ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾದರ ಸಾಮ್ರಾಜ್ಯದಲ್ಲಿ ಸಮಸ್ಯೆಗಳ ಥೈ ಥೈ!

Last Updated 1 ಏಪ್ರಿಲ್ 2014, 20:20 IST
ಅಕ್ಷರ ಗಾತ್ರ

ದಾವಣಗೆರೆ: ‘ಒಂದು ಗ್ರಾಮವನ್ನು ನಿಯಂತ್ರಿಸಲು ಸಾಧ್ಯವಾಗದ ಈ ಮಂದಿ ಇನ್ನು ದೇಶವನ್ನು ಹೇಗೆ ಆಳುತ್ತಾರೆ?’
ಹೊನ್ನಾಳಿ ತಾಲ್ಲೂಕಿನ ಬಿದರಗೆಡ್ಡೆ ಗ್ರಾಮ­ದಲ್ಲಿ ಇರುವ ತಮ್ಮ ಮನೆಯ ಜಗುಲಿಯಲ್ಲಿ ಕುಳಿತ ರೈತ ನಾಯಕ ಭರಮ ಗೌಡ ಪ್ರಶ್ನೆ ಮಾಡಿದ್ದು ಹೀಗೆ.

‘ಈಗ ನಮ್ಮ ಗ್ರಾಮವನ್ನೇ ಉದಾಹರಣೆ­ಯಾಗಿ ತೆಗೆದುಕೊಳ್ಳಿ. ಇಲ್ಲಿ ವಿಪರೀತ ಅಕ್ರಮ ಮರಳುಗಾರಿಕೆ ನಡೆಯುತ್ತದೆ. ಇದನ್ನು ತಡೆಯಿರಿ ಎಂದು ತಹಶೀಲ್ದಾರ್‌, ಜಿಲ್ಲಾಧಿಕಾರಿ, ಸಚಿವರು, ಮುಖ್ಯಮಂತ್ರಿ ಸೇರಿ ಎಲ್ಲರಿಗೂ ಒತ್ತಾಯ ಮಾಡಿದ್ದೆವು. ಅಕ್ರಮ ಮರಳುಗಾರಿಕೆ ವಿರುದ್ಧ ಪ್ರತಿಭಟನೆಯನ್ನೂ ಮಾಡಿದೆವು. ಆದರೆ ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದೊಂದನ್ನೇ ನಿಲ್ಲಿಸಲು ಸಾಧ್ಯವಾಗದ ಜನ ದೇಶದ ಸವಾಲುಗಳನ್ನು ನಿಭಾಯಿತ್ತಾರೆ  ಹೇಗೆ?’ ಎಂದು ಮತ್ತೆ ಪ್ರಶ್ನಿಸಿದರು.

ಚನ್ನಗಿರಿ, ಹೊನ್ನಾಳಿ, ಹರಿಹರ ಮುಂತಾದ ಕಡೆ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ನದಿ ದಡದ ರೈತರು ವ್ಯವಸಾಯ ಮಾಡುವುದನ್ನು ಬಿಟ್ಟು ಮರಳು ಸಂಗ್ರಹಕ್ಕೆ ತಮ್ಮ ಜಮೀನುಗಳನ್ನು ಬಿಟ್ಟುಕೊಡುತ್ತಿದ್ದಾರೆ. ಕಷ್ಟ­ಪಟ್ಟು ಕೃಷಿ ಮಾಡುವುದಕ್ಕಿಂತ ರೈತರಿಗೆ ಇದೇ ಆಕರ್ಷಕವಾಗಿದೆ.

ಜವಳಿ ಜಿಲ್ಲೆ ಎಂಬ ಖ್ಯಾತಿಗೆ ಹೊತ್ತಿದ್ದ ದಾವಣಗೆರೆಯಲ್ಲಿ ಈಗ ಜವಳಿ ಗಿರಣಿಗಳಿಲ್ಲ. ಅಕ್ಕಿ ಗಿರಣಿಗಳೇ ತುಂಬಿಕೊಂಡಿದ್ದರೂ ಬತ್ತ ಬೆಳೆಯುವ ರೈತರೂ ನೆಮ್ಮದಿಯಿಂದ ಇಲ್ಲ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬೇಸಿಗೆ ಬತ್ತದ ಹಸಿರು ಗದ್ದೆಗಳು ಕಣ್ಮನ ಸೆಳೆಯು­ತ್ತಿದ್ದರೂ ಬೆಲೆ ಕುಸಿತದ ಭೀತಿ ರೈತರ ಮುಖ­ಗಳಲ್ಲಿ ಮಡುಗಟ್ಟಿದೆ. ಈ ಹೊತ್ತಿನಲ್ಲಿ ಬಂದಿರುವ ಲೋಕಸಭಾ ಚುನಾವಣೆ ಬಗ್ಗೆ ಜನರಲ್ಲಿ ಉತ್ಸಾಹ ಏನೂ ಇಲ್ಲ. ‘ಯಾರು ಗೆದ್ದು ಬಂದರೂ ನಾವು ರಾಗಿ ಬೀಸೋದು ತಪ್ಪುವುದಿಲ್ಲ’ ಎಂಬ ಭಾವನೆಯೇ ಜನರ ಮನ­ದಲ್ಲಿದೆ.

ಈಗಿನ ಚುನಾವಣೆಯಲ್ಲಿ ರೈತರು ರಾಜಕೀಯವಾಗಿ ಯಾವ ನಿರ್ಧಾರ ಕೈಗೊಳ್ಳು­ತ್ತಾರೆ ಎಂದು ಪ್ರಶ್ನೆ ಮಾಡಿ­ದರೆ, ‘ಎಲ್ಲ ರಾಜಕಾರಣಿ­ಗಳೂ ಮತ ಕೇಳುವ ಹಕ್ಕನ್ನೇ ಕಳೆದು­ಕೊಂಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲರೂ ತಪ್ಪು ಮಾಡಿ­ದ್ದಾರೆ. ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ. ಜನರು ಕೇಳುವ ಪ್ರಶ್ನೆಗೂ ಅವರ ಬಳಿ ಉತ್ತರ ಇಲ್ಲ. ಹೀಗಿರುವಾಗ ರೈತರು ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯ?’ ಎಂದು ಭರಮ ಗೌಡ ಕೇಳುತ್ತಾರೆ.

ಜಿಲ್ಲೆ ತುಂಬ ನೀರಸ ವಾತಾವರಣ ಇದ್ದರೂ ರಾಜಕೀಯ ಕಾರ್ಯಕರ್ತರು ಮಾತ್ರ ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಾದರ ಲಿಂಗಾಯತರು ಹೆಚ್ಚು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.­ಮಲ್ಲಿಕಾರ್ಜುನ್‌ ಮತ್ತು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಇಬ್ಬರೂ ಈ ಉಪ ಪಂಗಡಕ್ಕೆ ಸೇರಿದವರು. ಜೆಡಿಎಸ್‌ ಅಭ್ಯರ್ಥಿ ಮಹಿಮ ಪಟೇಲ್‌ ಲಿಂಗಾಯತರೇ ಆದರೂ ಅವರು ಬಣಜಿಗ ಲಿಂಗಾಯತರು. ಮಹಿಮ ಅವರು ಬಣಜಿಗರು, ಪಂಚಮಸಾಲಿಗಳು ಹಾಗೂ ನೊಣಬರ ಎಷ್ಟು ವೋಟ್‌ ಕಸಿಯುತ್ತಾರೆ, ಅಲ್ಪ­ಸಂಖ್ಯಾತರು ಎಷ್ಟು ಅವರನ್ನು ಬೆಂಬಲಿಸುತ್ತಾರೆ ಎನ್ನುವ ಲೆಕ್ಕಾಚಾರ ಕ್ಷೇತ್ರದ ಬಹುತೇಕ ಕಡೆ ನಡೆದಿದೆ.

ರೈತರು ಮಾತ್ರ ಈ ಎಲ್ಲಾ ಲೆಕ್ಕಾಚಾರಗಳಿಂದ ದೂರ ಉಳಿದಿದ್ದಾರೆ. ಅವರ ಮನದಲ್ಲಿ ಚುನಾವಣೆಗಿಂತ ಇತರ ಸಮಸ್ಯೆಗಳೇ ಥೈ ಥೈ ಎಂದು ಕುಣಿಯುತ್ತಿವೆ. ಬತ್ತದ ಬೆಲೆ ಕುಸಿದಿದೆ. ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ಸಿಕ್ಕಿಲ್ಲ. ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದರೂ ಅದರ ಹಣವನ್ನು ಇನ್ನೂ ನೀಡಿಲ್ಲ. ಇದು ಅವರನ್ನು ಕೆರಳಿಸಿದೆ.

‘ಮೆಕ್ಕೆಜೋಳ ಸಂಗ್ರಹಕ್ಕೆ ಜಿಲ್ಲೆಯಲ್ಲಿ ಗೋದಾಮುಗಳೇ ಇರಲಿಲ್ಲ. ಪ್ರತಿ ಖರೀದಿ ಕೇಂದ್ರಗಳ ಬಳಿ ರೈತರು ಟ್ರ್ಯಾಕ್ಟರ್‌ಗಳಲ್ಲಿ ಮೆಕ್ಕೆ­ಜೋಳದ ಚೀಲಗಳನ್ನು ತುಂಬಿಕೊಂಡು ಮೈಲು­ಗಟ್ಟಲೆ ಕ್ಯೂ ನಿಂತು 5–6 ದಿನ ಕಾದು ಮಾರಾಟ ಮಾಡಿದ್ದಾರೆ. ಆದರೆ ಇನ್ನೂ ಅದರ ಬಾಬ್ತಿನ ಹಣ ಕೊಟ್ಟಿಲ್ಲ. ₨ 120 ಕೋಟಿ ಬರಬೇಕಾಗಿದೆ. ಮೆಕ್ಕೆಜೋಳ ಮಾರಾಟಕ್ಕೆ ಕಾದು ನಿಂತ ಸಂದರ್ಭ­ದಲ್ಲಿಯೇ ಆಲಿಕಲ್ಲು ಮಳೆ ಸುರಿದು ಮೆಕ್ಕಜೋಳ ಒದ್ದೆಯಾಗಿ ಮೊಳಕೆ ಕೂಡ ಬಂದಿತ್ತು. ಅದಕ್ಕೆ ಒಂದು ಹನಿ ಕಣ್ಣೀರನ್ನೂ ಯಾವುದೇ ರಾಜಕಾರ­ಣಿ­ಗಳು ಹರಿಸಲಿಲ್ಲ. ಈಗ ಅವರು ನಮ್ಮ ಮನೆ ಬಾಗಿಲಿಗೆ ಬಂದರೆ ನಾವೂ ಯಾಕೆ ಕ್ಯಾರೇ ಅನ್ನಬೇಕು’ ಎಂದು ರೈತ ಬಸವ­ರಾಜಪ್ಪ ಪ್ರಶ್ನೆ ಮಾಡುತ್ತಾರೆ.
ರಾಜ್ಯ ಸರ್ಕಾರ ಕಾರಣ: ‘ಏನ್ರಿ ರೈತರು ಹೀಗಂತಾರಲ್ರಿ?’ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.­ಸಿದ್ದೇಶ್ವರ ಅವರನ್ನು ಪ್ರಶ್ನೆ ಮಾಡಿದರೆ, ‘ಇದು ರಾಜ್ಯ ಸರ್ಕಾರದ ತಪ್ಪು. ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಆರಂಭಿಸಿದ ಮೇಲೆ ರೈತರಿಗೆ ಹಣ ನೀಡುವುದು ಸರ್ಕಾರದ ಕರ್ತವ್ಯ. ಖರೀದಿ ಮಾಡಿದ 15 ದಿನದಲ್ಲಿ ಹಣ ನೀಡುತ್ತೇವೆ ಎಂದವರು ಇನ್ನೂ ನೀಡಿಲ್ಲ’ ಎಂದು ಹೇಳುತ್ತಾರೆ.

ಇದೇ ಪ್ರಶ್ನೆಯನ್ನು ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗೆ ಕೇಳಿದರೆ, ‘ಮೆಕ್ಕೆ­ಜೋಳದ ಹಣ ಎಲ್ಲಿಯೂ ಹೋಗುವು­ದಿಲ್ಲ. ಸರ್ಕಾರ ಕೊಟ್ಟೇ ಕೊಡುತ್ತದೆ. ಜಿಲ್ಲೆಗೆ ಬೇಕಾ­ದಷ್ಟು ಹಣವನ್ನು ಈಗಾಗಲೇ ಬಿಡುಗಡೆ ಮಾಡ­ಲಾಗಿದೆ. ಹಣ ನೀಡುವಂತೆ ಜಿಲ್ಲಾಧಿಕಾರಿ­ಗಳಿಗೆ ಸೂಚನೆ ಕೂಡ ನೀಡಲಾಗಿದೆ. ಚುನಾ­ವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಹಣ ನೀಡದೇ ಇರಬಹುದು. ಚುನಾವಣೆ ಮುಗಿದ ತಕ್ಷಣ ಎಲ್ಲ ರೈತರಿಗೂ ಹಣ ನೀಡಲಾಗುವುದು’ ಎಂದರು.

ಈ ಬಗ್ಗೆ ಜೆಡಿಎಸ್‌ ಅಭ್ಯರ್ಥಿ ಮಹಿಮ ಪಟೇಲ್‌ ಹೇಳುವುದೇ ಬೇರೆ.  ಮೆಕ್ಕೆಜೋಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಇದಕ್ಕೆ ಪರಿಹಾರ. ಮೆಕ್ಕೆಜೋಳ ಸಂಗ್ರಹಿಸಲು ಅಗತ್ಯ­ವಾದ ಉಗ್ರಾಣಗಳನ್ನೇ ಇನ್ನೂ ನಿರ್ಮಾಣ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಾಕಷ್ಟು ನೀರಾವರಿ ಪ್ರದೇಶ ಇರುವುದರಿಂದ ಈ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳೇ ಚುನಾವಣೆಯ ವಿಷಯ. ಕಳೆದ ಬಾರಿ ಅಡಿಕೆಗೆ ಭಾರಿ ಪ್ರಮಾಣದಲ್ಲಿ ಕೊಳೆ ರೋಗ ಬಂದಿತ್ತು. ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶಗಳಲ್ಲಿ ಕೊಳೆ ರೋಗ ಬಂದು ಅಡಿಕೆ ನಾಶವಾಗಿದೆ. ಇದಕ್ಕೆ ಬಿಡುಗಡೆಯಾದ ಪರಿಹಾರ ₨ 1 ಕೋಟಿ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸಂತೆಬೆನ್ನೂರು ಹೋಬಳಿ, ಕೆರೆಬಿಳಚಿ ಮುಂತಾದ ಕಡೆ ಮಾವು ಹೆಚ್ಚಾಗಿ ಬೆಳೆಯುತ್ತಾರೆ. ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಗಳೂ ಇಲ್ಲ. ಇದೂ ಕೂಡ ರೈತರನ್ನು ಸಿಟ್ಟಿಗೆಬ್ಬಿಸಿದೆ.

ಭದ್ರಾ ಬಲದಂಡೆ ನಾಲೆಯ ಕೊನೆಯ ಭಾಗದ ರೈತರಿಗೆ ಈಗಲೂ ನೀರು ಬರುವುದಿಲ್ಲ. ಇದಕ್ಕೆ ಅಕ್ರಮ ಪಂಪ್‌ಸೆಟ್‌ಗಳು ಕಾರಣ. ನಾಲೆಗಳಿಂದ ನೀರನ್ನು ಅಕ್ರಮವಾಗಿ ತೆಗೆಯ­ಲಾಗುತ್ತದೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 200 ಅಕ್ರಮ ಪಂಪ್‌ಸೆಟ್‌ಗಳಿವೆ. ನೀರೂ ಅಕ್ರಮ. ವಿದ್ಯುತ್‌ ಕೂಡ ಅಕ್ರಮ. ಇದಕ್ಕೆ ತಡೆಯೊಡ್ಡಬಲ್ಲ ಅಧಿಕಾರಿ ಮತ್ತು ರಾಜಕಾರ­ಣಿ­ಗಾಗಿ ದಾವಣಗೆರೆ ಜಿಲ್ಲೆ ದಶಕಗಳಿಂದ ಕಾಯುತ್ತಲೇ ಇದೆ.

ಇಂತಹ ಸಮಸ್ಯೆಗಳ ಒತ್ತಡದಲ್ಲಿಯೇ ಈಗ ಮತ್ತೊಂದು ಚುನಾವಣೆ ಬಂದಿದೆ. ಬಿಜೆಪಿಗೆ ಮೋದಿ ಅಲೆಯ ವಿಶ್ವಾಸ. ಕಾಂಗ್ರೆಸ್‌ಗೆ ಅನುಕಂಪದ ಆಧಾರ. ಜೆಡಿಎಸ್‌ಗೆ ಅಸ್ತಿತ್ವದ ಹೋರಾಟ. ಕಂಗೆಟ್ಟ ರೈತ ಮಾತ್ರ ಅತಂತ್ರ.

ಮರಳು ತೆಗೆಯಲು ಸೀಮೆ ಎಣ್ಣೆ!
ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿದೆ. ನದಿ ದಂಡೆ ಮತ್ತು ನದಿ ಪಾತ್ರದಲ್ಲಿರುವ ಮರಳು ಬಹುತೇಕ ಮುಗಿದು ಹೋಗಿದೆ. ಅದಕ್ಕಾಗಿ ಈಗ ನದಿಯಲ್ಲಿ ಮುಳುಗಿ ಆಳದಲ್ಲಿ ಇರುವ ಮರಳನ್ನು ತೆಗಯಲಾಗುತ್ತಿದೆ. ಇದಕ್ಕೆ ಬಿಹಾರ ಮತ್ತು ಛತ್ತೀಸಗಡದಿಂದ ಕೂಲಿ ಕಾರ್ಮಿಕರು ಬಂದಿದ್ದಾರೆ.

ನದಿಯ ಆಳಕ್ಕೆ ಇಳಿದು ಮರಳು ತೆಗೆದರೆ ಮೈಯೆಲ್ಲ ಕಡಿತವಾಗುತ್ತದಂತೆ. ಅದನ್ನು ತಡೆಯಲು ಈ ಕೂಲಿ ಕಾರ್ಮಿಕರು ನದಿಗೆ ಇಳಿಯುವ ಮೊದಲು 2–3 ಲೀಟರ್‌ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಳ್ಳುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ನೀರಿಗೆ ಇಳಿಯುತ್ತಾರೆ. ಹೀಗೆ ಮಾಡಿದರೆ ಮೈ ಕೆರೆತ ಇರುವುದಿಲ್ಲವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT