ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರ ಬದುಕಿನ ಅಸಾಮಾನ್ಯ ಚಿತ್ರಣ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹಿಂದಿ ಚಿತ್ರರಂಗದಲ್ಲಿ ಮುಂಬಯಿಯನ್ನು ಕೇಂದ್ರವಾಗಿಟ್ಟುಕೊಂಡು ತಯಾರಾದ ಚಿತ್ರಗಳು ಹಲವು ಬಗೆಯಿವೆ. ಮುಖ್ಯವಾಹಿನಿ ಎಂದೇ ಪರಿಗಣಿಸಬಹುದಾದ ಬಿಮಲ್ ರಾಯ್, ರಾಜ್ ಕಪೂರ್, ಗುರುದತ್ ಮುಂತಾದವರ ಚಿತ್ರಗಳಿಂದ ಹಿಡಿದು ಇತ್ತೀಚಿನ ಅನುರಾಗ್ ಕಶ್ಯಪ್, ನೀರಜ್ ಪಾಂಡೆ, ವಿಶಾಲ್ ಭಾರದ್ವಾಜ್ ಮತ್ತಿತರ ಅನೇಕರ ಚಿತ್ರಗಳಲ್ಲಿ ಮುಂಬಯಿ ನಗರದ ವಿವಿಧ ಮುಖಗಳು ಬಿಂಬಿತವಾಗಿವೆ. ಇದು ಕಥಾವಸ್ತು, ನಿರೂಪಣೆಯ ಬಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಯಾ ಚಿತ್ರದ ನಿರ್ದೇಶಕನ ಪರಿಕಲ್ಪನೆ ಹಾಗೂ ಆಶಯಕ್ಕೆ ಸಂಬಂಧಪಟ್ಟಿದ್ದು.

ಅದೇನೇ ಇದ್ದರೂ ಮುಂಬಯಿ ಮತ್ತು ಅಲ್ಲಿನ ಜನಜೀವನವನ್ನು ಚಿತ್ರಗಳ ಪ್ರಮುಖ ಪಾತ್ರದ ಮುಖೇನ ಪ್ರಸ್ತುತಪಡಿಸುವುದು ನಡೆದು ಬಂದ ದಾರಿಯಾಗಿತ್ತು; ಎಲ್ಲ ವಿಧದಲ್ಲಿ ಹೀರೋ ಕೇಂದ್ರಿತವಾಗಿದ್ದದ್ದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಇದರಿಂದ ಸಂಪೂರ್ಣ ಭಿನ್ನವಾದ ಪರಿಕಲ್ಪನೆ ಹೊಂದಿರುವ ಚೇತೋಹಾರಿ ಚಿತ್ರ ‘ಧೋಬಿ ಘಾಟ್’.

‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ಬೇಂದ್ರೆ ಮತ್ತು ಕುವೆಂಪು ಅವರಂಥ ದಿಗ್ಗಜರ ಮಾರ್ಗವನ್ನು ಬಿಟ್ಟು ಹಟದಿಂದ ತಮ್ಮದೇ ಮಾರ್ಗ ನಿರ್ಮಿಸಿಕೊಂಡ ಕವಿ ಗೋಪಾಲಕೃಷ್ಣ ಅಡಿಗರ ಛಲ ಮತ್ತು ಆತ್ಮವಿಶ್ವಾಸವನ್ನು ತಮ್ಮ ಮೊದಲ ಚಿತ್ರದಲ್ಲಿಯೇ ನಿರ್ದೇಶಕಿ ಕಿರಣ್‌ರಾವ್ ಮೆರೆದಿದ್ದಾರೆ. ಅಡಿಗರು ತಮ್ಮ ಕಾವ್ಯದಲ್ಲಿ ಸಾಮಾನ್ಯರನ್ನೇ ಪ್ರಧಾನ ಭೂಮಿಕೆಯಲ್ಲಿಟ್ಟಂತೆ, ಕಿರಣ ರಾವ್ ಅವರ ಚಿತ್ರದಲ್ಲೂ ಸಾಮಾನ್ಯರ ಬದುಕೇ ಮುಖ್ಯಭೂಮಿಕೆ.

ಅಡಿಗರ ಅಭಿವ್ಯಕ್ತಿಯ ಆಳ-ವಿಸ್ತಾರಗಳು ಬೇರೆ ಬಗೆಯಾದರೆ ‘ದೋಭಿ ಘಾಟ್’ನಲ್ಲಿ ಸಾಮಾನ್ಯರ ಬದುಕಿನ ತುಣುಕುಗಳು ಎಲ್ಲ ರೀತಿಯ ತಲ್ಲಣ, ನಿರೀಕ್ಷೆ, ವಿಷಾದ, ಉದ್ವೇಗ ಇತ್ಯಾದಿಗಳು ನಿಯಂತ್ರಿತ ಭಾವತೀವ್ರತೆಯಲ್ಲಿ ಸಹಜ ಹಾಗೂ ವಾಸ್ತವದ ನೆಲೆಗಂಟಿಕೊಂಡೇ ಪ್ರಕಟಗೊಳ್ಳುತ್ತ ಉದ್ದೇಶಿತ ಆಶಯವನ್ನು ಸಮರ್ಥವಾಗಿ ಪೂರೈಸುತ್ತವೆ.     

ಸಿನಿಮಾ ನಿರ್ದೇಶನದಲ್ಲಿ ಮಹಿಳೆಯ ಪ್ರವೇಶ ಹೊಸದೇನಲ್ಲ. ಈಗಾಗಲೇ ದೀಪಾ ಮೆಹತಾ, ಮೀರಾ ನಾಯರ್, ನಂದಿತಾ ದಾಸ್, ಅಪರ್ಣಾ ಸೆನ್ ಮುಂತಾದವರ ನಿರ್ದೇಶನದ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪುರಸ್ಕಾರ ಹಾಗೂ ಮನ್ನಣೆಗೆ ಪಾತ್ರವಾಗಿವೆ. ಇವರ ಚಿತ್ರಗಳಲ್ಲಿ ಕೂಡ ಒಂದಿಲ್ಲೊಂದು ಸಮಸ್ಯೆಯೇ ಚಿತ್ರದ ವಸ್ತು.

ನಾಯಕ ಅಥವಾ ನಾಯಕಿ ಕೇಂದ್ರಿತ ಚಿತ್ರಗಳಿಂದ ಭಿನ್ನವಾದ ‘ಧೋಬಿ ಘಾಟ್’ ಯಾವ ಸಂದೇಶವನ್ನೂ ಸಾರುವುದಿಲ್ಲ. ಯಾವ ತತ್ವ, ವಿಚಾರ ಇತ್ಯಾದಿಗಳನ್ನು ವಿರೋಧಿಸುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ. ಇದು ನಾಲ್ಕು ವ್ಯಕ್ತಿಗಳ ಜೀವನದ ವರ್ತಮಾನದ ಮನೋಭೂಮಿಕೆ ಪಲ್ಲಟಗೊಳ್ಳುವ ಬಗೆಯನ್ನು ಘಟನೆಗಳ ಮೂಲಕ ಪ್ರಸ್ತುತಪಡಿಸಿರುವ ಚಿತ್ರ. ಇವರ ಆರ್ಥಿಕ, ಸಾಮಾಜಿಕ ನೆಲೆಗಳು ಬೇರೆಬೇರೆ. ಅರುಣ್ (ಅಮೀರ್‌ಖಾನ್) ಚಿತ್ರಗಾರ, ಅಮೆರಿಕದಿಂದ ಬಂದಿರುವ ಫೋಟೊಗ್ರಾಫರ್ ಶಾಯಿ (ಮೋನಿಕಾ ದೋಗ್ರ) ಶ್ರೀಮಂತೆ, ತನ್ನ ಕಥೆ ಹೇಳುವ ವಿಡಿಯೊ ಚಿತ್ರಗಾರ್ತಿ ಯಾಸ್ಮಿನ್ (ಕೃತಿ ಮಲ್ಹೋತ್ರ) ಮತ್ತು ಚಿತ್ರನಟನಾಗುವ ಹಂಬಲದ ದೋಭಿ ಮುನ್ನಾ (ಪ್ರತೀಕ್ ಬಬ್ಬರ್)- ಈ ನಾಲ್ವರ ಬದುಕಿನ ಎಳೆಗಳನ್ನು ಒಂದಕ್ಕೊಂದು ಸೇರಿಸಿ ಹೆಣೆಯುವುದಕ್ಕೆ ನಿರ್ದೇಶಕರು ಸಣ್ಣಸಣ್ಣ ಘಟನೆಗಳನ್ನು ಸೃಷ್ಟಿಸುತ್ತಾರೆ.
 
ಈ ನಾಲ್ಕೂ ಜನರು ಹೊರಗಿನಿಂದ ಮುಂಬೈಗೆ ಬಂದವರು. ಅರುಣ್ ದಕ್ಷಿಣ ಭಾರತದಿಂದ, ಯಾಸ್ಮಿನ್ ಉತ್ತರ ಪ್ರದೇಶದಿಂದ, ಶಾಯಿ ಅಮೆರಿಕದಿಂದ ಮತ್ತು ಮುನ್ನಾ ಬಿಹಾರದಿಂದ. ಈ ನಾಲ್ವರು  ತಮಗೆ ಅಗತ್ಯವಾದದ್ದನ್ನು ಹುಡುಕಲು ಕಂಡುಕೊಳ್ಳುವ ನೆಲೆ ಮುಂಬಯಿ. ಅದು ಇಡೀ ಭಾರತದ ಪ್ರತಿನಿಧಿಯಾಗುತ್ತದೆ.   

ಚಿತ್ರಕಥೆಯಲ್ಲಿ ಹೊಸತನ ತರಲು ನಿರೂಪಕಳನ್ನು ಸೃಷ್ಟಿಸಲಾಗಿದೆ. ಇದನ್ನು ಯಾಸ್ಮಿನ್ ಮತ್ತು ನಿರ್ದೇಶಕರು ನಿರ್ವಹಿಸುತ್ತಾರೆ. ಚಿತ್ರದ ಎಲ್ಲ ಪಾತ್ರಗಳು ಪರಿಚಯವಾಗುವುದೇ ವಿವಿಧ ರೀತಿಯ ಹುಡುಕಾಟದಲ್ಲಿ ತೊಡಗಿಕೊಂಡ ಸ್ಥಿತಿಯಲ್ಲಿ. ಸಿನಿಮಾದ ಪ್ರಾರಂಭದ ಚಿತ್ರಿಕೆಯಿಂದಲೇ ನಿರ್ದೇಶಕರು ಸಂಕೇತಗಳನ್ನು ಬಳಸಿದ್ದಾರೆ. ಮೊದಲ ಚಿತ್ರಿಕೆಯಲ್ಲಿ ರಸವಿಲ್ಲದ ಕೃತಕ ದ್ರಾಕ್ಷಿ ಗೊಂಚಲು ಚಲಿಸುತ್ತಿರುವ ಆಟೋದಲ್ಲಿ ಕಾಣುತ್ತದೆ.
ಅದರಲ್ಲಿ ಕುಳಿತ ಯಾಸ್ಮಿನ್ (ನಮಗೆ ಗೋಚರಿಸದ) ಕೂಡ ಒಂದು ರೂಪಕವಾಗುತ್ತಾಳೆ. ಹಿನ್ನೆಲೆಯಲ್ಲಿ ‘ಮಧುಮತಿ’ ಚಿತ್ರದ ‘ದಿಲ್ ತಡಪ್ ತಡಪ್ಕೆ ಕೆಹೆ ರಹಾ ಹೈ’ ಹಾಡು ಯಾಸ್ಮಿನ್ ಮತ್ತು ಇತರ ಮೂರು ಪ್ರಮುಖ ಪಾತ್ರಗಳ ಉದ್ವೇಗಭರಿತ ನಿರೀಕ್ಷಣೆಯನ್ನು ಸೂಚಿಸುತ್ತದೆ.

ಚಿತ್ರದ ಹೆಸರಿರುವುದೇ ಗಾರೆಯವನೊಬ್ಬ ಮುನ್ನೆಲೆಯಲ್ಲಿದ್ದು ಎತ್ತರೆತ್ತರದ ಕಟ್ಟಡಗಳ ಹಿನ್ನಲೆಯಲ್ಲಿ. ಇದು, ಮುಂಬಯಿಯಲ್ಲಿ ಕನಸು ಕಟ್ಟುವವರಿಗೆ ಮತ್ತೊಬ್ಬರ ಸಹಕಾರ ಮತ್ತು ಅಗತ್ಯವನ್ನು ಬಿಂಬಿಸುತ್ತದೆ. ಅನಂತರದ ದೃಶ್ಯದಲ್ಲಿ ಅರುಣ್‌ಗೆ ದಲ್ಲಾಳಿಯೊಬ್ಬ ಶಿಥಿಲವಾದ ಮನೆಯನ್ನು ತೋರಿಸುತ್ತಿರುತ್ತಾನೆ. ಇವುಗಳ ಮೂಲಕ ನಿರ್ದೇಶಕಿ ಮುಂಬಯಿಗೆ ವಿಶಿಷ್ಟವಾದ ಸಮುದ್ರ, ಸ್ಥಳದ ಅಭಾವ, ಒತ್ತಡದ ಬದುಕಿನ ಸಾರವನ್ನು ಒಟ್ಟೊಟ್ಟಿಗೇ ತುಂಬುತ್ತಾರೆ. ಇವೆಲ್ಲ ಪಾತ್ರಗಳನ್ನು ಕುರಿತ ಬಾಹ್ಯ ಸನ್ನಿವೇಶ ಮತ್ತು ಅದಕ್ಕೆ ಸಂಬಂಧಿತ ವಿವರಗಳಾದರೆ ಅವು ತೊಡಗಿಕೊಳ್ಳುವ ದೈನಂದಿನ ಚಟುವಟಿಕೆಗಳು ಕಾಣಿಸುತ್ತದೆ.

ಇವೆಲ್ಲವೂ  ಸಾಕಷ್ಟು ಕ್ಷಿಪ್ರಗತಿಯಲ್ಲಿ ಸಾಗುತ್ತ ಹೋದರೂ ಪಾತ್ರಗಳೆಲ್ಲ ಒಂದು ರೀತಿಯ ಸಮಾನಾಂತರ ಚಲನೆಯಲ್ಲಿ ತೊಡಗಿವೆ ಅನ್ನಿಸಲು ಪ್ರಾರಂಭವಾಗುತ್ತಿದ್ದಂತೆಯೇ ಅವು ಪರಸ್ಪರ ಸಂಪರ್ಕಕ್ಕೆ ಒಳಗಾಗುವ, ದೈನಂದಿನ ಬದುಕಿಗೆ ಹತ್ತಿರವಾದ ಸಣ್ಣಪುಟ್ಟ ಘಟನೆಗಳು ಜರುಗುತ್ತವೆ.

ಹೀಗೆ ಜರುಗುವ ಘಟನೆಗಳಲ್ಲಿ ಕ್ಯಾಮೆರಾ ಹಿಡಿದು ಮುನ್ನಾನ ಮತ್ತು ಅರುಣ್ ಜೊತೆ ಹೆಚ್ಚು ಮಾತಾಡುವ ಶಾಯಿಗಿಂತ, ಹುಡುಗಿಯೊಬ್ಬಳ ಸಂಗಡ ತಕ್ಕಮಟ್ಟಿನ ಏಕಾಂತದಲ್ಲಿ ಸಂಕೋಚದಿಂದ ಬಿಗಿದುಕೊಂಡು ಅವಳ ಜೊತೆ ಮಾತನಾಡುವ ಮುನ್ನಾ ಮತ್ತು ಮಾತಿಗಿಂತ ಮೌನಕ್ಕೇ ಹೆಚ್ಚು ಒತ್ತುಕೊಟ್ಟು ಭಾವ ಪ್ರಕಟಿಸುವ ಅರುಣ್ ಹೆಚ್ಚು ಪ್ರಿಯರಾಗುತ್ತಾರೆ. ಅವರು ನಿಗೂಢ ಹಾಗೂ ಸಂದಿಗ್ಧ ಬೆರೆತ ವ್ಯಕ್ತಿಗಳಾಗಿ ಮನಮುಟ್ಟುತ್ತಾರೆ.

ಸಲ್ಮಾನ್‌ಖಾನ್‌ನ ಅಭಿಮಾನಿಯಾದ ಇಪ್ಪತ್ತರ ಆಚೆಗಿನ ಮುನ್ನಾಗೆ ಸಿನಿಮಾ ನಟನಾಗುವಾಸೆಯ ಹುಡುಕಾಟಕ್ಕೆ ಶಾಯಿ ನೆರವಾಗುವಳೇ ಎನ್ನುವ ತವಕ. ಆ ಆಸೆ ಅವನಲ್ಲಿ ಹಬ್ಬಲು ಶಾಯಿ ವಿವಿಧ ಭಂಗಿಗಳಲ್ಲಿ ಅವನ ಫೋಟೋಗಳನ್ನು ತೆಗೆಯುವುದೂ ಕಾರಣವಾಗುತ್ತದೆ. ಆದರೆ ಅವನ ನಿರೀಕ್ಷೆಯನ್ನು ಪೂರೈಸುವ ಶಕ್ತಿ ಮತ್ತು ಆ ಉದ್ದೇಶ ಅವಳಿಗಿಲ್ಲ ಎನ್ನುವುದು ತಕ್ಷಣಕ್ಕೆ ಅವನ ಅರಿವಿಗೆ ಬರುವುದಿಲ್ಲ.

ಧೋಬಿ ಘಾಟ್ ಇತ್ಯಾದಿ ಸ್ಥಳಗಳಿಗೆ ತನ್ನನ್ನು ಕರೆದುಕೊಂಡು ಹೋಗಲು ಒತ್ತಾಯ ಮಾಡುತ್ತಾಳೆ. ಅವನ ಜೊತೆ ಓಡಾಟ ಮತ್ತು ಒಡನಾಟದ ಹಂಬಲ ಅವನಲ್ಲಿ ಶಾಯಿಯ ಬಗ್ಗೆ ಕಾಮನೆಗಳು ಹುಟ್ಟುವುದಕ್ಕೆ  ಕಾರಣವಾಗುತ್ತವೆ. ಆದರೆ ಮುಂದುವರಿಯಲು ಧೈರ್ಯ ಸಾಲುವುದಿಲ್ಲ.ಕ್ರೌರ್ಯವೆಂದು ಭಾಸವಾಗುವ ಹಾಗೆ ಉಡಾಫೆಯಿಂದ ಲಘುವಾಗಿ ವರ್ತಿಸುತ್ತಾಳೆ. ಬೇರೊಂದು ಬಗೆಯಲ್ಲಿ ಅವಳು ಅರುಣ್ ಸಂಗಡವೂ ಹೀಗೆಯೇ ವರ್ತಿಸಿದರೂ ಅವಳ ಬಗ್ಗೆ ಅವನು ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಇಷ್ಟಕ್ಕೂ ಅವಳ ಹುಡುಕಾಟವೇನು ಎನ್ನುವುದು ಖಚಿತವಾಗುವುದಿಲ್ಲ. ಹಾಗೆಯೇ ಅರುಣ್‌ನ ಹುಡುಕಾಟ ಕೂಡ.
 

ವಿವಾಹ ವಿಚ್ಛೇದನ ಹೊಂದಿದ ಅರುಣ್‌ಗೆ ಹೊಸ ಮನೆಯಲ್ಲಿ ಯಾಸ್ಮಿನ್ ತನ್ನ ಸೋದರ ನೋಡಲೆಂದು ಚಿತ್ರಿಸಿದ ಮೂರು ವಿಡಿಯೋ ಟೇಪುಗಳು ಸಿಗುತ್ತವೆ. ಅವುಗಳನ್ನು ಅತೀವ ಆಸಕ್ತಿ ಮತ್ತು ಮಾನವೀಯ ದೃಷ್ಟಿಯಿಂದ ನೋಡುತ್ತಾನೆ. ಅದರಲ್ಲಿ ಅವಳು ತನ್ನ ಒಂಟಿತನ ಮತ್ತು ವಿಷಾದದ ಅಂತರಂಗವನ್ನು ಬಿಚ್ಚಿಡುತ್ತಾಳೆ. ಅವಳ ಗಂಡ ಮತ್ತೊಬ್ಬಳಲ್ಲಿ ಅನುರಕ್ತನಾಗಿರುವುದನ್ನು ತಿಳಿದು ಖಿನ್ನಳಾಗಿರುತ್ತಾಳೆ. ಈ ಎಲ್ಲ ಸಂಗತಿಗಳನ್ನು ಅವನು ಹೆಚ್ಚು ಹೆಚ್ಚು ಒಳಗೊಳ್ಳುತ್ತ ಹೋದ ಹಾಗೆ ಆ ಸಂಗತಿಗಳ ಒಳ ಅಂಶಗಳು ಅರುಣ್‌ನ ಅಂತರಂಗದ ಪ್ರತಿಫಲನದಂತೆ ತೋರುತ್ತದೆ.

ನಿರ್ದೇಶಕರು ಚಿತ್ರೀಕರಣದಲ್ಲಿ ಈ ಪ್ರಮುಖ ಅಂಶಗಳಿಗೆ ಒತ್ತುಕೊಡುವ ಸಲುವಾಗಿ ಅರುಣ್‌ನ ಸಮೀಪ ಚಿತ್ರಿಕೆಗಳನ್ನು ಯಶಸ್ವಿಯಾಗಿ ಬಳಸಿದ್ದಾರೆ. ಮೂರನೆಯ ಟೇಪಿನಲ್ಲಿ ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳೆಂದು ಅರಿತ ಅರುಣ್ ತೀವ್ರ ಆಘಾತಕ್ಕೆ ಒಳಗಾಗಿ ಸಾಂತ್ವನ, ಸಮಾಧಾನ ದೊರಕದ ಅವಳಿಗಾಗಿ ಮಮ್ಮಲ ಮರುಗುತ್ತಾನೆ. ಇಡೀ ಚಿತ್ರದಲ್ಲಿ ಅರುಣ್ ಕಲಾವಿದನಾಗಿ ಸಾಧಿಸಿರುವ ಮಟ್ಟ ಅವನು ಬಯಸುವ ಒಂಟಿತನಕ್ಕೆ ಯಾವ ಕಾರ್ಯಕಾರಣ ಸಂಬಂಧವೂ ದೊರಕುವುದಿಲ್ಲ. ಇದು ಚಿತ್ರದಲ್ಲಿ ಇತರ ಪಾತ್ರಗಳನ್ನು ಒಳಗೊಂಡ ಕೆಲವು ವರ್ತನೆಗಳಿಗೂ ಅನ್ವಯಿಸುತ್ತದೆ. ಇದೇ ಕಾರಣದಿಂದಲೇ ಪಾತ್ರಗಳ ಮುಂದಿನ ನಡೆ ಏನು ಎನ್ನುವುದನ್ನು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಇದು ಚಿತ್ರದ ಅಗ್ಗಳಿಕೆ. 
ಚಿತ್ರದಲ್ಲಿ ಅಬ್ಬರದ ಹಿನ್ನೆಲೆ ಸಂಗೀತವಿಲ್ಲ. ಮುನ್ನಾ-ಶಾಯಿ ಅವರ ಲಘು ಧಾಟಿಯ ಮಾರ್ದವ ಬೆರೆತ ಹಾಗೂ ಕಿರಣ್-ಶಾಯಿ ಸಂಬಂಧಿತ ದೃಶ್ಯಗಳನ್ನು ಚಿತ್ರಿಸುವಾಗ, ಕಥಾ ಚಲನೆಗಾಗಿಯೆ ಬಹುಜನರಿರುವ ದೃಶ್ಯಗಳನ್ನು ಚಿತ್ರಿಸುವಾಗ ಮೆಲುಸ್ತರದ ತಂತಿವಾದ್ಯವನ್ನು ಹಿನ್ನೆಲೆ ಸಂಗೀತದಲ್ಲಿ ಉಪಯೋಗಿಸಿದರೆ, ಯಾಸ್ಮಿನ್ ಬದುಕಿಗೆ ವಿದಾಯ ಹೇಳುವ ಮತ್ತು ಈ ಬಗೆಯ ಭಾವತೀವ್ರತೆ ತುಂಬಿದ ದೃಶ್ಯಗಳಲ್ಲಿ ಸಂಗೀತ ಸ್ತಬ್ಧವಾಗಿ ಕೇವಲ ಮೌನ ಸಂವಹನಕ್ಕೆ ಸಹಕಾರಿಯಾಗುತ್ತದೆ.

‘ಧೋಬಿ ಘಾಟ್’ ಎಲ್ಲ ರೀತಿಯಿಂದ ಪರಿಪೂರ್ಣವಾಗಿದೆಯೇ ಎಂದರೆ, ಇಲ್ಲ. ಚಿತ್ರದ ಶೀರ್ಷಿಕೆಯ ಪ್ರದೇಶದ ದೃಶ್ಯದಲ್ಲಿ ವಿಶೇಷವೆನಿಸುವ ಯಾವುದೂ ಸಂಭವಿಸದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಅನೇಕ ಕಡೆ ಅವಾಸ್ತವ ಇಣುಕುತ್ತದೆ. ಪಾತ್ರ ಪೋಷಣೆಗೆ ಈಗಿರುವಷ್ಟು ಹೂರಣ ಸಾಕಾಗುವುದೇ ಎಂಬ ಸಂದೇಹಕ್ಕೆ ಅವಕಾಶವಿದೆ. ಆದರೆ ಇವೆಲ್ಲವೂ ಗೌಣವೆನಿಸುವಷ್ಟು ಕಿರಣ್ ರಾವ್ ನಿರ್ದೇಶಕಿಯಾಗಿ ಯಶಸ್ವಿಯಾಗಿದ್ದಾರೆ.

ಲೇಖಕರು ಕಥೆಗಾರ ಹಾಗೂ ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT