ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಗೆ ಆಗ್ರಹಿಸಿ ರೈತರ ಧರಣಿ

Last Updated 5 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಚಿಂತಾಮಣಿ: ಬರಗಾಲದಿಂದ ಜನತೆ ತತ್ತರಿಸಿದ್ದು ರಾಷ್ಟ್ರೀಯ ಬ್ಯಾಂಕ್ ಹಾಗೂ ಸರ್ಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಬೆಳೆ ನಷ್ಟವನ್ನು ತುಂಬಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸರಿಯಾಗಿ ಮಳೆಯಾಗದೆ ರೈತರು ಸಾಲ ತೀರಿಸಲು ತೊಂದರೆಯಾಗಿದೆ, ಮಳೆ ಇಲ್ಲದೆ ಕೈಗೆ ಬಂದ ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬೇಸಾಯ ಮಾಡಿದ್ದ ರೈತರು ಆತ್ಮಹತ್ಯೆಗೆ ಮಾರುಹೋಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಡಿಸಿದರು.

ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ವೈಜ್ಞಾನಿಕವಾಗಿ ಬೆಳೆ ನಷ್ಟದ ಪರಿಶೀಲನೆ ನಡೆಸುವಂತೆ ಸರ್ಕಾರ ಕೂಡಲೇ ಕೃಷಿ ವಿಜ್ಞಾನಿಗಳಿಗೆ ಸೂಚನೆ ನೀಡಬೇಕು. ಎಕೆರೆಗೆ 25 ರಿಂದ 30 ಸಾವಿರ ರೂಪಾಯಿ ಪರಿಹಾರ ನೀಡಿ, ರೈತರ ಆತ್ಮಹತ್ಯೆ ತಡೆಗಟ್ಟಬೇಕು ಎಂದು ಆಗ್ರಹಪಡಿಸಿದರು.

ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 6 ಗಂಟೆ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವವಾಗಿ 3 ಗಂಟೆಗಳ ಕಾಲವೂ ವಿದ್ಯುತ್ ನೀಡುತ್ತಿಲ್ಲ. ಇದರಿಂದಾಗಿ ನೀರಾವರಿ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ಸರ್ಕಾರವೇ ಹೊರಡಿಸಿರುವ ಆದೇಶದಂತೆ ಕನಿಷ್ಠ 6 ಗಂಟೆಯಾದರೂ ವಿದ್ಯುತ್ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್‌ಗಾಗಿ ಹೊಸ ಲೈನ್‌ಗಳಿಗೆ ಬದಲಾಗಿ ಹಳೆಯ ಲೈನ್‌ಗಳಲ್ಲೇ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಗಳಲ್ಲಿ ಕೂರದೆ, ಗ್ರಾಮಗಳಿಗೆ ಭೇಟಿ ನೀಡಿ ಕೆಲಸ ನಿರ್ವಹಿಸಬೇಕು. ರೈತರ ಪಹಣಿ ಮತ್ತು ಮ್ಯುಟೇಷನ್‌ಗಳಲ್ಲಿ ಹೆಸರು ತಿದ್ದುಪಡಿಗಾಗಿ ವರ್ಷಾನುಗಟ್ಟಲೆ ಅಲೆದಾಡಿಸುತ್ತಾರೆ. ತಾಲ್ಲೂಕು ಕೇಂದ್ರದಲ್ಲಿ ಜನತಾ ನ್ಯಾಯಾಲಯಗಳನ್ನು ನಡೆಸಿ ಸ್ಥಳದಲ್ಲೇ ತಿದ್ದುಪಡಿ ಮಾಡಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ನೆಮ್ಮದಿ ಕೇಂದ್ರಗಳಲ್ಲಿ ವಿದ್ಯುತ್ ತೊಂದರೆಯಿಂದಾಗಿ ಪಹಣಿ ಮತ್ತಿತರ ದಾಖಲೆ ತೆಗೆದುಕೊಳ್ಳಬೇಕಾದರೆ ಹಲವಾರು ಬಾರಿ ಅಲೆದಾಡಬೇಕಾಗಿದೆ. ತಾಲ್ಲೂಕು ಕಚೇರಿಗೆ ಬಂದರೆ ಗಂಟೆಗಟ್ಟಲೆ ಸಾಲುಗಳಲ್ಲಿ ನಿಲ್ಲಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ನೆಮ್ಮದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕೆಲಸ ಮಾಡಬೇಕು, ಮಳೆ-ಬೆಳೆ ಇಲ್ಲದಿರುವುದರಿಂದ ಎಲ್ಲ ರೈತರಿಗೂ ಬಿಪಿಎಲ್ ಕಾರ್ಡ್ ನೀಡಬೇಕು, ರೈತರಿಗೆ ಸುವರ್ಣ ಭೂಮಿ ಯೋಜನೆಯಲ್ಲಿ ಸರ್ಕಾರದಿಂದ ಬರಬೇಕಾದ 2ನೇ ಕಂತಿನ ಹಣವನ್ನು ಪಾವತಿ ಮಾಡಬೇಕು ಮತ್ತಿತರ ಬೇಡಿಕೆಗಳುಳ್ಳ ಮನವಿ ಪತ್ರಗಳನ್ನು ಮುಖ್ಯಮಂತ್ರಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ತಹಶೀಲ್ದಾರ್ ಮೂಲಕ ಸಲ್ಲಿಸಿದರು.

ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ, ಗೌರವಾಧ್ಯಕ್ಷ ವೆಂಕಟಸುಬ್ಬಾರೆಡ್ಡಿ, ಮುಖಂಡರಾದ ಬೈರರೆಡ್ಡಿ, ಎಸ್.ವಿ.ಗಂಗಪ್ಪ, ಬಿ.ಎನ್.ನಾರಾಯಣಸ್ವಾಮಿ, ವಿ.ವೆಂಕಟೇಶಪ್ಪ, ಶ್ರೀರಾಮರೆಡ್ಡಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT