ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಮರದ ತಿಮ್ಮಕ್ಕ ಧರಣಿ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ ನಿರ್ವಹಣೆಗೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಸಾಲುಮರದ ತಿಮ್ಮಕ್ಕ ಅವರು ನಗರದ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಬುಧವಾರ ಧರಣಿ ನಡೆಸಿದರು.‘ಮಾಸಿಕ 400 ರೂಪಾಯಿ ವಿಧವಾ ವೇತನ ಬರುತ್ತಿರುವುದನ್ನು ಹೊರತುಪಡಿಸಿದರೆ ಸರ್ಕಾರದಿಂದ ಬೇರೆ ಯಾವುದೇ ರೀತಿಯ ಸವಲತ್ತು ಸಿಗುತ್ತಿಲ್ಲ. ವಿಧವಾ ವೇತನದ ಹಣದಲ್ಲಿ ಜೀವನ ನಿರ್ವಹಣೆ ಮಾಡಲು ಆಗುತ್ತಿಲ್ಲ. ನನ್ನ ಕಷ್ಟಕ್ಕೆ ಗ್ರಾಮದ ಜನರು ಸಹ ಸ್ಪಂದಿಸುತ್ತಿಲ್ಲ. ಇದರಿಂದ ಬದುಕು ಸಾಗಿಸಲು ಕಷ್ಟವಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ವೃದ್ಧೆಯಾಗಿರುವ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ವೈದ್ಯಕೀಯ ವೆಚ್ಚಕ್ಕಾಗಿ ಈಗಾಗಲೇ ಸಾಕಷ್ಟು ಸಾಲ ಮಾಡಿದ್ದೇನೆ. ಸಾಲದ ಹಣ ತೀರಿಸಲು ಸಹ ಸಾಧ್ಯವಾಗುತ್ತಿಲ್ಲ. ಹಣಕಾಸು ಸಮಸ್ಯೆ ಮತ್ತು ಸಾಲ ಬಾಧೆಯಿಂದ ಮಾನಸಿಕವಾಗಿ ಜರ್ಜರಿತವಾಗಿದ್ದೇನೆ. ನನ್ನ ನೋವನ್ನು ರಾಜ್ಯದ ಹಿಂದಿನ ಹಲವು ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದರೂ ಏನು ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹಾಯ ಮಾಡಿಲ್ಲ’ ಎಂದು ಹೇಳುತ್ತ ಅವರು ಭಾವುಕರಾದರು.

‘ಸಮಸ್ಯೆಗಳ ಬಗ್ಗೆ ಕೇಳುವ ಮುಖ್ಯಮಂತ್ರಿಗಳು ಹಾಗೂ ರಾಜಕಾರಣಿಗಳು ನನ್ನ ನೋವಿಗೆ ಸ್ಪಂದಿಸುವ ಸೌಜನ್ಯ ತೋರುತ್ತಿಲ್ಲ. ಪ್ರಶಸ್ತಿಯ ರೂಪದಲ್ಲಿ ಬಂದ ಹಣವನ್ನು ಹುಲಿಕಲ್ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸಲು ಖರ್ಚು ಮಾಡಿದ್ದೇನೆ. ಆದರೆ ಹಣಕಾಸಿನ ಕೊರತೆಯಿಂದಾಗಿ ಆಸ್ಪತ್ರೆ ಕೆಲಸವು ಅರ್ಧಕ್ಕೆ ನಿಂತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸುತ್ತಿರುವ ಈ ಆಸ್ಪತ್ರೆಗೂ ಸರ್ಕಾರ ಧನ ಸಹಾಯ ನೀಡಿಲ್ಲ’ ಎಂದು ಅವರು ತಮ್ಮ ನೋವು ತೋಡಿಕೊಂಡರು.

‘ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡಬೇಕು. ಅರ್ಧಕ್ಕೆ ನಿಂತಿರುವ ಆಸ್ಪತ್ರೆ ಕೆಲಸವನ್ನು ಪೂರ್ಣಗೊಳಿಸಲು ಧನ ಸಹಾಯ ನೀಡಬೇಕು. ನರ್ಸರಿ ಮಾಡಲು 20 ಎಕರೆ ಭೂಮಿ ಮಂಜೂರು ಮಾಡಬೇಕು’ ಎಂದು ತಿಮ್ಮಕ್ಕ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT