ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಸಾರುವ ಕರಗೋತ್ಸವ

ಚೆಲ್ಲಿದರು ಮಲ್ಲಿಗೆಯ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಕರಗ ಶಕ್ತ್ಯೋತ್ಸವದಲ್ಲಿ ನೇಮ ನಿಷ್ಠೆಗಳಿಗೆ ಆದ್ಯತೆ. ಆಚರಣೆಯ ರೀತಿ ರಿವಾಜುಗಳಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿರುವುದು ಕರಗದ ವೈಶಿಷ್ಟ್ಯ. ಸಾರ್ವಜನಿಕವಾಗಿ ಕರಗ ಉತ್ಸವದ ಅನೇಕ ಕಾರ್ಯಚಟುವಟಿಕೆಗಳನ್ನು ನೋಡಬಹುದಾದರೂ ಶಕ್ತಿ ಆರಾಧನೆಯ ಕೆಲವು ವಿಚಾರಗಳು ತಲತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿರುವ ಕುಟುಂಬಗಳ ಕೆಲವು ಸದಸ್ಯರಿಗೆ ಮಾತ್ರ ತಿಳಿದಿರುತ್ತದೆ. 

ಪಾವಿತ್ರ್ಯ ಹಾಗೂ ಗೌಪ್ಯ ಕಾಪಾಡುವಲ್ಲಿ ತಿಗಳ ವಂಶಸ್ಥರು ಯಾವಾಗಲೂ ಕಟ್ಟುನಿಟ್ಟಾಗಿರುತ್ತಾರೆ. ಹೇಳಬೇಕಾದ ವಿಚಾರಗಳನ್ನು ಮಾತ್ರ ಹೇಳುವ ಅವರು, ಕೆಲವು ಮಾಹಿತಿಗಳನ್ನು ಎಷ್ಟೇ ಕಷ್ಟ ಬಂದರೂ ಬಿಟ್ಟುಕೊಡುವುದಿಲ್ಲ. `ಶಾಕ್ತ ಪಂಥದ ಕೆಲವು ಮುಖ್ಯ ವಿಚಾರಗಳು ಬಹಿರಂಗವಾಗುವುದರಿಂದ ಸಮಾಜದ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟುವ ಸಲುವಾಗಿ ಗೌಪ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು' ಎನ್ನುತ್ತಾರೆ ದೇವಾಲಯದ ಧರ್ಮದರ್ಶಿ ಕೆ. ಲಕ್ಷ್ಮಣ.

ಹಸಿ ಕರಗ ಉತ್ಸವ ಕರಗ ಶಕ್ತ್ಯೋತ್ಸವದ ಅತ್ಯಂತ ಮಹತ್ವದ ಘಟ್ಟ. ಈ ಪವಿತ್ರ ದಿನದಂದೇ ಆದಿಶಕ್ತಿ ದ್ರೌಪದಿ ಭೂಮಿಗೆ ಬಂದು ತಮ್ಮಡನಿದ್ದು ತಮ್ಮ ಜನಾಂಗವನ್ನು ಹಾರೈಸುತ್ತಾರೆ ಎಂಬ ದೃಢವಾದ ನಂಬಿಕೆ ವಹ್ನಿ ಕುಲಸ್ಥರದು. ಇದಕ್ಕಾಗಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಕೆಯನ್ನು ಜಲಮೂಲದಿಂದ ಸ್ವಾಗತಿಸಲು ಕಬ್ಬನ್‌ಪಾರ್ಕ್‌ನಲ್ಲಿರುವ ಕರಗದ ಕುಂಟೆಗೆ ಬರುವ ಕುಲಸ್ಥರು ಆಕೆಯ ಶಕ್ತಿಯನ್ನು ಆವಿರ್ಭವಿಸಿಕೊಂಡ  ಪೂಜಾರಿಯನ್ನು ನೀತಿ ನಿಯಮಗಳಿಗೆ ಅನುಸಾರವಾಗಿ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠಕ್ಕೆ ಕರೆತಂದು, ಅನೇಕ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಾರೆ.

ಶಕ್ತಿಪೀಠದಲ್ಲಿ ಶಕ್ತಿಯನ್ನಿಟ್ಟು ಆರಾಧನೆಯ ನಂತರ ಕೆಂಪುವಸ್ತ್ರ ಹಾಗೂ ಮಲ್ಲಿಗೆ ಹೂಗಳಿಂದ ಅದನ್ನು ಸಿಂಗರಿಸಿ ಪೂಜೆ ಮಾಡುತ್ತಾರೆ.

ವಿಧಿ ವಿಧಾನಗಳೊಂದಿಗೆ ಕರಗ ಪೂಜಾರಿಯನ್ನು ಒಡವೆ ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ. ವೀರಕುಮಾರರು ಗೋವಿಂದ ನಾಮಸ್ಮರಣೆ ಮಾಡುತ್ತಾ ದೇವಿಯನ್ನು ಧ್ಯಾನಿಸಿ ಅಲಗು ಸೇವೆಯನ್ನು ಕೈಗೊಳ್ಳುತ್ತಾರೆ. ಇದರ ನಡುವೆ ದ್ರೌಪದಿಯನ್ನು ಆರಾಧಿಸುವುದಕ್ಕಾಗಿ ಕರ್ಪೂರವನ್ನು ಉರಿಸಲಾಗುವುದು. ಬಳಿಕ ಕರಗ ಪೂಜಾರಿಯು ಕೆಂಪುವಸ್ತ್ರದಿಂದ ಅಲಂಕರಿಸಿ ಪೂಜಿಸಲಾದ ಶಕ್ತಿದೇವಿಯನ್ನು ಕಂಕುಳಲ್ಲಿ ಧರಿಸಿ ಎರಡೂ ಕೈಗಳಲ್ಲಿ ಮಂತ್ರದಂಡ ಹಾಗೂ ಬಾಕುವನ್ನು ಹಿಡಿದು ಮುಂದೆ ಸಾಗುತ್ತಾರೆ. 

ಹಸಿಕರಗವನ್ನು ಕಂಕುಳಲ್ಲಿ ಧರಿಸಿದ ಪೂಜಾರಿ ಜಗಜಗಿಸುವ ಪಂಜು ಬೆಳಕಿನಲ್ಲಿ ಘಂಟೆ ಪೂಜಾರಿಯ ಮಂತ್ರ ಹಾಗೂ ಘಂಟಾನಾದಕ್ಕೆ ಸರಿಯಾಗಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ನಿಗದಿತ ಹಾದಿಗಳಲ್ಲಿ ವೀರಕುಮಾರರ ರಕ್ಷಣೆಯಲ್ಲಿ ಸಂಚರಿಸುತ್ತಾರೆ. 

ಪಂಜಿನ ಬೆಳಕಲ್ಲಿ ವೀರಕುಮಾರರ ಗೋವಿಂದ ನಾಮಸ್ಮರಣೆ ನಡುವೆ ಹಸಿಕರಗ ಏಳು ಸುತ್ತಿನ ಕೋಟೆಯ ಬಳಿ ಬರುತ್ತದೆ (ಏಳು ಸುತ್ತಿನ ಕೋಟೆಯನ್ನು ಸಪ್ತ ಮಾತೃಕೆಯರ ವಾಸಸ್ಥಾನವೆಂದು ಗುರುತಿಸಲಾಗಿದೆ. ಇದು ಬಿ.ಬಿ.ಎಂ.ಪಿ. ಆವರಣದಲ್ಲಿದೆ). ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆಯುವ ಹಸಿಕರಗ ಉತ್ಸವ ಏಳು ಸುತ್ತಿನ ಕೋಟೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ಶ್ರೀ ಧರ್ಮರಾಯಸ್ವಾಮಿ ಗುಡಿಯನ್ನು ಸೇರುತ್ತದೆ.  ಅಸಂಖ್ಯಾತ ವಹ್ನಿ ಕುಲಸ್ಥರು ದೇವಿಯನ್ನು ಗುಡಿಗೆ ಸೇರಿಸಿಕೊಳ್ಳಲಾಗುವ ಈ ಶುಭ ಸಮಯದಲ್ಲಿ ಸಾಕ್ಷಿಯಾಗುತ್ತಾರೆ. 

ಹೂವಿನ ಕರಗಕ್ಕೆ ಪೂರ್ವದಲ್ಲಿ ನಡೆಯುವ ಹಸಿಕರಗ ಶಕ್ತ್ಯೋತ್ಸವದ ಅತ್ಯಂತ ಪ್ರಮುಖ ಘಟ್ಟ.
 
ವಹ್ನಿ ಕುಲಸ್ಥರೇ ನಿರ್ವಹಿಸುವ ಕರಗ ಉತ್ಸವದಲ್ಲಿ ಎಲ್ಲಾ ಜಾತಿ ಮತಗಳಿಗೆ ಸೇರಿದ ಜನ ಪಾಲ್ಗೊಳ್ಳುವುದೊಂದು ವಿಶೇಷ. ಇದೊಂದು ಬಗೆಯ ಸಾಮರಸ್ಯದ ಹಬ್ಬ. ಹಿಂದೂಗಳ ಈ ಹಬ್ಬ ಇಸ್ಲಾಂ ಮತದ ಭಾಂದವರೊಡನೆ ಬೆಸುಗೆ ಹಾಕಿಕೊಂಡಿರುವುದೊಂದು ವೈಶಿಷ್ಟ್ಯ.

ಸೂಫಿ ಸಂತರಾದ ತವಕಾಲ್ ಮಸ್ತಾನ್ ಸಾಬ್ ಎಂಬುವವರು ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿ ಬೆಂಗಳೂರು ಕೋಟೆಯಲ್ಲಿ ವಾಸವಿದ್ದರು. ಕರಗ ಶಕ್ತ್ಯೋತ್ಸವದ ಸಂದರ್ಭದಲ್ಲಿ ಎಲ್ಲಾ ದಿನಗಳು ಇವರು ಹಾಗೂ ಇವರ ಅನುಯಾಯಿಗಳು ದ್ರೌಪದಿಗೆ ಹೂಗಳನ್ನು ಅರ್ಪಿಸುತ್ತಿದ್ದರು. 

ಶ್ರದ್ಧಾಭಕ್ತಿಗಳಿಂದ ದೇವಿಗೆ ಹೂಗಳನ್ನು ಅರ್ಪಿಸುತ್ತಿದ್ದ ಸಂತ ಮಸ್ತಾನ್ ಸಾಬ್ ವಿಧಿವಶರಾದ ನಂತರ ಕರಗ ದೇವತೆ ಮಸ್ತಾನ್ ಸಾಹೇಬರ ಸಮಾಧಿ ಸ್ಥಳವಾದ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸುವ ವಾಡಿಕೆ ಆರಂಭವಾಗಿದ್ದು, ಅದು ಇಂದಿಗೂ ರೂಢಿಯಲ್ಲಿದೆ.

ಕರಗ ಹಬ್ಬದ ಸಂದರ್ಭದಲ್ಲಿ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಹಾಗೂ ಉತ್ಸವಗಳು ಅನೂಚಾನವಾಗಿ ನಡೆದುಕೊಂಡು ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT