ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಹೃದಯಸ್ಪರ್ಶಿ ಸನ್ಮಾನ

Last Updated 29 ಡಿಸೆಂಬರ್ 2012, 5:59 IST
ಅಕ್ಷರ ಗಾತ್ರ

ಯಳಂದೂರು: `ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ. ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರ ಸಹಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಜಿವಹಿಸಿದರು. ಕಲಿಕೆಯಲ್ಲಿ ನನಗಿದ್ದ ಶ್ರದ್ಧೆಯ ಜತೆಗೆ ನನ್ನ ಶ್ರಮ ಸಾಧನೆಗೆ ಕಾರಣವಾಯಿತು. ನೀವೂ ಕೂಡ ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಂಡರೆ ಪ್ರತಿಫಲ ಕಟ್ಟಿಟ್ಟಬುತ್ತಿ...'

ಹೀಗೆಂದು ಆತ್ಮವಿಶ್ವಾಸದಿಂದ ನುಡಿದಿದ್ದು, ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನಗಳಿಸಿದ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ದಿವ್ಯಾ.

ಪಟ್ಟಣದ ಲಯನ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ಒಂದೇ ಶಾಲೆಯ ವಿದ್ಯಾರ್ಥಿನಿಯರಾದ ಕೆ. ದಿವ್ಯಾ (594 ಅಂಕ) ಹಾಗೂ ಕವಿತಾ (583 ಅಂಕ) ಅವರನ್ನು ರಾಜ್ಯ ಸರ್ಕಾರದಿಂದ ನೀಡುವ ಕಂಪ್ಯೂಟರ್ ನೀಡಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ತಾಲ್ಲೂಕಿಗೆ ಅಂಕಗಳಿಕೆಯಲ್ಲಿ ಮೂರನೇ ಸ್ಥಾನ ಗಳಿಸಿದ ಇದೇ ಶಾಲೆಯ ಲಕ್ಷ್ಮೀ (554 ಅಂಕ) ಅವರನ್ನು ಸನ್ಮಾನಿಸಲಾಯಿತು.

ಈ ವಿದ್ಯಾರ್ಥಿನಿಯರು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಕೆಸ್ತೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲೇ ಇವರ ವ್ಯಾಸಂಗ. ಆದರೆ, ಕಲಿಕೆಯಲ್ಲಿದ್ದ ಆಸಕ್ತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದರು. ಪ್ರಸ್ತುತ ಮೂವರು ಕೂಡ ವಿಜ್ಞಾನ ವಿಷಯದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಗ್ರಾಮೀಣ ಪ್ರದೇಶದ ನೂರಾರು ಮಕ್ಕಳಿಗೆ ಈ ವಿದ್ಯಾರ್ಥಿನಿಯರ ಸಾಧನೆ ಸ್ಫೂರ್ತಿ ನೀಡಿತು. ಹೀಗಾಗಿ, ಚಪ್ಪಾಳೆಯ ಸುರಿಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT