ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಮುದಾಯಿಕ ಪ್ರಜ್ಞೆ ಮೂಡಿಸಲು ಉತ್ಸವ'

ಕರಾವಳಿ ಉತ್ಸವಕ್ಕೆ ಚಾಲನೆ
Last Updated 22 ಡಿಸೆಂಬರ್ 2012, 10:18 IST
ಅಕ್ಷರ ಗಾತ್ರ

ಮಂಗಳೂರು: `ನಮ್ಮ ಪೂರ್ವಜರು ಪ್ರಕೃತಿ ಜತೆಗಿನ ಸಾಮರಸ್ಯವನ್ನು ಸಾರಲು ಉತ್ಸವ ಹಾಗೂ ಹಬ್ಬಗಳನ್ನು ಆರಂಭಿಸಿದರು. ಇಂತಹ ಉತ್ಸವಗಳು ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ 2012-13ನೇ ಸಾಲಿನ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. `ಶ್ರೀಮಂತಿಕೆ ಇರುವುದು ಡಾಲರ್‌ನಲ್ಲಲ್ಲ, ಸಾಂಸ್ಕೃತಿಕ ಪರಂಪರೆಯಲ್ಲಿ. ಅಮೆರಿಕದಲ್ಲಿ ಆಧುನಿಕತೆ ಬೆಳೆದಿದೆ. ಆದರೆ ಅಲ್ಲಿನ ಪರಂಪರೆ ಕೇವಲ 300 ವರ್ಷದ್ದು. ನಮ್ಮಲ್ಲಿ ಆಧುನಿಕತೆ ಹಾಗೂ ಪರಂಪರೆ ಎರಡೂ ಇವೆ. ಈ ಬಗ್ಗೆ ಹೆಮ್ಮೆ ಪಡುವಂತೆ ಮಕ್ಕಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಕರಾವಳಿ ಉತ್ಸವದಂತಹ ಆಚರಣೆ ಸಹಕಾರಿ' ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, `ಆಕಸ್ಮಿಕವಾಗಿ ನಾವು ಪ್ರಳಯ ನಡೆಯಲಿದೆ ಎಂದು ಭಾವಿಸಲಾದ ಡಿ 21ರಂದೇ ಕರಾವಳಿ ಉತ್ಸವದ ಉದ್ಘಾಟನೆ ಹಮ್ಮಿಕೊಂಡಿದ್ದೇವೆ. ಇಂದು ನಡೆಯುವುದು ಋಣಾತ್ಮಕ ಅಂಶಗಳ ಪ್ರಳಯ. ಇಂದಿನಿಂದ ಧನಾತ್ಮಕ ಅಂಶಗಳು ವೃದ್ಧಿಸಲಿವೆ ಎಂದು ತಪಸ್ವಿಯೊಬ್ಬರು ಹೇಳಿದ್ದಾರೆ. ಜಿಲ್ಲೆಯ ಮಟ್ಟಿಗೆ ಬಹುದಿನಗಳ ಕನಸಿನ ಯೋಜನೆಗಳು ಸಾಕಾರಗೊಳ್ಳುವ ಬೆಳವಣಿಗೆ ಇಂದು ನಡೆಯಿತು' ಎಂದರು.

`ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡ ಟೆಂಡರ್ ಪ್ರಕ್ರಿಯೆ ಆರಂಭಿಸುವ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಸರ್ವಸಮ್ಮತ ತೀರ್ಮಾನ ಕೈಗೊಳ್ಳಲಾಯಿತು.  ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ರೋಪ್‌ವೇ ರಚಿಸುವ ಕಾಮಗಾರಿಯ ಕಾರ್ಯಾದೇಶವನ್ನೂ ಇಂದು ನೀಡಲಾಯಿತು. ಜಿಲ್ಲಾ ರಂಗಮಂದಿರ ನಿರ್ಮಾಣ ಬಗ್ಗೆ ಹಾಗೂ ಗಾಲ್ಫ್ ಕೋರ್ಸ್ ರಚನೆಗಾಗಿ ಪ್ರವಾಸೋದ್ಯಮ ಇಲಾಖೆಗೆ 150 ಎಕರೆ ಜಾಗವನ್ನು ಹಸ್ತಾಂತರಿಸುವ ಬಗ್ಗೆಯೂ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು' ಎಂದು ಅವರು ತಿಳಿಸಿದರು.

ಶಾಸಕರಾದ ಕೃಷ್ಣ ಪಾಲೆಮಾರ್, ಕೆ.ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್‌ಬಾನು, ಉಪಮೇಯರ್ ಅಮಿತಕಲಾ, ಮೂಡಾ ಅಧ್ಯಕ್ಷ ಎಸ್.ರಮೇಶ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಸಿಇಒ ಕೆ.ಎನ್.ವಿಜಯಪ್ರಕಾಶ್, ಉಪವಿಭಾಗಾಧಿಕಾರಿ ವೆಂಕಟೇಶ್, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಪಶ್ಚಿಮ ವಲಯ ಐಜಿಪಿ ಪ್ರತಾಪ ರೆಡ್ಡಿ ಮತ್ತಿತರರಿದ್ದರು.

ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಪ್ರಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT