ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದು ಅಭಿವೃದ್ಧಿಯ `ಅಭಯ'

Last Updated 13 ಏಪ್ರಿಲ್ 2013, 8:21 IST
ಅಕ್ಷರ ಗಾತ್ರ

ಮೂಡುಬಿದಿರೆ: ಬೈಪಾಸ್ ರಸ್ತೆ, ಮೂಡುಬಿದಿರೆ ಹಾಗೂ ಮುಲ್ಕಿಗೆ ಪ್ರತ್ಯೇಕ ಒಳಚರಂಡಿ ಯೋಜನೆ, ಪುರಸಭೆ ಮಾರುಕಟ್ಟೆ, ಸರ್ಕಾರಿ ಕಾಲೇಜು, ಬಜ್ಪೆಗೆ ತ್ಯಾಜ್ಯ ನಿರ್ವಹಣಾ ಘಟಕ....

- ಮೂಡುಬಿದಿರೆ ವಿಧಾನಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ, ವಿರೋಧ ಪಕ್ಷದ  ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಕೆ.ಅಭಯಚಂದ್ರ ಜೈನ್ ಅವರ ಕ್ಷೇತ್ರದಲ್ಲಿ ಕಾಡುತ್ತಿರುವ ದೀರ್ಘಾವಧಿ ಸಮಸ್ಯೆಗಳಿವು. ಇವುಗಳ ಪರಿಹಾರಕ್ಕೆ ಅವರು ತೋರಿದ ಸ್ಪಂದನೆ ಅಷ್ಟೇನೂ ಪರಿಣಾಮಕಾರಿಯಾಗಿ ಇರದೆ ಅವಿನ್ನೂ ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ವಿರೋಧಿ ರಾಜಕಾರಣಿಗಳಿಗೆ ಚುನಾವಣೆ ಅಸ್ತ್ರವಾಗಿ ಪರಿಣಮಿಸಿವೆ.

1983, 1985 ಮತ್ತು 1994ರ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದು ಅಮರನಾಥ ಶೆಟ್ಟಿ ಶಾಸಕರಾಗಿದ್ದರು. ನಂತರದ ಮೂರು ಚುನಾವಣೆಗಳಲ್ಲೂ ಮತದಾರರು ಯುವ ನಾಯಕ ಅಭಯಚಂದ್ರ ಜೈನ್ ಪರ ಒಲವು ವ್ಯಕ್ತಪಡಿಸಿದರು. ಕಾಂಗ್ರೆಸ್ ಕೋಟೆ ಭದ್ರವಾಗುತ್ತ ಬಂತು. ಅಭಯಚಂದ್ರ ಜೈನ್, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ಅವರು ಸುದೀರ್ಘ ಅವಧಿಯಿಂದ ಕ್ಷೇತ್ರದ ಸಂಪರ್ಕದಲ್ಲಿರುವ ನಾಯಕರೆನಿಸಿಕೊಂಡಿದ್ದಾರೆ. ಇಷ್ಟಾದರೂ, ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ ಎಂಬ ಮಾತು ಇದೆ. ಇದೀಗ ಹೊಸ ತಾಲ್ಲೂಕು ಘೋಷಣೆ ಆಗಿದೆ, ಆದರೆ ಅಭಿವೃದ್ಧಿಯಲ್ಲಿ ಮಾತ್ರ ಬಹಳಷ್ಟು ಹಿಂದೆ ಉಳಿದಿದೆ.

ಇತರ ಕಡೆಗಳಿಗೆ ಹೋಲಿಸಿದರೆ ಕ್ಷೇತ್ರದ ಪ್ರಮುಖ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಚೆನ್ನಾಗಿದೆ. `ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಲ್ಲಿ ಮೂಲ್ಕಿ ಮೂಡು ಬಿದಿರೆಯ ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾಗಿವೆ. ಆದರೆ ದೀರ್ಘಾವಧಿ ಸಮಸ್ಯೆಗಳಾದ ಬೈಪಾಸ್ ರಸ್ತೆ, ಒಳಚರಂಡಿ, ಮಾರುಕಟ್ಟೆಗೆ ಇನ್ನೂ ಮೋಕ್ಷ ಸಿಕ್ಕಿಲ್ಲ. ಸುಮಾರು 30 ಸಾವಿರದಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಆಗಿ ಪಟ್ಟಣದಲ್ಲಿ ನೆಲೆಸಿದ್ದಾರೆ. ಜತೆಗೆ ನಗರದಲ್ಲಿ ಅನೇಕ ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಮನೆಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಆದರೂ ಇಲ್ಲಿಗೆ ಒಳಚರಂಡಿ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಸುಮಾರು 60 ಕೋಟಿ ವೆಚ್ಚದ ಈ ಯೋಜನೆಗೆ ಈಚೆಗಷ್ಟೆ ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ಹತ್ತಿರದ ಮೂಲ್ಕಿಗೂ ಕೂಡ ಒಳಚರಂಡಿ ಸಮಸ್ಯೆ ಕಾಡುತ್ತಿದೆ. 2006ರಲ್ಲಿ ಮೂಡುಬಿದಿರೆಗೆ ಬಂದ ಒಳರಂಡಿ ಯೋಜನೆಯನ್ನು ಬಂಟ್ವಾಳದ ಬಿಜೆಪಿ ಸಚಿವರು ತಮ್ಮ ಕ್ಷೇತ್ರಕ್ಕೆ ಹಸ್ತಾಂತರಿಸಿಕೊಂಡಿದ್ದರು ಎಂಬುದು ಅಭಯಚಂದ್ರ ಅವರ ಆರೋಪ. ಮೂಲ್ಕಿಯಲ್ಲಿ ಕುಡಿಯುವ ನೀರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಜ್ಪೆ ಗ್ರಾ.ಪಂ ವ್ಯಾಪ್ತಿಯಲ್ಲಿ ಡ್ರೈನೇಜ್ ಸಮಸ್ಯೆ ಇದೆ.

ಕಾಲೇಜಿಗೆ ಬೇಡಿಕೆ: ಮೂಡುಬಿದಿರೆ ನಗರವನ್ನು ಕೇಂದ್ರೀಕರಿಸಿ ಸರ್ಕಾರಿ ಜೂನಿಯರ್ ಮತ್ತು ಪದವಿ ಕಾಲೇಜಿನ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಅದಿನ್ನೂ ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಕಡಿಮೆ ಎನ್ನುವ ಮಾತಿದೆ. ಬಡವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ದುಬಾರಿ ಶುಲ್ಕ ತೆತ್ತು ಖಾಸಗಿ ಕಾಲೇಜುಗಳನ್ನೇ ಆಶ್ರಯಿಸಬೇಕಾಗಿದೆ.

ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಬೃಹತ್ ಉಷ್ಣವಿದ್ಯುತ್ ಸ್ಥಾವರದ ಬಗ್ಗೆ ಶಾಸಕ ಅಭಯಚಂದ್ರ, ಸಂಸದ್ ಸದಸ್ಯ ನಳಿನ್ ಕುಮಾರ್ ಕಟೀಲು ತಮಗೆ ಮಾಹಿತಿಯೇ ಇಲ್ಲ ಎಂದಿರುವುದನ್ನು ಜನತೆ ಪೂರ್ಣವಾಗಿ ನಂಬಿಲ್ಲ. ಈ ಯೋಜನೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ `ಕೂಸು' ಎಂದಿರುವ ಅಭಯಚಂದ್ರ ಇದರ ವಿರುದ್ಧ  ಸರ್ಕಾರಕ್ಕೆ ಆಕ್ಷೇಪ ಸಲ್ಲಿಸಿದ್ದೇನೆ ಎಂದಿದ್ದಾರೆ.

ಅಭಿವೃದ್ಧಿ: ಬಜ್ಪೆ ಮಳವೂರಿನಲ್ಲಿ ಕುಡಿಯುವ ನೀರಿನ ವೆಂಟೆಡ್ ಡ್ಯಾಮ್, ಮೂಡುಬಿದಿರೆಗೆ ನ್ಯಾಯಾಲಯ ಕಟ್ಟಡ, ಮೂಡುಬಿದಿರೆ ಪೊಲೀಸ್ ಠಾಣೆಯನ್ನು ಕಮಿಷನರೇಟ್ ವ್ಯಾಪ್ತಿಗೆ ಸೇರಿಸಿರುವುದು, ನಗರದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಆಯ್ದ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ, ಸ್ವರಾಜ್ ಮೈದಾನವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಕಾಯಕಲ್ಪ ನೀಡಿರುವುದು, ಕರಿಂಜೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಪ್ರಗತಿಯಲ್ಲಿ ಇವು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳು.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರ
ಜನರ ಅಗತ್ಯಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ನನ್ನ ಕೆಲ ಪ್ರಮುಖ ಯೋಜನೆಗಳ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿಲ್ಲ. ಬೈಪಾಸ್ ರಸ್ತೆಯ ಅನುಕೂಲಕ್ಕೆಂದು ಸ್ವರಾಜ್ ಮೈದಾನ ಬಳಿ ರಿಂಗ್ ರೋಡ್ ಅಭಿವೃದ್ಧಿಗೆ ಕಳುಹಿಸಿದ 5 ಕೋಟಿ ರೂಪಾಯಿಯ ಪ್ರಸ್ತಾವನೆ ಸರ್ಕಾರದ ನಿರಾಸಕ್ತಿಯಿಂದ ನೆನೆಗುದಿಗೆ ಬಿದ್ದಿದೆ.
ಶಾಸಕ ಅಭಯಚಂದ್ರ ಜೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT