ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯನ ಕೈಗೆ ಕಾನೂನು!

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಕುಟುಂಬ ಅಥವಾ ವ್ಯಕ್ತಿಗತ ಅನ್ಯಾಯಗಳ ವಿರುದ್ಧ ಸಿಡಿದೇಳುವ ಹಾಗೂ ಪ್ರತೀಕಾರ ತೀರಿಸಿಕೊಳ್ಳುವ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಚಿತ್ರಪರದೆಯ ಆರಂಭದ ದಿನಗಳಲ್ಲಿ ಮೂಡುತ್ತಿದ್ದವು. ನಂತರದ ದಿನಗಳಲ್ಲಿ ಅಡ್ಡದಾರಿ ಹಿಡಿದ ವ್ಯವಸ್ಥೆಯ ಮೇಲೆ ತಿರುಗಿ ಬೀಳುವ ಪ್ರವೃತ್ತಿ ಚಲನಚಿತ್ರಗಳಲ್ಲಿ ಕಾಣತೊಡಗಿತು.

ಜಮೀನ್ದಾರನೊಬ್ಬನ ಕಿರುಕುಳಕ್ಕೆ ರೋಸಿ ಹೋದ ರೈತ ಬಂಡೆದ್ದು ಡಕಾಯಿತನಾಗಿ ಮಾರ್ಪಡುವ ಕಥಾವಸ್ತುವಿದ್ದ ನಿತಿನ್ ಬೋಸ್ ಅವರ `ಗಂಗಾ ಜಮುನಾ' ನಾಯಕನ ವ್ಯಗ್ರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿತು. ಸಮಾಜದಲ್ಲಿ ಕಾಣುವ ಹುಳುಕುಗಳನ್ನು ಎತ್ತಿ ತೋರಿದರೂ ಅದರ ಬಗ್ಗೆ ಎಚ್ಚರಗೊಳ್ಳದ ವ್ಯವಸ್ಥೆಯ ಕರ್ತವ್ಯಗಳನ್ನು ತಾವೇ ನಿರ್ಧರಿಸುವ ಮನೋಭಾವದ ನಾಯಕರು ಮುಖ್ಯ ಪಾತ್ರಗಳಲ್ಲಿ ಕಂಡುಬರುವ ಚಲನಚಿತ್ರಗಳು 1960ರ ದಶಕದ ಮೊದಲರ್ಧದಲ್ಲಿ ತೆರೆಗೆ ಬರಲಾರಂಭಿಸಿ ಕಾಲಕ್ರಮೇಣ ಅವೇ ಮಾದರಿಯ ಒಂದಿಷ್ಟು ಚಿತ್ರಗಳು ಪುನರಾವರ್ತನೆ ಆದದ್ದುಂಟು.

ಕಾಲ್ಪನಿಕ ಹಾಗೂ ನೈಜ ಘಟನೆಗಳನ್ನು ಆಧರಿಸಿದ ಚಿತ್ರಗಳ ಜೊತೆಗೆ ಅಪರಾಧ ಲೋಕದ ಅನ್ಯಾಯಗಳನ್ನು ಹೊರಗೆಳೆಯುವ ಚಿತ್ರಗಳು ಹಿಂದಿ ಭಾಷೆಯಲ್ಲಿ ಮಾತ್ರವಲ್ಲ- ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಸಿದ್ಧವಾಗಿ ಯಶಸ್ಸು ಪಡೆದವು. ಕನ್ನಡದ `ಅಂತ', ತೆಲುಗಿನ `ಪ್ರತಿಘಟನ' ಇಂತಹ ಚಿತ್ರಗಳಿಗೆ ಉದಾಹರಣೆಗಳು.

ಬಾಲ್ಯದಲ್ಲಿ ಬೇರ್ಪಟ್ಟು ಯುವಕರಾಗುವ ವೇಳೆಗೆ ಬೇರೆ ಬೇರೆ ಬಗೆಯ ವ್ಯಕ್ತಿತ್ವ ಹೊಂದಿರುವ ಸಹೋದರರು ಒಂದಾಗುವುದು, ತಮ್ಮ ಪಾಲಕರ ಮೇಲೆ ಅಥವಾ ಕುಟುಂಬಗಳನ್ನು ದುರಂತಕ್ಕೆ ತಳ್ಳಿದ ಖಳರ ವಿರುದ್ಧ ಈ ಸಹೋದರರು ಹೋರಾಡುವುದು ಇತ್ಯಾದಿ ಕಥಾ ವಸ್ತುಗಳುಳ್ಳ ಅನೇಕ ಚಲನಚಿತ್ರಗಳು ಆ್ಯಕ್ಷನ್ ಚಿತ್ರಗಳ ಸೂತ್ರಗಳ ಮೇಲೆ ತಯಾರಾದವು. ಗಟ್ಟಿಮುಟ್ಟಾದ ದೇಹದಾರ್ಢ್ಯತೆಯುಳ್ಳ ದಾರಾಸಿಂಗ್, ಜೈರಾಜ್ ಮೊದಲಾದವರು ಮೊದಮೊದಲು ಇಂತಹ ಚಿತ್ರಗಳಲ್ಲಿ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. 

1950ರ ದಶಕದ ಆರಂಭದಲ್ಲಿ ನಾಯಕರೇ ಪ್ರಮುಖ ಪಾತ್ರಗಳಾಗಿ ಚಿತ್ರಗಳನ್ನು ಆವರಿಸಿಕೊಳ್ಳುವ ಪರಿಪಾಠ ಶುರುವಾದ ಮೇಲೆ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಪಡೆದವು. ಯಶ್‌ಛೋಪ್ರಾ ಅವರ `ವಕ್ತ್' ಚಿತ್ರದಲ್ಲಿ ರಾಜ್‌ಕುಮಾರ್, ಓ.ಪಿ. ರಹ್ಲನ್ ಅವರ `ಪೂಲ್ ಔರ್ ಪತ್ತರ್'ನಲ್ಲಿ ಧಮೇಂದ್ರ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮೊದಲು ಅಪರಾಧಿಗಳಾಗಿದ್ದವರು ನಂತರ ಉತ್ತಮರಾಗಿ ಮಾರ್ಪಾಟುಗೊಳ್ಳುವ ಚಿತ್ರಗಳು ಇವಾಗಿದ್ದವು. `ಪೂಲ್ ಔರ್ ಪತ್ತರ್'ನಲ್ಲಿ ಅಪರಾಧಿಯಾಗಿದ್ದ ನಾಯಕ ಪ್ರೇಮಕ್ಕೆ ಓಗೊಟ್ಟು ಸಜ್ಜನನಾಗುವ ಚಿತ್ರಕಥೆ ಜನರಿಗೆ ಇಷ್ಟವಾಯಿತು. 

ದುಷ್ಟರ ವಿಜೃಂಭಣೆಯ ವಿರುದ್ಧ ಯುವಕನೋರ್ವ ಹೋರಾಡುವ ಕಥಾ ಹಂದರವುಳ್ಳ ಚಲನಚಿತ್ರಗಳು ಭಾರತದ ಎಲ್ಲಾ ಭಾಷೆಗಳಲ್ಲೂ ತಯಾರಾಗಿ ನಿರ್ಮಾಪಕರಿಗೆ ಕೈತುಂಬಾ ಹಣವನ್ನು ತಂದುಕೊಟ್ಟವು. ಇಂತಹ ಚಿತ್ರಗಳು ಆ್ಯಕ್ಷನ್ ಥ್ರಿಲ್ಲರ್‌ಗಳಂತೆ ಇದ್ದರೂ ಅದಕ್ಕೊಂದು ಸಾಮಾಜಿಕ ಕಳಕಳಿಯ ವಿಷಯವೊಂದರ ಹೊದಿಕೆ ಇರುತ್ತಿತ್ತು.

ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಪಣತೊಟ್ಟ ಯುವ ನಾಯಕ ಖಳನಾಯಕರನ್ನು ಬೆಂಬಿಡದೆ ಕಾಡುವ ಚಿತ್ರಗಳು ಸಾಲು ಸಾಲು ತೆರೆಗೆ ಬಂದವು. ಇದೇ ರೀತಿಯಲ್ಲಿ ಕುಟುಂಬವೊಂದನ್ನು ಛಿದ್ರ ಮಾಡಿದ ದುಷ್ಟ ವ್ಯಕ್ತಿಯನ್ನು ದಂಡಿಸಲು ಚಿಕ್ಕಂದಿನಲ್ಲಿ ಬೇರೆ ಬೇರೆಯಾಗಿದ್ದ ಅಣ್ಣತಮ್ಮಂದಿರು ಒಟ್ಟಾಗಿ ಸೇರಿ ಹೋರಾಡುವ ಕಥೆಗಳನ್ನು ಹೊಂದಿದ್ದ ಚಿತ್ರಗಳು ತಯಾರಾದವು. ಇಂತಹ ಚಿತ್ರಗಳಲ್ಲಿ ವಿಜಯಾನಂದ್ ನಿರ್ದೇಶಿಸಿದ `ಜಾನಿ ಮೇರಾ ನಾಮ್'  ಅದ್ಭುತ ಯಶಕಂಡಿತು.

ಹಿಂಸೆ, ಸೇಡು ಹೆಚ್ಚಾಗಿ ಕಾಣುತ್ತಿದ್ದ ಚಿತ್ರಗಳ ಏಕತಾನತೆಯನ್ನು ದೂರಮಾಡಲು ಸಂಗೀತ ಹಾಗೂ ಪ್ರೇಮ ಪ್ರಸಂಗಗಳನ್ನು ನಡುನಡುವೆ ಜೋಡಿಸುವ ಮಾದರಿಯ ಚಿತ್ರಗಳೂ ಬರತೊಡಗಿದವು. ಇವುಗಳಲ್ಲಿ `ಹರೇ ರಾಮ್ ಹರೇ ಕೃಷ್ಣ', `ಕಾರವಾನ್', `ಜುಗ್ನು', `ಅಪ್ನಾ ದೇಶ್' ಮೊದಲಾದವು ಮುಖ್ಯವಾದವು. 

ಕಟ್ಟುಮಸ್ತಾದ ದೇಹವುಳ್ಳವರೇ ನಾಯಕರಾಗಿ ಯಶ ಕಂಡ 60-70ರ ದಶಕಗಳ ಚಿತ್ರಗಳ ನಂತರ ನೀಳಕಾಯದ ಹಾಗೂ ಸೌಮ್ಯ ಸ್ವಭಾವದ ನಾಯಕರು ಸುಂದರ ನಾಯಕಿಯರೊಂದಿಗೆ ಪ್ರತೀಕಾರ ಹಾಗೂ ಆ್ಯಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು.

ಅಮಿತಾಭ್ ಬಚ್ಚನ್, ಧಮೇಂದ್ರ, ಜಿತೇಂದ್ರ ಮೊದಲಾದವರು ಪ್ರೇಕ್ಷಕರನ್ನು ಸೆಳೆಯತೊಡಗಿದರು. ಅಮಿತಾಭ್ ಬಚ್ಚನ್ `ಪರ‌್ವಾನಾ' ಚಿತ್ರದಲ್ಲಿ ಪ್ರತಿನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರೂ ಪ್ರೇಯಸಿಗೆ ಮನಸೋತು ಕಾನೂನು ಚೌಕಟ್ಟಿನಲ್ಲಿಯೇ ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಈ ಪಾತ್ರದಿಂದ ಅವರ ನಟನೆಗೆ ಬೇರೆ ಬಗೆಯ ಆಯಾಮ ದೊರಕಿ ಮುಂದಿನ ಬಹಳಷ್ಟು ಚಿತ್ರಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆ ಇದೇ ಬಗೆಯ ಪಾತ್ರಗಳನ್ನು ಬಚ್ಚನ್ ನಿರ್ವಹಿಸಿದರು. 

ತನ್ನ ಕಣ್ಣಮುಂದೆಯೇ ಪೋಷಕರನ್ನು ಕೊಲೆಗೈದ ಖಳನಾಯಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿಯಾಗುವ, ಕಾನೂನು ಪರಿಧಿಯಲ್ಲಿಯೇ ಕೆಲಸ ಮಾಡುವ ನಾಯಕನನ್ನು ವಿನಾಕಾರಣ ಭ್ರಷ್ಟಾಚಾರದ ಬಲೆಯಲ್ಲಿ ಸಿಕ್ಕಿಸಲಾಗುತ್ತದೆ. ಇವೆಲ್ಲವುಗಳಿಂದ ಬೇಸತ್ತ ನಾಯಕ ಕೆಲಸ ತೊರೆದು ಆ್ಯಂಗ್ರಿ ಯಂಗ್‌ಮನ್ ಆಗಿ ರೂಪುಗೊಂಡು ತನಗೆ ಹಾಗೂ ತನ್ನ ಕುಟುಂಬಕ್ಕೆ ಕೇಡು ಮಾಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ. ಪ್ರೇಮ ಪ್ರಣಯಕ್ಕೆ ಸಮಯವಿಲ್ಲದ ಈ ಸಾಧು ಸ್ವಭಾವದ ವ್ಯಕ್ತಿ ಧೈರ್ಯವಂತ ಮುಖಂಡನಾಗಿ ತನ್ನ ಗುರಿಯನ್ನು ಈಡೇರಿಸಿಕೊಳ್ಳುತ್ತಾನೆ. ಇಂತಹ ಕಥಾಹಂದರವನ್ನು ಒಳಗೊಂಡ `ಜಂಜೀರ್' ದೇಶದಾದ್ಯಂತ ಜನಪ್ರಿಯತೆ ಪಡೆದ ಚಿತ್ರವಾಗಿ ಅಮಿತಾಭ್ ಬಚ್ಚನ್‌ಗೆ ಹೊಸ ಇಮೇಜ್ ತಂದುಕೊಟ್ಟಿತು. 

ಸಲಿಂ-ಜಾವೇದ್ ಜೋಡಿ ಹೆಣೆದ `ಜಂಜೀರ್'ನಂತಹ ಕಥೆಯನ್ನೊಳಗೊಂಡ ಚಿತ್ರಗಳು 70ರ ದಶಕದಲ್ಲಿ ದೇಶದುದ್ದಕ್ಕೂ ತಯಾರಾದರೂ ಜಂಜೀರ್‌ಗೆ ಸಿಕ್ಕ ಯಶಸ್ಸು ಯಾವ ಚಿತ್ರಕ್ಕೂ ಸಿಕ್ಕಲಿಲ್ಲ. ಜಂಜೀರ್‌ನಲ್ಲಿ ವಹಿಸಿದ ಪಾತ್ರವನ್ನು ಹೋಲುವ ನಾಲ್ಕಾರು ಚಿತ್ರಗಳು ಅಮಿತಾಭ್ ಅವರಿಗೆ ಹೆಸರು ತಂದುಕೊಟ್ಟರೂ `ದಿವಾರ್'ನಲ್ಲಿ ಅವರು ನಿರ್ವಹಿಸಿದ ಬಂದರು ಕೂಲಿಯ ಪಾತ್ರ ಮತ್ತೊಮ್ಮೆ ಅವರಿಗೆ ಯಂಗ್ ಆ್ಯಂಗ್ರಿ ಮ್ಯೋನ್ ಪಾತ್ರವನ್ನು ಗಟ್ಟಿಮಾಡಿತು. 

ವ್ಯವಸ್ಥೆಯಲ್ಲಿ ನಡೆಯುವ ಅಮಾನವೀಯ ಘಟನೆಗಳು, ಅಮಾಯಕರ ಮೇಲೆ ಆಗುವ ಶೋಷಣೆ, ಪ್ರಾಮಾಣಿಕರ ಮೇಲೆ ಜರುಗುವ ದೌರ್ಜನ್ಯ ಮೊದಲಾದ ಕಥಾವಸ್ತುಗಳಿರುವ ಹಲವಾರು ಚಿತ್ರಗಳು ಭಾರತೀಯ ಭಾಷೆಗಳಲ್ಲಿ ತಯಾರಾಗಿ ಯಶಸ್ಸು ಗಳಿಸಿ ಹಿಂದಿ ಚಿತ್ರರಂಗದಲ್ಲಿಯೂ ಜನಮನ್ನಣೆ ಪಡೆದವು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕನ್ನಡದಲ್ಲಿ ನಿರ್ದೇಶಿಸಿದ್ದ `ಅಂತ' ಹಿಂದಿ ಭಾಷೆಯಲ್ಲಿ `ಮೇರಿ ಆವಾಜ್ ಸುನೋ' ಚಿತ್ರವಾಗಿ ತಯಾರಾಯಿತು. ಕನ್ನಡದಲ್ಲಿ ಅಂಬರೀಷ್ ವಹಿಸಿದ್ದ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಜಿತೇಂದ್ರ ಅಭಿನಯಿಸಿದರು.

ಕಾನೂನಿನ ರಕ್ಷಕರೇ ಅಮಾಯಕ ವ್ಯಕ್ತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದರ ಮೂಲಕ ಸಂಕಷ್ಟಕ್ಕೆ ತಳ್ಳಿದ್ದನ್ನು ನಾಲ್ಕಾರು ನಿದರ್ಶನಗಳ ಮೂಲಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಕಟ್ಟಿಕೊಟ್ಟಿದ್ದ `ಮೇರಿ ಆವಾಜ್ ಸುನೋ' ಚಿತ್ರದಲ್ಲಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿತೋರಿಸುವ ಪ್ರಯತ್ನ ನಡೆಯಿತು. ಇಂತಹ ಕಥಾ ಹಂದರವನ್ನು ಹೊಂದಿದ ಹಲವಾರು ಚಿತ್ರಗಳು ಸಾಲುಸಾಲಾಗಿ ಬಂದವು. ಗೋವಿಂದ ನಿಹಲಾನಿ ಅವರ  `ಅರ್ಧಸತ್ಯ' ಕಾನೂನು ರಕ್ಷಕರಾದ ಪೊಲೀಸ್‌ರಲ್ಲೇ ಇರುವ ಭ್ರಷ್ಟತೆಯನ್ನು ಹೊರಹಾಕಿತು. ವ್ಯವಸ್ಥೆಯ ವಿರುದ್ಧ ತಣ್ಣಗೆ ಪ್ರತಿಭಟಿಸುವ ಕೆಲವೊಮ್ಮೆ ಹಿಂಸೆಯ ಮೂಲಕ ಪ್ರತಿಕ್ರಿಯೆ ತೋರುವ ಹಲವಾರು ಚಲನಚಿತ್ರಗಳು ಸೆನ್ಸಾರ್ ಅವಕೃಪೆಗೂ ಒಳಗಾದವು. ಟಿ. ರಾಮರಾವ್ ಅವರ `ಅಂಧ ಕಾನೂನ್' ಹಾಗೂ `ಇಂಕ್ವಿಲಾಬ್' ಚಿತ್ರಗಳು ಅನೇಕ ವಿವಾದಗಳನ್ನು ಸೃಷ್ಟಿಸಿದವು.

`ಸತ್ಯಮೇವ ಜಯತೆ', `ಆಜ್ ಕಿ ಅವಾಜ್' ಮೊದಲಾದ ಚಿತ್ರಗಳು ದುಷ್ಟರ ದುಷ್ಕೃತ್ಯಗಳನ್ನು ಎದುರಿಸಲಾಗದ ವ್ಯವಸ್ಥೆಯ ಅಸಹಾಯಕತೆಯನ್ನು ವಿವರಿಸುವ ಜೊತೆಗೆ ಪ್ರಾಮಾಣಿಕರು ಮತ್ತು ಸಾರ್ವಜನಿಕ ಹಿತಕಾಯುವ ಮುಖಂಡರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವ ಸನ್ನಿವೇಶಗಳನ್ನು ಬಿಂಬಿಸಿದ್ದವು. ಸೇಡು ಮತ್ತು ಪ್ರತೀಕಾರದ ಅಂಶಗಳ ಒಳಗೆ ಸಾಮಾಜಿಕ ಹಿತವೂ ಇಂತಹ ಚಿತ್ರಗಳಲ್ಲಿ ಅಂತರ್ಗತವಾಗಿತ್ತು. 

ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲುವ ಪ್ರವೃತ್ತಿ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯಗಳು ಹೆಚ್ಚುತ್ತಿದ್ದಂತೆ ಆಯಾ ಕಾಲಮಾನದ ಸಮಾಜ ವಿರೋಧಿ ವಿಚಾರಗಳನ್ನು ಚಿತ್ರಗಳು ಒಳಗೊಳ್ಳುವ ಪರಿಪಾಠವನ್ನು ಸುಭಾಷ್ ಘಾಯ್ ತಮ್ಮ `ಕರ್ಮ' ಚಿತ್ರದ ಮೂಲಕ ಆರಂಭಿಸಿದರು. ಭಯೋತ್ಪಾದನೆ ಮಾನವ ಕುಲಕ್ಕೆ ಆತಂಕ ತರುವ ಕೃತ್ಯವೆಂದು ಸಾರುವ ಕಥೆಯನ್ನು ಕರ್ಮ ಹೊಂದಿತ್ತು. 

ಕಾನೂನು ಚೌಕಟ್ಟಿನಲ್ಲಿ ನ್ಯಾಯ ಸಿಗದಿದ್ದ ಸನ್ನಿವೇಶಗಳಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಅನೇಕ ಘಟನಾವಳಿಗಳು ನಮ್ಮ ಕಣ್ಮುಂದೆ ಹಲವಾರು ಸಂದರ್ಭಗಳಲ್ಲಿ ನಡೆಯುತ್ತವೆ. ಇಂತಹ ವಿಷಯಗಳನ್ನೇ ಆಧರಿಸಿ ಚಿತ್ರಗಳನ್ನು ತಯಾರಿಸುವ, ಜನರನ್ನು ಎಚ್ಚರಗೊಳಿಸುವ ಪ್ರಯತ್ನಗಳು 1970-80ರ ದಶಕಗಳಲ್ಲಿ ಆರಂಭವಾಗಿ ದೇಶದ ಎಲ್ಲಾ ಭಾಷೆಗಳಲ್ಲೂ ನಡೆದವು. ಈಗಲೂ ಇಂತಹ ಕಥಾ ಹಂದರವಿರುವ ಚಿತ್ರಗಳಿಗೇನೂ ಬರವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT