ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾರಿಗೆ ನಿಯಮ ಉಲ್ಲಂಘಿಸಿದರೆ ದಂಡ'

Last Updated 20 ಡಿಸೆಂಬರ್ 2012, 6:45 IST
ಅಕ್ಷರ ಗಾತ್ರ

ಭಾರತೀನಗರ: ಆಟೊ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯುಂಟುಮಾಡಬಾರದು ಎಂದು ಸರ್ಕಲ್ ಇನ್ ಸ್ಪೆಕ್ಟರ್ ಗಂಗಾಧರ್‌ಸ್ವಾಮಿ ಚಾಲಕರಿಗೆ ಎಚ್ಚರಿಸಿದರು. ನಗರದ ಪೊಲೀಸ್‌ಠಾಣೆಯಲ್ಲಿ ಬುಧವಾರ ನಡೆದ ಸಾರ್ವಜನಿಕರ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ಸಹ ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಕ್ರಮಬದ್ಧವಾಗಿ ನಿಲ್ಲಿಸಬೇಕು, ನಿಯಮವನ್ನು ಮೀರುವ ವಾಹನ ಚಾಲಕರಿಗೆ ದಂಡ ವಿಧಿಸಬೇಕಾಗುತ್ತದೆ ಎಂದು ತಿಳಿಸಿದರು. ವಾಹನ ಚಾಲಕರು ಕಡ್ಡಾಯವಾಗಿ ವಾಹನ ಪರವಾನಗಿ ಹಾಗೂ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.

ವಿಮೆ ಸದಾ ಚಾಲ್ತಿಯಲ್ಲಿರುವಂತೆ ಗಮನಹರಿಸಿ ಎಂದರು. ಕುಡಿದು ವಾಹನ ಚಾಲನೆ ಮಾಡುವವರಿಗೆ ಹಾಗೂ ಬೈಕುಗಳಲ್ಲಿ ಮೂವರು ಸಂಚರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸಬ್‌ಇನ್‌ಸ್ಪೆಕ್ಟರ್ ಪಿ.ಜಗದೀಶ್ ಮಾತನಾಡಿ, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳ ಚಾಲಕರು ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಮುಖಂಡ ಎ.ಪಿ.ಪ್ರಸನ್ನ ಮಾತನಾಡಿ, ಸಂಜೆ ವೇಳೆ ಭಾರತೀ ಕಾಲೇಜು ಬಳಿ ಅಪಾರ ಜನಸಂದಣಿ ಇರುತ್ತದೆ. ಚಾಮ್‌ಷುಗರ್ಸ್‌ ಹಾಗೂ ಭಾರತೀ ಕಾಲೇಜಿನಿಂದ ಒಮ್ಮೆಲೆ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬರುವ ಕಾರಣ ಅಲ್ಲಿ ವಾಹನ ಸಂಚಾರಕ್ಕೆ ತುಂಬಾ ಅಡ್ಡಿ ಉಂಟಾಗುತ್ತದೆ.

ಈ ನಿಟ್ಟಿನಲ್ಲಿ ಅಲ್ಲಿಗೆ ಸಂಜೆ ವೇಳೆ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ಆಲಭುಜನಹಳ್ಳಿ ತಿರುವಿನಲ್ಲಿ ಆಟೊಗಳು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ.ಶ್ರೀನಿವಾಸ್, ರೋಟರಿ ಮಾಜಿ ಅಧ್ಯಕ್ಷ ಬಿ.ಬಸವರಾಜು, ಭಾರತ ವಿಕಾಸ ಪರಿಷದ್ ಮಾಜಿ ಅಧ್ಯಕ್ಷ ವೈ.ಬಿ.ಶ್ರೀಕಂಠಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ವರ್ತಕರ ಸಂಘದ ಅಧ್ಯಕ್ಷ ರಾಮೇಗೌಡ, ರವೀಂದ್ರ, ಶಿವಲಿಂಗೇಗೌಡ, ರಾಜೇಂದ್ರ, ಪೇದೆಗಳಾದ ವೆಂಕಟೇಶ್, ತೈಲೂರು ಸಿದ್ದರಾಜು, ವಿಜಯ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT