ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಆಸರೆಯಿಂದ ಸಂತ್ರಸ್ತರು ದೂರ!

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರವಾಹ ಸ್ಥಿತಿ ತಲೆದೋರಿದಾಗ ಮನೆ- ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಜಿಲ್ಲೆಯ ಸಂತ್ರಸ್ತರ ದುಃಸ್ಥಿತಿ ಕಂಡು ಮರುಗಿದ್ದ ದಯಾಳುಗಳ ನೆರವು ಸ್ವೀಕರಿಸುವ ಸಂದರ್ಭ ಪರಿಗಣನೆಗೆ ಬಾರದ `ಜಾತಿ~ ಈಗ ದಯಾಳುಗಳು ನಿರ್ಮಿಸಿರುವ `ಆಸರೆ~ ಮನೆಗಳ ವಿತರಣೆ ಸಂದರ್ಭ ಧುತ್ತನೆ ಪ್ರತ್ಯಕ್ಷವಾಗಿದೆ.

ಭಾರಿ ಮಳೆಯಿಂದಾಗಿ ಎರಡು ವರ್ಷಗಳ ತುಂಗಭದ್ರಾ ಹಾಗೂ ಹಗರಿ ನದಿಗಳು ತುಂಬಿದ್ದರಿಂದ ಜಲಾವೃತವಾಗಿ, ಸ್ಥಳಾಂತರಗೊಂಡಿರುವ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆಲವು ಗ್ರಾಮಗಳ ಸಂತ್ರಸ್ತರಿಗೆ ನೀಡಲು `ಆಸರೆ~ ಯೋಜನೆ ಅಡಿ ಕಟ್ಟಲಾಗಿರುವ ಮನೆಗಳ ಹಂಚಿಕೆಗೆ ಸಂಬಂಧಪಟ್ಟಂತೆ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಇದೀಗ ಜಾತಿಯ ಪ್ರಶ್ನೆ ಎದ್ದಿದೆ.

ಮಾಟೂರು, ಶ್ರೀಧರಗಡ್ಡೆ, ಟಿ.ಎಸ್. ಕೂಡ್ಲೂರು, ಹೊನ್ನರಹಳ್ಳಿ, ಚಿಕ್ಕಬಳ್ಳಾರಿ, ಮುದ್ದಟನೂರು, ಗುಂಡಿಗನೂರು ಮತ್ತು ಮೈಲಾಪುರ ಗ್ರಾಮಗಳ ಸಂತ್ರಸ್ತರಿಗೆ ಸಿದ್ಧವಾಗಿರುವ ಮನೆಗಳ ಹಸ್ತಾಂತರ ಕಾರ್ಯ ಇದೇ 25 ಮತ್ತು26ರಂದು ನಡೆಯಲಿದೆ.

ಆದರೆ, `ಅನ್ಯ ಜಾತಿಯವರಿಗೆ ತಮ್ಮ ಓಣಿಯಲ್ಲಿ ಅಥವಾ ತಮ್ಮ ಮನೆಯ ಪಕ್ಕದಲ್ಲಿ ಮನೆ ನೀಡುವುದು ಬೇಡ~ ಎಂದು ಕೆಲವು ಜಾತಿಯ ಜನ ಹಠ ಹಿಡಿದಿರುವ ಹಿನ್ನೆಲೆಯಲ್ಲಿ ಅವರಿಗೆ ಮಣಿದಿರುವ ಸರ್ಕಾರ, ಆಯಾ ಗ್ರಾಮಗಳಲ್ಲಿ ಈ ಮುಂಚೆ ಯಾವ ರೀತಿಯಲ್ಲಿ ಮನೆಗಳಿದ್ದವೋ ಅದೇ ಮಾದರಿಯಲ್ಲಿ ನವಗ್ರಾಮಗಳಲ್ಲೂ ಮನೆ ನೀಡುವುದಾಗಿ ಒಪ್ಪಿಕೊಂಡಿದೆ.

ಸಂತ್ರಸ್ತರಿಗೆ ಮನೆಗಳನ್ನು ಹಂಚಲು ಸಿರುಗುಪ್ಪದಲ್ಲಿ ಮಂಗಳವಾರ ಸರ್ಕಾರ ಕಾರ್ಯಕ್ರಮ ಏರ್ಪಡಿಸಿ, ಲಾಟರಿ ಎತ್ತಲು ಮುಂದಾದ ಕ್ರಮವನ್ನು ವಿರೋಧಿಸಿರುವ ಗ್ರಾಮಸ್ಥರು, ಜಾತಿಯನ್ನೇ ಮುಂದಾಗಿಸಿಕೊಂಡು, ಲಾಟರಿ ಮೂಲಕ ಮನೆಗಳ ಹಂಚಿಕೆ ಬೇಡ ಎಂದು ಪಟ್ಟುಹಿಡಿದಿವೆ.

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ಹಿಂದುಳಿದ ವರ್ಗದವರೇ ಈ ಭಾಗದಲ್ಲಿ ಬಹುಸಂಖ್ಯಾತರಾಗಿದ್ದರೂ, ಅವರೇ ಲಾಟರಿ ಮೂಲಕ ಮನೆ ಹಂಚುವ ಪ್ರಕ್ರಿಯೆ ವಿರೋಧಿಸಿರುವುದು ಆಶ್ಚರ್ಯ ಮೂಡಿಸಿದೆ.

ವಿಚಿತ್ರವೆಂದರೆ ಶಾಸಕ ಸೋಮಲಿಂಗಪ್ಪ ಅವರ ನೇತೃತ್ವದಲ್ಲೇ ಜಿಲ್ಲಾಡಳಿತವೂ ಜನರ ಬೇಡಿಕೆಗೆ  ಒಪ್ಪಿಗೆ ಸೂಚಿಸಿದೆ!

ಮನೆ ಪ್ರವೇಶಿಸಿರು ಸಂತ್ರಸ್ತರು:   ಸರ್ಕಾರ ಹಂಚಿಕೆ ಮಾಡದಿದ್ದರೂ ಈಗಾಗಲೇ ಟಿ.ಎಸ್. ಕೂಡ್ಲೂರು ಮತ್ತು ಮಾಟೂರು ಗ್ರಾಮಗಳಲ್ಲಿ ಆಸರೆ ಯೋಜನೆ ಅಡಿ ನಿರ್ಮಿಸಿರುವ ಮನೆಗಳನ್ನು ಪ್ರವೇಶಿಸಿರುವ ಸಂತ್ರಸ್ತರು, ಆಯಾ ಜಾತಿಗೆ ಸಂಬಂಧಿಸಿದಂತೆ ತಮ್ಮ ನೆರೆಹೊರೆಯನ್ನು ಹೊಂದಿುವುದು ವಿಶೇಷವಾಗಿ ಕಂಡುಬಂದಿದೆ.

ಲಾಟರಿ ಮೂಲಕ ಮನೆ ಹಂಚಿದರೆ ಮೇಲ್ವರ್ಗ ಮತ್ತು ಕೆಳ ವರ್ಗದವರು ಅಕ್ಕಪಕ್ಕದಲ್ಲಿ ವಾಸಿಸ ಬೇಕಾಗುತ್ತದೆ. ಇದರಿಂದ ಸಾಮರಸ್ಯಕ್ಕೂ ಧಕ್ಕೆ ಉಂಟಾಗುತ್ತದೆ.  ದಿನವೂ ಒಂದಿಲ್ಲೊಂದು ರೀತಿಯಲ್ಲಿ ಜಗಳ, ವಾಗ್ದಾಳಿ ನಡೆಯುತ್ತದೆ ಎಂಬ ವಾದವನ್ನು ಅನೇಕರು ಮಂಡಿಸಿದ್ದು, ಜನಪ್ರತಿನಿಧಿಗಳೂ, ಅಧಿಕಾರಿಗಳೂ ಸಮ್ಮತಿ ಸೂಚಿಸಿದ್ದಾರೆ.

ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಯಾವ್ಯಾವುದೋ ಜಾತಿಯ ದಾನಿಗಳು ನೆರವು ನೀಡಿ ಮನೆ ನಿರ್ಮಿಸಿದ್ದಾರೆ. ಆ ಮನೆಗಳನ್ನು ಹಂಚಿಕೆ ಮಾಡುವಾಗ ಜಾತಿಯನ್ನು ಪರಿಗಣಿಸುತ್ತಿರುವುದು ಏಕೆ? ವರ್ಗ ಸಂಘರ್ಷ ಮುಂದುವರಿಯುವುದಕ್ಕೆ ಪ್ರೇರಣೆ ನೀಡುವುದನ್ನು ಕೈಬಿಟ್ಟು, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸರ್ಕಾರ ಶ್ರಮಿಸಬೇಕು ಎಂದು ದಲಿತ ಮುಖಂಡರಾದ ಎ.ಮಾನಯ್ಯ, ಬೆಣಕಲ್ ಬಸವರಾಜ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT