ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ - ಸಂಪತ್ತು

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಸಾವಯವ ಸಂಪತ್ತು’ ಎಂಬ ಪದಗಳು ಅತ್ಯಂತ ಅಪಾರ್ಥ ಪಡೆದ ಪದಗಳು. ‘ಸಾವಯವ’ ಎಂಬ ಪದ ತೀರಾ ಇತ್ತೀಚಿನವರೆಗೆ ಹೆಚ್ಚು ಚಾಲ್ತಿಯಲ್ಲಿರಲಿಲ್ಲ. ‘ಸಂಪತ್ತು’ ಎಂದರೆ ಹಣ, ಬ್ಯಾಂಕು ಡಿಪಾಸಿಟ್, ಷೇರು, ಸೈಟು, ಚಿನ್ನ ಎಂದು ಬದಲಾದ ಹಾಗೆ ನೈಜ ಸಂಪತ್ತು, ಪ್ರಕೃತಿಯ ಮಹತ್ವ ಬರಡಾಗುತ್ತಾ ಸಾಗಿದೆ. ಜೀವನ ಪ್ರೀತಿಗೆ ಅನಿವಾರ್ಯವಾದ ಆರೋಗ್ಯ ಮತ್ತು ಆನಂದಗಳು ಇದೀಗ ಬಿಗಡಾಯಿಸುತ್ತಿವೆ. ಹೀಗಾಗಿ ಹಲವರಿಗೆ ‘ಸಾವಯವ’ ನೆನಪಾಗುತ್ತಿದೆ. ದುರಂತವೆಂದರೆ, ಸಾವಯವ ಎಂದರೆ ಏನೆಂದು, ಸತ್ಯಕ್ಕೆ ಹತ್ತಿರವಾಗುವ ಹಾಗೆ ಹೇಳುವ ಸಾಮರ್ಥ್ಯ ಇರುವವರು ಕಡಿಮೆ ಅಥವಾ ಸಾಮರ್ಥ್ಯ ಇರುವವರ ಧ್ವನಿ ಕೇಳದಂತಾಗಿದೆ. ಸಾವಯವವೂ (ಆದರ್ಶವೂ) ಮಾರಾಟದ, ಐಷಾರಾಮದ, ಪ್ರತಿಷ್ಠೆಯ ವಸ್ತುವಾಗಿ ರೂಪಾಂತರಗೊಂಡಿದೆ.

ನಿಜವಾಗಿ ನೋಡಿದರೆ, ಸಾವಯವ ಎನ್ನುವುದು, ದೇವರ ಹಾಗೆ, ಸತ್ಯದ ಹಾಗೆ  ‘ಅಮೂರ್ತ’. ಅದನ್ನು ಅನುಭವಿಸಲು, ಅರ್ಥೈಸಲು ತಪಸ್ಸು ಬೇಕು. ಯಾರಿಗೆ ಆದರೂ ತಪಸ್ಸಿನ ಅನಂತರ ಅವರವರ ಭಾವಕ್ಕೆ ಅನುಗುಣವಾಗಿ ದೇವರು ಸಾಕ್ಷಾತ್ಕಾರಗೊಳ್ಳುವಂತೆ, ಸಿದ್ಧಿ ಬುದ್ಧಿ ಪ್ರಸಿದ್ಧಿಗಳನ್ನು ಕರುಣಿಸುವಂತೆ, ಸಾವಯವ ತಪಸ್ಸಿನ ಅನಂತರ ಸಿದ್ಧಿಸುವ ಸಂಪತ್ತು ಮಾತ್ರವೇ ನಿಜವಾದ ಸಂಪತ್ತು. ದೈಹಿಕ ದುಡಿಮೆ ಇಲ್ಲದೆ ಬರುವ ಸಂಪತ್ತಿನೊಳಗಿದೆ ಬಲು ವಿಧ ಆಪತ್ತು. ಪರಿಸರ ಮಾಲಿನ್ಯದ ಈ ದಿನಗಳಲ್ಲಿ ಅರಿವಿನ ತುರ್ತು ಬೇಕಿದೆ.

ಹಾಗಾದರೆ ಸಾವಯವ ಎಂದರೆ ಏನು? ಯಾಕೆ? ಹೇಗೆ? ಅಮೂರ್ತ ಸಾವಯವದಿಂದ ಮೂರ್ತ ಸಂಪತ್ತಿನೆಡೆಗಿನ ನಡೆ ಹೇಗೆ? ಪ್ರಕೃತಿಯಲ್ಲಿ ಎಲ್ಲಿದೆ ಸಂಪತ್ತು? ಸಿದ್ಧಾಂತ ಮತ್ತು ಪ್ರಯೋಗಗಳ ನಡುವಿನ ಗಡಿ ಯಾವುದು? ಸಾವಯವದ ಆದರ್ಶ ಮತ್ತು ಹಣದ ಅನಿವಾರ್ಯ ವಾಸ್ತವತೆಗಳ ನಡುವೆ ಸಮನ್ವಯ ಸಾಧ್ಯವೇ?

 ಸಾವಯವ ಕೃಷಿ ಅನುಭವಗಳ ಮುನ್ನೆಲೆಯಲ್ಲಿ ಒಮ್ಮೆ ಅಮೂರ್ತ ಸಾವಯವದ ಬಗ್ಗೆ, ಮತ್ತೊಮ್ಮೆ ಮೂರ್ತ ಸಂಪತ್ತಿನ ಬಗ್ಗೆ ನಿವೇದಿಸುವ ಪ್ರಯತ್ನ ಮಾಡುತ್ತೇನೆ.  ‘ಅರಿಯದುದರ ಅರಿವೇ ನಿಜ ಅರಿವು’ ಎಂಬ ಅರಿವಿನೊಂದಿಗೆ ನನಗೆ ತಿಳಿದಿರುವುದನ್ನು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

(ಈ ಅಂಕಣ 15 ದಿನಗಳಿಗೊಮ್ಮೆ ಪ್ರಕಟವಾಗಲಿದೆ. ಲೇಖಕರು ಕಳೆದ ಇಪ್ಪತ್ತೆಂಟು ವರ್ಷಗಳಿಂದ ಸಾವಯವ  ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಅನುಭವಿ. ಮೈಸೂರು ಸಮೀಪದ ಕಳಲವಾಡಿ ಗ್ರಾಮದಲ್ಲಿರುವ ‘ಇಂದ್ರಪ್ರಸ್ಥ ತೋಟ’ ಅವರ ಪ್ರಯೋಗ ಶಾಲೆ. ಅಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಸಸ್ಯ ಪ್ರಬೇಧಗಳಿವೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT