ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ಯುವಜನ ಮೇಳ ಪೂರಕ

Last Updated 3 ಜನವರಿ 2012, 7:30 IST
ಅಕ್ಷರ ಗಾತ್ರ

ನಾಗಮಂಗಲ: ಯುವಜನ ಮೇಳಗಳು ಸಾಮರಸ್ಯವನ್ನು ಮೂಡಿಸುವ, ಕಲೆಗಳಿಗೆ ಪ್ರೋತ್ಸಾಹ ನೀಡುವ ವೇದಿಕೆಗಳು. ಇಂತಹ ವೇದಿಕೆಗಳು ಪ್ರಸ್ತುತ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗೋಪಾಲ್ ಅಭಿಪ್ರಾಯಪಟ್ಟರು.

ಇಲ್ಲಿನ ಟಿ.ಬಿ.ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ನಾಗಮಂಗಲ ಹಾರ್ಟ್ ವಿವಿಧೋದ್ದೇಶ ಸಂಸ್ಥೆ, ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ಮಾತನಾಡಿದರು.

ಯುವಜನ ಮೇಳಗಳಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇಂದಿನ ಯುವಪೀಳಿಗೆ ದಾರಿತಪ್ಪುವ ಜತೆಗೆ ನಾಡಿನ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಜನ ಮೇಳಗಳು ತಮ್ಮ ಜವಾಬ್ದಾರಿ ಮೆರೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಯುವಜನ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲದೇ ಗ್ರಾಮೀಣ ಪ್ರತಿಭೆಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೇಳದಲ್ಲಿ ಭಾವಗೀತೆ, ಜನಪದ ಗೀತೆ, ಸಮೂಹ ಜನಪದಗೀತೆ, ಏಕಪಾತ್ರಾಭಿನಯ, ಲಾವಣಿ, ರಂಗಗೀತೆ, ಜಾನಪದ ನೃತ್ಯ ಸ್ಪರ್ಧೆಗಳು ಯುವಕ-ಯುವತಿಯರಿಗೆ ಏರ್ಪಡಿಸಲಾಗಿತ್ತು. ಯುವಕರಿಗೆ ಪ್ರತ್ಯೇಕವಾಗಿ ಕೋಲಾಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಸುಮಾರು 50ಕ್ಕೂ ಹೆಚ್ಚು ಗ್ರಾಮೀಣ ಪ್ರತಿಭೆಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ತಾಲ್ಲೂಕಿನ ಅಳೀಸಂದ್ರ ಗ್ರಾಮದ ಕೋಲಾಟ ತಂಡ ನೀಡಿದ ಪ್ರದರ್ಶನ ಜನರ ಮೆಚ್ಚುಗೆ ಗಳಿಸಿತು.

ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕ ಟಿ.ಡಿ.ರಾಜು ಕಾರ್ಯಕ್ರಮ ಕುರಿತು ಮಾತನಾಡಿದರು. ತಹಶೀಲ್ದಾರ್ ಜಗದೀಶ್, ಬೆಳ್ಳೂರಿನ ಕಾಂಗ್ರೆಸ್ ಮುಖಂಡ ಧರಣೇಂದ್ರಬಾಬು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಸಿ.ಆರ್.ಚಂದ್ರಶೇಖರ್, ಸಹಶಿಕ್ಷಕರಾದ ಡಿ.ಎಂ.ಮಿಥುನ್, ಕುವೆಂಪು ಅನಿಕೇತನ ಬಳಗದ ಅಧ್ಯಕ್ಷ ಬೆಟ್ಟೇಗೌಡ, ಕಲೀಮುಲ್ಲಾ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ಕೆ.ಕೆ.ಧನಂಜಯ ಉಪಸ್ಥಿತರಿದ್ದರು.

ರಾಜ್ಯ ಯುವಪ್ರಶಸ್ತಿ ವಿಜೇತ ಬಿ.ಸಿ.ವಿಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಯೋಗಾ ನರಸಿಂಹಚಾರ್ ನಿರೂಪಿಸಿ, ಸ್ನೇಹ ಯುವತಿ ಮಂಡಳಿ ಕಾರ್ಯದರ್ಶಿ ಎಂ.ಸಿ.ಸೌಂದರ್ಯ ಸ್ವಾಗತಿಸಿದರು. ಸಿ.ಆರ್.ಚಂದ್ರಶೇಖರ್ ವಂದಿಸಿದರು. ಮಾದರಿ ಕಾಲೇಜು ಉಪನ್ಯಾಸಕಿ ಪ್ರತಿಮಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT