ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಸಭೆಗೆ ಸವರ್ಣೀಯರು ಗೈರು

Last Updated 19 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಲಿತರು ಹಾಗೂ ಸವರ್ಣೀಯರ ನಡುವಿನ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ನಾಯಕನೂರು ಗ್ರಾಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾಮರಸ್ಯ ಸಭೆಗೆ ಸವರ್ಣೀಯರು ಮಂಗಳವಾರ ಗೈರು ಹಾಜರಾದರು.

ಊರಿಗೆ ಬಂದ ಸ್ವಾಮೀಜಿಗೆ ಅವರಿಗೆ ಊರಿನ ಮಾದರ ಕೇರಿಯಲ್ಲಿ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ಕೇರಿಯಲ್ಲಿ ಪಾದಯಾತ್ರೆ ನಡೆಸಿದ ಸ್ವಾಮೀಜಿ, ದಲಿತ ಮುಖಂಡ ನಾಗಪ್ಪ ಮಾದರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದರು.

ಗ್ರಾಮದ ದುರ್ಗವ್ವನ ಗುಡಿಯಲ್ಲಿ ಆಯೋಜಿಸಲಾಗಿದ್ದ ಈ  ಸಭೆಗೆ ಸವರ್ಣೀಯರು ಬಾರದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿದ ಸ್ವಾಮೀಜಿ, ಅಲ್ಲಿಯೇ ಪಂಚಾಯಿತಿ ಸದಸ್ಯರು ಹಾಗೂ ದಲಿತರ ಸಭೆ ನಡೆಸಿದರು. ಇದಕ್ಕೆ ಮುನ್ನ, ಮಳೆಯಾಗಿರುವ ಕಾರಣ ಸವರ್ಣೀಯರು ಹೊಲಗಳಲ್ಲಿ ಬಿತ್ತನೆ ಕಾರ್ಯಕ್ಕೆ ತೆರಳಿದ್ದಾರೆ ಎಂದು ಸಂಘಟಕರು ಪ್ರಕಟಿಸಿದರು.

ಹೊಲೆಗೆಲಸ ಎನ್ನುತ್ತಾರೆ: ಸಗಣಿ ಸಾರಿಸುವ ಕೆಲಸಕ್ಕೆ ಕರೆಯುತ್ತಾರೆ. ಅದನ್ನು ಹೊಲೆಗೆಲಸ ಎಂದು ಕೂಲಿ ಕೊಡುವುದಿಲ್ಲ. ವರ್ಷಕ್ಕೊಮ್ಮೆ ಕಾಳು ಕೊಡುತ್ತಾರೆ. ಅದರಿಂದ ಹೊಟ್ಟೆ ತುಂಬುವುದಿಲ್ಲ. ಸಗಣಿ ಸಾರಿಸುವ ಕೆಲಸಕ್ಕೂ ಕೂಲಿ ಕೊಡಿ ಎಂದು ಕೇಳಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ಮುಖಂಡ ಹನುಮಂತಪ್ಪ ಕೇಳಗೇರಿ ಸ್ವಾಮೀಜಿಗೆ ತಿಳಿಸಿದರು.

`ಹೊಟ್ಟೆ ತುಂಬುವಷ್ಟು ಕೂಲಿ ಕೊಟ್ಟು ಅವರು (ಸವರ್ಣೀಯರು) ಕೆಲಸಕ್ಕೆ ಕರೆದರೆ ಹೋಗುತ್ತೇವೆ. ಅವರು ಮೊದಲಿನಂತೆ ಕರೆಯುತ್ತಿಲ್ಲ. ಅವರು ನಮಗೆ ಬೇಕು, ನಮಗೆ ಅವರು ಬೇಕು. ಗ್ರಾಮದಲ್ಲಿ ಡಾ.ಬಸವರಾಜಪ್ಪ ಎಂಬುವವರು ಮಾತ್ರ ನಮ್ಮನ್ನು ಕೆಲಸಕ್ಕೆ ಕರೆಯುತ್ತಿದ್ದಾರೆ. ಬೇರೆ ಯಾರೂ ಕರೆದಿಲ್ಲ~ ಎಂದು ನಾಗಪ್ಪ ಮಾದರ ಹೇಳಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ತಾವು ಯಾವುದೇ ಸಮಾಜದ ಪರವಾಗಿ ಇಲ್ಲಿಗೆ ಬಂದಿಲ್ಲ. ಇಂತಹ ಕ್ಷುಲ್ಲಕ ಘಟನೆಗಳಿಂದ ಹಿಂದೂ ಸಮಾಜದ ಅಖಂಡತೆಗೆ ಧಕ್ಕೆಯಾಗಲಿದ್ದು, ಪರಸ್ಪರ ಸಾಮರಸ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಗೋಮಾತೆಯ ಸಗಣಿ ಮನುಷ್ಯನ ಮಲದ ರೀತಿ ಕಲ್ಮಶ ಅಲ್ಲ. ಸಗಣಿ ಸಾರಿಸುವ ಕೆಲಸ ತಪ್ಪಲ್ಲ, ಬದಲಿಗೆ ಅದನ್ನು ಹೊಲೆಗೆಲಸ ಎಂದು ಕರೆಯುವುದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚಿಸಿ ಜೀವನೋಪಾಯಕ್ಕೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.

ಸಭೆಯ ನಂತರ ಸವರ್ಣೀಯರ ಕೇರಿಯಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಸ್ವಾಮೀಜಿ ಕೊನೇ ಗಳಿಗೆಯಲ್ಲಿ ತಮ್ಮ ತೀರ್ಮಾನ ಬದಲಿಸಿದರು.

`ನ್ಯಾಯಾಂಗ ಹೆಚ್ಚು ಕ್ರಿಯಾಶೀಲ~

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರ ಬಂಧನ ನ್ಯಾಯಾಂಗ ವ್ಯವಸ್ಥೆ ಮೊದಲಿಗಿಂತ ಹೆಚ್ಚು ಕ್ರಿಯಾಶೀಲವಾಗಿರುವುದರ ದ್ಯೋತಕ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಂಧನ ಭ್ರಷ್ಟರಿಗೆ ಎಚ್ಚರಿಕೆ ಯಾಗಿದೆ ಎಂದು ಹೇಳಿದ ಅವರು, ನ್ಯಾಯಾ ಲಯದಲ್ಲಿ ತೀರ್ಮಾನವಾಗುವವರೆಗೂ ಯಡಿಯೂರಪ್ಪ ಅವರನ್ನು ತಾವು ತಪ್ಪಿತಸ್ಥರು ಎಂದು ಕರೆಯುವುದಿಲ್ಲ ಅವರು ಆರೋಪಿ ಮಾತ್ರ ಎಂದರು. ಬಂಧನದ ನಂತರ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿಲ್ಲ. ಆ ವಿಚಾರದಲ್ಲಿ ತಾವು ತಟಸ್ಥವಾಗಿರುವುದಾಗಿ ಹೇಳಿದರು.

ಆಸ್ಪತ್ರೆಗೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿರುವ ಬೇರೆ ಮಠಾಧೀಶರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ವೈಯುಕ್ತಿಕ ಸ್ನೇಹದಿಂದಾಗಿ ಕಾಂಗ್ರೆಸ್‌ನ ಎಂ.ವಿ.ರಾಜಶೇಖರನ್ ಕೂಡ ಆಸ್ಪತ್ರೆಗೆ ತೆರಳಿ ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ. ಅದಕ್ಕೆಲ್ಲಾ ವಿಶೇಷ ಅರ್ಥ ಲ್ಪಿಸುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT