ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಪದ್ಧತಿ ಅಳವಡಿಕೆಗೆ ಸಲಹೆ

Last Updated 15 ಡಿಸೆಂಬರ್ 2012, 11:16 IST
ಅಕ್ಷರ ಗಾತ್ರ

ಗುಡಿಬಂಡೆ: ರಾಸಾಯನಿಕ ಗೊಬ್ಬರಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ಇತ್ತೀಚೆಗೆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಭೂಮಿಯ ಫಲವತ್ತತೆ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಗಾಂಧಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮರೆಡ್ಡಿ ಅಭಿಪ್ರಾಯಟ್ಟರು.

ತಾಲ್ಲೂಕಿನ ಮೇಡಿಮಾಕಲಹಳ್ಳಿ ಸಾವಯವ ಗ್ರಾಮಕ್ಕೆ ಎರಡನೇ ಹಂತದ ಮೌಲ್ಯಮಾಪನ ಮಾಡಲು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ.ಜಯರಾಮರೆಡ್ಡಿ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ, ಸಾವಯವ ಗ್ರಾಮ ಯೋಜನೆಯಡಿ ಅನುಷ್ಠಾನಗೊಂಡ ಕಾರ್ಯಕ್ರಮ ಪರಿಶೀಲಿಸಿದರು.

ನಂತರ ಸಾವಯವ ಕೃಷಿಕರೊಂದಿಗೆ ಸಂವಾದ ನಡೆಸಿದ ಅವರು, ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದ ಕೃಷಿ ಮರೆತು, ರಾಸಾಯನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಇಂದಿನ ಜನಾಂಗ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದೆ. ಅದರಲ್ಲೂ ಹದಿಹರೆಯದವರು ಕಾಯಿಲೆಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದರು.

ಕೃಷಿ ಇಲಾಖೆ ಹಾಗೂ ವಾಹಿನಿ ಅಭಿವೃದ್ಧಿ ಸಂಸ್ಥೆ ಸಾವಯವ ಗ್ರಾಮ ಯೋಜನೆ ಅನುಷ್ಠಾನಗೊಳಿಸುತ್ತಿವೆ. ಕಾಂಪೊಸ್ಟ್ ಗೊಬ್ಬರ ತಯಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಅಜೋಲ ಬೆಳೆಯುವುದು, ಜೀವಾಮೃತ, ಪಂಚಗವ್ಯ, ದೇಶಿಯ ಹಸು ಸಾಕಣೆ, ಎಮ್ಮೆ ಮತ್ತು ಕುರಿ ಸಾಕಣೆ, ಗಂಜಲ ಸಂಗ್ರಹಣೆ ಮೊದಲಾದವು ಭೂ ಫಲವತ್ತತೆ ಹೆಚ್ಚು ಮಾಡುವ ವಿಧಾನಗಳು. ಈ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ಕೃಷಿ ಇಲಾಖೆ ಮತ್ತು ವಾಹಿನಿ ಅಭಿವೃದ್ಧಿ ಸಂಸ್ಥೆ ಶ್ರಮ ವಹಿಸಿದೆ ಎಂದರು.

ಚಿಂತಾಮಣಿ ಕುರುಬೂರಿನ ರೇಷ್ಮೆ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಂಗಾಧರ್, ಕಳೆದ ಬಾರಿಗಿಂತ ಈಗ ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಈಗ ಸಾವಯವ ಬೆಳೆಗೆ ಹೆಚ್ಚಿನ ಬೇಡಿಕೆಯಿದ್ದು, ರೈತರು ಹೆಚ್ಚಿನ ಲಾಭ ಪಡೆಯಬಹುದು ಎಂದರು.ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕೈ ತೋಟದ ತರಕಾರಿ ಬೀಜ ಹಾಗೂ ಕೃಷಿ ಪರಿಕರಗಳನ್ನು ರೈತರಿಗೆ ಉಚಿತವಾಗಿ ವಿತರಿಸಿದರು.

ಕೃಷಿ ಅಧಿಕಾರಿ ಮುನಿಯಪ್ಪ, ವಾಹಿನಿ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಎಚ್.ಆರ್.ಸುರೇಶ್, ಸಾವಯವ ಕ್ಷೇತ್ರ ವಿಸ್ತರಣಾಧಿಕಾರಿ ಸಿ.ಎ.ಚಲಪತಿ, ವೇಣುಗೋಪಾಲಸ್ವಾಮಿ, ಸಾವಯವ ಕೃಷಿಕರ ಸಂಘದ ಪದಾಧಿಕಾರಿಗಳು, ರೈತ ಮಹಿಳೆಯರು, ಸಿಬ್ಬಂದಿ ಶ್ರೀನಾಥ, ವಿ.ರಾಜಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT