ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿ ಬೇಡ: ಬರಪರಿಹಾರ ಹಣ ಬಿಡುಗಡೆಗೆ ಆಗ್ರಹ

Last Updated 8 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಚಾಮರಾಜನಗರ: `ಬರಪೀಡಿತ ತಾಲ್ಲೂಕುಗಳ ಘೋಷಣೆಯಲ್ಲಿ ವಿಳಂಬ ನೀತಿ ಅನುಸರಿಸಿರುವ ರಾಜ್ಯ ಸರ್ಕಾರ ಇಂದಿಗೂ ಬೆಳೆ ನಷ್ಟದ ಅಂದಾಜುಪಟ್ಟಿ ಸಿದ್ಧಪಡಿಸಿಲ್ಲ. ಹಣ ಬಿಡುಗಡೆ ಮಾಡಲಾಗಿದೆಯೆಂದು ಮುಖ್ಯಮಂತ್ರಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ, ಬರಪೀಡಿತ ಜಿಲ್ಲೆಗಳಿಗೆ ಪರಿಹಾರ ಕಾರ್ಯಕೈಗೊಳ್ಳಲು ಅನುದಾನ ಬಿಡುಗಡೆ ಮಾಡಬೇಕು~ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

`ಬೆಳೆ ನಷ್ಟದ ಅಂದಾಜುಪಟ್ಟಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿಲ್ಲ. ಫಸಲು, ಮೇವು, ಕುಡಿಯುವ ನೀರು ಸೇರಿದಂತೆ ನಷ್ಟದ ಅಂದಾಜು ಮೊತ್ತ ಸಿದ್ಧಪಡಿಸಿಲ್ಲ. ಮುಖ್ಯಮಂತ್ರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬರವೇ ಇಲ್ಲವೆಂಬಂತೆ ಸಚಿವರು ಕಾಲಹರಣ ಮಾಡುತ್ತಿದ್ದಾರೆ~ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಬರಗಾಲದ ಸಮಯದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು. ಆದರೆ, ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು. ಸಾಲದ ಕಂತು ಕಟ್ಟದಿದ್ದರೆ ಹೆಚ್ಚಿನ ಬಡ್ಡಿ ವಿಧಿಸದಂತೆ ಸಹಕಾರ ಸಂಘಗಳು ಹಾಗೂ ಬ್ಯಾಂಕ್‌ಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಬರಪೀಡಿತ ತಾಲ್ಲೂಕುಗಳಲ್ಲಿ ಮೇವು ಘಟಕ ಸ್ಥಾಪಿಸಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದರು.

ಕರಂದ್ಲಾಜೆ ವಿರುದ್ಧ ಟೀಕೆ: ಇಂಧನ ಸಚಿವೆ ಶೋಭಾ ಕರಂದ್ಲಾಜೆಯ ಕಾಲ್ಗುಣವೇ ಸರಿಯಲ್ಲ. ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ವಿದ್ಯುತ್ ಸಮಸ್ಯೆ ಉಲ್ಬಣಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅಧಿಕಾರ ನಡೆಸಿದ ದಿನದಿಂದ ಇಲ್ಲಿಯವರೆಗೆ ಒಂದು ಯೂನಿಟ್ ವಿದ್ಯುತ್ ಕೂಡ ಉತ್ಪಾದನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

`ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯದಿಂದಲೂ ಕಲ್ಲಿದ್ದಲು ಪೂರೈಕೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆದರೆ, ತೆಲಂಗಾಣ ಸಮಸ್ಯೆ ಮುಂದಿಟ್ಟುಕೊಂಡು ನಾಟಕವಾಡುತ್ತಿದ್ದಾರೆ. ಇದರ ಹಿಂದೆ ಕಮಿಶನ್ ಹುನ್ನಾರವಿದೆ. ಬೇರೆಯವರಿಂದ ವಿದ್ಯುತ್ ಖರೀದಿ ಮಾಡಿದರೆ ಮಾತ್ರವೇ ಅವರಿಗೆ ಕಮಿಶನ್ ಸಿಗುತ್ತದೆ. ಹೀಗಾಗಿ, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ~ ಎಂದು ದೂರಿದರು.

ವಿದ್ಯುತ್ ಸರಬರಾಜು ಕಂಪೆನಿಗಳಿಗೆ ರಾಜ್ಯ ಸರ್ಕಾರ 12 ಸಾವಿರ ಕೋಟಿ ರೂ ಬಾಕಿ ನೀಡಬೇಕಿದೆ. ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ, ಕಂಪೆನಿಗಳು ವಿದ್ಯುತ್ ಉತ್ಪಾದನೆಗೆ ಮುಂದಾಗಿಲ್ಲ. ಇಂದಿಗೂ ಸೋರಿಕೆ ತಡೆಗಟ್ಟಲು ಕ್ರಮಕೈಗೊಂಡಿಲ್ಲ. ಜತೆಗೆ, ವಿದ್ಯುತ್ ನಿರ್ವಹಣೆಯ ಲೆಕ್ಕಪತ್ರದ ತಪಾಸಣೆ ನಡೆದಿಲ್ಲ ಎಂದರು.

ರಾಜ್ಯಕ್ಕೆ ಕೇಂದ್ರದ ಪಾಲಿನ ವಿದ್ಯುತ್ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ವಿದ್ಯುತ್ ಸಚಿವರೊಂದಿಗೆ ಚರ್ಚಿಸಿದ್ದೇನೆ. ಕೇಂದ್ರ ಸರ್ಕಾರ ರಾಜ್ಯದ ಪಾಲು ನೀಡುತ್ತಿಲ್ಲವೆಂಬುದು ಶುದ್ಧ ಸುಳ್ಳು. ಈ ಬಗ್ಗೆ ಬಿಜೆಪಿಯ ಸಂಸದರು ಏಕೆ ಪ್ರಶ್ನಿಸುತ್ತಿಲ್ಲ? ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಎಸ್. ಮಹದೇವಪ್ರಸಾದ್, ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ, ತಾ.ಪಂ. ಅಧ್ಯಕ್ಷೆ ಪದ್ಮಾ ಚಂದ್ರು ಇತರರು ಹಾಜರಿದ್ದರು.

ಭೇಟಿ: ಸಿದ್ದರಾಮಯ್ಯ ಅವರು ತಾಲ್ಲೂಕಿನ ಮುಕ್ಕಡಹಳ್ಳಿ, ಕಾಳನಹುಂಡಿ, ಕಲ್ಪುರ ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು. ರೈತರ ಅಹವಾಲು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT