ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರ್ಥ್ಯದ ಮೇಲೆ ನಿರ್ಧಾರ: ಅಡ್ವಾಣಿ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉಮರಿಯಾ (ಮಧ್ಯ ಪ್ರದೇಶ) (ಪಿಟಿಐ): `ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಾನು ನೀಡಬಹುದಾದ ಕೊಡುಗೆ ಹಾಗೂ ವಹಿಸಬಹುದಾದ ಪಾತ್ರ ನನ್ನ ಆರೋಗ್ಯ ಮತ್ತು ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿದೆ~ ಎಂದು ಬಿಜೆಪಿ ಹಿರಿಯ ಧುರೀಣ ಎಲ್.ಕೆ. ಅಡ್ವಾಣಿ ಅವರು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗಾಗಿ ದೇಶದಾದ್ಯಂತ 38 ದಿನಗಳ ಜನ ಚೇತನ ಯಾತ್ರೆ ಕೈಗೊಂಡಿರುವ ಅಡ್ವಾಣಿ, ಈ ಹೇಳಿಕೆ ಮೂಲಕ ತಮ್ಮ ಪ್ರಧಾನಿ ಹುದ್ದೆಯ ಆಕಾಂಕ್ಷೆಯನ್ನು ಇನ್ನೂ ಜೀವಂತವಾಗಿ ಇರಿಸಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ `ಪ್ರಧಾನಿ ಹುದ್ದೆಗೆ ಪಕ್ಷ ನಿಮ್ಮ ಹೆಸರು ಸೂಚಿಸಿದರೆ ನಿಮ್ಮ ಪ್ರತಿಕ್ರಿಯೆ ಏನು~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಇದು  ನನ್ನ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ~ ಎಂದರು.

ರಾಜಕಾರಣಿಯಾಗಿ ಸಮಾಜ ಸುಧಾರಕನ ಪಾತ್ರ ವಹಿಸಲು ಬಯಸುತ್ತಿರಾ ಎಂಬ ಪ್ರಶ್ನೆಗೆ `ಸರ್ಕಾರ ಉರುಳಿ, ಭ್ರಷ್ಟಾಚಾರ ಮುಂದುವರಿದರೆ ಜನತೆ ನನ್ನಲ್ಲಿರಿಸಿರುವ ವಿಶ್ವಾಸ ಏನಾಗಬೇಡ~ ಎಂದು ಮರು ಪ್ರಶ್ನಿಸಿದರು.

ಬಿಜೆಪಿ ಕೆಲವು ರಾಜ್ಯಗಳಲ್ಲಿ ಒಳ್ಳೆಯ ಆಡಳಿತ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಕರ್ನಾಟಕದಲ್ಲಿ ಸಮಸ್ಯೆ ಎದುರಾದಾಗ ಪಕ್ಷ ಕ್ರಮ ಜರುಗಿಸಿದೆ ಎಂದು ಅಡ್ವಾಣಿ ತಮ್ಮ ಯಾತ್ರೆಯನ್ನು ಸಮರ್ಥಿಸಿಕೊಂಡರು.

ಯಾತ್ರೆಗೆ ಸೇರುತ್ತಿರುವ ಜನರ ದೃಶ್ಯಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಮಾತ್ರ ತಮ್ಮ ಪುತ್ರಿ ಪ್ರತಿಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಅದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ವಂಶಪಾರಂಪರ‌್ಯ ಆಡಳಿತದ ವಿರುದ್ಧ ಹೋರಾಟ ನಡೆಸಿ, ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ಕರೆ ತಂದರೆ ಹೋರಾಟಕ್ಕೆ ಅರ್ಥವಿಲ್ಲ ಎಂದರು. ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಹೊರತಾಗಿ ಎಲ್ಲ ಪಕ್ಷಗಳು ವಂಶಪಾರಂಪರ‌್ಯ ಆಡಳಿತ ನಡೆಸುತ್ತಿವೆ ಎಂದು ದೂರಿದರು.

ಆರ್‌ಟಿಐ ಪರಾಮರ್ಶೆಗೆ ವಿರೋಧ
ಜಬಲ್ಪುರ, (ಪಿಟಿಐ):
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಪರಾಮರ್ಶೆ ನಡೆಸುವುದಾಗಿ ಪ್ರಧಾನಿ ಸಿಂಗ್ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಡ್ವಾಣಿ,   ಸರ್ಕಾರದ ಅಂತಹ ನಡೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

 ರಥಯಾತ್ರೆ ಕೈಬಿಡಲು ಆಗ್ರಹ
ನವದೆಹಲಿ (ಐಎಎನ್‌ಎಸ್):
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಂಧನದ ಹಿನ್ನೆಲೆಯಲ್ಲಿ  ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರು ತಮ್ಮ ರಥಯಾತ್ರೆಯನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.

ಯಡಿಯೂರಪ್ಪ ಜೈಲು ಸೇರಿದಾಗಲೇ ಅಡ್ವಾಣಿ ಯಾತ್ರೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯು ಪಕ್ಷದ ಇಬ್ಬಗೆಯ ನೀತಿಯನ್ನು ಎತ್ತಿತೋರಿಸಿದೆ. ಅಡ್ವಾಣಿ ತಮ್ಮ ಮುಖವಾಡವನ್ನು ಕಳಚಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಪ್ರತಿಕ್ರಿಯೆಗೆ ನಿರಾಕರಣೆ: ಯಡಿಯೂರಪ್ಪ ಬಂಧನ ಕುರಿತಂತೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ` ಕಾನೂನು ಪ್ರಕಾರ ಏನು ನಡೆಯಬೇಕೋ ಅದೆಲ್ಲ ನಡೆಯುತ್ತದೆ~ ಎಂದಷ್ಟೇ ಹೇಳಿದ್ದಾರೆ.

ವಿಪರ್ಯಾಸ: ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಭ್ರಷ್ಟಾಚಾರ ವಿರೋಧಿಸಿ ರಥಯಾತ್ರೆ ನಡೆಸಿರುವಾಗಲೇ ಅವರದೇ ಪಕ್ಷದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿರುವುದು ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ  ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT