ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿಭಟನೆ

Last Updated 21 ಏಪ್ರಿಲ್ 2011, 6:40 IST
ಅಕ್ಷರ ಗಾತ್ರ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಸದಸ್ಯರು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷ ಎಚ್.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿಮಠ, ಮೋಟಾರು ವಾಹನ ತೆರಿಗೆ ವಿನಾಯಿತಿಯನ್ನು ಮುಂದುವರಿಸಬೇಕು ಹಾಗೂ ಅನಧಿಕೃತ ಖಾಸಗಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಭಜನೆಗೊಂಡ ಬಳಿಕ ರೂ 83.82 ಕೋಟಿ ನಷ್ಟ ಅನುಭವಿಸಿದೆ. ಹೈದರಾಬಾದ್ ಕರ್ನಾಟಕ ಭಾಗ ಅಭಿವೃದ್ಧಿ ಆಗದಿರುವುದನ್ನು ಗಮನಿಸಿ ಉತ್ತಮ ಸಾರಿಗೆ ಸೌಲಭ್ಯ ನೀಡುವ ಹಾಗೂ ಗ್ರಾಮೀಣರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರಕಾರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಸ್ಥಾಪಿಸಿದ್ದು, ಶೇ. 60ರಷ್ಟು ಭಾಗ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗಿದೆ.

ಸಂಸ್ಥೆ 8 ವಿಭಾಗ, 43 ಘಟಕ ಹಾಗೂ ಒಂದು ಪ್ರಾದೇಶಿಕ ಕಾರ್ಯಾಗಾರ ಹೊಂದಿದ್ದು, 3,700 ಬಸ್‌ಗಳು, 3,500 ಅನುಸೂಚಿಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. 18,000ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಜನಸಂಖ್ಯೆ ಆಧರಿಸಿ ಇನ್ನು ಕೆಲವೆಡೆ ಘಟಕ, ಬಸ್ ನಿಲ್ದಾಣ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ವಾಹನಗಳ ದುರಸ್ತಿಯ ವೆಚ್ಚ ಹೆಚ್ಚುತ್ತಿದೆ.
 
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಂಸ್ಥೆ ತನ್ನ ಆಂತರಿಕ ಸಂಪನ್ಮೂಲಗಳಿಂದ ಖರ್ಚು ಭರಿಸುವಂತಾಗಿದೆ. ಎಐಟಿಯುಸಿ ಹೋರಾಟದಿಂದ 2001ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಸಂಸ್ಥೆಯ ಆರ್ಥಿಕ ನಷ್ಟ ಅರಿತು ಸಂಸ್ಥೆ ತನ್ನ ಸ್ವಂತ ಶಕ್ತಿಯ ಮೇಲೆ ನಿಲ್ಲುವವರೆಗೂ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಿ ಮಹತ್ವದ ತೀರ್ಮಾನ ಕೈಗೊಂಡಿತ್ತು. ಇದರಿಂದ ಸಂಸ್ಥೆಗೆ ಅನುಕೂಲವೂ ಆಗಿತ್ತು. ಆದರೆ, ಬಿಜೆಪಿ ಸರಕಾರ, 2010ರ ನವೆಂಬರ್‌ನಿಂದ ಮೋಟಾರು ವಾಹನ ತೆರಿಗೆ ವಿನಾಯಿತಿಯನ್ನು ಹಿಂದಕ್ಕೆ ಪಡೆದಿದೆ ಎಂದು ಅವರು ದೂರಿದರು.

ಸರಕಾರದ ಈ ನಿರ್ಧಾರದಿಂದ ವರ್ಷಕ್ಕೆ ರೂ 45 ಕೋಟಿ ತೆರಿಗೆ ಪಾವತಿಸಬೇಕಾಗುತ್ತಿದೆ. ಇದರಿಂದ ಸಾರ್ವಜನಿಕರ ಉತ್ತಮ ಸೇವೆಗೆ ಹಿನ್ನಡೆಯಾಗಲಿದೆ ಎಂದು ಅವರು ವಿವರಿಸಿದರು. ಮತ್ತೆ ಈ ತೆರಿಗೆ ವಿನಾಯಿತಿ ಸೌಲಭ್ಯ ಮುಂದುವರಿಸಬೇಕು. ಪ್ರಯಾಣಿಕರನ್ನು ಹೊತ್ತೊಯ್ಯುವ ಖಾಸಗಿ ವಾಹನಗಳ ಹಾವಳಿ ನಿಯಂತ್ರಿಸಬೇಕು ಎಂದು ಅವರು ಆಗ್ರಹಿಸಿದರು. ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಎ.ಆರ್.ಎಂ. ಇಸ್ಮಾಯಿಲ್, ಕೆ.ಚನ್ನಪ್ಪ, ಜಿ.ಶಿವಕುಮಾರ್, ಎಸ್.ಆರ್. ಮಡಿವಾಳ್ ನೇತೃತ್ವ ವಹಿಸಿದ್ದರು. ಸಂಘದ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು. ಪ್ರತಿಭಟನಾಕಾರರು ನಂತರ ಅಪರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT