ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹ ಪ್ರೋತ್ಸಾಹಿಸಲು ಸಲಹೆ

Last Updated 10 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಗದಗ: ಬಡವರ ಬಗ್ಗೆ ಕಾಳಜಿವಹಿಸಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮದ ಮೂಲಕ ಅವರ ಆರ್ಥಿಕ ಹೊರೆ ಕಡಿಮೆಗೊಳಿಸುತ್ತಿರುವುದು ಉತ್ತಮ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನಗರದ ವಿದ್ಯಾದಾನ ಸಮಿತಿ ಮೈದಾನದ ಲಿಂಗೈಕ್ಯ ಡಾ. ಪುಟ್ಟರಾಜ ಕವಿಗವಾಯಿಯವರ ವೇದಿಕೆಯಲ್ಲಿ ಭಾನುವಾರ ಬಿ. ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಶ್ರೀರಾಮುಲು ಅವರಿಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡುತ್ತೇವೆ. ಅಲ್ಲದೇ, ಇದೀಗ ಕಷ್ಟ ಕಾಲದಲ್ಲಿ ಇದ್ದರೂ ಅದನ್ನು ಮರೆತು ಬಡವರ ಸೇವೆಗೆ ಬಂದಿರುವುದು ಅವರ ಉದಾರ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಶ್ರೀರಾಮುಲು ಈಗ ಅಪಾರ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಕಾಲದಲ್ಲಿ ಅವರು ಏಕಾಂಗಿ ಎನಿಸಬಾರದು ಎಂದು ಗದಗ ಜಿಲ್ಲೆಯ ಶಾಸಕರೆಲ್ಲ ಸೇರಿ ಅವರ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಅತಿಥಿಯಂತೆ ಕರೆದುಕೊಂಡು ಬಂದಿದ್ದೇವೆ. ಈ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ ಎಂದು ತಿಳಿಸಿದರು.

ಶ್ರೀಮಂತರು ನಡೆಸುತ್ತಿರುವ ವಿವಾಹದಂತೆ ಉಚಿತ ಸಾಮೂಹಿಕ ವಿವಾಹವನ್ನು ರಾಮುಲು ಅವರು ನಡೆಸುತ್ತಾ ಬಂದಿದ್ದಾರೆ. ಬಡವರಿಗೆ ಒಳ್ಳೆಯದನ್ನು ಮಾಡುವ ಮೂಲಕ ಕಷ್ಟಗಳೆಲ್ಲವನ್ನು ಮರೆಯುತ್ತಿದ್ದಾರೆ. ಅವರಿಗೆ ಎದುರಾಗಿರುವ ಎಲ್ಲಾ ತೊಂದರೆಗಳು ನಿವಾರಣೆಯಾಗಲಿ ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರಿಗೆ ಸರ್ಕಾರ ಆದರ್ಶ ವಿವಾಹದ ಯೋಜನೆಯಡಿ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತನ್ನು ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕುಂಠಿತವಾಗಿದೆ ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಡವರು ಮಕ್ಕಳ ಮದುವೆ ಮಾಡಲು ತೀರಾ ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳಿಗೆ ಉಚಿತವಾಗಿ ವಿವಾಹ ಮಾಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಭವಿಷ್ಯದಲ್ಲಿ ಪ್ರತಿಯೊಬ್ಬರ ದಾಂಪತ್ಯ ಜೀವನ  ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಸಾಮೂಹಿಕ ವಿವಾಹದ ಮೂಲಕ ಆರ್ಥಿಕ ದುಃಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಿದಂತಾಗಿದೆ. ವಿವಾಹದ ನೆಪದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಹಾಗೂ ಕಿರುಕುಳ ನೀಡುವುದು ಸಲ್ಲದು ಎಂದರು.

ಸಾನ್ನಿಧ್ಯ ವಹಿಸಿದ್ದ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರಾಮುಲು ನಡೆಸುತ್ತಿರುವ ಸಾಮೂಹಿಕ ವಿವಾಹ ಗದುಗಿನಲ್ಲಿ ಹಬ್ಬ ಇದ್ದಂತೆ.  ಅವರು ಅನೇಕ ಸಂಕಷ್ಟ ಹಾಗೂ ದುಃಖದಲ್ಲಿಯೂ ಸಾಮೂಹಿಕ ವಿವಾಹವನ್ನು  ಅದ್ದೂರಿಯಾಗಿ ನಡೆಸಿದ್ದಾರೆ.

ವಿವಾಹವಾಗುತ್ತಿರುವ ನೂತನ ಜೋಡಿಗಳು ಶ್ರೀರಾಮುಲುವಿಗೆ ಬಂದಿರುವ ಕಷ್ಟವನ್ನು ಬೇಗನೆ ಪರಿಹಾರ ಮಾಡು ಎಂದು ದೇವರಲ್ಲಿ ಪ್ರತಿನಿತ್ಯ ಬೇಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಬಿ. ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷ ವಿಜಯಕುಮಾರ ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ಶಾಸಕ ರಾಮಣ್ಣ ಲಮಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಕಾಂತ ಖಟವಟೆ, ಎಸ್.ಬಿ. ಸಂಕಣ್ಣವರ, ಸುಧೀರ ಘೋರ್ಪಡೆ, ಸಂಗಮೇಶ ದುಂದೂರ, ಧೀರೇಂದ್ರ ಹುಯಿಲಗೋಳ, ಬಸಣ್ಣ ಮಲ್ಲಾಡದ, ಶಿರಾಜ್, ಬಳ್ಳಾರಿ, ನಗರಸಭೆ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ, ಜಗನ್ನಾಥ ಭಾಂಡಗೆ ಮತ್ತಿತರರು ಹಾಜರಿದ್ದರು.

ಅಶ್ವಿನಿ ಶಿರಕೋಳ ಪ್ರಾರ್ಥಿಸಿದರು. ಶ್ರೀರಾಮುಲು ಅಭಿಮಾನಿ ಬಳಗದ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ ಸ್ವಾಗತಿಸಿದರು. ಕೆ.ಎಚ್. ಬೇಲೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT