ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಚಾರ ಸ್ಥಗಿತ: ಜನರ ಪರದಾಟ

Last Updated 2 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಚಿತ್ತಾಪುರ: ಇಲ್ಲಿಂದ ಗುಲ್ಬರ್ಗ, ಕಾಳಗಿ ಹಾಗೂ ಸೇಡಂ ನಗರ ಪಟ್ಟಣಗಳಿಗೆ ಸಂಪರ್ಕ ಜೋಡಿಸುವ ಮುಖ್ಯ ರಸ್ತೆಯ ಮಾರ್ಗದ ತಾಲ್ಲೂಕಿನ ದಂಡೋತಿ-ತೆಂಗಳಿ ಕ್ರಾಸ್ ನಡುವೆ ರಸ್ತೆಯ ಕೆಸರಲ್ಲಿ ಲಾರಿ ಮತ್ತು ಟ್ಯಾಂಕರ್ ಸಿಲುಕಿದ್ದರಿಂದ ಸೋಮವಾರ ಮುಂಜಾನೆಯಿಂದ ಸಂಜೆವರಗೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಜನರು ತೊಂದರೆ ಅನುಭವಿಸಿದರು.

ಭಾನುವಾರ ರಾತ್ರಿ ಮಳೆ ಬಂದ ಪರಿಣಾಮ ಇಡೀ ರಸ್ತೆಯು ಕೆಸರು ಗದ್ದೆಯಾಗಿದೆ. ವಾಹನ ಚಾಲಕರು ಸ್ವಲ್ಪವೂ ಎಚ್ಚರ ತಪ್ಪಿದರೆ ಅಪಾಯ ಮತ್ತು ಅನಾಹುತ ತಪ್ಪಿದ್ದಲ್ಲ ಎನ್ನುವಂತೆ ರಸ್ತೆ ಹದಗೆಟ್ಟಿದೆ. ದಂಡೋತಿಯಿಂದ ತೆಂಗಳಿ ಕ್ರಾಸ್‌ವರೆಗೆ ಪ್ರಯಾಣಿಸುತ್ತಿದ್ದ ಲಾರಿ ಕೆಸರಲ್ಲಿ ಸಿಲುಕಿತು. ಅದರ ಪಕ್ಕದಿಂದ ಚಿತ್ತಾಪುರ ಕಡೆಗೆ ಪ್ರಯಾಣಿಸುತ್ತಿದ್ದ ಟ್ಯಾಂಕರ್ ಅದೇ ಸ್ಥಳದಲ್ಲಿ ಸಿಲುಕಿದ್ದರಿಂದ ದಿನಪೂರ್ತಿ ವಾಹನ ಸಂಚಾರ ಬಂದ್ ಆಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ತೊಂದರೆ: ಬೆಳಗ್ಗೆ ಶಾಲಾ ಕಾಲೇಜಿಗೆ ಹೋಗಬೇಕಾದ ಶಿಕ್ಷಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಸರ್ಕಾರಿ ನೌಕರರು ತೊಂದರೆ ಅನುಭವಿಸಿದರು. ಈ ಮಾರ್ಗದ ಬಸ್ ಸಂಚಾರ ಹಿಂದಕ್ಕೆ ಪಡೆದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಶಹಾಬಾದ್ ಮಾರ್ಗವಾಗಿ ಗುಲ್ಬರ್ಗಕ್ಕೆ ಬಸ್ ಸಂಚಾರ ಬದಲಾವಣೆ ಮಾಡಿತ್ತು. ಸಮಯಕ್ಕೆ ಸರಿಯಾಗಿ ತಲುಪಲು ಆಗದ ಪರಿಣಾಮ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗದೆ ಹಿಂಸೆ ಅನುಭವಿಸಿದರು.

ಇಡೀ ರಸ್ತೆ ಕೆಸರಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಅನಿವಾರ್ಯತೆಗೆ ಸಿಲುಕಿ ಅದೇ ಕೆಸರಿನಲ್ಲಿಯೆ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಓಡಿಸುತ್ತಾ ತಾವು ತಲುಪಬೇಕಾದ ನಿಗದಿತ ಸ್ಥಳಕ್ಕೆ ತಲುಪಿದರು. ದ್ವಿಚಕ್ರ ವಾಹನವು ಜಾರಿ ಕೆಲವರು ಕೆಸರಲ್ಲಿ ಬಿದ್ದರು. ವಿದ್ಯಾರ್ಥಿಗಳು ಕೆಸರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಶಾಲಾ ಕಾಲೇಜಿಗೆ ತಲುಪಿದರು.

ಮಳೆಗಾಲದಲ್ಲಿ ಅನೇಕ ಬಾರಿ ಸಂಚಾರ ಬಂದ್ ಆಗಿ, ಜನರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡರೂ, ಜನರು ತೀವ್ರ ತೊಂದರೆ ಅನುಭವಿಸಿದ ಘಟನೆಗಳು ನಡೆದರೂ ಕಾಳಗಿ ಲೋಕೋಪಯೋಗಿ ಇಲಾಖೆ ಎಂಜಿನೀಯರರು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT