ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಗಿಡಗಳ ಗೌಡೇಗೌಡ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

`ಸಾಲುಮರ' ಎಂದಾಕ್ಷಣ ತಿಮ್ಮಕ್ಕ ನೆನಪಾಗುತ್ತಾರೆ. ಆದರೆ ತಿಮ್ಮಕ್ಕರಂತೆಯೇ ಪರಿಸರಕ್ಕಾಗಿ ಜೀವವನ್ನೇ ಮುಡುಪಿಟ್ಟರೂ ಅಜ್ಞಾತವಾಗಿ ಉಳಿದು ಪರಿಸರದಲ್ಲಿಯೇ ಲೀನವಾಗಿರುವ ಪರಿಸರವಾದಿ ಗೌಡೇಗೌಡರ ಕಥೆಯಿದು.1964ರಲ್ಲಿ ಅಂದಿನ ಮೈಸೂರು ಸರ್ಕಾರದಿಂದ ಸಾಲು ಮರಗಳ ಹಕ್ಕಿನ ಸನ್ನದು ಪಡೆದು ಪರಿಸರ ಸಂರಕ್ಷಿಸಿ ಜೀವನದ ಅಂತ್ಯದವರೆಗೂ ಎಲೆಮರೆ ಕಾಯಿಯಾಗಿಯೇ ಬದುಕಿದವರು ಇವರು.

ಊರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರು. ಇವರು ಇಂದು ದೈಹಿಕವಾಗಿ ಇಲ್ಲದಿದ್ದರೂ, ತಮ್ಮ ಸತ್ಕಾರ್ಯದ ಮೂಲಕ ಜೀವಂತವಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಾಟಿದ ಸಸಿಗಳೀಗ ಮರಗಳಾಗಿ ತಂಗಾಳಿ ಬೀಸುತ್ತಿವೆ. ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ-ಶಂಭೂನಹಳ್ಳಿ ಗ್ರಾಮಕ್ಕೆ ಹಾದುಹೋಗುವ ರಸ್ತೆಯ ಮೂರು ಮತ್ತು ನಾಲ್ಕನೇ ಮೈಲಿಯ ಎರಡೂ ಕಡೆಗಳಲ್ಲಿ ನೂರಾರು ಮರಗಳೀಗ ಬೃಹದಾಕಾರವಾಗಿ ಬೆಳೆದಿವೆ. ಗೌಡರ ಕುಟುಂಬದ ಸದಸ್ಯರೇ ಈಗಲೂ ಮರಗಳ ಪಾಲನೆ-ಪೋಷಣೆ ಮಾಡುತ್ತಿದ್ದಾರೆ.

ಪ್ರೇರಣೆ ಏನು?
1962ನೇ ಇಸವಿ. ಗೌಡೇಗೌಡರು ಸುಂಕಾತೊಣ್ಣೂರು ಗ್ರಾಮದ ಅಧ್ಯಕ್ಷರಾಗಿದ್ದರು. ಸಾರಿಗೆ ಸೌಕರ್ಯ ಇಲ್ಲದ ಕಾರಣ ಜನರು ಗ್ರಾಮದಿಂದ ಪಾಂಡವಪುರಕ್ಕೆ ಹೋಗಲು ಬೇವಿನಕುಪ್ಪೆ ಬಳಿಯ ರಸ್ತೆವರೆಗೂ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು.

ಪಾಂಡವಪುರದಲ್ಲಿನ ಸಂತೆಗೆ ಬರುತ್ತಿದ್ದ ಸುತ್ತಲಿನ ಗ್ರಾಮಗಳ ಜನರು ವಸ್ತುಗಳನ್ನು ಹೆಗಲ ಮೇಲೆ ಹೊತ್ತು ಬರುತ್ತಿದ್ದರು. ರಸ್ತೆ ಆಸುಪಾಸಿನಲ್ಲಿ ಮರಗಳಿರಲಿಲ್ಲ. ನೆತ್ತಿಯ ಮೇಲೆ ಸುಡು ಬಿಸಿಲು. ಬೇಗನೆ ಬಸವಳಿದು ರಸ್ತೆ ಬದಿಯಲ್ಲೇ ಕೂರುತ್ತಿದ್ದರು. ನಿತ್ಯವೂ ಕಾಣುತ್ತಿದ್ದ ಈ ದೃಶ್ಯಗಳು ಗೌಡರ ಮನಕಲಕಿದವು. ಆಗ ಗೌಡರು, ಈ ಮಾರ್ಗದ ಮಧ್ಯೆ ಗಿಡಗಳನ್ನು ನೆಡುವ ನಿರ್ಧಾರ ಮಾಡಿದರು.

ಸುಮಾರು 4 ಕಿ.ಮೀ. ದೂರದವರೆಗೆ ಆಲ, ಬಸರಿ, ಗೋಣಿ, ಹಿಪ್ಪೆ, ಬುಗುರಿ... ಹೀಗೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಜಾನುವಾರುಗಳ ಬಾಯಿಗೆ ಗಿಡಗಳು ತುತ್ತಾಗದಂತೆ ರಕ್ಷಿಸಲು ಪ್ರತಿ ಗಿಡಗಳಿಗೆ ಮುಳ್ಳಿನ ಬೇಲಿ ಕಟ್ಟಿದರು. ಎತ್ತಿನಗಾಡಿ ಮೂಲಕ ತಂದ ನೀರಿನ ಟ್ಯಾಂಕ್‌ನಿಂದ ಗಿಡಗಳಿಗೆ ನೀರು ಹಾಕಿದರು.

ದಿನಗಳು ಉರುಳಿದಂತೆ ಗಿಡಗಳು ಬೆಳೆದವು. ಗೌಡರ ಸೇವಾ ನಿಸ್ಪೃಹತೆ, ಪರಿಸರ ಪ್ರೇಮ ಸುತ್ತಲೂ ಪಸರಿಸಿತು. ಇದು ಮೈಸೂರು ಸರ್ಕಾರದ ಕಿವಿಗೂ ಬಿತ್ತು. ಪರಿಣಾಮ, ಸಾಲು ಮರಗಳ ಹಕ್ಕಿನ ಸನ್ನದು ಸಿಕ್ಕಿತ್ತು. ಗಿಡ ನಾಟುವುದಕ್ಕಷ್ಟೇ ಸೀಮಿತಗೊಳ್ಳದ ಗೌಡರು, ಜನರಿಗೆ ಅನುಕೂಲವಾಗಲೆಂದು ರಸ್ತೆ ಅಂಚಿನ ಅಲ್ಲಲ್ಲಿ ಕಲ್ಲು ಚಪ್ಪಡಿಯನ್ನೂ ಹಾಸಿದರು. ಇದೆಕ್ಕೆಲ್ಲಾ ತಗುಲಿದ ವೆಚ್ಚವನ್ನು ತಾವೇ ಭರಿಸಿದರು.

ಗೌಡರು ನಾಟಿದ ಗಿಡಗಳಲ್ಲಿ ಕೆಲವು ಹಾಳಾದವು. ಈಗ ಸುಮಾರು 300 ಮರಗಳಿವೆ. ಕಲ್ಲು ಹಾಸುಗಳು ಪರರ ಪಾಲಾಗಿವೆ. ಮರಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಸಾಲು ಮರಗಳ ರಕ್ಷಣೆ, ನಿರ್ವಹಣೆಯಲ್ಲಿ ಗೌಡರ ಕುಟುಂಬ ತೊಡಗಿಸಿಕೊಂಡಿದೆ.

ಗೌಡರು ನಾಟಿದ ಗಿಡಗಳು ರಸ್ತೆಯುದ್ದಕ್ಕೂ ಚಪ್ಪರದಂತೆ ಹಾಸಿದೆ. ಮರದ ಕೊಂಬೆಗಳ ಮೇಲೆ ಕೂರುವ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ, ಹಣ್ಣಿನ ರುಚಿ ಸವಿಯುತ್ತವೆ. ಕೆಲವು ಗೂಡನ್ನೂ ಕಟ್ಟಿ ಆಶ್ರಯವನ್ನೂ ಪಡೆದಿವೆ. ತಣ್ಣನೆಯ ಗಾಳಿ ಮೈಮನ ಸ್ಪರ್ಶಿಸಿದಾಗ ಹಸಿರ ಮೂಲಕ ಉಸಿರಾಡುತ್ತಿರುವ ಗೌಡರೇ ಆತ್ಮೀಯತೆಯಿಂದ ಮುಟ್ಟಿದ ಅನುಭವವಾಗುತ್ತದೆ. ಗೌಡರು ನಿಜಕ್ಕೂ ಬದುಕಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT