ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿ ಒಳಮೀಸಲಾತಿ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಳಮೀಸಲಾತಿಯ ಸದಾಶಯ ಸಾಮಾಜಿಕ ನ್ಯಾಯ. ಪರಿಶಿಷ್ಟ ಜಾತಿಯಲ್ಲಿರುವ ಎಲ್ಲರಿಗೂ ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದಕ್ಕಬೇಕೆಂಬುದು ಒಳಮೀಸಲಾತಿ ಹೋರಾಟದ ಪ್ರಧಾನ ಆಶಯ. ಈ ಹಿನ್ನೆಲೆಯಲ್ಲಿ ನೇಮಕವಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ಒಳಮೀಸಲಾತಿ ಕಲ್ಪಿಸುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
 
ಆಯೋಗದ ವರದಿ ಜಾರಿಯಾಗಬೇಕೆಂಬುದು ಮಾದಿಗರ ಒತ್ತಾಯ. ಜಾತಿವಾರು ಜನಗಣತಿಯ ಪ್ರಕಾರ ಪರಿಶಿಷ್ಟರ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಮಾದಿಗ ಮತ್ತು ಅದರ ಸಹಸಂಬಂಧಿತ ಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಹೊಲೆಯ ಮತ್ತು ಅದರ ಸಹ ಸಂಬಂಧಿತ ಜಾತಿಗಳು ಮಾದಿಗ ಜಾತಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿವೆ. ಈ ಅಧಿಕೃತ ಮಾಹಿತಿಯ ಮೇಲೆ  ಜನಸಂಖ್ಯಾ ಆಧಾರಿತ ಮೀಸಲಾತಿಯನ್ನು ನೀಡುವಂತೆ ನ್ಯಾ.ಸದಾಶಿವ ಆಯೋಗ ಶಿಫಾರಸು ಮಾಡಿದೆ.

ರಾಜ್ಯದ ಪರಿಶಿಷ್ಟಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಮಾದಿಗ ಹಾಗೂ ಅದರ ಸಹಸಂಬಂಧಿ ಜಾತಿಗಳು 53, ಹೊಲೆಯ ಸಹಸಂಬಂಧಿತ ಜಾತಿಗಳು 28, ಅಲೆಮಾರಿ ಅಸ್ಪೃಶ್ಯ ಜಾತಿಗಳು ಹಾಗೂ ಇತರೆ 16 ಹಾಗೂ 1976ರಲ್ಲಿ ಸೇರ್ಪಡೆಯಾದ 4 ಸ್ಪೃಶ್ಯ ಜಾತಿಗಳು ಸೇರಿವೆ.

(ಉಪಜಾತಿಗಳನ್ನು ಹೊರತು ಪಡಿಸಿ). ನ್ಯಾ.ಎ.ಜೆ.ಸದಾಶಿವ ಆಯೋಗವು ಕ್ರಮವಾಗಿ ಶೇ.33.4 ರಷ್ಟು ಜನಸಂಖ್ಯೆ ಇರುವ ಮಾದಿಗ ಸಹಸಂಬಂಧಿ ಜಾತಿಗಳಿಗೆ ಶೇ 6, ಶೇ 32ರಷ್ಟಿರುವ  ಹೊಲೆಯ ಸಹಸಂಬಂಧಿತ ಜಾತಿಗಳಿಗೆ  ಶೇ 5, ಶೇ 10.94ರಷ್ಟಿರುವ ಅಲೆಮಾರಿ, ಅಸ್ಪೃಶ್ಯ ಇತರೆ ಜಾತಿಗಳಿಗೆ ಶೇ1, ಶೇ23.64 ರಷ್ಟಿರುವ ಸ್ಪೃಶ್ಯ ಜಾತಿಗಳಿಗೆ ಶೇ3ರಷ್ಟನ್ನು ಜನಸಂಖ್ಯೆ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಿದೆ.

ಸಂವಿಧಾನಬದ್ಧವಾಗಿ ಪರಿಶಿಷ್ಟ ಜಾತಿಗಳಿಗೆ ನೀಡಲಾಗಿರುವ ಶೇ 15 ಮೀಸಲಾತಿಯ ಫಲಾನುಭವಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರ 1976ರ ನಂತರದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟರ ಪಟ್ಟಿಗೆ ಅಸ್ಪೃಶ್ಯರಲ್ಲದ ನಾಲ್ಕು ಜಾತಿಗಳನ್ನು ಸೇರ್ಪಡೆಗೊಳಿಸಿ 101 ಜಾತಿಗಳನ್ನು ಅಂಗೀಕರಿಸಿದೆ.
 
ಅಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿರುವ ಹೊಲೆಯರು 1976ರವರೆಗೆ ಮೀಸಲಾತಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದರು.1976ರ ತನಕ ಹೊಲೆಯರನ್ನು ಓಲೈಸುತಿದ್ದ ಮೇಲ್ಜಾತಿ ನಾಯಕರು ಹೊಸದಾಗಿ ಸೇರ್ಪಡೆಯಾದ ಸ್ಪೃಶ್ಯ ಜಾತಿಗಳತ್ತ ಮುಖ ಮಾಡತೊಡಗಿದರು.

ಇದರಿಂದ ಸಾಮಾಜಿಕವಾಗಿ ಅತಿ ಕೆಳಸ್ತರದಲ್ಲಿರುವ ಮಾದಿಗ ಜನಾಂಗಕ್ಕೆ ಸಹೋದರ ಜಾತಿಯಾದ ಹೊಲೆಯರ ಪೈಪೋಟಿಯೊಂದಿಗೆ ಸ್ಪೃಶ್ಯರಾದ ಬೋವಿ,ಲಂಬಾಣಿ, ಕೊರಚ, ಕೊರಮ ಜಾತಿಗಳೊಂದಿಗೆ ಸ್ಪರ್ಧಿಸಬೇಕಾಗಿದೆ.

ಇದೇ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಮಾದಿಗ - ಮಾಲ(ಹೊಲೆಯ) ಒಳಮೀಸಲಾತಿ ಹೋರಾಟದ ಪ್ರತಿಫಲವಾಗಿ ಅಲ್ಲಿನ ತೆಲುಗುದೇಶಂ ಪಕ್ಷದ ಸರ್ಕಾರ ಒಳಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮಾದಿಗರ ಒಳಮೀಸಲಾತಿ ಹೋರಾಟದ ತೀವ್ರತೆ ಹೆಚ್ಚಿತು.

ಮಾದಿಗರ ನಿರಂತರ ಹಾಗೂ ವ್ಯಾಪಕ ಹೋರಾಟದ ಪರಿಣಾಮವಾಗಿ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ರಚಿಸಿದೆ. ಅದರೆ ಒಳಮೀಸಲಾತಿ ಬಗ್ಗೆ ತಾತ್ವಿಕ ಸ್ಪಷ್ಟತೆ ಇಲ್ಲದೆ ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರದಲ್ಲಿರುವ ಸರ್ಕಾರ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವುದು ಸಾಮಾಜಿಕ ನ್ಯಾಯದ ವಿರೋಧಿ ನಿಲುವು.

ಆದ್ದರಿಂದ ಆಂಧ್ರಪ್ರದೇಶ, ತಮಿಳುನಾಡು, ಸಿಕ್ಕಿಂ, ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಾಜ್ಯ ಸರ್ಕಾರವೇ ಒಳಮೀಸಲಾತಿ ಅನುಷ್ಠಾನಗೊಳಿಸಿದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು  ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ತೋರಿಸಬೇಕಿದೆ.

 1976ರಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆಯಾದ ಜಾತಿಗಳಾದ ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳು ಸದಾಶಿವ ಆಯೋಗದ ವರದಿಯನ್ನು ವಿರೋಧಿಸುತ್ತಿದೆ. 

ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ನ್ಯಾ.ವಿ.ಜೆ.ಸೇನ್ ಮತ್ತು ನ್ಯಾ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಒಟ್ಟು 101 ಜಾತಿಗಳಲ್ಲಿ  ಕ್ರಮವಾಗಿ 12,13,53 ಹಾಗೂ 54ನೇ ಸ್ಥಾನದಲ್ಲಿರುವ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು  ಸರ್ಕಾರಕ್ಕೆ ನಿರ್ದೇಶಿಸಿದೆ.
 
ಪರಿಸ್ಥಿತಿ ಹೀಗಿರುವಾಗ ಅವರ ವಿರೋಧ ಅರ್ಥವಿಲ್ಲದ್ದು ಮಾತ್ರವಲ್ಲದೆ 1976 ರ ಎಲ್.ಜಿ. ಹಾವನೂರ್ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 (ಉಪಜಾತಿಗಳನ್ನು ಹೊರತು ಪಡಿಸಿ) ಜಾತಿಗಳಿಗೆ ನೀಡಲಾಗಿರುವ  ಮೀಸಲಾತಿ ಪ್ರಮಾಣವೂ ಶೇ3ರಷ್ಟಿದೆ.

ಆದರೆ ಎ.ಜೆ.ಸದಾಶಿವ ಆಯೋಗವು ಸ್ಪೃಶ್ಯ ಜಾತಿಗಳಾದ ಬೋವಿ, ಲಂಬಾಣಿ, ಕೊರಚ, ಕೊರಮ ನಾಲ್ಕು ಜಾತಿಗಳಿಗೆ ಶೇ3ರಷ್ಟು ಒಳಮೀಸಲಾತಿಯನ್ನು ಕಲ್ಪಿಸಿದ್ದು, ಈಗಿರುವ ಪರಿಶಿಷ್ಟ ಪಂಗಡದ ಐವತ್ತು ಜಾತಿಗಳ ಮೀಸಲಾತಿಗೆ ಪರಿಶಿಷ್ಟ ಜಾತಿ ಪಟ್ಟಿಯ ನಾಲ್ಕು ಜಾತಿಗಳಿಗೆ ಆಯೋಗವು ನೀಡಿರುವ ಶೇ 3ರಷ್ಟು ಒಳಮೀಸಲಾತಿಗೆ ಸಮಾನಾಂತರವಾಗಿದೆ. ಆದರೂ ಇವರು ವರದಿಯನ್ನು ವಿರೋಧಿಸುವುದರಲ್ಲಿ ಯಾವ ತರ್ಕ ಇದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಯಿಂದ ನೀಡಿರುವ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಮೀನ ಮೇಷ ಎಣಿಸುತ್ತಿರುವ  ಸರ್ಕಾರ ಹಾಗೂ ವರದಿಯ ಸತ್ಯಾಸತ್ಯತೆಯನ್ನು ಅರಿಯದೆ ವಿರೋಧಿಸುತ್ತಿರುವ ರಾಜಕಾರಣಿಗಳು ಪರಿಶಿಷ್ಟ ಜಾತಿ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಕೈಬಿಟ್ಟು ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಸುಗಮವಾಗಿ ಜಾರಿಯಾಗಲು ಸಹಕರಿಸಬೇಕೆಂದು ಸಾಮಾನ್ಯ ಅಸ್ಪೃಶ್ಯರ ಒತ್ತಾಸೆಯಾಗಿದೆ.

ತಾತ್ವಿಕ ಸ್ಪಷ್ಟನೆ: ಆಯೋಗದ ವರದಿಯನ್ನು ತಮ್ಮ  ರಾಜಕೀಯ ಹಿತಾಸಕ್ತಿಗಾಗಿ ವಿರೋಧಿಸುವ ರಾಜಕಾರಣಿಗಳು ಎಲ್ಲಾ ಪಕ್ಷ, ಜಾತಿಗಳಲ್ಲಿಯೂ ಇದ್ದಾರೆ ಎಂಬುದು ಇತ್ತೀಚಿನ ಅವರ ಪತ್ರಿಕಾ ಹೇಳಿಕೆಗಳಿಂದ ತಿಳಿದು ಬಂದಿರುತ್ತದೆ. ಇಂತಹ ಸಾಮಾಜಿಕ ನ್ಯಾಯದ ವಿರುದ್ಧ ಮಾತನಾಡುವವರಿಗೆ ತಾತ್ವಿಕ ಸ್ಪಷ್ಟನೆ ನೀಡಲೇಬೇಕಾಗಿದೆ.  

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರು  ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನ್ಯಾ.ಎ.ಜೆ.ಸದಾಶಿವ ಆಯೋಗದ ನೇಮಕಾತಿಯೇ ಅವೈಜ್ಞಾನಿಕ ಎಂದಿದ್ದಾರೆ. 2004 ರ ಸೆಪ್ಟಂಬರ್‌ನಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 2005ರಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ರಚಿಸಿತು. ಆಗ ವಿರೋಧಿಸದೆ ಪರಮೇಶ್ವರ್ ಅವರು ಈಗ ತಮ್ಮ ಪಕ್ಷದ ನಿರ್ಣಯದ ವಿರುದ್ದವೇ ಮಾತನಾಡುತ್ತಿರುವುದು ಅಚ್ಚರಿ ಉಂಟು ಮಾಡುತ್ತಿದೆ.

ಸ್ಪೃಶ್ಯ ಜಾತಿಗಳಾದ ಬೋವಿ ಜನಾಂಗವನ್ನು ಪ್ರತಿನಿಧಿಸುವ ಸಚಿವ ಅರವಿಂದ ಲಿಂಬಾವಳಿ, ಲಂಬಾಣಿ ಜನಾಂಗದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರೂ ವರದಿಯನ್ನು ವಿರೋಧಿಸುತ್ತಿದ್ದಾರೆ. 1976ರಲ್ಲಿ ಸ್ಪೃಶ್ಯಜಾತಿಗಳಾದ ಬೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದಾಗಲೂ ಅಸ್ಪೃಶ್ಯರಾದ ಹೊಲೆ-ಮಾದಿಗರು ವಿರೋಧಿಸದಿರುವುದನ್ನು ಜ್ಞಾಪಿಸಿಕೊಳ್ಳಬೇಕಿದೆ.
 
ಅದೇ ರೀತಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗೆದ್ದು ಬಂಜಾರ ಪ್ರತ್ಯೇಕ ಅಭಿವೃದ್ಧಿ ನಿಗಮ, ಬೋವಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಿಕೊಂಡು ಕೋಟ್ಯಂತರ ರೂಪಾಯಿಗಳನ್ನು ಸರ್ಕಾರ ನೀಡಿದಾಗಲೂ ಹೊಲೆ ಮಾದಿಗರು ವಿರೋಧಿಸಿಲ್ಲ.
 
ಆದರೆ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನೀಡಲಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವುದು ಸರಿಯೇ ? ಒಂದು ವೇಳೆ 1976ರಲ್ಲಿ  ಸ್ಪೃಶ್ಯ ಜಾತಿಗಳ ಸೇರ್ಪಡೆಯಾದಾಗ ಅಸ್ಪೃಶ್ಯ ಜನಾಂಗಗಳು ವಿರೋಧಿಸಿದ್ದರೆ ಏನಾಗುತ್ತಿತ್ತು ಎಂಬ ನೈತಿಕ ಪ್ರಶ್ನೆ ಹಾಕಿಕೊಳ್ಳಬೇಕೆಲ್ಲವೇ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT