ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೆ ಸಹವಾಸ ಬಿಡದ ರೈತ

Last Updated 6 ಡಿಸೆಂಬರ್ 2011, 8:50 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಅಲ್ಲಲ್ಲಿ ಸಾಮೆ ಬೆಳೆದಿರುವುದು ಅದಕ್ಕೆ ಒಂದು ನಿದರ್ಶನ.

ಗ್ರಾಮೀಣ ಆಹಾರ ಪದ್ಧತಿಯಲ್ಲಿ ಸಾಮೆಗೆ ತನ್ನದೇ ಆದ ಸ್ಥಾನವಿತ್ತು. ಸಾಮೆ ಅನ್ನಕ್ಕೆ ಹಸಿ ಮೆಣಸಿನ ಕಾಯಿ ಗೊಜ್ಜು ಅಥವಾ ಮಜ್ಜಿಗೆ ಹಾಕಿಕೊಂಡು ತಿಂದವರಿಗೇ ಗೊತ್ತು ಅದರ ರುಚಿ!

ಸಾಮೆಯಲ್ಲಿ ಹಲವು ತಳಿಗಳಿವೆ. ಬಿಳಿ ಸಾಮೆ, ಕರಿ ಸಾಮೆ, ಹಾಲು ಸಾಮೆ, ಅರೆಸಾಮೆ ಎಂದು ಕರೆಯಲ್ಪಡುವ ಸಾಮೆ ತಳಿಗಳು ಇನ್ನೂ ಅಲ್ಲಲ್ಲಿ ಉಳಿದುಕೊಂಡಿವೆ. ಸಾಮೆಯನ್ನು ಒಣಗಿಸಿ ಕುಟ್ಟಿ ಅನ್ನ ಮಾಡುತ್ತಾರೆ.

ಸಾಮೆಯನ್ನು ಬೇಯಿಸಿ ಬಿಸಿಲಲ್ಲಿ ಒಣಗಿಸಿ ಕುಟ್ಟಿ ಬಳಸುವುದೂ ಇತ್ತು. ಸಾಮೆ ಅಕ್ಕಿಯನ್ನು ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ಹಬ್ಬಕ್ಕೆ ಸಾಮೆ ಪುರಿ, ಪುರಿಯನ್ನು ಕುಟ್ಟಿ ತಯಾರಿಸಿದ ಹಿಟ್ಟು ಬೇಕೇ ಬೇಕು.

ಹಿಂದೆ ಶಿವರಾತ್ರಿ ಸಂದರ್ಭದಲ್ಲಿ ಸಾಮೆಯನ್ನು ಹುರಿದು ಪುರಿ ಮಾಡುವ ಬಟ್ಟಿಗಳೇ ಇರುತ್ತಿದ್ದವು. ಸಾಮೆಯನ್ನು ಹದವಾಗಿ ನೆನೆಸಿ ಹುರಿದಾಗ ಸಾಮೆ ಪುಟ್ಟ ಪುರಿಯಾಗಿ ಮಾರ್ಪಡುತ್ತಿತ್ತು. ಅದರ ಜೊತೆಗೆ ರಾಗಿಯನ್ನೂ ಹುರಿದು ಹುರಿಟ್ಟು ತಯಾರಿಸಿ ಬೆಲ್ಲದೊಂದಿಗೆ ಕಲೆಸಿ ತಿನ್ನುತ್ತಿದ್ದರು. ಹುರಿದಿಟ್ಟನ್ನು ನೀರಿನಲ್ಲಿ ಬೆರೆಸಿ, ಸಕ್ಕೆರೆ ಅಥವಾ ಬೆಲ್ಲವನ್ನು ಬೆರೆಸಿ ಪಾನಕ ತಯಾರಿಸಿ ಕುಡಿಯುತ್ತಿದ್ದರು. ಇವೆರಡೂ ಶಿವರಾತ್ರಿ ವಿಶೇಷ. ಹೆಡೆಗೂ ಇವನ್ನು ಬಳಸುತ್ತಿದ್ದರು.

ಸಾಮೆ ಅಲ್ಪಾವಧಿ ಬೆಳೆಯಾಗಿದ್ದು ಹೆಚ್ಚು ಬೇಸಾಯವನ್ನು ಬಯಸುವುದಿಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರು ಅದನ್ನು ಬೆಳೆಯುತ್ತಿದ್ದರು. ಸಾಮೆ ಹುಲ್ಲು ಜಾನುವಾರುಗಳಿಗೆ ಉತ್ಕೃಷ್ಟ ಆಹಾರವಾಗಿತ್ತು. ಯಾಕೋ ಏನೋ ರೈತರು ಇದ್ದಕ್ಕಿದಂತೆ ಸಾಮೆಯನ್ನು ಮರೆತಿದ್ದರು. ಅದರ ಬಿತ್ತನೆ ಹೋಯಿತು ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಮತ್ತೆ ಸಾಮೆ ಹೊಲಗಳು ಕಾಣಿಸಿಕೊಂಡು ಆಶ್ಚರ್ಯ ಉಂಟುಮಾಡಿವೆ.

ಸಾಂಪ್ರದಾಯಿಕ ಹೊಲ ಪದ್ಧತಿಯಲ್ಲಿ ಅರೆಸಾಮೆಯನ್ನು ಸಾಲುಗಳಲ್ಲಿ ಬೆಳೆಯುವುದು ರೂಢಿ, ಹೊಲದಲ್ಲಿ ಅವರೆ, ಜೋಳ, ಹುಚ್ಚೆಳ್ಳು, ತೊಗರಿ, ಸಜ್ಜೆ ಮುಂತಾದ ದವಸ ಧಾನ್ಯಗಳ ಜೊತೆಯಲ್ಲಿ ಅರೆ ಸಾಮೆಯನ್ನೂ ಬೆಳೆಲಾಗುತ್ತದೆ. ಸಾಮೆ ತೆನೆಯನ್ನು ಕೊಯ್ದು ಜಾನುವಾರುಗಳಿಂದ ತುಳಿಸಿ ಕಾಳು ಮಾಡಿಕೊಳ್ಳುತ್ತಾರೆ. ಹಚ್ಚಗೆ ಇರುವ ಅರಿಯನ್ನು ದನಕರುಗಳಿಗೆ ಮೇವಾಗಿ ಬಳಸುತ್ತಾರೆ. ಇದು ದೀರ್ಘಕಾಲಿಕ ಬೆಳೆಯಾಗಿದ್ದು, ರಾಗಿ ಬೆಳೆ ಮುಗಿದ ಬಳಿಕ ಕೊಯಿಲಿಗೆ ಬರುತ್ತದೆ.

ಸಾಮೆಯಂತೆಯೇ ಬೆಳೆಯುವ ಆರ‌್ಕೆ ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ. ಆರ‌್ಕೆಯನ್ನೂ ಸಹ ಸಾಮೆಯಂತೆಯೇ ಬಳಸಲಾಗುತ್ತಿತ್ತು. ಕೊರ‌್ನೆ ರಾಗಿ ಹೊಲಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಆದರೆ ತೀರಾ ಕಡಿಮೆ. ಇಂದಿನ ತಲೆಮಾರಿನವರಿಗೆ ಕೊರ‌್ನೆಯ ಬಳಕೆಯೇ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಕೊರ‌್ನೆಯನ್ನು ಕುಟ್ಟಿ ಗಿಣ್ಣು ಮಾಡಿದರೆ ಅದರ ರುಚಿಯೇ ಬೇರೆ! ಆದರೆ ಇಂದಿನ ಮಕ್ಕಳಿಗೆ ಅದರ ಪರಿಚಯವೇ ಇಲ್ಲದಿರುವುದರಿಂದ ರುಚಿ ಹೇಗೆ ತಿಳಿಯಬೇಕು.

ದೇಸಿ ದವಸ ಧಾನ್ಯಗಳು ರುಚಿ ಮತ್ತು ಉತ್ಕೃಷ್ಟತೆಗೆ ಹೆಸರು. ಅಂತಹ ದವಸ ಧಾನ್ಯಗಳನ್ನು ಸೇವಿಸುತ್ತಿದ್ದ ಹಳ್ಳಿಗರು ವಯಸ್ಸಾದರೂ ಗಟ್ಟಿಮುಟ್ಟಾಗಿ ಇರುತ್ತಿದ್ದರು. ಜೊತೆಗೆ ರೋಗ ನಿರೋಧಕ ಶಕ್ತಿಯೂ ಅವರಲ್ಲಿ ಹೆಚ್ಚಾಗಿತ್ತು. ಆದರೆ ಹೈಬ್ರೀಡ್ ಸಂಸ್ಕೃತಿ ಬಂದ ಮೇಲೆ ದೇಸಿ ದವಸ ಧಾನ್ಯ ಬೆಳೆಯುವುದನ್ನು ಬಿಡಲಾಯಿತು. ಆದರೂ ಅವುಗಳ ಅದ್ಭುತ ರುಚಿಯಿಂದಾಗಿ ನೆನೆಪು ಮಾಸಿಲ್ಲ. ಹುಡುಕಾಟ ನಿಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT