ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರ ಕಿರು ಪರಿಚಯ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಯುವ ಲೆಫ್ಟಿನೆಂಟ್ ನವದೀಪ್‌ಸಿಂಗ್

ಪಂಜಾಬಿನ ಗುರುದಾಸಪುರದಲ್ಲಿ ಹುಟ್ಟಿದ ಇವರ ತಾತ ಹಾಗೂ ತಂದೆ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಹಾಗಾಗಿ ಸಹಜವಾಗಿ ಸೇನೆಗೆ ಸೇರಿದ ಇವರು ಅ್ಲ್ಲಲೇ ಬಿ.ಎಸ್‌ಸಿ, ಎಂ.ಬಿಎ ಪದವಿ ಪಡೆದುಕೊಂಡರು. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 17 ಮಂದಿ ಉಗ್ರರು ಒಳನುಸುಳುತ್ತಿದ್ದರು. ಆಗ ಕೇವಲ 25 ವರ್ಷ ವಯಸ್ಸಿನ ಲೆಫ್ಟಿನೆಂಟ್ ನವದೀಪ್‌ಸಿಂಗ್ ಇವರ ವಿರುದ್ಧ ವೀರಾವೇಷದಿಂದ ಹೋರಾಡಿ ನಾಲ್ವರನ್ನು ಕೊಂದು ಹಾಕುವಲ್ಲಿ ಯಶಸ್ವಿಯಾದರು. ಆದರೆ ಉಗ್ರರು ತೀರಾ ಹತ್ತಿರದಿಂದ ಹಾರಿಸಿದ ಗುಂಡಿನಿಂದ ಇವರು ಕಳೆದ ಆಗಸ್ಟ್‌ನಲ್ಲಿ ಹುತಾತ್ಮರಾದರು.ಇವರ ಸಾಧನೆಗೆ 2012 ಸಾಲಿನಲ್ಲಿ ಮರಣೋತ್ತರವಾಗಿ ದೇಶದ ಅತ್ಯುನ್ನತ ಸೇನಾ ಪ್ರಶಸ್ತಿ ಎನಿಸಿದ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.




ಸಂದೇಶ್ ಹೆಗಡೆ

ಈತ ನಮ್ಮ ರಾಜ್ಯದವ ಎಂದು ಹೇಳುವುದಕ್ಕೆ ಹೆಮ್ಮೆ ಅನಿಸುತ್ತದೆ. ಹೌದು. ಶಿವಮೊಗ್ಗದ ವಿಕಲಚೇತನ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಮಾತು ಬಾರದು, ಕಿವಿಯೂ ಕೇಳದು. ಆದರೆ ಸಾಧನೆಗೆ ಇದು ಯಾವುದೂ ಅಡ್ಡಿಯಾಗಲಿಲ್ಲ. 2010ರ ಮೇ ತಿಂಗಳಿನಲ್ಲಿ ಉತ್ತರಕನ್ನಡ ಜಿಲ್ಲೆಯ ಹೆಗ್ಗಾರು ಗ್ರಾಮದಲ್ಲಿ ಬಂಧುಗಳು ಮನೆಗೆ ಬಂದಿದ್ದಾಗ ಮನೆಮಂದಿ ಎಲ್ಲಾ ನದಿ ತೀರಕ್ಕೆ ಸ್ನಾನಕ್ಕೆ ಹೊರಟಿದ್ದರು.ನದಿಯಲ್ಲಿ ರಶ್ಮಿ ಎಂಬ ಬಾಲಕಿ ಮುಳುಗುತ್ತಿದ್ದಳು. ಮನೆಯವರೆಲ್ಲಾ ಏನೇ ಮಾಡಿದರೂ ಇವಳನ್ನು ರಕ್ಷಿಸಲಾಗಲಿಲ್ಲ. ಕಡೆಗೆ ಈಜಾಡುತ್ತಿದ್ದ ಈತನಿಗೆ ಕಲ್ಲು ಒಡೆದು ಗಮನ ಸೆಳೆಯಲಾಯಿತು. ನಂತರ ಈತ ಜೀವದ ಹಂಗು ತೊರೆದು ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಿದ. ಈತನ ಈ ಸಾಧನೆಗೆ 2012ರ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.




ವಿಜಯ್ ಕುಮಾರ್

ಭಾರತದ ಶೂಟಿಂಗ್ ಕ್ರೀಡೆಯ ಧೃವತಾರೆ ವಿಜಯ್ ಕುಮಾರ್ ಹುಟ್ಟಿದ್ದು 1985ರಲ್ಲಿ, ಹಿಮಾಚಲ ಪ್ರದೇಶದಲ್ಲಿ. ತಮ್ಮ ನವತಾರುಣ್ಯದಲ್ಲೇ ಸೇನೆಯನ್ನು ಸೇರಿದ ಇವರು ದೇಶ ರಕ್ಷಣೆಯ ಜತೆಯಲ್ಲೇ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡವರು. ಪರಿಣಾಮ 2012ರ ಒಲಿಂಪಿಕ್‌ನ ಶೂಟಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಇಲ್ಲಿ ಇವರು 25 ಮೀಟರ್ ರ‌್ಯಾಪಿಡ್ ಫೈರ್ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ ಒಲಿಂಪಿಕ್ ಕ್ರೀಡೋತ್ಸವದಲ್ಲಿ ಭಾರತಕ್ಕೆ ಕೀರ್ತಿ ತಂದಿತ್ತರು. ಇದಕ್ಕೂ ಮುನ್ನ ಅವರು 2010ರ ದೆಹಲಿಯ ಕಾಮನ್‌ವೆಲ್ತ್ ಕ್ರೀಡೆಯಲ್ಲಿ 3 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ 27ರ ಹರೆಯದ ವಿಜಯ್‌ಕುಮಾರ್‌ಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ 2012ರಲ್ಲಿ ಗೌರವಿಸಲಾಯಿತು.




ಡಾ.ಅದಿತಿ ಮುಖರ್ಜಿ

ಡಾ. ಅದಿತಿ ಮುಖರ್ಜಿ ವಯಸ್ಸು ಬರೇ 37. ಆದರೆ ಇವರ ಸಾಧನೆಯಿಂದ ಅನುಕೂಲವಾಗಿದ್ದು ಬರೋಬರಿ ನಾಲ್ಕು ಸಾವಿರ ಮಂದಿಗೆ. ಹೌದು. ಆಶ್ಚರ್ಯವಾದರೂ ಇದು ಸತ್ಯ. ದೆಹಲಿ ಮೂಲದ ಯುವ ವಿಜ್ಞಾನಿಯಾಗಿರುವ ಈಕೆ ಸಾಧನೆ ಮಾಡಿರುವುದು ಕೃಷಿ ಕ್ಷೇತ್ರದಲ್ಲಿ. ತಮ್ಮ ಅಧ್ಯಯನವನ್ನು ಪ್ರಯೋಗಾಲಯಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದ ಈಕೆ ಪಶ್ಚಿಮ ಬಂಗಾಳದಲ್ಲಿ 4 ಸಾವಿರ ಮಂದಿ ಕಡಿಮೆ ಭೂಮಿ ಹೊಂದಿರುವ ರೈತರ ಬದುಕನ್ನು ಅಧ್ಯಯನ ಮಾಡಿದರು. ಅವರೊಟ್ಟಿಗೆ ಹೊಲಗಳಿಗೆ ಹೋಗಿ ಅಲ್ಲಿರುವ ಸಮಸ್ಯೆಗಳನ್ನು ಆಲಿಸಿದರು. ಇವರೆಲ್ಲರು ಆರ್ಥಿಕ ಸಮಸ್ಯೆ ಜತೆಗೆ ಅಪೌಷ್ಠಿಕತೆಯಿಂದ  ಬಳಲುತ್ತಿದ್ದರು. ಇದಕ್ಕೆಲ್ಲಾ ಪಶ್ಚಿಮ ಬಂಗಾಳದಲ್ಲಿ ಸಣ್ಣ ಹಿಡುವಳಿದಾರರು ಅಂತರ್ಜಲವನ್ನು ಬಳಸುವುದಕ್ಕೆ ಇದ್ದ ನಿಷೇಧವೇ ಕಾರಣ ಎಂದು ಅರಿತರು.

ನಾಲ್ಕು ಸಾವಿರ ಮಂದಿ ಸಣ್ಣ ಸಣ್ಣ ರೈತರ ಪರವಾಗಿ ಇವರು ದನಿ ಎತ್ತಿದರು. ನಿಖರ ಅಂಕಿ-ಅಂಶಗಳನ್ನು ಸರ್ಕಾರದ ಮುಂದೆ ಇಟ್ಟು, ಎದುರು ಹೋರಾಡಿ ಅಂತರ್ಜಲ ಬಳಕೆ ಮೇಲಿದ್ದ ನಿಷೇಧವನ್ನು ತೆಗೆದುಹಾಕಿಸುವಲ್ಲಿ ಯಶಸ್ವಿಯಾದರು.

ಇದೀಗ ಇಲ್ಲಿನ ಅತಿ ಸಣ್ಣ ರೈತರೂ ಕೂಡ ಅಂತರ್ಜಲವನ್ನು ಹನಿ ನೀರಾವರಿ, ತುಂತುರು ನೀರಾವರಿಯ ತಂತ್ರಜ್ಞಾನದ ಸಹಾಯದಿಂದ ಬಳಸಿಕೊಂಡು ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ.

ಅದಿತಿ ಅವರ ಸಾಧನೆಯನ್ನು ಗುರುತಿಸಿದ ವಿಶ್ವ ಆಹಾರ ಪ್ರಶಸ್ತಿ ಪ್ರತಿಷ್ಠಾನ ಇದೇ ಮೊದಲ ಬಾರಿಗೆ ನೀಡುತ್ತಿರುವ ಹಸಿರು ಕ್ರಾಂತಿ ಹರಿಕಾರ ನಾರ್ಮನ್ ಬೊರ್ಲಾಗ್ ಪ್ರಶಸ್ತಿಯನ್ನು ಇದೇ ವರ್ಷ ನೀಡಿ ಗೌರವಿಸಿದೆ.




ಯೋಗೇಶ್ವರ್ ದತ್

1982ರಲ್ಲಿ ಹರಿಯಾಣದಲ್ಲಿ ಜನಿಸಿದ ಯೋಗೇಶ್ವರ್ ದತ್ ತಮ್ಮ 8ನೇ ವಯಸ್ಸಿನಲ್ಲೆ ಕುಸ್ತಿ ಪಂದ್ಯದಲ್ಲಿ ಆಸಕ್ತಿ ಬೆಳೆಸಿಕೊಂಡರು. ಕುಸ್ತಿಯನ್ನು ಒಂದು ಕ್ರೀಡೆಯಾಗಿ ಸತತ ಅಭ್ಯಾಸ ಮಾಡಿದ ಯೋಗೇಶ್ವರ್ 2003ರಲ್ಲೇ, ಅಂದರೆ ತಮ್ಮ 21ನೇ ವಯಸ್ಸಿನಲ್ಲೆ ಕಾಮನ್‌ವೆಲ್ತ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. 2006ರ ದೋಹಾ ಏಷ್ಯನ್ ಕ್ರೀಡಾಕೂಟ ಆರಂಭವಾಗುವುದಕ್ಕೆ ಕೇವಲ 9 ದಿನದ ಹಿಂದೆ ತಂದೆಯನ್ನು ಕಳೆದುಕೊಂಡರು. ಇದೇ ಅವಧಿಯಲ್ಲಿ ಮಂಡಿ ನೋವು ಇವರನ್ನು ವಿಪರೀತ ಕಾಡಿಸಿತ್ತು. ಆದರೂ ಈ ಕ್ರೀಡಾಕೂಟದಲ್ಲಿ ಇವರು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. 

2010ರ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇವರು ಚಿನ್ನದ ಪದಕ ಗಳಿಸಿದರೆ, ಇದೇ ವರ್ಷ ನಡೆದ 2012ರ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಪ್ರತಿಷ್ಠೆ ಹಾಗೂ ಗೌರವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು ನೀಡಿದರು. ಇವರ ಸಾಧನೆಗೆ 2012ರ ಸಾಲಿನ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ರಾಜೀವ್‌ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ವಿಜಯ್‌ಕುಮಾರ್ ಜತೆಗೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT