ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯ, ಸೇವಾ ಭದ್ರತೆಗಾಗಿ ಪ್ರತಿಭಟನೆ

Last Updated 11 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಕೂಡ್ಲಿಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಬುಧವಾರದಿಂದ 3 ದಿನಗಳವರೆಗೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ, ಚುಚ್ಚು ಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಪೂರೈಸುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಜನಗಣತಿ, ಆರೋಗ್ಯ ಇಲಾಖೆಯ ವಿವಿಧ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಒತ್ತಡ ಹೆಚ್ಚಾಗಿದೆ. ಆದರೆ, ಕಾರ್ಯಕರ್ತೆಯರಿಗೆ ಸಾಮಾಜಿಕ ನ್ಯಾಯ ಹಾಗೂ ಕೆಲಸದ ಭದ್ರತೆ ಇಲ್ಲ ಎಂದು ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ಇಎಸ್‌ಐ, ಪಿಎಫ್ ಸೌಲಭ್ಯ ನೀಡಬೇಕು.  ಕೇಂದ್ರ ಸರ್ಕಾರದ ಆದೇಶದಂತೆ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೂ 6 ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಭತ್ಯೆಗಳನ್ನು ಕೊಡುವುದು ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಕಾರ್ಯಕರ್ತೆಯರು ಸರ್ಕಾರದ ಈಡೇರಿಸುವಂತೆ ಮನವಿ ಮಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯ ಪ್ರತಿಭಟನೆ 3 ದಿನಗಳವರೆಗೆ ನಡೆಯಲಿದೆ ಎಂದು ತಿಳಿಸಿದರು.
ಧರಣಿಯಲ್ಲಿ ಫೆಡರೇಷನ್‌ನ ಅಧ್ಯಕ್ಷೆ ರತ್ನಮ್ಮ, ಮಾಂತಮ್ಮ, ಶಕುಂತಲ, ದ್ರಾಕ್ಷಾಯಿಣಿ, ಬಿ. ಮಂಜುಳ, ಬಿ.ಎಂ.ಸುಹಾಸಿನಿ, ಬಸಮ್ಮ, ಕೆ.ಶಾರದ, ರಾಮಕ್ಕ, ಶಾರದಾ, ಹೊಸಹಳ್ಳಿಯ ಅನ್ನಪೂರ್ಣ, ಆಲೂರಿನ ಎನ್. ಸುಮಾ, ಎನ್. ನಿರ್ಮಲ, ಹೂಡೇಂನ ಮೀನಾಕ್ಷಿಬಾಯಿ, ಪ್ರೇಮಾ, ಕೊಟ್ಟೂರಿನ ಟಿ.ಕೆ. ವಿನೋದ, ಬಿ. ರುದ್ರಮ್ಮ, ಉಜ್ಜಿನಿಯ ನಾಗರತ್ನ, ತೂಲಹಳ್ಳಿಯ ರತ್ನಮ್ಮ, ಮಂಜುಳ, ಬೆಳ್ಳಗಟ್ಟಯ ಶಕುಂತಲ, ಬಸಮ್ಮ ಪಾಲ್ಗೊಂಡಿದ್ದರು.

ಶೋಷಣೆ: ಆರೋಪ
ಹೂವಿನಹಡಗಲಿ: ಕೇಂದ್ರ, ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರನ್ನು ಶೋಷಿಸುತ್ತಿವೆ ಎಂದು ಆರೋಪಿಸಿ ಪಟ್ಟಣದಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೂರ ದಿನಗಳ ಪ್ರತಿಭಟನೆಗೆ ಬುಧವಾರ ಕಂಜೂರ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

ಸಾಹಿತಿ ಶೇಷಗಿರಿರಾವ್ ಹವಾಲ್ದಾರ್ ಮಾತಾಡಿ, ಬೆಲೆ ಏರಿಕೆ ಭಯದಲ್ಲಿ ಬದುಕನ್ನು ಸಾಗಿಸುವುದು ದುಸ್ತರವಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ಕೂಲಿಯಲ್ಲಿ ಜೀವನ ಸಾಗಿಸುತ್ತಿರುವುದು ಕಷ್ಟ. ಸರ್ಕಾರ ಕೂಡಲೇ ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಸುರೇಶ ಅಂಗಡಿ, ಎಐಟಿಯುಸಿ ತಾಲ್ಲೂಕು ಘಟಕದ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಮಾತನಾಡಿದರು. ಸಂಸದೆ ಜೆ. ಶಾಂತಾ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿ, ಹಳ್ಳಿಗಳಲ್ಲಿ ಆರೋಗ್ಯ, ಮಕ್ಕಳ ಶಿಕ್ಷಣ ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರ ಎಲ್ಲ ಬೇಡಿಕೆ ಈಡೇರಿಸುವಂತೆ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಶಾಸಕ ಮೃತ್ಯುಂಜಯ ಜಿನಗಾ, ಕಸಾಪ ಕಾರ್ಯದರ್ಶಿ ಚಿದಾನಂದ, ಸುರೇಶ ಹಿರೇ ಹಡಗಲಿ, ಎಐಟಿಯುಸಿ ಅಧ್ಯಕ್ಷ ಬಸವನಗೌಡ, ಫೆಡರೇಷನ್ ಉಪಾಧ್ಯಕ್ಷೆ ಇಂದಿರಾ, ಮುಖಂಡರಾದ ವಿ.ಪಿ.ಶೈಲಜಾ, ಎಸ್. ವಿಜಯಾ, ನಾಗರತ್ನ, ಶಾಂತಮ್ಮ, ರೇಣುಕಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT