ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಹಿತರಕ್ಷಣೆ ಆಸಕ್ತಿ-ಹಸ್ತಕ್ಷೇಪ ಅಲ್ಲ

Last Updated 2 ಫೆಬ್ರುವರಿ 2011, 12:00 IST
ಅಕ್ಷರ ಗಾತ್ರ

ಮಂಗಳೂರು: ‘ಸಾರ್ವಜನಿಕರ ಹಿತಾಸಕ್ತಿ ಹಾಗೂ ಜನರ ತೆರಿಗೆಯ ಹಣ ಸದ್ಬಳಕೆ ಕುರಿತ ಕಾಳಜಿಯಿಂದ ನಗರಪಾಲಿಕೆಯ ಕೆಲವು ವಿಷಯಗಳಲ್ಲಿ ಗಮನ ಹರಿಸಬೇಕಾಗುತ್ತದೆಯೇ ಹೊರತು ಅದೇನೂ ‘ಹಸ್ತಕ್ಷೇಪ’ ಅಲ್ಲ. ನೀರು ಪೋಲಾಗುವುದನ್ನು ತಡೆಗಟ್ಟಲು ಕೆಲವು ಕಠಿಣ ಕ್ರಮಗಳನ್ನು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಸಮಸ್ಯೆಯಿದ್ದಾಗ ಸದುದ್ದೇಶದಿಂದಲೇ ಪಾಲಿಕೆಯ ಅಧಿಕಾರಿಗಳನ್ನು ಬೇರೆ ಕಡೆ ಕಳುಹಿಸಿದ್ದೇನೆ ಅಷ್ಟೆ’.... ಪಾಲಿಕೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸೋಮವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಮಂಗಳವಾರ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದು ಹೀಗೆ.

‘ನಗರಕ್ಕೆ ತುಂಬೆ ಅಣೆಕಟ್ಟೆಯಿಂದ ನೀರು ಪಂಪ್ ಮಾಡಲಾಗುತ್ತಿದೆ. ನಳ್ಳಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಗೃಹ ಬಳಕೆ ಉದ್ದೇಶಕ್ಕೆ ಎಂದು ಉದ್ಯಮಕ್ಕೆ ನೀರು ಬಳಸಿಕೊಳ್ಳುವ ‘ದೊಡ್ಡ’ ಮನುಷ್ಯರು ನಗರದಲ್ಲಿ ಇದ್ದಾರೆ. ಇಂಥವರ ವಿರುದ್ಧ ಎಫ್‌ಐಆರ್ ದಾಖಲಿಸಿ. ಅಕ್ರಮ ನಳ್ಳಿ ಸಂಪರ್ಕ ಪಡೆದಿದ್ದರೆ ಮನವೊಲಿಸಿ ಸಕ್ರಮ ಮಾಡಿಸಿ. ಈ ಬಗ್ಗೆ ತಪಾಸಣೆ ಮಾಡುವಂತೆ ಸೂಚಿಸಿದ್ದೆ. ಬಹುಶಃ ಈ ಕೆಲಸ ಮಾಡಲು ಪಾಲಿಕೆ ಸಿಬ್ಬಂದಿಗೆ ಆಸಕ್ತಿ ಇಲ್ಲವೊ ಅಥವಾ ಮನಸ್ಸಿಲ್ಲವೊ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಸಾಕಷ್ಟು ಜನ ಲೈಸೆನ್ಸ್ ಇಲ್ಲದೇ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಯಾರು ಅರ್ಹರಿದ್ದಾರೊ ಅವರಿಗೆ ಪರವಾನಿಗೆ ಕೊಡಲಿ. ಯಾರು ಅಕ್ರಮವಾಗಿ ವ್ಯಾಪಾರ-ವಹಿವಾಟು ಮಾಡುತ್ತಿದ್ದಾರೊ, ಅವರಿಗೆ ನೀಡಿದ ನಳ್ಳಿ ಸಂಪರ್ಕ ಮುಲಾಜಿಲ್ಲದೇ ಕಡಿತಗೊಳಿಸಿ ಎಂದು ನಿರ್ದೇಶನ ನೀಡಿದ್ದೆ. ಅದರ ಜಾರಿಗೆ ಕ್ರಮ ಕೈಗೊಳ್ಳುತ್ತಿದ್ದೇನೆ. ನನ್ನ ಈ ಕ್ರಮಗಳಿಂದಲೂ ಪಾಲಿಕೆ ಆಡಳಿತಕ್ಕೆ ಸಮಸ್ಯೆ ಆಗಿದೆಯೇನೊ?’ ಎಂಬ ಪ್ರಶ್ನೆ ಮುಂದಿಟ್ಟರು.

‘ಘನ ತ್ಯಾಜ್ಯ ನಿರ್ವಹಣೆ ನಗರದ ಸಮಸ್ಯೆಯಷ್ಟೇ ಅಲ್ಲ. ಪಟ್ಟಣಗಳಿಗೂ ಪರಿಹಾರ ಅಗತ್ಯವಿದೆ. ಆದರೆ ಅಲ್ಲಿ ಪರಿಸರ ಎಂಜಿನಿಯರ್‌ಗಳು ಇರುವುದಿಲ್ಲ. ಪಾಲಿಕೆಯಲ್ಲಿ ಇರುವ ಅಧಿಕಾರಿಗಳನ್ನು ವಾರಕ್ಕೊಮ್ಮೆ ಸಮಸ್ಯೆಯಿರುವ ಗ್ರಾಮೀಣ ಭಾಗಕ್ಕೆ ಸಾರ್ವಜನಿಕ ಉದ್ದೇಶಕ್ಕಾಗಿ ಕಳುಹಿಸಲಾಗುತ್ತಿದೆ. ಅಲ್ಲಿಯೂ ಕೆಲಸ ಆಗಬೇಕಲ್ಲವೇ?’ ಎಂದು ಹಳ್ಳಿಗಳೆಡೆಗಿನ ತಮ್ಮ ಕಾಳಜಿಯತ್ತ ಗಮನಸೆಳೆದರು.

‘ನಗರ ಅಭಿವೃದ್ಧಿಗೆ ವಿವಿಧ ಯೋಜನೆಗಳು ಬರುತ್ತಿವೆ. ಕೆಲವು ಯೋಜನೆಗಳಿಗೆ ಜಿಲ್ಲಾಧಿಕಾರಿಯಾಗಿ ಸಲಹೆ-ಸೂಚನೆ ನೀಡಬೇಕಾಗುತ್ತದೆ. ಅದು ನನ್ನ ಕರ್ತವ್ಯವೂ ಹೌದು. ರಸ್ತೆ, ಉದ್ಯಾನವನ ಮೊದಲಾದ ಸಾರ್ವಜನಿಕ ಸಮಸ್ಯೆಗಳಿಗೆ ಕೆಲವೊಮ್ಮೆ ತುರ್ತು ಪರಿಹಾರ ಬೇಕಾಗುತ್ತದೆ. ಪಾಲಿಕೆಗೆ ಇವನ್ನು ನಿರ್ವಹಿಸುವುದೂ ಕಷ್ಟ. ಕೆಲವೊಮ್ಮೆ ಅಲ್ಲೂ ಸಿಬ್ಬಂದಿ ಕೊರತೆಯಿರುತ್ತದೆ. ಅದಕ್ಕಾಗಿ ಖಾಸಗಿ ಸಹಭಾಗಿತ್ವ ಪಡೆಯಬೇಕಾಗುತ್ತದೆ. ಉದ್ಯಮಗಳಿಗೆ ‘ಸಾಮಾಜಿಕ ಹೊಣೆಗಾರಿಕೆ’ ಇರುತ್ತದೆ. ಕೆಲವು ಖಾಸಗಿ ಕಂಪೆನಿಗಳು ಅಭಿವೃದ್ಧಿಯಲ್ಲಿ ಕೈಜೋಡಿಸಲು ಮುಂದೆ ಬಂದಿವೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಇದನ್ನು ಪಾಲಿಕೆ ಸದಸ್ಯರು ಅರ್ಥಮಾಡಿಕೊಳ್ಳಬೇಕು’ ಎಂದು ಸುಬೋಧ್ ಯಾದವ್ ಸಮರ್ಥಿಸಿಕೊಂಡರು.

‘ಜಿಲ್ಲಾಧಿಕಾರಿಗಳು ಅಭಿವೃದ್ಧಿಗೆ ಸಂಬಂಧಿಸಿ ಬೇರೆ ಕೆಲವು ಜಿಲ್ಲೆಗಳಲ್ಲೂ ಸಲಹೆ-ಸೂಚನೆ ನೀಡುತ್ತಾರೆ. ಜಿಲ್ಲಾಧಿಕಾರಿ ಹೊಣೆಗಾರಿಕೆ ಬೆರಳೆಣಿಕೆ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಇಡೀ ಜಿಲ್ಲೆ, ಗ್ರಾಮ ಪಂಚಾಯಿತಿ. ನಗರಸಭೆ, ನಗರಪಾಲಿಕೆಯೂ ಅವರ ವ್ಯಾಪ್ತಿಯಲ್ಲೇ ಬರುತ್ತದೆ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಮಾಡುವ ಜವಾಬ್ದಾರಿಯೂ ಇರುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT