ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ತಾಣ: ಸವಾಲು ಎದುರಿಸುವ ಸಂಕಲ್ಪ ಬೇಕು

Last Updated 11 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಮೈಸೂರು:`ಅಂತರ್ಜಾಲ, ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ತಾಣಗಳು ಹದಿಹರೆಯದವರಿಗೆ ತಂದೊಡ್ಡುವ ಸವಾಲುಗಳ ಕುರಿತು ಅಧ್ಯಯನ ನಡೆಸಬೇಕಾದ ಅಗತ್ಯವಿದ್ದು, ಹೊಸ ಆವಿಷ್ಕಾರಗಳ ದುಷ್ಪರಿಣಾಮಗಳನ್ನು ಎದುರಿಸುವ ಶಕ್ತಿಯನ್ನು ಬೆಳಸಬೇಕಿದೆ~ ಎಂದು ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಸಿ.ಮಂಜುಳಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಶುಕ್ರವಾರ ನಡೆದ `ಹದಿಹರಯದ ಸಮಸ್ಯೆಗಳು ಮತ್ತು ಪರಿಹಾರದ ಸಾಧ್ಯತೆಗಳು~ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

`ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಜೀವನದ ಅವಿಭಾಜ್ಯ ಅಂಗಗಳಾಗಿವೆ. ಫೇಸ್‌ಬುಕ್ ವ್ಯಸನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಂಪ್ರದಾಯಗಳನ್ನು ತಿರಸ್ಕರಿಸಿ ವಿಜ್ಞಾನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದ ಪರಿಣಾಮವಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಯುವ ಸಮೂಹ ಅತ್ತ ವಿಜ್ಞಾನ, ತಂತ್ರಜ್ಞಾನಗಳೊಂದಿಗೆ ಬೆಳೆಯಲು ಆಗದೆ, ಇತ್ತ ಸಾಂಪ್ರದಾಯಿಕ ಜೀವನ ಶೈಲಿಗೆ ಮರಳಲು ಆಗದ ತ್ರಿಶಂಕು ಸ್ಥಿತಿಯಲ್ಲಿದೆ~ ಎಂದು ಬೇಸರಿಸಿದರು.

`ಆಧುನಿಕ ಜೀವನ ಶೈಲಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿಲ್ಲ. ನವನಾವಿನ್ಯತೆಯ ಆವಿಷ್ಕಾರವಾಗಿರುವ ಫ್ಯಾಷನ್ ಕೂಡ ಬದುಕಿಗೆ ಬೇಕು. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಅನೇಕರಲ್ಲಿ ಇಲ್ಲ.

ಕಾಲ್ಪನಿಕ ಜಗತ್ತಿನಲ್ಲಿರುವ ಯುವತಿಯರಿಗೆ ಬದುಕಿನ ವಾಸ್ತವಗಳು ಎದುರಾದಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ. ಹೀಗಾಗಿ ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹದಿಹರೆಯದವರಿಗೆ ನೀಡಬೇಕಿದೆ~ ಎಂದರು.

`ಸ್ವಾರ್ಥ ಮನೋಭಾವ ಬೆಳಸುವುದೇ ಮಹಿಳಾ ಸಬಲೀಕರಣವೆ ಎಂಬ ಕುರಿತು ಚಿಂತಿಸಬೇಕಾಗಿದೆ. ಪ್ರೀತಿ- ಪ್ರೇಮದ ಹೆಸರಿನಲ್ಲಿ ಕಾಣೆಯಾಗುತ್ತಿರುವ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ.
 
ಹಾಗೆ ಕಾಣೆಯಾದ ಮಹಿಳೆಯರು ಕೌಟುಂಬಿಕ ದೌರ್ಜನ್ಯದಿಂದ ನಲುಗುತ್ತಿದ್ದಾರೆ. ಪ್ರಜಾಪ್ರಭುತ್ವದ ಯಶಸ್ವಿಗೆ ಯುವ ಸಮೂಹದ ಸಹಭಾಗಿತ್ವದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಅವರಿಗೆ ಸಾಮಾಜಿಕ ಶಿಕ್ಷಣ ನೀಡಬೇಕಿದೆ. ಎಂಟು ತಾಸು ದುಡಿಯುವ ಖಯಾಲಿ ಬಿಟ್ಟು ಕೃಷಿಯ ಕಡೆ ಮುಖ ಮಾಡಬೇಕಿದೆ~ ಎಂದು ಕರೆನೀಡಿದರು.

`ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ಕುರಿತು ಆಯೋಗವು ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಮುಸ್ಲಿಂ ಧರ್ಮದಲ್ಲಿದ್ದ ಬಹುಪತ್ನಿತ್ವ ನಿಷೇಧಿಸುವ ಕುರಿತು ದೆಹಲಿಯ ಪ್ರಗತಿಪರ ಮುಸ್ಲಿಂರ ಚಿಂತನೆ ಸ್ವಾಗತಾರ್ಹ. ಒಂದು ವೇಳೆ ಬಹುಪತ್ನಿತ್ವಕ್ಕೆ ತಡೆಯೊಡ್ಡಿದರೆ; ಅದು ಮುಸ್ಲಿಂ ಮಹಿಳೆಯರ ಜಗತ್ತಿನಲ್ಲಿ ಹೊಸ ಮೈಲುಗಲ್ಲಾಗಲಿದೆ~ ಎಂದು ಹೇಳಿದರು.

ಡಿಸಿಪಿ ಬಸವರಾಜ ಮಾಲಗತ್ತಿ ಮಾತನಾಡಿ, `ಸಮಸ್ಯೆಗಳು ಹದಿಹರೆಯದವರಿಗೆ ಮಾತ್ರ ಬರುವುದಿಲ್ಲ. ಜೀವನದ ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುತ್ತವೆ. ಆದರೆ ಜಾಗತೀಕರಣದ ಕಾಲಘಟ್ಟದಲ್ಲಿ ಅವುಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಆರ್ಥಿಕವಾಗಿ ಮುಂದುವರಿದಿದ್ದೇವೆ, ಜೀವನ ಶೈಲಿ ಬದಲಾಗಿದೆ; ಅಭಿವೃದ್ಧಿ ಹೊಂದುತ್ತಿದ್ದೇವೆ. ಅದೇ ಸಮಯದಲ್ಲಿ ಸಮಸ್ಯೆಗಳ ಸರಮಾಲೆಯೂ ಬೆಳೆಯುತ್ತಿದೆ~ ಎಂದರು.

`ಮಕ್ಕಳು ದಾರಿತಪ್ಪಲು ಪೋಷಕರ ದುರಾಸೆಯೇ ಕಾರಣ. ಮಕ್ಕಳು ಅತಿ ಹೆಚ್ಚು ಅಂಕ ಪಡೆದು ಎಂಜಿನಿಯರ್, ಡಾಕ್ಟರ್, ಅಧಿಕಾರಿಗಳಾಗಿ ಹಣ ಗಳಿಸಬೇಕು ಎಂದು ಹಂಬಲಿಸುತ್ತಾರೆ. ಇಂಥ ದುರಾಸೆಯ ವಾತಾವರಣದಲ್ಲಿ ಬೆಳೆದ ಮಕ್ಕಳು ಸುಲಭವಾಗಿ ದಾರಿ ತಪ್ಪುತ್ತಾರೆ~ ಎಂದರು.

ರಾಜ್ಯ ಮಹಿಳಾ ಆಯೋಗದ ಸದಸ್ಯರಾದ ಮೈಥಿಲಿ, ಪ್ರಾಂಶುಪಾಲ ಡಾ.ಎ.ಎನ್.ಸೋಮಶೇಖರ್, ವಿದ್ಯಾರ್ಥಿನಿಯರ ಸಂಘದ ಆಶಾ, ವಿಮಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT