ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಥಕ ಬದುಕು

Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬದುಕಿನಲ್ಲಿ ಎದುರಾದ ಕಷ್ಟಗಳ ಸರಮಾಲೆಯನ್ನು ಎದುರಿಸಿ ನಿಂತು ವೈದ್ಯ ವೃತ್ತಿಯಲ್ಲಿ ತೊಡಗಿ, ಹಳ್ಳಿಗರು- ದೀನದಲಿತರ ಸೇವೆ ಮಾಡಿದವರು ಡಾ. ಎ.ಶಕುಂತಲಮ್ಮ. ಹೀಗೆ, ಇತರರ ಬಾಳಿಗೆ ಮಾದರಿಯಾಗಿ ನಿಲ್ಲುವ ಅವರು ವಿಧಿವಶರಾಗಿ ಇಂದಿಗೆ (ಡಿಸೆಂಬರ್ 29) ಒಂದು ವರ್ಷ. 

ಅಂದು ಆಕೆಯ ಮುಂದೆ `ಮುಂದೇನು?' ಎಂಬ ಪ್ರಶ್ನೆ ಬೃಹದಾಕಾರವಾಗಿ ಎದ್ದು ನಿಂತಿತ್ತು. ಮದುವೆಯಾಗಿ ವರ್ಷದೊಳಗೆ ಹೆರಿಗೆಗೆಂದು ತವರಿಗೆ ಬಂದಿದ್ದ ಆಕೆಗೆ ಬರಸಿಡಿಲೆರಗಿತ್ತು. ದೂರದ ಊರಿನಲ್ಲಿದ್ದ ಪತಿ ಕಾಯಿಲೆಗೆ ತುತ್ತಾಗಿ ಅಸು ನೀಗಿದ್ದರು.

15 ದಿನಗಳ ಹಸುಗೂಸನ್ನು ನೋಡುವ ಭಾಗ್ಯ ಅಪ್ಪನಿಗೆ ಇರಲಿಲ್ಲ. ಹಸಿ ಬಾಣಂತಿಯಾಗಿದ್ದ ತನಗೆ ಆಸರೆಯಾಗಬೇಕಿದ್ದ ಪತಿ ಇನ್ನಿಲ್ಲ. ಇದೀಗ ತಾನೇ ಜಗತ್ತಿಗೆ ಕಣ್ಣು ತೆರೆಯುತ್ತಿರುವ ಕಂದಮ್ಮ ಮಡಿಲಲ್ಲಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯ ಮುಂದೆ ಇಂತಹದ್ದೊಂದು ಪ್ರಶ್ನೆ ಸಹಜವಾಗಿಯೇ ದೈತ್ಯನಂತೆ ಕಾಡತೊಡಗಿತ್ತು.

ಆದರೆ ಇಂತಹ ದಯನೀಯ ಪರಿಸ್ಥಿತಿಯಲ್ಲಿದ್ದ ಮಗಳಿಗೆ ಹೆತ್ತವರು ಬರೀ ಸಾಂತ್ವನ ಹೇಳಿದ್ದಷ್ಟೇ ಅಲ್ಲ, ಆಕೆ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕು ಕಟ್ಟಿಕೊಳ್ಳುವಂತೆ ಮಾಡಿದರು. ಇದನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಋಣ ತೀರಿಸುವಂತೆ ಸಾರ್ಥಕ ಬದುಕನ್ನು ರೂಪಿಸಿಕೊಂಡರು ಡಾ. ಎ.ಶಕುಂತಲಮ್ಮ.

1936ರಲ್ಲಿ ಅನಂತಪುರದಲ್ಲಿ ವಕೀಲಿ ವೃತ್ತಿಯಲ್ಲಿದ್ದ ಎ.ಸತ್ಯನಾರಾಯಣ ಎಂಬುವವರ ಜೊತೆ ಅನಂತಪುರ ಜಿಲ್ಲೆಯ ಗುತ್ತಿಯಲ್ಲಿ ಶಕುಂತಲಮ್ಮ ಅವರ ವಿವಾಹವಾಯಿತು. ಮದುವೆಯಾದ ವರ್ಷದಲ್ಲಿ ಹೆರಿಗೆಗೆಂದು ಅವರು ತವರಿಗೆ ಬಂದರು. ಆಗ ತಂದೆ ಪಿ.ಎನ್.ಗೌಡರು ಅಂದಿನ ಮದರಾಸು ಪ್ರೆಸಿಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಮಂಗಳೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ವರ್ಗವಾಗಿದ್ದರು.

ಆಗಸ್ಟ್ ತಿಂಗಳಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತು. ಈ ಸಂತಸದ ಸುದ್ದಿ ತಲುಪಿದಾಗ ಮಗುವಿನ ತಂದೆ ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದರು.  ಕೇವಲ ಟೈಫಾಯಿಡ್‌ಗೂ ಸೂಕ್ತ ಔಷಧೋಪಚಾರ ದೊರೆಯದೆ ಕಾಯಿಲೆ ಹೆಚ್ಚಾಗತೊಡಗಿತ್ತು.

ವಿಷಯ ತಿಳಿದು ಅಳಿಯನ ಉಪಚಾರಕ್ಕೆಂದು, ಎಳೆ ಕಂದನ ಆರೈಕೆಯನ್ನು ಕುಟುಂಬದ ಇತರ ಸದಸ್ಯರಿಗೆ ಒಪ್ಪಿಸಿ, ಅತ್ತೆ ಶಾಂತಮ್ಮ ಮಂಗಳೂರಿನಿಂದ ಅನಂತಪುರಕ್ಕೆ ಬಂದರು. ಒಂದೆರಡು ದಿನಗಳಲ್ಲೇ ಕಾಯಿಲೆ ಉಲ್ಬಣಾವಸ್ಥೆ ತಲುಪಿದೆ ಎಂದು ಶಕುಂತಲಾ ಅವರಿಗೆ ಟೆಲಿಗ್ರಾಂ ಬಂತು. ಕೂಡಲೇ ಮಗುವನ್ನು ಎತ್ತಿಕೊಂಡು ಬಾಣಂತಿ ಪ್ರಯಾಣ ಹೊರಟು ಮಾರ್ಗ ಮಧ್ಯದ ಹಿಂದೂಪುರವನ್ನು ತಲುಪುವಷ್ಟರಲ್ಲಿ, ಪತಿ ತೀರಿಕೊಂಡಿದ್ದಲ್ಲದೆ ಅವರ ಶವಸಂಸ್ಕಾರವೂ ನಡೆದುಹೋಯಿತು ಎಂಬ ವಿಷಯ ತಿಳಿದುಬಂತು.

ಇತ್ತ ಅತ್ತೆಯ ಮನೆಯವರು, ಗಂಡನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ 19 ವರ್ಷದ ಸೊಸೆ- ಮೊಮ್ಮಗಳಿಗೂ ತಮಗೂ ಇನ್ನು ಮುಂದೆ ಯಾವುದೇ ಸಂಬಂಧ ಇಲ್ಲ ಎಂದು ಘೋಷಿಸಿ ಸಂಪೂರ್ಣ ತ್ಯಜಿಸಿಬಿಟ್ಟರು.

ಇಂತಹ ಹೀನಾಯ ಸ್ಥಿತಿಯಲ್ಲಿದ್ದ ಮಗಳಿಗೆ ಬಂಧು ಬಳಗದವರ ತೀವ್ರ ವಿರೋಧದ ನಡುವೆಯೂ, ಉತ್ತಮ ವಿದ್ಯಾಭ್ಯಾಸ ಕೊಡಿಸಲು ದೃಢ ಮನಸ್ಸು ಮಾಡಿದವರು ಪಿ.ಎನ್.ಗೌಡರು. ಅಂತೆಯೇ ಇಂಟರ್‌ಮೀಡಿಯಟ್ ಓದಲು ಅನಂತಪುರದ ವಿಜ್ಞಾನ ಕಾಲೇಜಿಗೆ 1938ರಲ್ಲಿ ಅವರನ್ನು ಸೇರಿಸಿದರು. ಗಂಡು ಮಕ್ಕಳಿಂದ ತುಂಬಿದ್ದ ಆ ತರಗತಿಯಲ್ಲಿ ಕೇವಲ ಇಬ್ಬರು ಹೆಣ್ಣು ಮಕ್ಕಳು ಓದುತ್ತಿದ್ದರು.

1940ರಲ್ಲಿ ಮದರಾಸಿನ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಯಿತು. ಆಗ ವೈದ್ಯಕೀಯ ಕ್ಷೇತ್ರಕ್ಕೆ ಹೆಣ್ಣು ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಆ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಂದ ಯಾವುದೇ ಶಿಕ್ಷಣ ಶುಲ್ಕವನ್ನು ತೆಗೆದುಕೊಳ್ಳುತ್ತಿರಲಿಲ್ಲ. ದೃಢಮನಸ್ಸು ಮತ್ತು ಏಕಾಗ್ರತೆಯಿಂದ ಓದುತ್ತಾ, 1946ರಲ್ಲಿ ಹೌಸ್ ಸರ್ಜನ್ಸಿ ಮುಗಿಸಿದ ಶಕುಂತಲಮ್ಮ, ಸ್ತ್ರೀರೋಗ ತಜ್ಞೆಯಾಗಿ ಗುತ್ತಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು.

ಬಡವ ಬಲ್ಲಿದ ಎಂಬ ಭೇದ ತೋರದೆ ರೋಗಿಗಳಿಗೆ ಸೂಕ್ತ ಔಷಧೋಪಚಾರ ನೀಡುತ್ತಿದ್ದ ಅವರನ್ನು ಕಂಡರೆ ಎಲ್ಲರಿಗೂ ಆತ್ಮೀಯತೆ ಹಾಗೂ ಅಭಿಮಾನ ಉಕ್ಕುತ್ತಿತ್ತು. ಅವರಿಗೆ ಬೇರೆ ಊರಿಗೆ ವರ್ಗವಾದಾಗ, ವಯಸ್ಸಾದ ತಂದೆ ತಾಯಿಯನ್ನು ಬಿಟ್ಟು ಹೋಗಬಾರದೆಂದು ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಖಾಸಗಿಯಾಗಿ ವೈದ್ಯವೃತ್ತಿ ಪ್ರಾರಂಭಿಸಿದರು.

ಆಧುನಿಕ ಸವಲತ್ತುಗಳಿಲ್ಲದ ಅಂದಿನ ಕಾಲದಲ್ಲಿ, ಉಲ್ಬಣಾವಸ್ಥೆಯಲ್ಲಿದ್ದ ರೋಗಿಗೆ ಔಷಧೋಪಚಾರ ನೀಡಲು ಗ್ರಾಮಾಂತರ ಪ್ರದೇಶಗಳಿಗೆ ಹಗಲು ರಾತ್ರಿಯೆನ್ನದೆ ಜಟಕಾ ಗಾಡಿಯಲ್ಲಿ ಹೋಗಿಬರುತ್ತಿದ್ದರು. ಮಲೇರಿಯಾ, ಟೈಫಾಯ್ಡ, ಕಾಲರಾಗಳಂತಹ ಕಾಯಿಲೆಗಳಲ್ಲದೆ, ಹಾವು, ಚೇಳು, ಹುಚ್ಚುನಾಯಿ ಕಡಿತ ಹಾಗೂ ಕಠಿಣ ಪ್ರಸವದ ಸಂದರ್ಭಗಳನ್ನೂ ಅನಾಯಾಸವಾಗಿ ಎದುರಿಸಿ ಗುಣಪಡಿಸುತ್ತಿದ್ದರು.

ಸಾಮಾನ್ಯ ಜನರ ವೈದ್ಯಕೀಯ ಕಾರಣಗಳೇ ಅಲ್ಲದೆ ಅವರ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೂ ಪರಿಹಾರ ನೀಡಿ ಮಾರ್ಗದರ್ಶನ ಮಾಡುತ್ತಾ ಧೈರ್ಯ ತುಂಬುತ್ತಿದ್ದರು. ಹೀಗಾಗಿ ಸಾಮಾನ್ಯ ಜನರಲ್ಲಿ ಶಕುಂತಲಮ್ಮ ಅವರ ಬಗ್ಗೆ ಗೌರವಾದರ, ಪ್ರೀತಿ ಹೆಚ್ಚಾಗಿ, ಅವರನ್ನು ತಮ್ಮ ಮನೆಯ ಸದಸ್ಯೆಯಂತೆಯೇ ಕಾಣತೊಡಗಿದರು.

ಎಷ್ಟರಮಟ್ಟಿಗೆ ಎಂದರೆ `ನನಗೆ ವಯಸ್ಸಾಯಿತು, ಇನ್ನು ಬರಬೇಡಿ' ಎಂದು ಹೇಳಿದರೂ ಕೇಳದೆ, `ಅಮ್ಮಾ, ನಿಮ್ಮ ಕೈಯಿಂದಲೇ ಒಂದು ತೊಟ್ಟು ನೀರು ಕೊಡಿ, ನಮ್ಮ ಕಾಯಿಲೆ ವಾಸಿಯಾಗುತ್ತದೆ' ಎನ್ನುವ ಮಟ್ಟಿಗೆ ಅವರನ್ನು ಕಾಡತೊಡಗಿದರು. ಬಂಧುಮಿತ್ರರಲ್ಲೂ ಶಸ್ತ್ರಚಿಕಿತ್ಸೆ, ಹೆರಿಗೆ ಅಥವಾ ಗುರುತರ ಕಾಯಿಲೆಗಳ ಚಿಕಿತ್ಸೆ ಸಮಯದಲ್ಲಿ ಸಂಬಂಧಪಟ್ಟ ವೈದ್ಯರ ಜೊತೆಗೆ ಶಕುಂತಲಮ್ಮನವರೂ ಚಿಕಿತ್ಸಾ ಕೊಠಡಿಯಲ್ಲಿ ಇರಲೇಬೇಕೆನ್ನುವ ಕೋರಿಕೆಯನ್ನು ರೋಗಿಗಳು ಮುಂದಿಡುತ್ತಿದ್ದರು.

ಸಮಾಜ ಸೇವೆಯಲ್ಲೂ ಮುಂದು
ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ಶಕುಂತಲಮ್ಮ ಅವರಿಗೆ ಅತೀವ ಆಸಕ್ತಿ. ಆ ಉದ್ದೇಶಕ್ಕಾಗಿ ಅವರು ಉದಾರ ದಾನ ಮಾಡುತ್ತಿದ್ದರು. ಗುತ್ತಿಯಲ್ಲಿ ಹೆಣ್ಣು ಮಕ್ಕಳಿಗಾಗಿ 1976ರಲ್ಲಿ ಒಂದು ಶಾಲೆಯನ್ನು ಮತ್ತು 1978ರಲ್ಲಿ ಒಂದು ಜೂನಿಯರ್ ಕಾಲೇಜನ್ನು ಪ್ರಾರಂಭಿಸಲು ನೇತೃತ್ವ ವಹಿಸಿದ್ದರು.

ಜನಸಾಮಾನ್ಯರಲ್ಲಿ ಅವರ ಬಗ್ಗೆ ಇದ್ದ ಗೌರವಾದರಗಳ ಪರಿಣಾಮವಾಗಿ ಅವರನ್ನು ಗುತ್ತಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ನೇಮಿಸಲಾಗಿತ್ತು. ಅವರ ಮಗಳು ಸತ್ಯವಾಣಿ ಮತ್ತು ಅಳಿಯ ಸುರೇಶ್ ಸಹ ವೈದ್ಯರಾಗಿದ್ದು, ಇಬ್ಬರೂ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಅವಿರತ ಚಟುವಟಿಕೆಯಿಂದ ವಿಶ್ರಾಂತಿ ಪಡೆಯಲು ಕೊನೆಯ ದಿನಗಳಲ್ಲಿ ಬಳ್ಳಾರಿಯಲ್ಲಿದ್ದ ಮಗಳ ಮನೆಯಲ್ಲಿ ನೆಲೆಸಿದ್ದ ಶಕುಂತಲಮ್ಮ, 2011ರ ಡಿಸೆಂಬರ್ 29ರಂದು ತಮ್ಮ 93ನೇ ವಯಸ್ಸಿನಲ್ಲಿ ವಿಧಿವಶರಾದರು. ಹೀಗೆ, ಜೀವನದಲ್ಲಿ ಬರುವ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಛಲದಿಂದ ಬದುಕಿ ತೋರಿಸಿದ ಶಕುಂತಲಮ್ಮ, ಹಲವರ ಮನದಲ್ಲಿ ಅಚ್ಚಳಿಯದೇ ನಿಂತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT