಾಡಿ, ಈ ತಾಲ್ಲೂಕಿನಲ್ಲಿ ಬಿಜೆಪಿ ರಾಜಕೀಯವಾಗಿ ನೆಲೆ ಕಂಡ್ದ್ದಿದೆ ಬೇಳೂರು ಅವರಿಂದ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದ್ದ್ದದು ಬೇಳೂರು. ನಂತರ, ತಮ್ಮ ರಾಜಕೀಯ ಗುರು ಬಂಗಾರಪ್ಪ ಅವರನ್ನೇ ಎದುರು ಹಾಕಿಕೊಂಡು ರಾಘವೇಂದ್ರ ಗೆಲುವಿಗೆ ಶ್ರಮಿಸಿದ್ದಾರೆ. ಆದರೂ, ಅವರಿಗೆ ಸಚಿವ ಸ್ಥಾನ ನೀಡದೆ ವಂಚಿಸಲಾಗಿದೆ ಎಂದು ದೂರಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಲಸೆ ಚಂದ್ರಪ್ಪ, ನವೀನ್‌ಕುಮಾರ್, ಸುವರ್ಣಾ ಟೇಕಪ್ಪ, ಗಣಪತಿ ಹಳ್ಳಿಮಟ್ಟಿ, ಫ್ರಾನ್ಸೀಸ್ ಗೋಮ್ಸ, ಹಸೀನಾ ಫರ್ವೇಜ್, ಮಹಮದ್ ಸಾದಿಕ್, ಪ್ರಕಾಶ್ ಮಾಸೂರು, ಹನುಮಂತಪ್ಪ, ಚಂದ್ರಶೇಖರ ಅದರಂತೆ ಮಾತನಾಡಿದರು.
ಪಕ್ಷದ ಸೂಚನೆ ಧಿಕ್ಕರಿಸಿದವರು

ಬೇಳೂರು ಅಭಿಮಾನಿ ಬಳಗ ನೀಡಿದ್ದ ಬಂದ್ ಕರೆಗೆ ತಾಲ್ಲೂಕು ಬಿಜೆಪಿ ಘಟಕ ಬೆಂಬಲ ಸೂಚಿಸಿರಲಿಲ್ಲ. ಈ ಬಂದ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ವತಿಯಿಂದ ಅಧಿಕೃತವಾಗಿ ಹೇಳಿಕೆ ಕೂಡ ನೀಡಲಾಗಿತ್ತು. ಆದರೂ, ಬಿಜೆಪಿಯ ನಗರಸಭಾ ಉಪಾಧ್ಯಕ್ಷ ಡಿ. ರವಿ, ಸದಸ್ಯರಾದ ಡಿ.ಎಸ್. ಸುಧೀಂದ್ರ, ಎಸ್.ವಿ. ಕೃಷ್ಣಮೂರ್ತಿ, ಕಸ್ತೂರಿ ನಾಗರಾಜ್, ಗಂಗಮ್ಮ, ಹಸೀನಾ ಫರ್ವೇಜ್, ಉಮಾವತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT