ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಪದ್ಧತಿಯೂ ಮೋಸ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾವಯವ ಕೃಷಿಯಿಂದಲೂ ರೈತರಿಗೆ ಮೋಸವಾಗುತ್ತಿದೆ. ಯಾವುದೇ ಖರ್ಚಿಲ್ಲದೆ ಕೈಗೊಳ್ಳುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಮಾತ್ರ ಸರ್ಕಾರ ಉತ್ತೇಜನ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಒತ್ತಾಯಿಸಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಲ್ಲಿನ ಮುರುಘಾಮಠದ ಆವರಣದಲ್ಲಿ ಭಾನುವಾರ ನಡೆದ ಕೃಷಿ ಮೇಳದಲ್ಲಿ ಪ್ರಸ್ತುತ ಕೃಷಿ ವಿಧಾನಗಳು ಮತ್ತು ಆಹಾರ ಭದ್ರತೆ ವಿಷಯ ಕುರಿತು ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾವಯವ ಹೆಸರಿನಲ್ಲೂ ನೂರಾರು ಕಂಪೆನಿಗಳು ಹುಟ್ಟಿಕೊಂಡು ರೈತರನ್ನು ಶೋಷಿಸಲು ಆರಂಭಿಸಿವೆ. ಸರ್ಕಾರ ಆತುರದ ನಿರ್ಣಯ ಕೈಗೊಂಡು ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ. ಹೈಬ್ರಿಡ್, ಬಿ.ಟಿ ತಳಿಗಳ ನಂತರ ಈಗ ಸಾವಯವ ಕೃಷಿ ಕೂಡ ರೈತರಿಗೆ ಮೋಸ ಮಾಡುವ ಮತ್ತೊಂದು ಪದ್ಧತಿಯಾಗಿದೆ ಎಂದು ಕಿಡಿಕಾರಿದರು.

ಹಸಿರು ಕ್ರಾಂತಿ ನೆಪದಲ್ಲಿ ಹೈಬ್ರಿಡ್ ತಳಿಗಳನ್ನು ಪರಿಚಯಿಸುವ ಜತೆ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಗಳ ವ್ಯಾಪಕ ಬಳಕೆಯೂ ಆರಂಭವಾಯಿತು. ಇದರಿಂದ ರಸಗೊಬ್ಬರ, ಕೀಟನಾಶಕ, ಬೀಜಕ್ಕೆ ರೈತರು ಸಾಲ ಮಾಡುವ ಪರಿಸ್ಥಿತಿ ಬಂತು.

ರೈತರಿಗೆ ಲಾಭ ದೊರೆಯದೆ ಸಾಲ ಮನ್ನಾ ಮಾಡಿ ಎಂದು ಹೋರಾಟ ಮಾಡುವ ಸ್ಥಿತಿಗೆ ತಲುಪಿದರು. ಸಾಲ ತೀರಿಸಲಾಗದ ರೈತರು ಸ್ವಾಭಿಮಾನಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸಿದರು.  ಪೂರ್ವಿಕರ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಬಂಡವಾಳವಿರಲಿಲ್ಲ. 1990ಕ್ಕಿಂತ ಮುಂಚೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಇಳಕಲ್ ವಿಜಯ ಮಹಾಂತೇಶ್ವರ ಮಠದ ಡಾ.ಮಹಾಂತ ಅಪ್ಪಗಳು, ಪ್ಯಾರಾ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಎಚ್.ಎನ್. ಗಿರೀಶ್, ಸಂಸ್ಕೃತಿ ಚಿಂತಕ ಡಾ.ಬೈರಮಂಗಲ ರಾಮೇಗೌಡ, ಕೃಷಿ ವಿಜ್ಞಾನಿ ಪ್ರೊ.ಎಂ. ರುದ್ರಾರಾಧ್ಯ, ಮೊಳಕಾಲ್ಮುರಿನ ಪ್ರಗತಿಪರ ರೈತ ತಿಪ್ಪೇಸ್ವಾಮಿ, ಹಿರಿಯೂರು ತಾಲ್ಲೂಕಿನ ಮುಂಗಸವಳ್ಳಿಯ ಪ್ರಗತಿಪರ ರೈತರಾದ ಲತಾ ರವೀಂದ್ರಪ್ಪ, ಸಿಂಧನೂರು ಬಸವಕೇಂದ್ರದ ವೀರಭದ್ರಗೌಡ ಕುರಕುಂದಿ, ಮೊಂಗಸುಳಿಯ ಪ್ರಗತಿಪರ ರೈತ ಮುಂಗಲಿ ಕೊರಗ ಅವರಿಗೆ `ಮುರುಘಾ ಶ್ರಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT