ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಪದ್ಧತಿಯ ಯಶಸಿ್ವ ರೇಷ್ಮೆ ಕೃಷಿ

Last Updated 12 ಡಿಸೆಂಬರ್ 2013, 6:38 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಾಕಷ್ಟು ಟೀಕೆ, ಅವಮಾನಗಳನ್ನು ಎದುರಿಸಿದ್ದ ಸಾವಯವ ಕೃಷಿ ಪದ್ಧತಿಯ  ‘ರೇಷ್ಮೆ’ ಬೆಳೆ ಇದೀಗ ಸ್ವಾಭಿಮಾನದಿಂದ ಬೀಗುತ್ತಿದೆ. ಬೆಳೆಗಾಗಿ ಬದುಕನ್ನೇ ಮುಡುಪಾಗಿಟ್ಟ ಕೃಷಿಕನ ಸಂಕಷ್ಟ ನೀಗಿಸುವಲ್ಲಿ ಯಶಸ್ವಿಯಾಗಿದೆ. ರೇಷ್ಮೆ ಬೆಳೆಗಾರ ಸಮೂಹಕ್ಕೆ ಪ್ರಯೋಗಾತ್ಮಕ ಅನ್ವೇಷಣೆಯ ಚಿಂತನೆಗಳತ್ತ ಕೊಂಡೊಯ್ಯುತ್ತಿದೆ!

ಬರದ ನಾಡು ಎಂದೇ ಬಿಂಬಿತಗೊಂಡ ರೋಣ ತಾಲ್ಲೂಕಿನಲ್ಲಿ ಕೊಳವೆ ಬಾವಿ ನೀರಾವರಿ ಆಶ್ರಿತ ಬಲಿಷ್ಠ ಕೃಷಿಕರು ಮಾತ್ರ ರೇಷ್ಮೆ ಬೆಳೆಯಲು ಸಾಧ್ಯ. ಚಿಕ್ಕ ಹಿಡುವಳಿದಾರರು ಹಾಗೂ ಆರ್ಥಿಕವಾಗಿ ಹಿಂದುಳಿದ ಕೃಷಿಕರು, ಅದರಲ್ಲೂ ರಾಸಾಯನಿಕ ರಹಿತ ಸಾವಯವ ಕೃಷಿ ಪದ್ಧತಿಯಲ್ಲಿ ರೇಷ್ಮೆ ಬೆಳೆಯಲು ಸಾಧ್ಯವೇ ಇಲ್ಲ ಎಂಬ ಕೃಷಿಕ ಸಮೂಹದ ನಕಾರಾತ್ಮಕ ನಿಲುವುಗಳನ್ನು ಸವಾಲಾಗಿ ಸ್ವೀಕರಿಸಿದ ರೋಣ ತಾಲ್ಲೂಕಿನ ಮ್ಯಾಕಲ್‌ಝರಿ ಗ್ರಾಮದ ಕೃಷಿಕ ಅಂದಪ್ಪ ಅಂಗಡಿ ನಷ್ಟದ ಪರಿವೇ ಇಲ್ಲದಂತೆ ಸಾವಯವ ರೇಷ್ಮೆ ಬೆಳೆದು ನಕಾರಾತ್ಮಕ ಯೋಚನೆಗಳಿಂದ ಟೀಕಿಸಿದ್ದ ಕೃಷಿಕರಿಗೆ ಲಾಭದ ರೇಷ್ಮೆ ಮೂಲಕ ಉತ್ತರ ನೀಡುತ್ತಿದ್ದಾರೆ.

ಬೆಳೆ ಮೊಟ್ಟೆ ಹಂತಕ್ಕೆ ಬರುತ್ತಿದ್ದಂತೆ ಧಾರವಾಡ, ತುಮಕೂರು, ಬೆಂಗಳೂರು ಮತ್ತು ರಾಮನಗರಗಳಿಂದ 100 ಮೊಟ್ಟೆಗೆ ₨500 ದರದಂತೆ ಮೊಟ್ಟೆಗಳನ್ನು ಖರೀದಿಸಿ ತರಲಾಗುತ್ತಿದೆ. ‘ಎಕರೆ ರೇಷ್ಮೆಗೆ ವಾರ್ಷಿಕ ₨ 10 ಸಾವಿರ ಖರ್ಚಿದೆ. ಪರಿಶ್ರಮದ ರೇಷ್ಮೆ ಬೆಳೆಗೆ ಮುಂದಾದರೆ ವರ್ಷಕ್ಕೆ ಎಕರೆಗೆ ಕನಿಷ್ಠ ₨ 55 ರಿಂದ ₨ 65 ಸಾವಿರ ಲಾಭ ಗಳಿಸಬಹುದು. 100 ಮೊಟ್ಟೆಯಲ್ಲಿ 60 ಕೆ.ಜಿಗಿಂತ ಜಾಸ್ತಿ ಇಳುವರಿ ತೆಗೆದರೆ ಕೆ.ಜಿಗೆ ₨ 40 ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಗ್ರಾಮೀಣ ಮಾರುಕಟ್ಟೆ ಅಭಿವೃದ್ಧಿಗಾಗಿ ಗ್ರಾಮೀಣ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡು ಮಾರಾಟ ಮಾಡುವ ಬೆಳೆಗಾರರಿಗೆ ₨ 40 ಪ್ರೋತ್ಸಾಹ ಧನದೊಂದಿಗೆ ₨ 20 ಬೋನಸ್‌್ ಹಣ ನೀಡಲಾಗುತ್ತದೆ. ಹೀಗಾಗಿ ನಾನು ಗ್ರಾಮೀಣ ಮಾರುಕಟ್ಟೆಯಲ್ಲಿಯೇ ರೇಷ್ಮೆ ಗೂಡನ್ನು ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ರೇಷ್ಮೆ ಬೆಳೆಗಾರ ಅಂಗಡಿ.

‘ರೇಷ್ಮೆ ಬೆಳೆಯಿಂದ ನಷ್ಟವೇ ಇಲ್ಲ. ಆದರೆ ಕೃಷಿಕರು ರೇಷ್ಮೆ ಬೆಳೆದು ಬೆಳೆಯನ್ನು ನಿರ್ಲಕ್ಷಿಸಿದರೆ ಬೆಳೆಯಿಂದ ಲಾಭವಿರಲಿ, ಬೆಳೆಗೆ ಮಾಡಿದ ಖರ್ಚು ಸಹ ಕೈಸೇರುವುದಿಲ್ಲ. ರೇಷ್ಮೆ ಕೃಷಿಯಲ್ಲಿ ಕೃಷಿಕ ಪೂರ್ಣ ಪ್ರಮಾಣದಲ್ಲಿ ತನನ್ನು ತಾನು ತೊಡಗಿಸಿಕೊಂಡರೆ ರೇಷ್ಮೆ ಬೆಳೆದ ರೈತನ ಬದುಕು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ’ ಎಂದು ರೇಷ್ಮೆ ಬೆಳೆಯ ಯಶಸ್ಸನ್ನು ಕೃಷಿಕ ಅಂದಪ್ಪ ಅಂಗಡಿ ಹೇಳಿದರು.

ನೆರೆ ರಾಜ್ಯದಿಂದ ಅಧ್ಯಯನ
ಮ್ಯಾಕಲ್‌ಝರಿ ಗ್ರಾಮದ ಕೃಷಿಕ ಅಂದಪ್ಪ ಅಂಗಡಿ ಅವರು ಬೆಳೆದ ಸಾವಯವ ರೇಷ್ಮೆ ಬೆಳೆಯ ಅಧ್ಯಯನ ನಡೆಸಲು ರಾಜ್ಯದ ಮಾತ್ರವಲ್ಲದೆ ನೆರೆಯ ಒಡಿಶಾ, ಆಂಧ್ರ, ಮಹಾರಾಷ್ಟ್ರಗಳ ಕೃಷಿಕರು ಆಗಮಿಸುತ್ತಿದ್ದಾರೆ. ಇವರ ಕೃಷಿ ಪದ್ಧತಿ, ನಿರ್ವಹಣೆ ವಿಧಾನಗಳನ್ನು ತಿಳಿದುಕೊಂಡು ತಮ್ಮ ಜಮೀನುಗಳಲ್ಲಿ ರೇಷ್ಮೆ ಬೆಳೆದು ಯಶಸ್ಸು ಸಾಧಿಸಿದ ನಿದರ್ಶನಗಳು ಸಾಕಷ್ಟಿವೆ. ನಿಂದನೆ, ಆರಂಭದಲ್ಲಿ ಅವಮಾನಗಳನ್ನು ಎದುರಿಸಿದ್ದ ರೇಷ್ಮೆ ಇದೀಗ ಸ್ವಾಭಿಮಾನದಿಂದ ಮೆರೆಯಿತ್ತಿರುವುದು ಕೃಷಿಕ ಅಂದಪ್ಪರ ಪರಿಶ್ರಮವನ್ನು ಸಾಕ್ಷೀಕರಿಸುತ್ತಿದೆ.
–ಚಂದ್ರಕಾಂತ ಬಾರಕೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT