ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದಿಂದ ಸಮಸ್ಯೆಗೆ ಪರಿಹಾರ

ಸನ್ಮಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಅಭಿಮತ
Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಎಲ್ಲ ಸಮಸ್ಯೆಗಳನ್ನು ಸಾಮರಸ್ಯ ಮತ್ತು ಸಮನ್ವಯತೆಯಿಂದ ಪರಿಹರಿಸಿಕೊಳ್ಳಬೇಕು' ಎಂದು ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಹೇಳಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷವು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಯಾವುದೇ ಸಮಸ್ಯೆಯನ್ನು ಪರಸ್ಪರ ಸೌಹಾರ್ದ ಭಾವನೆಯಿಂದ ಮತ್ತು ಸಾಮರಸ್ಯದಿಂದ ಪರಿಹರಿಸಿಕೊಳ್ಳಲು ಪ್ರಯತ್ನ ಮಾಡಿದರೆ ಆಗ ಯಾವ ಸಮಸ್ಯೆಯೂ ಕಗ್ಗಂಟಾಗದೆ, ಪರಿಹಾರವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

`ತಮಿಳುನಾಡಿನ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿಯ ಜತೆಗೆ ಮಾತುಕತೆಯನ್ನು ನಡೆಸಿ ನಮ್ಮ ರಾಜ್ಯದ ಸಮಸ್ಯೆಯನ್ನು ಅವರಿಗೆ ವಿವರಿಸಿದರೆ ಅರ್ಥವಾಗುತ್ತದೆ. ಅಲ್ಲಿಯ ಮುಖ್ಯಮಂತ್ರಿ ನಮ್ಮ ನಾಡಿನಲ್ಲಿಯೇ ಹುಟ್ಟಿದವರು. ಅವರು ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಹೇಳಿದರು.
`ವಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ನಾವು ಅಲ್ಲಿಯ ಮರಾಠರ ಆತಿಥ್ಯವನ್ನು ಸ್ವೀಕರಿಸಿದರೆ, ರಾಜ್ ಠಾಕ್ರೆ ಅವರಿಗೆ ಒಂದು ಸಾಮರಸ್ಯದ ಸಂದೇಶವನ್ನು ನೀಡಿದಂತಾಗುತ್ತದೆ' ಎಂದರು.

`ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಸರ್ವಾನುಮತದಿಂದ ಆಯ್ಕೆಯಾಗುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದೆ ಹೊರತು ಯಾವುದೇ ತ್ಯಾಗ ಮಾಡಿದ್ದೇನೆ ಎಂಬ ಭಾವ ನನ್ನಲ್ಲಿಲ್ಲ' ಎಂದು ಹೇಳಿದರು.

`ಸರ್ವಸಾಧಾರಣವಾದ ಸಮಸ್ಯೆಗಳು ಜನರ ಗಮನಕ್ಕೆ ಬಂದರೆ ಸಾಲದು ಅದರಂತೆ ಸರ್ಕಾರಕ್ಕೂ ಜನರ ಸಮಸ್ಯೆಗಳು ಅರ್ಥವಾಗಬೇಕು. ರಾಜಕೀಯ ಶಕ್ತಿ ಇಲ್ಲದಿದ್ದರೆ ಏನೂ ಸಾಧಿಸಲಾಗುವುದಿಲ್ಲ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು' ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, `ಪ್ರಗತಿಪರ ಚಿಂತಕರು, ವೈಚಾರಿಕ ಜ್ಞಾನವನ್ನು ಹೊಂದಿದವರು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಪ್ರಧಾನ ಪಾತ್ರವಹಿಸಿ ಹೋರಾಡಿದವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸವಾಗಿದೆ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ್, ವಿಧಾನ ಪರಿಷತ್ತಿನ ಸದಸ್ಯ ರಾಮಚಂದ್ರೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಭಾಗವಹಿಸಿದ್ದರು.

ಸದ್ಯವೇ ಮಹಿಳಾ ಪರ ಪ್ರತಿಭಟನೆ

`ಮಹಿಳೆಯರ ಪರವಾಗಿ ಸೀರೆಯನ್ನು ಉಟ್ಟು ಮತ್ತು ಮಹಿಳೆಯರು ಒನಕೆಯನ್ನು ಹಿಡಿದು  ಸದ್ಯದಲ್ಲಿಯೇ  ಪ್ರತಿಭಟನೆ ಮಾಡುವ ಯೋಜನೆಯಿದೆ. ಮಹಿಳೆಯರನ್ನು ದುರ್ಬಲ ಎಂದು ಭಾವಿಸುವವರಿಗೆ ಈ ಮೂಲಕ ಉತ್ತರವನ್ನು ನೀಡಲಾಗುವುದು. ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಶಿಕ್ಷೆಯನ್ನು ನೀಡಬೇಕು' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT