ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಸುಳಿ ಮುಕ್ತಿ ಹೇಗೆ?

ಬಿಬಿಎಂಪಿ ಬೇಗುದಿ
Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರನ್ನು ಸಿಂಗಪುರದಂತೆ ಸುಂದರ  ನಗರ ಮಾಡುವ  ಕನಸು ಬಿತ್ತಿದ ಜನ­ಪ್ರತಿ­ನಿಧಿ­ಗಳು ಕೊನೆಗೆ ನಗರವನ್ನು ದಿವಾಳಿ ಅಂಚಿಗೆ ತಂದು ಸಾಲದ ನಗರವನ್ನಾಗಿ ಮಾಡಿದ್ದಾರೆ.

ಸಾಲದ ಸುಳಿಗೆ ಸಿಕ್ಕು ದಿವಾಳಿ ಅಂಚಿಗೆ ತಲುಪಿರುವ ಬಿಬಿಎಂಪಿ,  ಸಾಲ ತೀರಿಸಲು ಬೆಂಗಳೂರು ನಗರವನ್ನು ಮಾರಾಟ ಮಾಡಲು ಹೊರಟಿದೆ. ನಗರದ ಐತಿಹಾಸಿಕ ಕಟ್ಟಡಗಳನ್ನು ಅಡವಿಟ್ಟು ಸಾಲ ತರಲು  ಮುಂದಾಗಿದೆ.  ನಗರದ ಸೌಂದರ್ಯಕ್ಕೆ ಮುಕುಟ ಪ್ರಾಯದಂತಿ­ರುವ ಸರ್‌ ಪುಟ್ಟಣ್ಣ ಚೆಟ್ಟಿ ಪುರಭವನವನ್ನು  ಒತ್ತೆ ಇಟ್ಟು ಸಾಲ ಎತ್ತಲು ಬಿಬಿಎಂಪಿ  ಮುಂದಾಗಿತ್ತು.  ಈ ಕ್ರಮಕ್ಕೆ ಭಾರಿ ಪ್ರತಿರೋಧ ವ್ಯಕ್ತವಾದ ಕಾರಣ ಕೊನೆಯ ಕ್ಷಣದಲ್ಲಿ ಅದು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

ಆದರೂ, ಈಗಾಗಲೇ ಅದು ಕಟ್ಟಡಗಳನ್ನು  ಅಡವಿಟ್ಟು ರೂ1,750  ಕೋಟಿ ಸಾಲ ಪಡೆದಿದೆ. ಇದಕ್ಕಿಂತ ಬೆಚ್ಚಿ ಬೀಳಿಸುವ ಮತ್ತೊಂದು ಅಂಶ­ವೆಂದರೆ ₨3,600 ಕೋಟಿ ಸಾಲಹೊರೆಯಿಂದ ನಲಗುತ್ತಿರುವ ಬಿಬಿಎಂಪಿ ಪ್ರತಿನಿತ್ಯ ರೂ20 ಲಕ್ಷ ಬಡ್ಡಿ ಪಾವತಿಸುತ್ತಿದೆ.

ಮಹಾನಗರ ಪಾಲಿಕೆ ಕೇವಲ ತಾನೊಂದೇ  ಸಾಲದ ಶೂಲಕ್ಕೆ ಸಿಲುಕಿಲ್ಲ. ತನ್ನನ್ನು ನಂಬಿದ ಇತರ­ರನ್ನೂ ಸಮಸ್ಯೆ ಸುಳಿಗೆ ನೂಕಿದೆ. ಇತ್ತೀಚೆಗೆ ನಡೆದ ಬಿಬಿಎಂಪಿ ಗುತ್ತಿಗೆದಾರ ಎಸ್‌.ಆರ್‌. ಗಿರೀಶ್ ಆತ್ಮಹತ್ಯೆ ಪ್ರಕರಣ ಇದಕ್ಕೆ ತಾಜಾ ನಿದರ್ಶನ.

ಬಿಬಿಎಂಪಿಯ ಅಭಿವೃದ್ಧಿ ಕಾಮಗಾರಿ ಕೈಗೊಂಡ ಸುಮಾರು ಮೂರು ಸಾವಿರ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಹಣ ಕೈಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸುಮಾರು ರೂ1,600 ಕೋಟಿಯನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ.

74ನೇ ತಿದ್ದುಪಡಿ ಅಡಿ ಬಿಬಿಎಂಪಿ ಮಾಡಬೇಕಾದ ಎಲ್ಲ 18 ಕರ್ತವ್ಯಗಳಿಗೆ ಬೇಕಾದ ಅಗತ್ಯ ಅನುದಾನ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗ ಗ­ಳಿಂದ  ಸಿಗುತ್ತಿಲ್ಲ ಎನ್ನುವ ಆರೋಪದಲ್ಲಿ ಎರಡು ಮಾತಿಲ್ಲ. ಸಿಗುತ್ತಿರುವ ಅಲ್ಪ ಅನುದಾನ ಮತ್ತು ಈಗಿರುವ ಹಣಕಾಸಿನ ಮಿತಿಯಲ್ಲಿ ಬಿಬಿಎಂಪಿಗೆ ಬೃಹದಾಕಾರ­ವಾಗಿ ಬೆಳೆಯುತ್ತಿರುವ ಬೆಂಗಳೂರಿ­ನಂತಹ ಮಹಾನ­ಗರದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. 2012–13ರ ಬಜೆಟ್‌ನಲ್ಲಿ  ಈ ಸಂಸ್ಥೆಗಳಿಂದ ಕೇವಲ ರೂ800 ಕೋಟಿ ಅನುದಾನ ನೀಡಲಾಗಿದ್ದು, ಇದು ‘ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ. ಸಂಪನ್ಮೂಲ­ಗಳನ್ನು ಕ್ರೋಡೀ­ಕ­ರಿಸುವ ಕೆಲಸವನ್ನಾ­ದರೂ ಪಾಲಿಕೆ ಮಾಡುತ್ತಿ­ದೆಯೇ? ಇಲ್ಲ.  ಬದಲಾಗಿ ಕಟ್ಟಡಗಳನ್ನು ಅಡವಿಟ್ಟು ಸಾಲ ತರುವ ಸುಲಭದ ದಾರಿ ಕಂಡುಕೊಂಡಿದೆ.

ಜಾನ್ಸನ್‌ ಮಾರುಕಟ್ಟೆಯನ್ನು ರೂ250 ಕೋಟಿಗೆ ಒತ್ತೆ ಇಡುವ ಬದಲು ಆಂತರಿಕ ಲೆಕ್ಕ­ಪರಿಶೋಧನಾ ವರದಿಯ ಶಿಫಾರಸಿನಂತೆ ಭ್ರಷ್ಟ ಅಧಿಕಾರಿ­ಗಳಿಂದ ರೂ300 ಕೋಟಿ  ವಸೂಲಿ ಮಾಡಬಹುದಿತ್ತು. ನಗರ­ದಲ್ಲಿರುವ ತನ್ನ ಒಟ್ಟು 16 ಲಕ್ಷ ಆಸ್ತಿಗಳನ್ನು ಗಣಕೀ­ಕರಣಗೊಳಿಸಿ ಅವನ್ನು ಆದಾಯ ತೆರಿಗೆ ಜಾಲದ ವ್ಯಾಪ್ತಿಗೆ ತರಲು ಬಿಬಿಎಂಪಿಗೆ ಎಷ್ಟು ದಶಕಗಳು ಬೇಕು?

ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ  ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮತ್ತು ಇನ್ನಿತರ ಖಾಸಗಿ ಸಂಸ್ಥೆಗಳಿಂದ ಬಾಕಿ   ವಸೂಲಿ ಮಾಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂಬುದು ಪ್ರಶ್ನೆ.

ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಮೂಲಸೌಕರ್ಯ ಮತ್ತು ತಡೆರಹಿತ ಸಂಚಾರಕ್ಕಾಗಿ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಬೇಕು ಎಂದು ಬೊಬ್ಬೆ ಹೊಡೆಯುವ ಈ ಕಂಪೆನಿಗಳು ತಾವು ಮಾತ್ರ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆಯನ್ನು ಸಕಾಲಕ್ಕೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ.

ಅದೇ ರೀತಿ ಇಂಚಿಂಚೂ ಖಾಲಿ ಜಾಗದಲ್ಲೂ ನಾಯಿ ಕೊಡೆಗಳಂತೆ ತಲೆ ಎತ್ತಿ ನಿಂತಿರುವ ಬೃಹತ್‌ ಜಾಹೀರಾತು ಫಲಕಗಳು ನಗರದ ಅಂದಗೆಡಸಿ­ವೆಯೇ ಹೊರತು ತೆರಿಗೆ ನೀಡುತ್ತಿಲ್ಲ. ನಗರದಲ್ಲಿ ವಿವಿಧ ವಾಣಿಜ್ಯವಹಿವಾಟು, ಕೈಗಾರಿಕೋದ್ಯಮ ಗಳಿಗೆ ಬಿಬಿಎಂಪಿ ವಿತರಿಸಿರುವುದು ಕೇವಲ 57 ಸಾವಿರ ಪರವಾನಗಿಯಾದರೂ ಕಾರ್ಯ­­ನಿರ್ವಹಿ ಸುತ್ತಿರುವುದು ಆರು ಲಕ್ಷಕ್ಕೂ ಹೆಚ್ಚು ವಾಣಿಜ್ಯ ಸಂಸ್ಥೆಗಳು. ಹೀಗಾಗಿ ವಾಣಿಜ್ಯ ಕ್ಷೇತ್ರದಿಂದ ಬರಬೇಕಾಗಿದ್ದ ₨100 ಕೋಟಿ ಆದಾಯದ ಬದಲು ಕೇವಲ ರೂ18 ಕೋಟಿ ತೆರಿಗೆ ಬರುತ್ತಿದೆ. ಬಹುತೇಕ ಆದಾಯ ಇದೇ ರೀತಿ ಸೋರಿಕೆಯಾಗುತ್ತಿದೆ.

ಆಸ್ತಿ ತೆರಿಗೆ, ವಿದ್ಯುತ್‌, ನೀರಿನ ಶುಲ್ಕ ಮುಂತಾ­ದವು­ಗಳನ್ನು ಸಂಗ್ರಹಿಸಲು ವಿಫಲವಾದ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅನುದಾನದ ಶೇ 60ರಷ್ಟನ್ನು ರಾಜ್ಯ ಸರ್ಕಾರವೇ ತಡೆಹಿಡಿಯುತ್ತದೆ. ಅದೇ ರೀತಿ ಬಿಬಿಎಂಪಿಯ ಅನುದಾನವನ್ನು ರಾಜ್ಯ ಸರ್ಕಾರ ತಡೆಹಿಡಿದಲ್ಲಿ ಪರಿಸ್ಥಿತಿ ಮತ್ತಷ್ಟು ಅಧೋಗತಿಗೆ ತಲುಪುತ್ತಿತ್ತು ಅಲ್ಲವೆ? 

ಬಿಬಿಎಂಪಿಯ ಅವೈಜ್ಞಾನಿಕ ಬಜೆಟ್‌, ಹಣಕಾಸು ಅವ್ಯವಹಾರ ಮತ್ತು ಜೆ–ನರ್ಮ್‌ ಯೋಜನೆಯಲ್ಲಿ ನಡೆದ ಅಕ್ರಮಗಳನ್ನು ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.  ಬಿಬಿಎಂಪಿಯಲ್ಲಿ ‘ಫಂಡ್ ಬೇಸ್ಡ್ ಅಕೌಂಟಿಂಗ್ ಸಿಸ್ಟಂ’ ವ್ಯವಸ್ಥೆ ಇದ್ದಾಗಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗುತ್ತದೆ. ಇಂದಿನ ಈ ಶೋಚನೀಯ ಸ್ಥಿತಿಗೆ ಅವಾಸ್ತವಿಕ ಮತ್ತು ಅವೈಜ್ಞಾನಿಕ ಬಜೆಟ್‌ ಕೂಡ ಮುಖ್ಯ ಕಾರಣ.

ಆಸ್ತಿತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಬಿಬಿಎಂಪಿ ಮೂರು ಸಾವಿರ ಕೋಟಿ ರೂಪಾಯಿ ನಿಗದಿತ ಆದಾಯ ಹೊಂದಿದೆ.  ಆರ್ಥಿಕ ತಜ್ಞರ ಸಲಹೆಗಳ ಹೊರತಾಗಿಯೂ ಅದು ಪ್ರತಿವರ್ಷ ರೂ8,500 ಕೋಟಿ  ವೆಚ್ಚದ ಅವಾಸ್ತವಿಕ ಬಜೆಟ್‌ ತಯಾರಿಸುತ್ತದೆ.    ಬಜೆಟ್‌ ಸಿದ್ಧಪಡಿಸುವಲ್ಲಿಯೂ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತದೆ. ಕರ್ನಾಟಕ ಸ್ಥಳೀಯ ಸಂಸ್ಥೆಗಳ ಅನುದಾನ  ಸಂಸ್ಥೆಗಳ ಆರ್ಥಿಕ ಹೊಣೆಗಾರಿಕೆ ಕಾಯ್ದೆ 2003ರ ಅನ್ವಯ ಬಿಬಿಎಂಪಿ ಪ್ರತಿವರ್ಷ ಬಜೆಟ್‌ ಸಿದ್ಧಪಡಿಸುವ ಮುನ್ನ ನಾಗರಿಕ ಸಂಘ, ಸಂಸ್ಥೆಗಳ ಜೊತೆ ಕನಿಷ್ಠ ಎರಡು ಸಭೆಯನ್ನಾದರೂ ನಡೆಸಿ ಸಲಹೆ ಪಡೆಯಬೇಕು. ಆದರೆ, ಇದು  ಉಲ್ಲಂಘನೆಯಾಗುತ್ತಿದೆ. ಆದ್ಯತೆ ಗಳನ್ನು ಗುರುತಿಸಿಕೊಳ್ಳಲು ಪ್ರತಿ ವರ್ಷ ಬಜೆಟ್‌ ಪೂರ್ವ ಪತ್ರ ಸಿದ್ಧಪಡಿಸಿ ಅಂದಾಜು ವೆಚ್ಚ ಮತ್ತು ಆರ್ಥಿಕ   ಸುಧಾರಣಾ ಕ್ರಮ ನಮೂದಿಸ ಬೇಕು.

2008–09ರಲ್ಲಿ ಮಾತ್ರ ಈ ಸಂಪ್ರದಾಯ ಪಾಲಿಸಲಾಗಿತ್ತು. ಮಧ್ಯಂತರ ಅವಧಿಯ ಆರ್ಥಿಕ ಯೋಜನೆ, ಆದಾಯ ಕೊರತೆ, ನಿಗದಿತ ಗುರಿ, ವೈಫಲ್ಯ ಮತ್ತು ಅದಕ್ಕೆ ಕಾರಣಗಳ ಕುರಿತಾದ ವಿಸ್ತೃತ ಕಾರ್ಯಪಾಲನಾ ವರದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.  ಪ್ರಸಕ್ತ ವರ್ಷ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಈ ಎರಡನ್ನೂ   ಪ್ರಕಟಿಸಿಲ್ಲ. 2008-–-09ರ ವರದಿಯೂ ಮಾಯವಾಗಿದೆ. ಒಂದು ವೇಳೆ ಮಹಾನಗರ ಪಾಲಿಕೆಯ ಆಡಳಿತ ಪಾರದರ್ಶಕವಾಗಿರುವುದು ಸತ್ಯವಾದರೆ ಜನರ ತೆರಿಗೆ ಹಣದ ಖರ್ಚು, ವೆಚ್ಚಗಳ ವಿವರಗಳನ್ನು ಬಹಿರಂಗಪಡಿಸುವುದು ಅದರ  ಧರ್ಮ.

(ಲೇಖಕಿ: ಬೆಂಗಳೂರು ಸಿವಿಕ್‌ ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT