ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ತಾಣಗಳ ದುಷ್ಪರಿಣಾಮಗಳು...

Last Updated 15 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಳೆದ ಡಿಸೆಂಬರ್ 25ರಂದು ಅಂದರೆ ಕ್ರಿಸ್‌ಮಸ್ ದಿನ ಸಿಮೊನ್ ಬ್ಯಾಕ್ ಎನ್ನುವ 42 ವರ್ಷದ ಇಂಗ್ಲೆಂಡ್‌ನ ಸಾಮಾಜಿಕ ಕಾರ್ಯಕರ್ತೆಯೊಬ್ಬಳು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು.  "Took all my pills be dead soon bye bye everyone." ಆಕೆ ಬರೆದ ಈ ಆತ್ಮಹತ್ಯೆ ಸಂದೇಶಕ್ಕೆ ಒಂದು ಗಂಟೆಯೊಳಗೆ 100ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ದಾಖಲಾಗಿದ್ದವು. ಆದರೆ ಯಾರಿಗೂ  ಈ ಸಂಭಾವ್ಯ ಆತ್ಮಹತ್ಯೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮಾರನೆಯ ದಿನ ಬೆಳಿಗ್ಗೆ ಪೊಲೀಸರು ಸಿಮೊನ್ ಮನೆಯನ್ನು ತಟ್ಟಿದಾಗ ಆಕೆ ಆಗಲೇ ಇಹಲೋಕ ತ್ಯೆಜಿಸಿದ್ದಳು.

ಯಾಕೆ ಹೀಗೆ? ವಿಶೇಷವಾಗಿ 35 ರಿಂದ 45ರ ನಡುವಿನ ವಯಸ್ಸಿನವರಲ್ಲಿ  ಸಾಮಾಜಿಕ ತಾಣಗಳ ಬಳಕೆ ತೀವ್ರವಾಗಿ ಹೆಚ್ಚುತ್ತಿದೆ. ಶೇ 58ರಷ್ಟು ಫೇಸ್‌ಬುಕ್ ಬಳಕೆದಾರರು ಈ ವಯಸ್ಸಿನವರು ಎನ್ನುತ್ತದೆ ಸಮೀಕ್ಷೆ.

ಸಾಮಾಜಿಕ ತಾಣಗಳ ಮಿತಿ ಮೀರಿದ ಬಳಕೆಯಿಂದ ಖಿನ್ನತೆ, ನಿದ್ರಾಹೀನತೆ, ಕೀಳರಿಮೆ ಇತ್ಯಾದಿ ಸಮಸ್ಯೆಗಳು ಯುವಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಸಿಮೊನ್ ವಿಷಯಕ್ಕೇ ಬರುವುದಾದರೆ ಆಕೆಗೆ ಫೇಸ್‌ಬುಕ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸ್ನೇಹಿತರಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಕೆ ಬರೆದ ಪತ್ರಕ್ಕೆ ವೈವಿಧ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಯಾರೊಬ್ಬರೂ ಇದನ್ನು       ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.  ಫೇಸ್‌ಬುಕ್‌ನಲ್ಲಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಆಧುನಿಕ ಹುಚ್ಚುತನ ಎನ್ನಬೇಕೇ? ಅಥವಾ ಮಿತಿ ಮೀರಿದ ಡಿಜಿಟಲ್ ವ್ಯಸನ ಎನ್ನಬೇಕೇ ತಿಳಿಯದು. ಈ ಕುರಿತು ಈಗ ಹೊಸ ಅಧ್ಯಯನಗಳು ಪ್ರಾರಂಭವಾಗಿವೆ.

ವ್ಯಕ್ತಿಯೊಬ್ಬನ ಸಾಮಾಜಿಕ ಸಂಬಂಧಗಳಷ್ಟೇ ಮುಖ್ಯವಾದದ್ದು ಆತನ ವೈಯಕ್ತಿಕ ಸಂಬಂಧ.  ಮನುಷ್ಯ ಮೂಲಭೂತವಾಗಿ ಸಂಘಜೀವಿ ಆಗಿರುವುದರಿಂದ ಆತ ತನ್ನ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾನೆ.

ಆದರೆ, ಅದಕ್ಕಾಗಿ ಆತ ಸಾಮಾಜಿಕ ಸಂವಹನ ತಾಣಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಇದರ ಒಳಿತು ಕೆಡುಕುಗಳೇನು? ಸಾಮಾಜಿಕ ತಾಣಗಳ ಬಳಕೆ ಮಿತಿ ಮೀರುತ್ತಿದೆ ಎನ್ನುವ ಆರೋಪ ಈಗ ಬಲವಾಗುತ್ತಿರುವ ಹಿನ್ನೆಲೆಯಲ್ಲಿ  ಪ್ರಪಂಚದಾದ್ಯಂತ ಮನಶಾಸ್ತ್ರಜ್ಞರು ಈ ಹೊಸ ವ್ಯಸನದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಈಗಾಗಲೇ 100ಕ್ಕೂ ಹೆಚ್ಚು ಪುಸ್ತಕಗಳು ಸಾಮಾಜಿಕ ತಾಣದ ದುಷ್ಪರಿಣಾಮಗಳ ಕುರಿತು ಹೊರಬಂದಿವೆ. ಸಮಸ್ಯೆ ಇಲ್ಲಿಗೇ ನಿಲ್ಲುವುದಿಲ್ಲ. ಸಾಮಾಜಿಕ ತಾಣಗಳ ಮೂಲಕ ತಮ್ಮ ತೀರಾ ಖಾಸಗಿ ಸಂಬಂಧಗಳನ್ನು ಬಹಿರಂಗಗೊಳಿಸುವ ಬಳಕೆದಾರರ, ನಿಜ  ಜೀವನದಲ್ಲಿ ಸ್ವಂತ ಭಾವನೆಗಳೇ ಇಲ್ಲದ ವ್ಯಕ್ತಿಯಾಗಿ ಬದಲಾಗುವ ಸಾಧ್ಯತೆ ಇದೆ ಎನ್ನುವುದು ಮತ್ತಷ್ಟು ಆತಂಕಕಾರಿ.

ಉತ್ತರ ಅಮೆರಿಕದಲ್ಲಿ ಲಿಂಕ್ಡ್ ಇನ್   ನೆದರ್‌ಲೆಂಡ್‌ನಲ್ಲಿ ಹೈಫೈ,  ಜರ್ಮನಿಯಲ್ಲಿ ಸ್ಟುಡಿವಿಜ್, ಏಷ್ಯಾ ದೇಶಗಳಲ್ಲಿ ಟ್ವಿಟ್ಟರ್, ಫೇಸ್‌ಬುಕ್, ಆರ್ಕುಟ್ ಬಳಕೆ ಗಣನೀಯವಾಗಿ ಹೆಚ್ಚುತ್ತಿವೆ.

ಈ ತಾಣಗಳು ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಕ್ಷಣ ಕ್ಷಣದ ಮಾಹಿತಿ ಮತ್ತು ಸ್ಥಳ ಕೇಂದ್ರೀಕೃತ ಸಂದೇಶ (real-time web  and  location based) ಸೇವೆಯನ್ನು ಪ್ರಾರಂಭಿಸಿವೆ. ಒಟ್ಟಿನಲ್ಲಿ ಜನರ ಕ್ಷಣ ಕ್ಷಣದ ಯೋಚನೆಗಳು ತಲೆಯಲ್ಲಿ ಇರಬೇಕಾ? ಇಂತಹ ತಾಣಗಳಲ್ಲಿ ಇರಬೇಕಾ ಎನ್ನುವುದು ಈಗಿನ ಪ್ರಶ್ನೆ.

ಸಾಮಾಜಿಕ ತಾಣಗಳ ಅಪಾಯಕ್ಕೆ ಇದೊಂದು ಉದಾಹರಣೆ. 2008ರಲ್ಲಿ ಗ್ರಾಂಟ್ ರಾಫೆಲ್ ಎನ್ನುವ ಬ್ರಿಟಿಷ್ ಬಳಕೆದಾರನೊಬ್ಬ ತನ್ನ ಹಳೆಯ ಸಹಪಾಠಿಯ ಮೇಲಿನ ದ್ವೇಷಕ್ಕಾಗಿ ಆತ ಸಲಿಂಗಕಾಮಿ ಎಂದು ಸಾಮಾಜಿಕ ತಾಣವೊಂದರಲ್ಲಿ ನಕಲಿ ಖಾತೆಯೊಂದನ್ನು ಸೃಷ್ಟಿಸುತ್ತಾನೆ.

 ಈ ಅವಮಾನ ತಡೆಯಲಾರದೆ ಸಹಪಾಠಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವೈಯಕ್ತಿಕ ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ ರಾಫೆಲ್‌ಗೆ ಬ್ರಿಟನ್ ನ್ಯಾಯಾಲಯ 44 ಸಾವಿರ ಡಾಲರ್ ದಂಡ ವಿಧಿಸುತ್ತದೆ.

ಸಾಮಾಜಿಕ ಸಂವಹನ ತಾಣಗಳು ಜನರು ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳುವ ರೀತಿಯನ್ನೇ ಬದಲಿಸಿವೆ. ಸಾಮಾನ್ಯವಾಗಿ ಇಂತಹ ತಾಣಗಳಲ್ಲಿ ‘ವೈವಾಹಿಕ ಮಾಹಿತಿ’ ಎನ್ನುವ ಆಯ್ಕೆಯೊಂದಿರುತ್ತದೆ. ವಿವಾಹಿತ, ಅವಿವಾಹಿತ, ವಿಚ್ಛೇದಿತ ಹೀಗೆ ಇಲ್ಲಿ ಬಹು ಆಯ್ಕೆಗಳಿವೆ. ವಿಚಿತ್ರವೆಂದರೆ ಸಾಮಾಜಿಕ ತಾಣಗಳಲ್ಲಿ ನೋಂದಾಯಿಸಿಕೊಳ್ಳುವ ಅರ್ಧದಷ್ಟು ಜನ  ಈ ಮಾಹಿತಿಯನ್ನು ಸರಿಯಾಗಿ ನೀಡಿರುವುದಿಲ್ಲ.

ವಿವಾಹಿತನಿದ್ದರೂ ಅವಿವಾಹಿತನೆಂದೇ ತೋರಿಸಿಕೊಂಡಿರುತ್ತಾನೆ. ವಿಚ್ಛೇದನ ಪಡೆಯುವುದು ಮತ್ತೆ ಮದುವೆಯಾಗುವುದು, ಸದ್ಯ ಒಂಟಿಯಾಗಿದ್ದೇನೆ ಎನ್ನುವುದೆಲ್ಲಾ ಈ ತಾಣಗಳ ಮೂಲಕ ಬಹಿರಂಗವಾಗುತ್ತದೆ.

ಬಳಕೆದಾರ ತನ್ನ ಇಡಿ ಬದುಕನ್ನೇ ಫೇಸ್‌ಬುಕ್  ನಂತಹ ತಾಣಗಳ ಮೂಲಕ ಜಗಜ್ಜಾಹೀರು ಮಾಡಲು ಇಷ್ಟಪಡುತ್ತಾರೆ ಎನ್ನುತ್ತಾರೆ ‘ಪರ್ಸನಲ್ ಕನೆಕ್ಷನ್ಸ್ ಇನ್ ದ ಡಿಜಿಟಲ್ ಏಜ್’ ಕೃತಿಯ ಲೇಖಕಿ ನ್ಯಾನ್ಸಿ ಬಯಾಮ್.

 ಫೇಸ್‌ಬುಕ್‌ನ ಅಂಕಿ ಅಂಶದಂತೆ ಶೇ 53ರಷ್ಟು ಮಹಿಳೆಯರು ತಮ್ಮ ವೈವಾಹಿಕ ಮಾಹಿತಿಯನ್ನು ದಾಖಲಿಸಿದರೆ ಶೇ 47ರಷ್ಟು ಪುರುಷರು ಮಾತ್ರ ಈ ಆಯ್ಕೆಯನ್ನು ಭರ್ತಿ ಮಾಡುತ್ತಾರೆ.

ಫೇಸ್‌ಬುಕ್‌ನಲ್ಲಿ ‘ಫೇಸ್‌ಬುಕ್ ಅಫಿಶಿಯಲ್’ ಎನ್ನುವ ಮತ್ತೊಂದು ಆಯ್ಕೆ ಇದೆ. ಇದರಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಬಳಕೆದಾರ ತಾನು ಇನ್ನಷ್ಟು ಮುಕ್ತ ಎಂದು ತೋರಿಸಿಕೊಳ್ಳಬಹುದು. ಅಂದರೆ ಮತ್ತೊಂದು ಹೊಸ ಸಂಬಂಧಕ್ಕೆ ಸಿದ್ಧನಿದ್ದೇನೆ ಎನ್ನುವುದನ್ನು ‘ಸಿಂಗಲ್’ ಎನ್ನುವ ಆಯ್ಕೆಯ ಮೂಲಕ ಸೂಚ್ಯವಾಗಿ ಹೇಳಬಹುದು. ವಿಶೇಷವೆಂದರೆ ಫೇಸ್‌ಬುಕ್‌ನ ಶೇ 32ರಷ್ಟು ಬಳಕೆದಾರರು ತಾವು ‘ಸಿಂಗಲ್’ ಎಂದೇ  ತೋರಿಸಿಕೊಳ್ಳಲು ಇಷ್ಟಪಡುತ್ತಾರಂತೆ.

ವಿಚಿತ್ರವೆಂದರೆ 2010ರ ಅಂತ್ಯದ ವೇಳೆಗೆ ಫೇಸ್‌ಬುಕ್ ಬಳಕೆದಾರರಲ್ಲಿ  3 ದಶಲಕ್ಷ ಜನರು ತಮ್ಮ ಸಂಬಂಧಗಳು ತುಂಬಾ ಸಂಕೀರ್ಣವಾಗಿವೆ ಎಂದು ಬರೆದುಕೊಂಡಿದ್ದಾರೆ. ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಸಂವಹನ ತಾಣಗಳುಇನ್ನಷ್ಟು ಜನರ ಸಂಬಂಧಗಳನ್ನು ಹಾಳು ಮಾಡಲಿವೆಯೋ? ಸಂಬಂಧಗಳ ಗುಟ್ಟುಗಳನ್ನು ರಟ್ಟು ಮಾಡುವ ಮುನ್ನ ಬಳಕೆದಾರ ಯೋಚಿಸಬೇಕು..

(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT