ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಭದ್ರತೆಗೆ ಆಗ್ರಹಿಸಿ ಧರಣಿ

Last Updated 3 ಸೆಪ್ಟೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು:ವೇತನ ಹೆಚ್ಚಳ ಮಾಡುವುದು, ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ನಗರದ ಬನಪ್ಪ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಭಟ್, `ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸರ್ಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತಂದಿದೆ. ಹಸಿವು ಮತ್ತು ಅಪೌಷ್ಟಿಕತೆಯಿಂದ ಮಕ್ಕಳನ್ನು ರಕ್ಷಿಸುವುದು, ಹಾಜರಾತಿಯನ್ನು ಹೆಚ್ಚಿಸುವುದು ಮತ್ತು ಮಹಿಳೆಯರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಆದರೆ, ಯೋಜನೆಗೆ ಬೆನ್ನೆಲುಬಾಗಿರುವ ಅಡುಗೆ ತಯಾರಕರು ಮತ್ತು ಸಹಾಯಕರು ಮೂಲ ಸೌಕರ್ಯಗಳಿಂದ ವಂಚಿತರಾಗಿರುವುದು ಬೇಸರದ ಸಂಗತಿ' ಎಂದರು.

ಗ್ರಾಮದ ಅಸಹಾಯಕ ಮಹಿಳೆಯರು, ವಿಧವೆಯರು, ವಿಚ್ಛೇದಿತರು ಹಲವು ವರ್ಷಗಳಿಂದ ಇದೇ ಕೆಲಸವನ್ನು ನಂಬಿ ಬದುಕುತ್ತಿದ್ದಾರೆ. ಆದರೆ, ಅವರ ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ, ಕನಿಷ್ಠ ಸೌಲಭ್ಯಗಳನ್ನು ನೀಡದಿರುವುದು ವಿಷಾದನೀಯ. ಇಂದಿನ ದುಬಾರಿ ದಿನಗಳಲ್ಲಿ ಇವರಿಗೆ ನೀಡುವ ಗೌರವ ಧನ ಮಾಸಿಕ ರೂ1000 ಮಾತ್ರ. ಇದೀಗ ಸರ್ಕಾರ, `ಕ್ಷೀರಭಾಗ್ಯ' ಯೋಜನೆ ಜಾರಿಗೆ ತಂದು, ರಾಜ್ಯದ 65 ಲಕ್ಷ ಮಕ್ಕಳಿಗೆ ಹಾಲು ನೀಡುತ್ತಿದೆ. ಇದರ ಹೆಚ್ಚುವರಿ ಹೊಣೆ ಕೂಡ ಅಡುಗೆ ತಯಾರಕರು ಮತ್ತು ಸಹಾಯಕರ ಮೇಲೆ ಬಿದ್ದಿದೆ' ಎಂದು ಆರೋಪಿಸಿದರು.

ನಂತರ ಮಾತನಾಡಿದ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, `ಮಕ್ಕಳಿಗೆ ಅಡುಗೆ-ಹಾಲು ನೀಡಲು ಬೆಳಗಿನಿಂದಲೇ ಕೆಲಸ ಪ್ರಾರಂಭಿಸಬೇಕಾಗುತ್ತದೆ. ಪ್ರತಿ ದಿನ ಅಡುಗೆ ಮನೆ ಸ್ವಚ್ಛ ಮಾಡಿ ಹಾಲು ಕಾಯಿಸಿ ಮಕ್ಕಳಿಗೆ ಕೊಡುವುದು, ನಂತರ ಕಾಳಜಿಯಿಂದ ಅಡುಗೆ ತಯಾರಿಸುವುದು, ತಾಳ್ಮೆಯಿಂದ ಮಕ್ಕಳಿಗೆ ಊಟ ಬಡಿಸುವುದು, ಪುನಃ ತಟ್ಟೆ-ಪಾತ್ರೆಗಳನ್ನು ಶುಭ್ರಗೊಳಿಸುವುದು. ಹೀಗೆ ದಿನವಿಡೀ ಕೆಲಸ ಮಾಡಿದರೂ ಸರ್ಕಾರ ಅವರಿಗೆ ನೀಡುವ ಗೌರವ ಧನ ದಿನಕ್ಕೆ ಕೇವಲ ರೂ35 ಮಾತ್ರ.

ಇದೇ ಮಹಿಳೆಯರು ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ  ರೂ200 ರಿಂದ ರೂ300 ದುಡಿಯುತ್ತಾರೆ. ಸರ್ಕಾರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ದಿನದ ಕೆಲಸಕ್ಕೂ ರೂ174 ಇದೆ. ಸರ್ಕಾರ, ಈ ಸತ್ಯಾಸತ್ಯೆತೆಗಳನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

`ಈ ಯೋಜನೆಯ ಮಾರ್ಗಸೂಚಿಯಂತೆ ಕನಿಷ್ಠ 25 ಮಕ್ಕಳಿಗೆ ಒಬ್ಬರು, 25 ರಿಂದ 100 ಮಕ್ಕಳಿಗೆ ಇಬ್ಬರು, ನಂತರದ ಪ್ರತಿ ನೂರು ಮಕ್ಕಳಿಗೆ ಹೆಚ್ಚುವರಿ ಒಬ್ಬರು ಈ ಕೆಲಸ ಮಾಡಬೇಕಿದೆ. ಆದರೆ, ಹಲವು ಶಾಲೆಗಳಲ್ಲಿ ಅಗತ್ಯವಿರುವಷ್ಟು ಅಡುಗೆಯವರನ್ನಾಗಲೀ, ಸಹಾಯಕರನ್ನಾಗಲೀ ನೇಮಕ ಮಾಡಿಲ್ಲ. ಅಲ್ಲದೇ, ಆರೋಗ್ಯ ಭದ್ರತೆ, ವಿಮೆ, ರಜೆ, ಹೆರಿಗೆ ಭತ್ಯೆ, ಪಿಂಚಣಿ ಇನ್ನಿತರ ಸೌಲಭ್ಯಗಳೂ ಸಿಗುತ್ತಿಲ್ಲ' ಎಂದು ಆರೋಪಿಸಿದರು.

ಹತ್ತಿ ಬಟ್ಟೆಯ ಸಮವಸ್ತ್ರದ ಜತೆಗೆ ಕೈಗೆ ಗ್ಲೌಸ್ ಮತ್ತು ತಲೆಗೆ ಸ್ಕಾರ್ಫ್ ಧರಿಸಿ ಅಡುಗೆ ತಯಾರಿಕರು ಮತ್ತು ಸಹಾಯಕರು ಕೆಲಸ ಮಾಡಬೇಕು ಎಂಬ ನಿರ್ದೇಶನ ಕೂಡ ಯಾವ ಶಾಲೆಯಲ್ಲೂ ಪಾಲನೆಯಾಗುತ್ತಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕೂಡಲೇ ಸಮವಸ್ತ್ರ ವಿತರಿಸುವುದರ ಜತೆಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT