ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ರೂ 80 ಲಕ್ಷ ಪಂಗನಾಮ?

ಅರ್ಧ ಬೆಲೆ ಗೃಹೋಪಯೋಗಿ ವಸ್ತುಗಳ ಮಾರಾಟ ಜಾಲ
Last Updated 14 ಡಿಸೆಂಬರ್ 2013, 5:01 IST
ಅಕ್ಷರ ಗಾತ್ರ

ಅಥಣಿ: ಅರ್ಧ ಬೆಲೆಗೆ ಗೃಹ ಬಳಕೆಯ ವಸ್ತುಗಳನ್ನು ನೀಡುವುದಾಗಿ ಹೇಳಿ ಆಂಧ್ರ ಮೂಲದ  ವಂಚಕರ ತಂಡವೊಂದು ಸಾರ್ವಜನಿಕರಿಗೆ ಸುಮಾರು ₨ 80 ಲಕ್ಷ ಹಣ ಪಂಗನಾಮ ಹಾಕಿ ಪರಾರಿಯಾದ ಘಟನೆ ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ನಡೆದಿದೆ.

ಸುಮಾರು 6 ಜನರಿದ್ದ ಈ ತಂಡ ಗ್ರಾಮದ ಲಕ್ಷ್ಮೀ ದೇವಸ್ಥಾನದ ಹತ್ತಿರವಿದ್ದ ವಾಣಿಜ್ಯ ಮಳಿಗೆಯೊಂದರಲ್ಲಿ ಬಾಲಾ ಟ್ರೇಡರ್ಸ್ ಹೆಸರಿನಲ್ಲಿ ಕಳೆದ 20 ದಿನಗಳ ಹಿಂದೆ ತನ್ನ ವಹಿವಾಟು ಆರಂಭಿಸಿತು. ವಸ್ತುವಿನ ಮೂಲ ಬೆಲೆಯ ಅರ್ಧದಷ್ಟು ಹಣ ಸಂದಾಯ ಮಾಡಿದ 12ದಿನಗಳ ನಂತರ ವಸ್ತುಗಳನ್ನು ನೀಡುವುದಾಗಿ ನಂಬಿಸಿದ ತಂಡ ಆರಂಭದಲ್ಲಿ ಚಿಲ್ಲರೆ ವಸ್ತುಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಗಳಿಸಿಕೊಂಡಿತ್ತು. ಆದರೆ ಇಂಥ ತಂಡಗಳ ಕುರಿತು ಅನುಭವವಿದ್ದ ಕೆಲವರು ಈ ವ್ಯವಹಾರದ ಕುರಿತು ಶಂಕೆ ವ್ಯಕ್ತಪಡಿಸಿ ಚಿಕ್ಕೋಡಿ ಉಪವಿಭಾಗಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಡಿ.ವೈ.ಎಸ್.ಪಿ ಎಸ್.ಆರ್. ಪಾಟೀಲ ಸಿ.ಪಿ.ಐ ವಿದ್ಯಾಧರ ಬೈಕೇರಿಕರ ವಿಚಾರಣೆಗಾಗಿ ಟ್ರೇಡರ್ಸ್್ ಮಾಲೀಕ ಬಾಲಚಂದ್ರ ಮತ್ತು ಆತನ ಸಂಗಡಿಗರನ್ನು ವಶಕ್ಕೆ ತೆಗೆದುಕೊಂಡು ಎರಡು ದಿನಗಳ ಕಾಲ ತನಿಖೆ ನಡೆಸಿದ್ದರು. ಆದರೆ ಇದೇ ವೇಳೆ ಪೊಲೀಸ್ ಠಾಣೆಗೆ ಧಾವಿಸಿದ ಹಣ ತುಂಬಿದ ಕೆಲವರು ಇವರ ವ್ಯವಹಾರದ ಕುರಿತು ತಮಗೆ ವಿಶ್ವಾಸವಿರುವುದರಿಂದ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.

ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪೊಲೀಸರು ಈ ತಂಡದ ಸದಸ್ಯರನ್ನು ಬಿಡುಗಡೆ ಮಾಡಿದ್ದರು. ನಂತರ ಪುನಃ ತಮ್ಮ ವಹಿವಾಟು ಆರಂಭಿಸಿದ್ದ ಈ ತಂಡ ಗುರುವಾರದ ಹೊತ್ತಿಗೆ ವಸ್ತುಗಳನ್ನು ನೀಡುವುದಾಗಿ ಹೇಳಿ ಸುಮಾರು ₨ 80 ಲಕ್ಷವರೆಗೆ ಹಣ ಸಂಗ್ರಹಿಸಿತ್ತೆಂದು ತಿಳಿದು ಬಂದಿದೆ.

ಆದರೆ ರಸೀದಿ ಹಿಡಿದು ಅಂಗಡಿಗೆ ಬಂದ ಗ್ರಾಹಕರಿಗೆ ಮುಂಗಟ್ಟು ಮುಚ್ಚಿದ್ದನ್ನು ಕಂಡೊಡನೆ ಆಘಾತ ಕಾದಿತ್ತು. ವಿಚಿತ್ರವೆಂದರೆ ಹಣ ಕಳೆದುಕೊಂಡ ಯಾವುದೇ ಗ್ರಾಹಕರು ಎರಡು ದಿನ ಕಳೆದರೂ ಇದುವರೆಗೆ ಪೊಲೀಸ್ ಠಾಣೆಗೆ ದೂರು ನೀಡಿರುವುದಿಲ್ಲ.

ಚಿಕಿತ್ಸೆಗೆ ಬಂದು ವೈದ್ಯರ ಪರ್ಸ್‌ ಕದ್ದ
ಅಥಣಿ: ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನಗೆ ಉಪಚಾರ ನೀಡಿದ ವೈದ್ಯರ ಪರ್ಸ್‌ನ್ನೇ ಕದ್ದು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. 

ವೈದ್ಯೆ ಆಶಾ ಗಾಡವೆ ಪರ್ಸ್‌ ಕಳೆದುಕೊಂಡವರು. ಅದರಲ್ಲಿ ₨ 2000 ನಗದು, ಎ.ಟಿ.ಎಮ್. ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಇತ್ತು ಎನ್ನಲಾಗಿದೆ. ಆದರೆ ಪರ್ಸ್‌ ಕಳೆದುಕೊಂಡಿರುವ ಕುರಿತು ಪೊಲೀಸರಿಗೆ ದೂರು ನೀಡಲು ವೈದ್ಯರು ಮುಂದಾಗಿಲ್ಲ.

ಆಕಸ್ಮಿಕ ಬೆಂಕಿ: ಮೂರು ಬಣವೆ ಭಸ್ಮ
ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ತುರಕರ ಶೀಗಿಹಳ್ಳಿ ಗ್ರಾಮದ ಹೊಲವೊಂದರಲ್ಲಿ ಒಟ್ಟಲಾಗಿದ್ದ ₨ 5 ಲಕ್ಷ ಅಂದಾಜು ಮೌಲ್ಯದ ಮೂರು ಬಣವೆಗಳು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಕ್ಕು ಭಸ್ಮವಾಗಿವೆ.

ಕಡಸಗಟ್ಟಿ ರಸ್ತೆಯಲ್ಲಿ ಬರುವ ತಮ್ಮ ಜಮೀನಿನಲ್ಲಿ ತುರಕರಶೀಗಿಹಳ್ಳಿ ಗ್ರಾಮದ ಈಶ್ವರ ಸಂಗಪ್ಪ ಮರಿತಮ್ಮನವರ, ಪುಂಡಲೀಕ ಸಂಗಪ್ಪ ಮರಿತಮ್ಮನವರ ಹಾಗೂ ಮಹೇಶ ಶಿವಲಿಂಗಪ್ಪ ಮರಿತಮ್ಮನವರ ಅವರು ಸೋಯಾಅವರೆ, ಗೋವಿನಜೋಳ ಹಾಗೂ ಕಣಿಕೆ ಬಣಿವೆಗಳನ್ನು ಒಟ್ಟಿದ್ದರು. ಶುಕ್ರವಾರ ಮಧ್ಯಾಹ್ನ ಒಂದು ಬಣಿವೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಇನ್ನುಳಿದ ಎರಡೂ ಬಣಿವೆಗಳಿಗೆ ಬೆಂಕಿ ತಗುಲಿಕೊಂಡಿದೆ. ನೋಡಿದ ಪಕ್ಕದಲ್ಲಿದ್ದ ರೈತರು ಬೆಂಕಿ ನಂದಿಸಲು ಧಾವಿಸಿ ಬೆಂಕಿ ನಂದಿಸಲು ಶ್ರಮಿಸಿದರು.

ಬೈಲಹೊಂಗಲದಿಂದ ಅಗ್ನಿ ಶಾಮಕ ದಳದವರನ್ನೂ ಕರೆಸಲಾಯಿತು. ಎಲ್ಲರೂ ಸೇರಿ ಹೆಚ್ಚಿನ ಅವಘಡ ಆಗುವುದನ್ನು ತಪ್ಪಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT