ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಥಕ ಶಾಸನ ಅಧ್ಯಯನ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಡಾ.ಬಿ.ಆರ್. ಹಿರೇಮಠ ಅವರು ಶಾಸನಾಧ್ಯಯನದಲ್ಲಿ ಸಾರ್ಥಕ ಕೆಲಸ ಮಾಡಿದವರು. `ಶಾಸನಗಳಲ್ಲಿ ಕರ್ನಾಟಕದ ವರ್ತಕರು~ ಪಿಎಚ್.ಡಿ ಮಹಾಪ್ರಬಂಧವು ಅವರ ಅಧ್ಯಯನ ಪರಿಶ್ರಮದ ಗುರುತಾಗಿದೆ. ಸಾಮಾನ್ಯವಾಗಿ ಮಾನವಿಕ ಸಂಶೋಧನ ಕ್ಷೇತ್ರದಲ್ಲಿ ಸಂಶೋಧಕರ ಮರಣಾನಂತರ ಅವರ ನೆನಪು ಮಾಡಿಕೊಳ್ಳುವುದೇ ಅಪರೂಪ.
 
ಅಂತಹುದರಲ್ಲಿ ಅಧ್ಯಯನಶೀಲ ಸಂಶೋಧಕನೊಬ್ಬನ ಕೆಲವು ಸಂಪ್ರಬಂಧಗಳನ್ನಾದರೂ ಸಂಪಾದಿಸಿ ಪ್ರಕಟಿಸಿರುವುದು ಆ ಸಂಶೋಧಕನಿಗೆ ಸಲ್ಲಿಸುವ `ಪರೋಕ್ಷ ವಿನಯ~. ಬಿ.ಆರ್. ಹಿರೇಮಠರಿಗೆ ಅಂತಹ `ಪರೋಕ್ಷ ವಿನಯ~ ಸಲ್ಲಿಸಿರುವ ನಾಲ್ಕೂ ಜನ ಸಂಪಾದಕ ಗೆಳೆಯರು ಮೊದಲಿಗೆ ಅಭಿನಂದನೆಗೆ ಪಾತ್ರರಾಗುತ್ತಾರೆ.

ಮೂವತ್ತನಾಲ್ಕು ಸಂಪ್ರಬಂಧಗಳ ಈ ಸಂಕಲನವು ಹಿರೇಮಠರಿಗೆ ಶಾಸನಾಧ್ಯಯನ ಕ್ಷೇತ್ರದಲ್ಲಿದ್ದ ವಿಶೇಷ ಆಸಕ್ತಿಯನ್ನು ಮಾತ್ರವಲ್ಲದೆ ವಿಷಯದ ಬಗೆಗೆ ಅವರಿಗಿದ್ದ ಹಿಡಿತವನ್ನು ವ್ಯಕ್ತಪಡಿಸಿದೆ. ವಿಜಾಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳ ಶಾಸನಗಳನ್ನು ಕುರಿತ ಮೂರೂ ಲೇಖನಗಳು ಏಕಸ್ವರೂಪದಲ್ಲಿವೆ. ಅಂತಹ ಸಂಪ್ರಬಂಧಗಳ ಮಿತಿಯೇ ಹಾಗೆ.

ಅವುಗಳು ಪ್ರಮುಖವಾಗಿ ಮಾಹಿತಿ ಪ್ರಧಾನವಾದವು. ಮಾಹಿತಿಪ್ರಧಾನ ಲೇಖನಗಳು ಸಂಶೋಧನೆಯ ಮುಂದಿನ ಹಂತಕ್ಕೆ ದಾರಿಮಾಡಿಕೊಡುತ್ತವೆ ಮತ್ತು ಸಂಶೋಧನೆಯಲ್ಲಿ ಇದು ಮೊದಲ ಮತ್ತು ಪ್ರಮುಖ ಘಟ್ಟ.

ಪಿಎಚ್.ಡಿ. ಪದವಿಯನ್ನು ಪಡೆಯುವುದೇ ಸಂಶೋಧನೆಯ ಮೊದಲ ಮತ್ತು ಅಂತಿಮ ಗುರಿಯಲ್ಲ. ಅದು ಸಂಶೋಧನೆಯ ಮೊದಲ ಮೆಟ್ಟಿಲು ಅಥವಾ ಮುಖ್ಯ ಪ್ರವೇಶದ್ವಾರ. ಅಲ್ಲಿಂದ ಸಂಶೋಧನೆಯ ನಿಜವಾದ ಪ್ರಯಾಣ ಆರಂಭವಾಗುತ್ತದೆ.
 
ಈ ಮಾತಿಗೆ ಸಂವಾದಿಯಾಗುವಂತೆ ಹಿರೇಮಠರು ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ವಾಣಿಜ್ಯ, ವರ್ತಕರು, ವಿವಿಧ ಬಗೆಯ ಸುಂಕಗಳು, ಆರ್ಥಿಕ ಚಟುವಟಿಕೆಗಳು ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಿರುವ ಸಂಶೋಧನಾತ್ಮಕ ವಿಶ್ಲೇಷಣೆಯ ಸಂಪ್ರಬಂಧಗಳಿವೆ.

ಸಾಗರೋಪಮವಾದ ಶಾಸನ ಸಂಪತ್ತಿನಲ್ಲಿ ಸಾಹಿತ್ಯದ ವಿಶೇಷಗಳನ್ನು ಗುರುತಿಸಲು ಅವುಗಳೊಡನೆ ನಿರಂತರ ಸಂಪರ್ಕವನ್ನಿರಿಸಿಕೊಂಡಿರಬೇಕಾದ್ದು ಅನಿವಾರ್ಯ. ಇಂತಹ ಸಂಪರ್ಕದಿಂದಾಗಿ ಅದೆಷ್ಟೋ ಹೊಸ ವಿಷಯಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಗುತ್ತದೆ.

ಹಿರೇಮಠರ ಅಂತಹ ಒಂದು ಪ್ರಯತ್ನದಲ್ಲಿ ರನ್ನ ಕವಿಯ ಗದಾಯುದ್ಧ ಕಾವ್ಯದಲ್ಲಿನ ಒಂದು ಕಂದಪದ್ಯವು ತರೀಕೆರೆ ತಾಲ್ಲೂಕಿನ ಮುದಿಗೆರೆಯ ವೀರಗಲ್ಲು ಶಾಸನದಲ್ಲಿ ಬಳಕೆಗೊಂಡಿರುವುದು ಖಚಿತವಾಗಿದೆ. ಇದು ಬಹಳ ಚಿಕ್ಕ ವಿಷಯ ಎನಿಸಿದರೂ, ಒಬ್ಬ ಕವಿಯ ಕೃತಿಯು ನಾಡಿನ ಬೇರೆಬೇರೆ ಭಾಗಗಳಲ್ಲಿ ಬಳಕೆಯಲ್ಲಿದ್ದ ವಿಷಯವು ಮುಖ್ಯವಾಗುತ್ತದೆ.

ಶಾಸನಗಳ ಸೂಕ್ಷ್ಮ ಅಧ್ಯಯನದ ಮೂಲಕ ಅನೇಕ ಹೊಸ ಸಂಗತಿಗಳು ಬೆಳಕಿಗೆ ಬರುತ್ತವೆ. ಇದಕ್ಕೆ ಒಂದು ಮಹತ್ವದ ಉದಾಹರಣೆಯೆಂದರೆ ಶಾಸನವೊಂದರ ಬೆನ್ನುಹತ್ತಿ ಹಿರೇಮಠರು ಪತ್ತೆಮಾಡಿರುವ `ಗುಡ್ಡವ್ವೆ ಎಂಬ ಮಹಿಳೆಯ ವಿಗ್ರಹವನ್ನು ವ್ಯಾಪಾರೀ ವರ್ಗದವರು ಇತರ ದೇವತೆಗಳ ವಿಗ್ರಹಗಳ ಪ್ರತಿಷ್ಠಾಪನೆಯ ಸಂದರ್ಭದಲ್ಲೇ ಪ್ರತಿಷ್ಠಾಪಿಸಿರುವ ವಿಷಯ. ಈ ಗುಡ್ಡವ್ವೆಯ ಬಗ್ಗೆ ಹೆಚ್ಚಿನ ಶೋಧಕ್ಕೆ ಈ ಲೇಖನ ದಾರಿಮಾಡಿಕೊಡುತ್ತದೆ.

ಅರ್ಜುನವಾಡ ಶಾಸನದ ಶೋಧದ ನಂತರ ಬಸವಣ್ಣನವರ ಐತಿಹಾಸಿಕತೆಯ ಬಗ್ಗೆ ಹೆಚ್ಚಿನ ಚರ್ಚೆ ಆರಂಭವಾಗಿ ಇನ್ನೂ ಮುಂದುವರಿದಿದೆ. ಬಸವಣ್ಣನವರಿಗೆ ಸಂಬಂಧಿಸಿದ ಬಾಗೇವಾಡಿಯು, ವಿಜಾಪುರ ಜಿಲ್ಲೆಯ ಬಾಗೇವಾಡಿಯೋ ಅಥವಾ ಬೆಳಗಾವಿ ಜಿಲ್ಲೆಯ ಬಾಗೇವಾಡಿಯೋ ಎಂಬ ಬಗ್ಗೆ ನಡೆದಿದ್ದ ಚರ್ಚೆಗೆ ಹಿರೇಮಠರ `ತರ್ದವಾಡಿನಾಡು-ಬಾಗೇವಾಡಿ~ ಸಂಪ್ರಬಂಧವು ವಿರಾಮಹಾಕಿದೆ.
 
ಜೊತೆಗೆ `ಬಸವಣ್ಣನವರ ವಂಶಜರು ಹಾಗೂ ಶಾಸನಗಳು~ ಸಂಪ್ರಬಂಧವು ಆ ಬಗೆಗಿನ ವಿಚಾರಗಳಿಗೆ ತೃಪ್ತಿಕರ ಉತ್ತರ ನೀಡಿದೆ. ಇವು ಬಹಳ ಮುಖ್ಯವಾದ ಸಂಶೋಧನೆಗಳು. ಬಸವಣ್ಣನವರ ಪೂರ್ವಜರ ಗ್ರಾಮ ಮತ್ತು ಬಸವಣ್ಣನವರ ಜನ್ಮಸ್ಥಳಗಳ ಬಗೆಗೆ ಹಿರೇಮಠರು ಮಹತ್ವದ ಶೋಧ ಮಾಡಿದ್ದಾರೆ. ಬಹುಚರ್ಚಿತ ವಿಷಯಗಳಿಗೆ ಇಂತಹ ಸಂಪ್ರಬಂಧಗಳು ಸಮಾಧಾನವನ್ನೊದಗಿಸುತ್ತವೆ.

ಈ ಸಂಕಲನದಲ್ಲಿನ ಮೂವತ್ತನಾಲ್ಕು ಸಂಪ್ರಬಂಧಗಳು ಕರ್ನಾಟಕದ, ಅದರಲ್ಲೂ ವಿಶೇಷವಾಗಿ ಬಸವಪೂರ್ವ ಮತ್ತು ಬಸವೋತ್ತರ ಯುಗದ ಸಾಂಸ್ಕೃತಿಕ  ವಿಚಾರಗಳ ಬಗ್ಗೆ ಮಹತ್ವದ ವಿಚಾರಗಳನ್ನು ಅನಾವರಣಗೊಳಿಸಿರುವುದು ಮಾತ್ರವಲ್ಲದೆ ಹಲವು ಸಂದೇಹಗಳಿಗೆ ಪರಿಹಾರವನ್ನೊದಗಿಸಿವೆ.

ಡಾ.ಬಿ.ಆರ್. ಹಿರೇಮಠರ ನೆನಪು ಮಸಕಾಗುತ್ತಿರುವ ಹೊತ್ತಿನಲ್ಲಿ ಅವರ ಕೆಲವು ಸಂಪ್ರಬಂಧಗಳನ್ನಾದರೂ ಕರ್ನಾಟಕ ಸಂಸ್ಕೃತಿಯ ಸಂಶೋಧಕರಿಗೆ ಸಂಪಾದಿಸಿಕೊಟ್ಟಿರುವ ಸಂಪಾದಕರು ಮತ್ತು ಪ್ರಕಾಶಕರು ಕೃತಜ್ಞತೆಗೆ ಪಾತ್ರರಾಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT