ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್ ನೌಕರನ ಪತ್ನಿ ಆತ್ಮಹತ್ಯೆ

Last Updated 3 ಜೂನ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು:  ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯೊಬ್ಬರ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಂಪೆನಿಯೊಂದರಲ್ಲಿ ಆರ್ಥಿಕ ಅನುಷ್ಠಾನ ಅಧಿಕಾರಿಯಾಗಿರುವ (ಕಮರ್ಷಿಯಲ್ ಇಂಪ್ಲಿಮೆಂಟಷನ್ ಆಫೀಸರ್) ಅಭಿಜಿತ್ ಸಿಕಂದರ್ ಎಂಬುವರ ಪತ್ನಿ ಅಸ್ತೀ ಶೇಖರ್ (25) ಆತ್ಮಹತ್ಯೆ ಮಾಡಿಕೊಂಡವರು.

ದಂಪತಿ ವರ್ಷ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ರಾತ್ರಿ ಊಟ ಮಾಡಿದ ದಂಪತಿ ಮಲಗಿದ್ದರು. ಅಸ್ತಿ ಅವರು ಮಧ್ಯ ರಾತ್ರಿ ಬೇರೆ ಕೊಠಡಿಗೆ ತೆರಳಿ ನೇಣು ಹಾಕಿಕೊಂಡಿದ್ದರು. ಅಭಿಜಿತ್ ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. `ನನ್ನ ಸಾವಿಗೆ ನಾನೇ ಹೊಣೆ~ ಎಂದು ಅಸ್ತೀ ಅವರು ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಪಾಟ್ನಾ ಮೂಲದ ಅಭಿಜಿತ್ ಮತ್ತು ಅಸ್ತೀ ಅವರು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಕೆಲಸ ಹುಡುಕುತ್ತಿದ್ದರು. ಆದರೆ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಎರಡು- ಮೂರು ಕಡೆ ಸಂದರ್ಶನಕ್ಕೆ ತೆರಳಿದ್ದ ಅವರು ಕೆಲಸ ಗಿಟ್ಟಿಸುವಲ್ಲಿ ವಿಫಲವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್‌ನ ಖಾಸಗಿ ಕಂಪೆನಿಯೊಂದಕ್ಕೆ ಅವರು ಜೂನ್ ಎರಡರಂದು ಸಂದರ್ಶನಕ್ಕೆ ಹೋಗಿದ್ದರು. ಆದರೆ ಅಲ್ಲಿಯೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಆ ನಂತರ ಪತಿಗೆ ಎಸ್‌ಎಂಎಸ್ ಮಾಡಿದ್ದ ಅವರು ಕೆಲಸ ಸಿಗದ ಕಾರಣ ಬೇಜಾರಾಗಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಭಿಜಿತ್ ಕೆಲಸ ಸಿಗದಿರುವುದಕ್ಕೆ ಬೇಜಾರಾಗುವ ಅಗತ್ಯವಿಲ್ಲ ಎಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಪ್ರಕರಣದ ಬಗ್ಗೆ ಹೆಚ್ಚೇನೂ ಹೇಳಲು ಇಚ್ಛಿಸುವುದಿಲ್ಲ. ಪತ್ನಿಯ ಪೋಷಕರು ನಗರಕ್ಕೆ ಬಂದ ನಂತರ ಘಟನೆಯ ಬಗ್ಗೆ ಮಾಧ್ಯಮದವರ ಜತೆ ಮಾತನಾಡುತ್ತೇನೆ~ ಎಂದು ಅಭಿಜಿತ್ ಸಿಕಂದರ್ ಹೇಳಿದರು.

ಪತ್ರದ ಸಾರಾಂಶ: `ನನ್ನ ಸಾವಿಗೆ ಯಾರು ಕಾರಣರಲ್ಲ. ಆ ದೇವರು ನನ್ನಿಂದ ಎಲ್ಲವನ್ನೂ ಕಿತ್ತುಕೊಂಡ. ಅಪ್ಪ- ಅಮ್ಮ ನೀವು ನನ್ನ ಮೇಲೆ ತೋರಿದ ಪ್ರೀತಿಗೆ ವಂದನೆಗಳು. ಮಿಕ್ಕು (ಅಭಿಜಿತ್) ನೀನು ಸುಖವಾಗಿರು. ಪತಿ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ~ ಎಂದು ಅಸ್ತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಸ್ತಿ ಅವರ ತಂದೆ ಎಂ.ಡಿ.ಪಾಠಕ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಅವರು ಬಿಹಾರದಿಂದ ಬಂದ ನಂತರ ಶವ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT