ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಮೊಟ್ಟೆಗೆ 10 ರೂಪಾಯಿ..!

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಬೆಂಗಳೂರು: ಇದು ಸಾವಯವದ ಸುಗ್ಗಿ ಕಾಲ. ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು-ತರಕಾರಿ, ಆಹಾರ ಧಾನ್ಯಕ್ಕೆ ಭಾರೀ ಬೇಡಿಕೆ. ಇಂಥ ಸನ್ನಿವೇಶದಲ್ಲಿ ಇದೀಗ ಸಾವಯವ ಮೊಟ್ಟೆಯೂ ಮಾರುಕಟ್ಟೆಯನ್ನು ಪ್ರವೇಶಿಸಿದೆ!

`ಚಿನ್ನದ ಮೊಟ್ಟೆ ಇಡುವ ಕೋಳಿಗಳ ಕಥೆ ಗೊತ್ತು; ಇದೇನಪ್ಪ ಸಾವಯವ ಮೊಟ್ಟೆಗಳ ಸಮಾಚಾರ' ಎನ್ನುವ ಸಂಶಯವೇ? ಅದಕ್ಕೆ ಲೂಧಿಯಾನ ವಿಶ್ವವಿದ್ಯಾಲಯದ ಪಶು ವಿಜ್ಞಾನಿ ಡಾ.ಎಂ.ಎಲ್. ಕನ್ಸಾಲ್ ಅವರ ಬಳಿ ಉತ್ತರ ಸಿದ್ಧವೇ ಇದೆ. `ಕೋಳಿಗಳಿಗೆ ಯಾವುದೇ ರೋಗನಿರೋಧಕ ಚುಚ್ಚುಮದ್ದು ಅಥವಾ ಔಷಧಿ ನೀಡದೆ, ಸಾವಯವ ಪದಾರ್ಥಗಳನ್ನು ಮಾತ್ರ ಆಹಾರವನ್ನಾಗಿ ಕೊಡಲಾಗಿದ್ದು, ಅಂತಹ ಕೋಳಿಗಳು ಹಾಕಿದ ಮೊಟ್ಟೆಗಳಿವು' ಎಂಬುದು ಅವರ ವಿವರಣೆ.

ನಗರದಲ್ಲಿ ನಡೆದ `ಬಯೋಫ್ಯಾಕ್ ಇಂಡಿಯಾ' ಸಾವಯವ ಆಹಾರ ಮೇಳದಲ್ಲಿ ಈ ಮೊಟ್ಟೆಗಳನ್ನು ಪ್ರದರ್ಶಿಸಲಾಯಿತು. ಕನ್ಸಾಲ್ ಹೇಳುವ ಪ್ರಕಾರ, `ಪ್ರತಿ ಮೊಟ್ಟೆಯೂ ಒಮೆಗಾ-3 ಆಸಿಡ್ (400 ಎಂಜಿ), ಡಿಎಚ್‌ಎ (100 ಎಂಜಿ), ಸಿಎಲ್‌ಎ (400 ಎಂಜಿ), ಲ್ಯುಟೀನ್ (125 ಎಂಜಿ), ವಿಟಾಮಿನ್ ಇ (15.78 ಎಂಜಿ) ಪೋಷಕಾಂಶ ಹೊಂದಿದ್ದು, ಮಾನವ ಆರೋಗ್ಯಕ್ಕೆ ಪೂರಕವಾಗಿದೆ'.

`ಸಾಮಾನ್ಯ ಮೊಟ್ಟೆಗಳಲ್ಲಿರುವ ಗಬ್ಬು ವಾಸನೆ ಹಾಗೂ ಬ್ಯಾಕ್ಟೀರಿಯಾ ಪ್ರಭಾವ ಇವುಗಳಲ್ಲಿ ಇಲ್ಲದಂತೆ ಎಚ್ಚರ ವಹಿಸಲಾಗಿದೆ. ಸತತ ಐದು ವರ್ಷಗಳ ಪರೀಕ್ಷೆ ಮತ್ತು ಪ್ರಯೋಗದಿಂದ ಪರಿಶುದ್ಧವಾದ ಕೋಳಿ ತಳಿಯನ್ನು ಆವಿಷ್ಕಾರ ಮಾಡಲಾಗಿದ್ದು, ಅವುಗಳು ಕೊಡುವ ಮೊಟ್ಟೆಗಳನ್ನೇ ಮಾರಾಟ ಮಾಡಲಾಗುತ್ತಿದೆ'.

ಮೂರು ವಿಧದ ಮೊಟ್ಟೆಗಳನ್ನು ಕನ್ಸಾಲ್ ಅವರ ಫಾರ್ಮ್‌ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಅವಕ್ಕೆ ಒಮೆಗಾ, ಹರ್ಬಲ್ ಮತ್ತು ಬ್ರುನ್ ಎಗ್ ಎಂದು ಹೆಸರಿಸಲಾಗಿದೆ. `ಸಸ್ಯಹಾರಿಗಳೂ ಈ ಮೊಟ್ಟೆಗಳ ಉಪಯೋಗ ಮಾಡಬಹುದಾಗಿದ್ದು, ಯಾವುದೇ ಕೆಟ್ಟ ವಾಸನೆ ಬರುವುದಿಲ್ಲ. ರಾಸಾಯನಿಕ ವಿಷದ ಲವಲೇಷವೂ ಇವುಗಳಿಗೆ ಸೋಂಕದಂತೆ ಎಚ್ಚರಿಕೆ ವಹಿಸಲಾಗಿದೆ' ಎಂದು ಅವರು ಹೇಳುತ್ತಾರೆ.

`ವಿಶ್ವದ ಮೊದಲ ಔಷಧಿ ಗುಣವುಳ್ಳ ಸಾವಯವ ಮೊಟ್ಟೆ ಇದಾಗಿದೆ' ಎಂದೆನ್ನುವ ಅವರು, `ಪ್ರತಿ ಮೊಟ್ಟೆಗೆ ರೂ 10 ಬೆಲೆ ನಿಗದಿ ಮಾಡಲಾಗಿದ್ದು, ಉತ್ಪಾದನೆ ವೆಚ್ಚ ಹೆಚ್ಚಿರುವುದರಿಂದ ಗ್ರಾಹಕರು ಈ ಹೊರೆ ತಾಳುವುದು ಅನಿವಾರ್ಯ' ಎನ್ನುತ್ತಾರೆ. `ನಮ್ಮ ಮೊಟ್ಟೆಗಳಿಗೆ ವಿದೇಶದಿಂದಲೂ ಭಾರಿ ಬೇಡಿಕೆ ಇದೆ. ಬೇಡಿಕೆಯಷ್ಟು ನಮ್ಮ ಫಾರ್ಮ್‌ನಲ್ಲಿ ಉತ್ಪಾದನೆ ಇಲ್ಲ. ಇಂತಹ ಮೊಟ್ಟೆ ಇಡುವ ಕೋಳಿಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುತ್ತಿದೆ' ಎಂದು ತಿಳಿಸುತ್ತಾರೆ.

ಹರಿಯಾಣದ ಪಾಣಿಪತ್‌ನಲ್ಲಿ ಕನ್ಸಾಲ್ ಅವರ ಫಾರ್ಮ್ ಇದೆ. `ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ನಮ್ಮ ಫಾರ್ಮ್ ಬಾಗಿಲು ಸದಾ ತೆರೆದಿರುತ್ತದೆ. ಮನುಷ್ಯರಿಗೆ ಸಾವಯವ ಆಹಾರವನ್ನು ಸಿದ್ಧಪಡಿಸುವಾಗ ವಹಿಸುವಷ್ಟೇ ಎಚ್ಚರಿಕೆಯನ್ನು ಕೋಳಿಗಳ ಆಹಾರ ಉತ್ಪಾದನೆಯಲ್ಲೂ ವಹಿಸಲಾಗಿದೆ' ಎಂದು ಮಾಹಿತಿ ನೀಡುತ್ತಾರೆ. ಸಾವಯವ ಮೊಟ್ಟೆಗಳಿಂದ ಬಗೆ-ಬಗೆಯ ತಂಪು ಪಾನೀಯವನ್ನೂ ಅಭಿವೃದ್ಧಿಪಡಿಸಲಾಗಿದೆ. ಕನ್ಸಾಲ್ ಅವರ ಫಾರ್ಮ್‌ಗೆ ಭೇಟಿ ಕೊಟ್ಟ ಅತಿಥಿಗಳಿಗೆ ಮೊಟ್ಟೆ ಪಾನೀಯದ `ಆತಿಥ್ಯ' ನೀಡಲಾಗುತ್ತದೆ. 

ಟಿಯುವಿ ಸೌತ್ ಏಷ್ಯಾ ಸಂಸ್ಥೆಯ ಇಂಡೋ-ಜರ್ಮನ್ ಪ್ರಯೋಗಾಲಯದಲ್ಲಿ ಮೊಟ್ಟೆಯ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ ಯಾವುದೇ ರಾಸಾಯನಿಕ ಪತ್ತೆಯಾಗಿಲ್ಲ ಎಂದು ಪ್ರಮಾಣಪತ್ರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT