ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ವಿಗ್ರಹ ಪ್ರತಿಷ್ಠಾಪನೆ

Last Updated 28 ಜನವರಿ 2012, 6:40 IST
ಅಕ್ಷರ ಗಾತ್ರ

ತುಮಕೂರು: ರಾಮಕೃಷ್ಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಬಳಿ ನಿರ್ಮಿಸಿರುವ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಜ.30ರಿಂದ ಫೆ.2ರವರೆಗೆ ನಡೆಯಲಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಂಪ್ರದಾಯಿಕ ದ್ರಾವಿಡ ಶೈಲಿಯಲ್ಲಿ ಮಂದಿರದ ವಾಸ್ತುಶಿಲ್ಪವನ್ನು ತಮಿಳುನಾಡಿನ ಕುಶಲಕರ್ಮಿಗಳು ರೂಪಿಸಿದ್ದಾರೆ. ಮಂದಿರದಲ್ಲಿ ಸಾಯಿಬಾಬಾ ಜೀವನ ಕಥೆ ಬಿಡಿಸಿಡುವ ಉಬ್ಬುಶಿಲ್ಪಗಳು ಹಾಗೂ ಮಂದಿರದ ಆವರಣದಲ್ಲಿ ಶಿರಡಿಯಿಂದ ತರಿಸಲಾಗುವ ಚಿಲುಮೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

18 ಅಡಿ ಆಳದ ತಳಪಾಯದ ಮೇಲೆ ಕಟ್ಟಡ ನಿರ್ಮಿಸಲಾಗಿದೆ. ಈಗ್ಗೆ 9 ವರ್ಷದ ಹಿಂದೆ ಸರ್ಕಾರಕ್ಕೆ ರೂ.3.5 ಲಕ್ಷ ಕಟ್ಟಿ ನಿವೇಶನ ಖರೀದಿಸಲಾಯಿತು. ಆದರೆ ಈ ಸ್ಥಳದಲ್ಲಿದ್ದ ಗುಂಡಿ ಮುಚ್ಚಲು ರೂ.35 ಲಕ್ಷ ವ್ಯಯಿಸಬೇಕಾಯಿತು. ಕಟ್ಟಡ ನಿರ್ಮಾಣಕ್ಕೆ ಸುಮಾರು 140 ಟನ್ ಕಬ್ಬಿಣ ಬಳಕೆಯಾಗಿದೆ ಎಂದು ವಿವರಿಸಿದರು.

ಜ.30ರಂದು ಸಂಜೆ 6ಕ್ಕೆ ಸಾಯಿಬಾಬಾ, ಗಣಪತಿ, ಪಾರ್ವತಿ ಪರಮೇಶ್ವರ, ದತ್ತಾತ್ರೇಯ, ರಾಮ ಸೀತಾ ಲಕ್ಷ್ಮಣ ಆಂಜನೇಯ ವಿಗ್ರಹಗಳ ಸ್ಥಾಪನೆ ನಡೆಯಲಿದೆ. ಜ.31ರಂದು ಮುಂಜಾನೆ 6ಕ್ಕೆ ಮಂಟಪಪೂಜೆ ಹಾಗೂ ಬಿಂಬಶುದ್ಧಿ ವಿಧಿಗಳು ನೆರವೇರಲಿವೆ. ಬೆಳಿಗ್ಗೆ 9ರಿಂದ ನಗರದ ಮುಖ್ಯಬೀದಿಗಳಲ್ಲಿ ಜನಪದ ಕಲಾತಂಡಗಳೊಂದಿಗೆ ಸಾಯಿಬಾಬಾ ಶೋಭಾಯಾತ್ರೆ ನಡೆಯಲಿದೆ. ಕಾರ್ಯಕ್ರಮವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಜೆ 6ಕ್ಕೆ ಆದಿವಾಸ ಹೋಮಗಳು ನಡೆಯಲಿವೆ.

ಫೆ.1ರಂದು ಬೆಳಿಗ್ಗೆ 6ಕ್ಕೆ ಸಾಯಿ ಸಹಸ್ರನಾಮ ಹೋಮ ಸಂಜೆ 5ಕ್ಕೆ ವೇದಸೂಕ್ತ ಹೋಮುಗಳು ನಡೆಯಲಿವೆ. ಪೂರ್ಣಾಹುತಿಯ ನಂತರ ನಿದ್ರಾ ಕಲಶ ಸ್ಥಾಪನೆಯಾಗಲಿದೆ. ಫೆ.2ರಂದು ಬೆಳಿಗ್ಗೆ 4ರಿಂದ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ವಿಧಿಗಳು ನೆರವೇರಲಿವೆ. ಬೆಳಿಗ್ಗೆ 10.15ಕ್ಕೆ ಕಾಡಸಿದ್ದೇಶ್ವರ ಮಠದ ಕರಿಬಸವದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕುಂಭಾಭಿಷೇಕ ನಡೆಯಲಿದೆ.

ಮಧ್ಯಾಹ್ನ 2ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಸಿದ್ದಗಂಗಾಮಠದ ಶಿವಕುಮಾರಸ್ವಾಮೀಜಿ, ಇಸ್ಕಾನ್‌ನ ತಿರುಮಹಾಸ್ವಾಮಿ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಜಿ.ಎಸ್.ಬಸವರಾಜ್ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ಸುಬೋಧ್‌ಕಾಂತ್ ಸಹಾಯ್ ಮತ್ತು ಕೆ.ಎಚ್.ಮುನಿಯಪ್ಪ ವಿವಿಧ ದೇಗುಲಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಾಯಿಬಾಬಾ ದೇಗುಲ ಸಮಿತಿ ಕಾರ್ಯದರ್ಶಿ ಗುರುಸಿದ್ದಪ್ಪ, ಮುಖಂಡರಾದ ಶರಶ್ಚಂದ್ರ, ರಂಗಯ್ಯ, ಪ್ರಕಾಶ್, ಲೋಕೇಶ್, ವೈ.ಎನ್.ನಾಗರಾಜ್, ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT