ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಅಧಿಕಾರಿಗಳ ವಿರುದ್ಧ ದೂರುಗಳ ಪಟ್ಟಿ

ಸಾರಿಗೆ ಸಚಿವರಿಂದ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಭೇಟಿ, ಪರಿಶೀಲನೆ
Last Updated 3 ಜುಲೈ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸದ ಸಮಯವನ್ನು ಕಚೇರಿಯ ಹೊರಗೇ ಕಳೆಯುವ ನೌಕರರು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದ ಸಿಬ್ಬಂದಿ, ಸಾರ್ವಜನಿಕರ ಅಹವಾಲಿಗೆ ಸ್ಪಂದಿಸದ ಅಧಿಕಾರಿಗಳು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ನಗರದ ಜಯನಗರ ಹಾಗೂ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಪರಿಶೀಲನಾ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದ ಅಂಶಗಳಿವು. ಈ ಎರಡೂ ಪ್ರಾದೇಶಿಕ ಸಾರಿಗೆ ಕಚೇರಿಗಳ ಅವ್ಯವಸ್ಥೆಗಳನ್ನು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.

ಮೊದಲಿಗೆ ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಜ್ಞಾನೇಂದ್ರ ಕುಮಾರ್, ಬೆಳಿಗ್ಗೆ 11 ಗಂಟೆಯಾದರೂ ಕಚೇರಿಗೆ ಬಾರದೆ ಇದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಚೇರಿಯ ಹಾಜರಾತಿ ಪುಸ್ತಕ ಪರಿಶೀಲಿಸಿದ ಸಚಿವರು, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿ 6 ಮಂದಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ಸಾರಿಗೆ ಆಯುಕ್ತರಿಗೆ ಸೂಚಿಸಿದರು.

ಚಾಲನಾ ಪರವಾನಗಿ ಪತ್ರಗಳ (ಡಿ.ಎಲ್) ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 52 ಡಿ.ಎಲ್‌ಗಳನ್ನು ಸಂಬಂಧಪಟ್ಟವರಿಗೆ ಕಳುಹಿಸದೇ ಕಚೇರಿಯಲ್ಲೇ ಇಟ್ಟುಕೊಂಡಿದ್ದ ವಿಭಾಗದ ಸಿಬ್ಬಂದಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಸಚಿವರ ಮುಂದೆ ದೂರುಗಳ ಪಟ್ಟಿಯನ್ನೇ ಇಟ್ಟರು.

`ಕಚೇರಿಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸುವುದಿಲ್ಲ. ದಾಖಲೆ ವಿಭಾಗದ ರಮೇಶ್ ಎಂಬ ಅಧಿಕಾರಿ ಆರು ತಿಂಗಳಾದರೂ ಕಡತಗಳನ್ನು ವಿಲೇವಾರಿ ಮಾಡುವುದಿಲ್ಲ. ಇದನ್ನು ಪ್ರಶ್ನಿಸುವವರ ಮೇಲೆಯೇ ಹರಿಹಾಯುತ್ತಾರೆ' ಎಂದು ಸ್ಥಳೀಯರಾದ ಚಂದ್ರಾರೆಡ್ಡಿ ದೂರಿದರು.

`ಕಚೇರಿಯಲ್ಲಿ ಕಲಿಕಾ ಪರವಾನಗಿ ಪತ್ರಗಳನ್ನು (ಎಲ್.ಎಲ್) ವಿತರಿಸುವ ಅವಧಿ ಮಧ್ಯಾಹ್ನ 12 ಗಂಟೆಯವರೆಗಿದ್ದರೂ, ಬೆಳಿಗ್ಗೆ 11 ಗಂಟೆಗೇ ಕೌಂಟರ್ ಮುಚ್ಚಲಾಗುತ್ತದೆ. ಇದನ್ನು ಪ್ರಶ್ನಿಸುವವರ ವಿರುದ್ಧ ಸಾರಿಗೆ ಇನ್‌ಸ್ಪೆಕ್ಟರ್ ಮಹದೇವ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕಚೇರಿಯ ಯಾವ ಅಧಿಕಾರಿಗಳೂ ಜವಾಬ್ದಾರಿಯುತವಾಗಿ ವರ್ತಿಸುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಸ್ಥಳೀಯರಾದ ಎನ್.ಜವಾದ್ ಸಚಿವರನ್ನು ಒತ್ತಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, `ಬೆಳಿಗ್ಗೆ 10.15ರೊಳಗೆ ಕಚೇರಿಗೆ ಬರದ ಸಿಬ್ಬಂದಿಗೆ ಗೈರು ಹಾಜರು ಹಾಕುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋರಮಂಗಲ ಕಚೇರಿಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಸೇವೆ ನೀಡದ ಹಾಗೂ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸದ ಬಗ್ಗೆ ದೂರುಗಳು ಕೇಳಿಬಂದಿವೆ. ದೂರು ಕೇಳಿ ಬಂದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದರು.

`ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಹೆದ್ದಾರಿಗಳಲ್ಲಿ ಹೋಟೆಲ್ ಹಾಗೂ ವಿಶ್ರಾಂತಿ ಗೃಹಗಳ ನಿರ್ಮಾಣದ ಉದ್ದೇಶಕ್ಕೆ ಬಜೆಟ್‌ನಲ್ಲಿ ರೂ 50 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಸಂಸ್ಥೆಯ ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರೂ 2,200 ಕೋಟಿ ನರ್ಮ್ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರಕಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು' ಎಂದು ಹೇಳಿದರು.

ಬಿಬಿಎಂಪಿ ಬಜೆಟ್ ಬಗ್ಗೆ ಪರಿಶೀಲನೆ: `ಬಿಬಿಎಂಪಿ ಬಜೆಟ್ ವಿಚಾರವಾಗಿ ಆಯುಕ್ತರು ನನಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಲಾಗುವುದು. ಆ ನಂತರ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ನಷ್ಟ ಸರಿದೂಗಿಸಲಾಗುವುದು
`ಡೀಸೆಲ್ ಬೆಲೆ ಏರಿಕೆ ಹಾಗೂ ಸಿಬ್ಬಂದಿಯ ವೇತನ ಹೆಚ್ಚಳದ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಮಾರ್ಚ್ ವೇಳೆಗೆ ರೂ 147 ಕೋಟಿ ನಷ್ಟದಲ್ಲಿತ್ತು. ಆದರೆ, ಸದ್ಯ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಈ ನಷ್ಟವನ್ನು ಸರಿದೂಗಿಸಲಾಗುವುದು. ಆಗಸ್ಟ್ ವೇಳೆಗೆ ಸಂಸ್ಥೆಯು ಆರ್ಥಿಕವಾಗಿ ಬಲಗೊಳ್ಳಲಿದೆ. ನಷ್ಟ ಭರಿಸಲು ಈವರೆಗೆ ಮುಖ್ಯಮಂತ್ರಿಗಳಿಗೆ ಯಾವುದೇ ಮನವಿ ಸಲ್ಲಿಸಿಲ್ಲ'
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT