ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರೆ ಟೀಮ್ ಸೆ ಅಚ್ಛಾ ದೋನಿ ಟೀಮ್ ಹಮಾರಾ...!

Last Updated 2 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ನೀಲಿ, ನೀಲಿ, ನೀಲಿ... ರಾಜ್ಯದ ರಾಜಧಾನಿಯೇ ನೀಲವರ್ಣದ ಸಾಗರ. ಬೆಳಿಗ್ಗೆಯಿಂದಲೇ ಭಾರಿ ತಯಾರಿ. ಶಾಂಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಪೋಷಾಕು, ರಾಷ್ಟ್ರಧ್ವಜವನ್ನು ಕೊಳ್ಳಲು ಮುಗಿಬಿದ್ದವರ ಸಂಖ್ಯೆ ಸಾವಿರಾರು.

ಎದ್ದ ತಕ್ಷಣ ಪತ್ರಿಕೆಯಲ್ಲಿ ಮೊದಲು ನೋಡಿದ್ದು ಪಂದ್ಯ ಪೂರ್ವ ವಿಶ್ಲೇಷಣೆ. ಎಲ್ಲರ ಮನದಲ್ಲಿ ಒಂದೇ ಪ್ರಶ್ನೆ ‘ದೋನಿ ನೇತೃತ್ವದ ತಂಡ ಗೆಲ್ಲುವುದೇ? ಏನೆಲ್ಲಾ ಲೆಕ್ಕಾಚಾರ ಮಾಡಿ ಗೆಲ್ಲುತ್ತದೆ’ ಎಂದು ಅದೆಷ್ಟೊಂದು ಕ್ರಿಕೆಟ್ ಪ್ರೇಮಿಗಳು ತಮಗೇ ತಾವು ಭರವಸೆ ನೀಡಿಕೊಂಡರು. ಕ್ಲಬ್, ಬಾರ್, ಕಾಫಿ ಶಾಪ್, ಶಾಪಿಂಗ್ ಮಾಲ್‌ಗಳಲ್ಲಿ ಸೇರಿ; ದೊಡ್ಡ ಪರದೆಯ ಟಿವಿಯಲ್ಲಿ ಆಟವನ್ನು ನೋಡಿ ಆನಂದಿಸಿದರು.

ಎಲ್ಲರೂ ಮೆನ್ ಇನ್ ಬ್ಲೂ:
ಬೆಂಗಳೂರಿನ ಮಹಾ ಬೀದಿಗಳನ್ನೆಲ್ಲಾ ಸುತ್ತಿದ ‘ಮೆನ್ ಇನ್ ಬ್ಲೂ’ ತಂಡದ ಪೋಷಾಕು ತೊಟ್ಟ ಸುಮಾರು ಸಾವಿರ ಯುವಕ-ಯುವತಿಯರಿದ್ದ ದಂಡೊಂದು ‘ಸಾರೆ ಟೀಮ್ ಸೆ ಅಚ್ಛಾ ದೋನಿ ಟೀಮ್ ಹಮಾರಾ...’ ಎಂದು ಹಾಡಿ ಕುಣಿದು ಗಮನ ಸೆಳೆಯಿತು. ತೆರೆದ ಜೀಪ್‌ನಲ್ಲಿ ವಿಶ್ವಕಪ್ ಟ್ರೋಫಿಯ ಬೃಹತ್ ಪ್ರತಿಕೃತಿಯನ್ನು ಇಟ್ಟುಕೊಂಡು ಮ್ಯೂಸಿಕ್ ಬ್ಯಾಂಡ್‌ನೊಂದಿಗೆ ಈ ಕ್ರಿಕೆಟ್ ಪ್ರೇಮಿಗಳು ನಗರದಲ್ಲಿ ವಿಶ್ವಕಪ್ ಫೈನಲ್‌ಗೆ ಮುನ್ನ ಹುಮ್ಮಸ್ಸು ಮೂಡುವಂತೆ ಮಾಡಿದರು. ಮುಖಕ್ಕೆ ತ್ರಿವರ್ಣ ಪಟ್ಟಿಗಳನ್ನು ಬರೆದುಕೊಂಡ ಚೆಂದದ ಹುಡುಗಿಯರೂ ಗಂಟಲು ಬಿದ್ದು ಹೋಗುವಹಾಗೆ ‘ಜೀತೇಗಾ ಭೈ ಜೀತೇಗಾ ಇಂಡಿಯಾ ಜೀತೇಗಾ...’ ಎಂದು ಕೂಗಿದರು.

ಜಯನಗರದ ‘ಗಿಣಿರಾಮ’ನ ಭವಿಷ್ಯ:
ವಿಶ್ವಕಪ್ ಫುಟ್‌ಬಾಲ್ ನಡೆದಾಗ ‘ಪಾಲ್’ ಎನ್ನುವ ಆಕ್ಟೋಪಸ್ ವಿವಿಧ ತಂಡಗಳ ಭವಿಷ್ಯ ನುಡಿದಿತ್ತು. ನೂರಕ್ಕೆ ನೂರರಷ್ಟು ಪೌಲ್ ಹೇಳಿದಂತೆ ಫಲಿತಾಂಶಗಳು ಹೊರಹೊಮ್ಮಿದ್ದವು. ಅದು ಹಳೆಯ ಕಥೆ. ಜಯನಗರ ಕಾಂಪ್ಲೆಕ್ಸ್ ಮುಂದಿನ ‘ಗಿಣಿರಾಮ’ನಿಂದ ಅದೇ ರೀತಿ ಭವಿಷ್ಯ ನುಡಿಸಲು ಕೆಲವು ಯುವಕರು ಮುಂದಾದವರು. ಎರಡು ಕಾರ್ಡ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ಎಂದು ಬರೆದಿಟ್ಟರು. ವಿಚಿತ್ರವೆಂದರೆ ಅದು ‘ಶ್ರೀಲಂಕಾ’ ಎಂದು ಬರೆದಿದ್ದ ಕಾರ್ಡನ್ನು ತನ್ನ ಕೊಕ್ಕಿನಲ್ಲಿ ಎತ್ತಿಕೊಂಡಿತು. ‘ಪಾಲ್’ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಹೇಳಿದಷ್ಟು ನಿಖರವಾದ ಭವಿಷ್ಯದಂತೆ ಜಯನಗರದ ಈ ‘ಗಿಣಿರಾಮ’ನ ಕಾರ್ಡ್ ಆಯ್ಕೆ ಸರಿಯಾಗಲಿಲ್ಲ ಅಷ್ಟೆ!.

ಪುಳಕಗೊಳಿಸಿದ ಸಂದೇಶಗಳು: ಭಾರತ ಗೆಲ್ಲಬೇಕು ಎನ್ನುವುದೇ ಎಲ್ಲರ ಆಸೆ ಹಾಗೂ ಆಶಯವಾಗಿತ್ತು. ಅದು ಮೊಬೈಲ್ ಮೂಲಕ ಹರಿದಾಡಿದ ‘ಎಸ್‌ಎಂಎಸ್’ ಸಂದೇಶಗಳಲ್ಲಿಯೂ ಸ್ಪಷ್ಟವಾಗಿ ವ್ಯಕ್ತವಾಯಿತು. ಒಂದೊಂದು ಸಂದೇಶದ ಕೊನೆಯ ಆಶಯವು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡ ವಿಶ್ವ ಚಾಂಪಿಯನ್ ಆಗಿ ಮೆರೆಯಬೇಕು ಎನ್ನುವುದು. ಕೆಲವು ಸಂದೇಶಗಳಂತೂ ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಪುಳಕಿತರಾಗುವಂತೆ ಮಾಡಿದ್ದು ಖಚಿತ.

‘ಡಿ’-‘ಡಿ’ ಲೆಕ್ಕಾಚಾರ:
ವಿನ್ನಿಂಗ್ ‘ಡಿ’-‘ಡಿ’ ಎಂದು ಹೇಳಿತ್ತು ಆ ಸಾಲು. ಏನಿದು ‘ಡಿ’- ‘ಡಿ’ ಎಂದು ಮೊಬೈಲ್ ಕೀ ಪ್ಯಾಡ್‌ನಲ್ಲಿ ಸ್ಕ್ರಾಲ್ ಮಾಡಿದಾಗ ಹೀಗೊಂದು ಲೆಕ್ಕಾಚಾರ ಅಲ್ಲಿ ಕಾಣಿಸಿತು. ಕಪಿಲ್ ದೇವ್-ಮಹೇಂದ್ರ ಸಿಂಗ್ ದೋನಿ. ನಡುವೆ ಒಂದು ಆಂಗ್ಲ ಅಕ್ಷರದ ಹೋಲಿಕೆ. ‘ದೇವ್’-‘ದೋನಿ’ ಇವೆರಡೂ ನಾಮಪದಗಳ ಆರಂಭದ ಆಂಗ್ಲ ಅಕ್ಷರ ‘ಡಿ’. ಆದ್ದರಿಂದ ದೋನಿ ಕೂಡ ಚಾಂಪಿಯನ್ ತಂಡದ ನಾಯಕ ಎನಿಸಿಕೊಳ್ಳಬಲ್ಲರು. ಇಂಥದೊಂದು ಆಶಯವನ್ನು ಹೊತ್ತು ತಂದಿತ್ತು ಆ ಸಂದೇಶ.

ಸಚಿನ್ ಶತಕ-ವಿಜಯ:
‘ಸಚಿನ್ ಶತಕ ಬೇಕೋ-ಭಾರತ ಗೆಲ್ಲಬೇಕೊ?’ ಹೀಗೊಂದು ಸಂದೇಶ. ಅದೇಕೋ ಗೊತ್ತಿಲ್ಲ; ಸಚಿನ್ ಶತಕ ಗಳಿಸಿದರೆ ತಂಡ ಸೋಲುತ್ತದೆ ಎನ್ನುವ ಭಯ. ಅಂಕಿ-ಅಂಶಗಳು ಇದಕ್ಕೆ ಬಲ ನೀಡುವುದಿಲ್ಲವಾದರೂ ಕ್ರಿಕೆಟ್ ಪ್ರೇಮಿಗಳ ನಂಬಿಕೆ ಹೀಗಿದೆ. ಆದ್ದರಿಂದಲೇ ಇಂಥದೊಂದು ಸಾಲು ಮೊಬೈಲ್ ಪರದೆಯ ಮೇಲೆ ಮೂಡಿತು. ಯುವಕರ ಮೊಬೈಲ್ ಜಾಲದಲ್ಲಿ ಸುಳಿದಾಟಿತು. ತೆಂಡೂಲ್ಕರ್ ಟೆಸ್ಟ್-ಏಕದಿನ ಪಂದ್ಯಗಳಲ್ಲಿ ಗಳಿಸಿದ 99 ಶತಕಗಳಲ್ಲಿ (51 ಟೆಸ್ಟ್‌ನಲ್ಲಿ; 48 ಏಕದಿನ ಪಂದ್ಯಗಳಲ್ಲಿ) 53 ವಿಜಯಕ್ಕೆ ಕಾರಣವಾದವು. ಲಂಕಾ ಎದುರು ಏಕದಿನ ಕ್ರಿಕೆಟ್‌ನಲ್ಲಿ ಈ ಫೈನಲ್ ಮುನ್ನ ಎಂಟು ಬಾರಿ ಮೂರಂಕಿಯ ಮೊತ್ತ ಗಳಿಸಿದ್ದು ಐದು ಗೆಲುವಿಗೆ ಪ್ರಯೋಜನಕಾರಿ. ಆದರೂ ಏನೋ ಒಂಥರಾ ಭಯ. ‘ಮಾಸ್ಟರ್ ಬ್ಲಾಸ್ಟರ್’ ನೂರು ರನ್ ಮಾಡಿದರೆ; ಮತ್ತು ಕ್ರಿಕೆಟ್ ಜೀವನದ ಒಟ್ಟಾರೆ ನೂರನೇ ಶತಕ ಗಳಿಸಿದರೆ ತಂಡ ಸೋಲುತ್ತದೆ ಎಂದು. ಈ ಆತಂಕ ಎಸ್‌ಎಂಎಸ್ ಮೂಲಕ ವ್ಯಕ್ತವಾಯಿತು.

ಬಲ್ಕ್ ಮೆಸೇಜ್‌ಗೆ ಕಡಿವಾಣ: ಮುಂಬೈನಲ್ಲಿ ಮಾತ್ರವಲ್ಲ ದೇಶದ ಅನೇಕ ಮಹಾನಗರಗಳಲ್ಲಿ ವಿಶ್ವಕಪ್ ಫೈನಲ್ ಪಂದ್ಯ ಆರಂಭವಾಗಿ, ಮುಗಿಯುವರೆಗಿನ ಅವಧಿಯಲ್ಲಿ ಮೊಬೈಲ್ ಬಲ್ಕ್ ‘ಎಸ್‌ಎಂಎಸ್’ ಸಂದೇಶ ರವಾನೆಗೆ ಕಡಿವಾಣ ಹಾಕಲಾಯಿತು. ಮುಂಬೈನಲ್ಲಿ ಪಂದ್ಯ ನಡೆಯುತ್ತಿದ್ದರಿಂದ ಭದ್ರತೆಯ ಕಾರಣದಿಂದ ಹೀಗೆ ಮಾಡಿದ್ದು ಸಹಜ ಎಂದು ಒಪ್ಪಬಹುದು. ಆದರೆ ಬೇರೆ ಮಹಾ ನಗರಗಳಲ್ಲಿಯೂ ಹೀಗೆ ಸಮೂಹ ಸಂದೇವನ್ನು ರವಾನಿಸಲು ನಿಯಂತ್ರಣ ಹಾಕಿದ್ದು ಅಚ್ಚರಿ. ಇನ್ನೊಂದು ವಿಶೇಷವೆಂದರೆ ಕೆಲವು ಮೊಬೈಲ್ ಸಂಪರ್ಕ ಸೇವೆ ಒದಗಿಸುವ ಕಂಪೆನಿಗಳು ವಿಶ್ವಕಪ್ ಫೈನಲ್ ಅವಧಿಯಲ್ಲಿ ವಿಶೇಷ ಲೈವ್ ಸ್ಕೋರ್ ಆಫರ್ ಪ್ರಕಟಿಸಿದ್ದರೂ, ಸಂದೇಶಗಳು ಹೆಚ್ಚಿನ ಗ್ರಾಹಕರನ್ನು ತಲುಪಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT