ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯದ ಪ್ರತಿಪಾದಕ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಸಾಲಿನಲ್ಲಿ ಪ್ರೊ. ಲಕ್ಷ್ಮೀಸಾಗರ್ ಕೂಡ ಪ್ರಮುಖರು. ಸಾಮಾಜಿಕ ನ್ಯಾಯ ಅವರ ಹೃದಯಕ್ಕೆ ಬಹಳ ಹತ್ತಿರವಾದ ವಿಷಯವಾಗಿತ್ತು.

ಹಿಂದುಳಿದ ವರ್ಗಗಳಿಗೆ ಅನೇಕ ಕ್ಷೇತ್ರಗಳಲ್ಲಿ ಸಿಗಬೇಕಾದ ಹಕ್ಕು-ಅವಕಾಶಗಳು ಲಭ್ಯವಾಗಿಲ್ಲವೆಂದು ಒಂದಲ್ಲ ಒಂದು ಕಾರ್ಯಕ್ರಮಗಳನ್ನು ರೂಪಿಸಿ  ಹಿಂದುಳಿದ ವರ್ಗಗಳನ್ನು ಬಡಿದೆಬ್ಬಿಸುತ್ತಿದ್ದರು. ಲಕ್ಷ್ಮೀಸಾಗರ್ ಸಂವಿಧಾನ ತಜ್ಞರಾಗಿ, ಸಾಮಾಜಿಕ ಕ್ಷೇತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದರು. ಅವರ ಜೊತೆಗೆ ಸದಾ ಬೆರೆತು ಚರ್ಚೆಗಳಲ್ಲಿ ಭಾಗವಹಿಸಿದ ಹಿರಿಯರೊಬ್ಬರು ಲಕ್ಷ್ಮೀಸಾಗರ್ ಹೋದ ಮೇಲೆ ನಮಗೆ `ಜ್ಞಾನ ಕೇಂದ್ರವೇ~ ಹೋದಂತಾಯಿತು ಎಂದರು.

ಲಕ್ಷ್ಮೀಸಾಗರ್ ಚಿಂತಕರಷ್ಟೇ ಅಲ್ಲ, ಒಳ್ಳೆ ಸಂಘಟನಾಕಾರರು. ನಿಜ ಜೀವನದ ಆದರ್ಶವಾಗಿದ್ದರು. ಅವರು ನಗರಾಭಿವೃದ್ದಿ ಸಚಿವರಾಗಿ  ಬೆಂಗಳೂರಿನ ಗಾಂಧೀನಗರದಲ್ಲಿನ ಖಾಸಗಿ ಮನೆಯಲ್ಲಿ ವಾಸಿಸುತ್ತಿದ್ದಾಗ, ಒಮ್ಮೆ ಬರಹಗಾರ ಡಾ. ಎಸ್.ಎಲ್.ಭೈರಪ್ಪ ಮೈಸೂರಿನ ಸಾರ್ವಜನಿಕ ಸ್ವತ್ತೊಂದು ದುರುಪಯೋಗವಾಗುತ್ತಿರುವುದನ್ನು ತಡೆಯುವ ವಿಷಯದಲ್ಲಿ ಭೇಟಿ ಮಾಡಿದರು. ಅದು ಬೆಳಿಗ್ಗೆ 6- 7ರ ಸಮಯ. 

ಲಕ್ಷ್ಮೀಸಾಗರ್ ಅವರೇ ಬನೀನು ಚಡ್ಡಿಯ ಉಡುಪಿನಲ್ಲಿ ಕಸಪೊರಕೆ ಹಿಡಿದು ಮೆಟ್ಟಿಲುಗಳನ್ನು ಗುಡಿಸುತ್ತಿದ್ದರಂತೆ. ಭೈರಪ್ಪನವರು ತಮ್ಮನ್ನು ಪರಿಚಯಿಸಿಕೊಂಡಾಗ, `ಬಹಳ ಸಂತೋಷ. ಮಹಡಿಯ ಮೇಲೆ ಹೋಗಿ ಕೂಡಿ. ಬಾಗಿಲಿಗೆ ನೀರು ಹಾಕಿ ಬರುತ್ತೇನೆ~ ಎಂದು ಹೇಳಿ ಆ ಕೆಲಸದ ನಂತರ, `ತಾವು ಬಂದಿದ್ದು ಸಂತೋಷ, ನಿಮ್ಮ `ವಂಶವೃಕ್ಷ~ ಓದಿದ್ದೆೀನೆ. ಸಿನಿಮಾ ನೋಡಿದ್ದೆೀನೆ. `ಗೃಹಭಂಗ~ವನ್ನೂ ಓದಿದ್ದೆೀನೆ. ಈಗ ಹೇಳಿ ಏನಾಗಬೇಕು~ ಎಂದು ಕೇಳಿದರಂತೆ.

ಭೈರಪ್ಪನವರು `ಸಾರ್ವಜನಿಕರ ಸೌಕರ್ಯಕ್ಕಾಗಿ ಮೈಸೂರಿನ ನಮ್ಮ ಬಡಾವಣೆಯಲ್ಲಿ ಒಂದು ಖಾಲಿ ನಿವೇಶನವಿದೆ. ಅಲ್ಲಿ ಅಂಗಡಿ ಸಂಕೀರ್ಣ ಕಟ್ಟಲು ಹವಣಿಸುತ್ತಿದ್ದಾರೆ.

ಅಂಗಡಿಗಳ ಸಂಕೀರ್ಣವಾದರೆ ಅಲ್ಲಿ ಕುಡಿತದ ಅಂಗಡಿಯೂ ಬರಬಹುದು. ಅದು ಸಾರ್ವಜನಿಕರಿಗೆ ತೊಂದರೆ. ಅಲ್ಲಿ ಶಾಲೆ, ಆಸ್ಪತ್ರೆ, ಉದ್ಯಾನವನ ಮಾಡಿ, ಅಂಗಡಿಗಳ ಸಂಕೀರ್ಣ ಬೇಡ. ಈ ವಿಷಯದಲ್ಲಿ ನೀವು ನೆರವಾಗಬೇಕು~ ಎಂದರಂತೆ. ಅದಕ್ಕೆ `ಇದೋ ವಿಷಯ, ನಾಳೆಯೇ ಸ್ಥಳ ಪರೀಕ್ಷೆಗೆ ಬರುತ್ತೇನೆ. ಬೆಳಗಿನ ಉಪಹಾರ ನಿಮ್ಮಲ್ಲೇ ಆಗಲಿ.
ಅಲ್ಲಿಯ ನಿವಾಸಿಗಳನ್ನು ಕರೆಯಿರಿ~ ಎಂದು ಹೇಳಿ, ಮಾತಿನಂತೆ ಮರುದಿನ ಮೈಸೂರಿಗೆ ಹೋಗಿ ಅಲ್ಲಿನ ನಿವಾಸಿಗಳಿಗೆ ಅನುಕೂಲಕರವಾದ ನಿರ್ಧಾರವನ್ನು ತೆಗೆದುಕೊಂಡರಂತೆ. ಇದು 1986-87 ರಲ್ಲಿ ನಡೆದ ಒಂದು ಘಟನೆ.  ಈ ಘಟನೆ ಲಕ್ಷ್ಮೀಸಾಗರ್‌ರವರ ಸರಳ, ನಿರಾಡಂಬರ ಜೀವನ, ಕಾರ್ಯತತ್ಪರತೆಯನ್ನು ತೋರಿಸುತ್ತದೆ.

ಲಕ್ಷ್ಮೀಸಾಗರ್ ಶಾಸಕರಾಗಿ, ಪ್ರತಿ ಪಕ್ಷದ ನಾಯಕರಾಗಿ, ಮಂತ್ರಿಯಾಗಿದ್ದವರು. `ದುಡಿಯದೇ ಗಳಿಸಿದ ಹಣ ಕಸಕ್ಕೂ ಕಡೆ~ ಎಂದು ಅವರು ನಂಬಿದ್ದರು. ಹಾಗಾಗಿಯೇ ಅವರ ಉಡುಪು, ಊಟ ಬಹಳ ಸರಳವಾಗಿತ್ತು.

ಸಾರ್ವಜನಿಕರ ಸಮಸ್ಯೆಗಳ ಹೋರಾಟಕ್ಕೆ ಒಂದು ವೇದಿಕೆ ಬೇಕೆಂದು 1963 ರಲ್ಲಿ ಬೆಂಗಳೂರಿನಲ್ಲಿ ಪೌರ ಸಮಿತಿಯನ್ನು ಸ್ಥಾಪಿಸಿದ ಮೊದಲಿಗರು. ಕಂದಾಯ ಏರಿಕೆಯ ವಿರುದ್ಧ, ತಿಪ್ಪಗೊಂಡನಹಳ್ಳಿಯ ಕೆರೆಯ ನೀರನ್ನು ಕುಡಿಯುವ ನೀರನ್ನಾಗಿ ಬಳಸಬೇಕು, ಅದು ಕಲುಷಿತವಾಬಾರದೆಂದು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹಾಕಿ ಸಾರ್ವಜನಿಕರ ಪರ ತೀರ್ಪು ಪಡೆದರು. ಅದು ಬೆಂಗಳೂರಿಗೆ ಕಾವೇರಿ 3ನೇ ಹಂತದ ನೀರಿನ ಸರಬರಾಜು ಯೋಜನೆಗೆ ನಾಂದಿಯಾಯಿತು.

ಲಕ್ಷ್ಮೀಸಾಗರ್ ಸದಾ ಭ್ರಷ್ಟಾಚಾರ ವಿರೋಧಿ ಮನೋಭಾವ ಹಾಗೂ ಸಾಮಾಜಿಕ ನ್ಯಾಯ ನಿಷ್ಠೆಯ ಚಿಂತನೆ. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಲೋಪ-ದೋಷಗಳನ್ನು ಬಯಲಿಗೆಳೆಯುವುದರಲ್ಲಿ ನಿರ್ಭೀತ ಧೋರಣೆ ತಳೆದಿದ್ದರು.

ಜೀವನದ ಉದ್ದಕ್ಕೂ ಕೂಡಿಟ್ಟಿದ್ದ ರೂ.15 ಲಕ್ಷ ಹಣವನ್ನು ಅವರು, ತಮ್ಮ ಕೊನೆಯ ದಿನಗಳಲ್ಲಿ ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶದಿಂದ ಬಂದ ವಕೀಲರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ರಾಜ್ಯ ವಕೀಲರ ಪರಿಷತ್‌ಗೆ ಸಹಾಯಾರ್ಥವಾಗಿ ನೀಡಿದರು.

ಇದು ಅವರ ತ್ಯಾಗ ಮನೋಭಾವಕ್ಕೆ ಸಾಕ್ಷಿ. ಅವರ ಜ್ಞಾಪಕಾರ್ಥವಾಗಿ ಸಾಮಾಜಿಕ ನ್ಯಾಯ ಕ್ಷೇತ್ರಗಳ ಸಂಬಂಧಪಟ್ಟಂತೆ ವಿಶೇಷ ಉಪನ್ಯಾಸವನ್ನು ರಾಜ್ಯ ವಕೀಲರ ಪರಿಷತ್ ಪ್ರತಿ ವರ್ಷದಂತೆ ಇದೇ ತಿಂಗಳಲ್ಲಿ ಏರ್ಪಡಿಸಬೇಕಾಗಿದೆ.

ದೇಶದಲ್ಲಿ ಎಲ್ಲಿಯವರೆಗೆ ಜಾತೀಯತೆ ಇರುತ್ತದೆಯೋ ಅಲ್ಲಿಯವರೆಗೆ ಹಿಂದುಳಿದ ವರ್ಗದವರಿಗೆ ಜಾತಿ ಆಧಾರದ ಮೇಲೆ ಮೀಸಲಾತಿ ಇರಬೇಕಾಗುತ್ತದೆ. ನಾವೆಲ್ಲ ಸಣ್ಣ ಪುಟ್ಟ ಅಭಿಲಾಷೆಗಳನ್ನು ತ್ಯಜಿಸಿ ಸಂಘಟಿತರಾಗಿ ಮನಃಪೂರ್ವಕವಾಗಿ ನಿಸ್ವಾರ್ಥಿಗಳಾಗಿ ಹೋರಾಡದಿದ್ದರೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಕೈಗೂಡುವುದಿಲ್ಲ ಎಂದು ಲಕ್ಷ್ಮೀಸಾಗರ್ ಪ್ರತಿಪಾದಿಸುತ್ತಿದ್ದರು. ಅಧಿಕಾರ ಅವಧಿಯಲ್ಲಿ ತಮ್ಮ ಸಂಬಂಧಿಗಳ್ಯಾರೂ ಹತ್ತಿರ ಸುಳಿಯಲು ಅವರು ಬಿಟ್ಟಿರಲಿಲ್ಲ.

ಲಕ್ಷ್ಮೀಸಾಗರ್ ಪ್ರಾರಂಭದ ದಿನಗಳಲ್ಲಿ ಪ್ರೌಢಶಾಲೆ ಶಿಕ್ಷಕರಾಗಿದ್ದರು. ಮಂತ್ರಿಯಾಗುವವರೆಗೂ ಕಾನೂನು ಶಿಕ್ಷಕರಾಗಿದ್ದರು. ಯಾವತ್ತೂ ಅವರು ಅಧಿಕಾರದ ಅಮಲಿನಿಂದ ಮೆರೆದವರಲ್ಲ; `ಸೇವೆಯೇ ಪರಮ ಧರ್ಮ~ ಎಂದು ನಂಬಿ ಅದರಂತೆ ನಡೆದುಕೊಂಡವರು. ಅವರು ಅಗಲಿ ಇಂದಿಗೆ (ಸೆಪ್ಟೆಂಬರ್ 12) ಮೂರು ವರ್ಷಗಳಾಗಿವೆ. ಅವರ ಸಾಮಾಜಿಕ ನ್ಯಾಯದ ಕನಸುಗಳು ಇನ್ನೂ ಸಾಕಾರಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT