ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವದತ್ತ ಇನ್ನೊಂದು ಹೆಜ್ಜೆ

Last Updated 26 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಸಾವಯವ ಕೃಷಿ ವಿಸ್ತಾರವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಕೆಲವೇ ರೈತರು ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದರು. ಇಂದು ಅಂಥ ರೈತರ ಸಂಖ್ಯೆ ಹತ್ತಾರು ಸಾವಿರ ದಾಟಿದೆ. ಕರ್ನಾಟಕ ಸರ್ಕಾರ ‘ಸಾವಯವ ಕೃಷಿ ನೀತಿ’ ಜಾರಿಗೆ ತಂದ ಮೇಲೆ ರಾಜ್ಯದ 175 ತಾಲ್ಲೂಕುಗಳಲ್ಲೂ ಒಂದೊಂದು ಗ್ರಾಮಗಳು ‘ಸಾವಯವ ಪದ್ಧತಿಗೆ’ ಬದಲಾಗುತ್ತಿವೆ.

ಸಾವಯವ ಬೇಸಾಯದಲ್ಲಿ ಹೊಸ ಹೆಜ್ಜೆಗಳು ಮೂಡುತ್ತಿರುವ ಬೆನ್ನಲ್ಲೇ ‘ರೈತರು ಬೆಳೆಯುವುದೆಲ್ಲ ಸಾವಯವದಲ್ಲೇ ಎಂಬುದಕ್ಕೆ ಏನು ಖಾತರಿ’ ಎಂಬ ಪ್ರಶ್ನೆ ಉದ್ಭವವಾಯಿತು. ಸ್ಥಳೀಯ ಗ್ರಾಹಕರಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ಪ್ರಶ್ನೆ ಕೇಳಿ ಬರುತ್ತಿದೆ. ಈ ಪ್ರಶ್ನೆಗೆ ಉತ್ತರವೇ ರೈತರಿಗೆ ‘ಸಾವಯವ ದೃಢೀಕರಣ ಪ್ರಮಾಣ ಪತ್ರ’ ನೀಡುವ ಕ್ರಮ.

ಅಂತರರಾಷ್ಟ್ರೀಯ ಮಟ್ಟದ ಕೆಲವು ಸಂಸ್ಥೆಗಳು ವಿವಿಧ ಮಾನದಂಡಗಳನ್ನಿಟ್ಟುಕೊಂಡು ಜಮೀನುಗಳನ್ನು ಪರಿವೀಕ್ಷಣೆ ಮಾಡಿ ‘ದೃಢೀಕರಣ ಈ ಪ್ರಮಾಣ ಪತ್ರವನ್ನು’ ನೀಡುತ್ತವೆ. ಈ ವಿಷಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ರೈತರು ಮತ್ತು ದೃಢೀಕರಣ ಸಂಸ್ಥೆಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತವೆ. ಇದಕ್ಕೆ ರೈತರು ಹಣ ಪಾವತಿಸಬೇಕಾಗುತ್ತದೆ. ಪ್ರಮಾಣ ಪತ್ರದ ಅವಧಿ ಒಂದು ವರ್ಷ. ನಂತರ ಅದನ್ನು ನವೀಕರಿಸಿಕೊಳ್ಳಬೇಕು.

ಅಂಥ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಬೆಂಗಳೂರಿನ ‘ಇಕೊವಾ’ ಕೂಡ ಒಂದು. ಈ ಸಂಸ್ಥೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿನ ಸಾವಯವ ಕೃಷಿಕರಿಗೆ ಪ್ರಮಾಣ ಪತ್ರ ನೀಡಲು ಆರಂಭಿಸಿದೆ. ಇದಕ್ಕಾಗಿ ಒಟ್ಟು 800 ಹೆಕ್ಟೇರ್ ಪ್ರದೇಶದ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಆರು ನೂರು ರೈತರನ್ನು ಆಯ್ಕೆ ಮಾಡಿಕೊಂಡಿದೆ.

2009ರಿಂದ ಸಾವಯವ ಬೇಸಾಯ ಕೈಗೊಂಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ, ಚಿಕ್ಕ ತುಮಕೂರು, ತಿಪ್ಪಾಪುರ ಹಳ್ಳಿಗಳ 42 ರೈತರನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರು ಒಟ್ಟು 125 ಎಕರೆಯಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ. ‘ಈ ರೈತರೆಲ್ಲ  ಪ್ರಥಮ ವರ್ಷದ ಸಾವಯವ ಕೃಷಿ ದೃಢೀಕರಣ ಪ್ರಮಾಣ ಪತ್ರ ಪಡೆದಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿ ಮಹದೇವ್.

ಪ್ರಮಾಣ ಪತ್ರ ನೀಡುವ ಮುನ್ನ:
ಯೋಜನೆ ಕುರಿತು ವಿವರಣೆ ನೀಡಿದ ಮಹದೇವ್ ಅವರು ಪ್ರಮಾಣ ಪತ್ರ ನೀಡುವ ಮುನ್ನ ರೈತರಿಗೆ ಸಾವಯವ ಬೇಸಾಯ ಕುರಿತು ತರಬೇತಿ ನೀಡುತ್ತೇವೆ. ತರಬೇತಿ ಸಂದರ್ಭದಲ್ಲಿ ಆಕಳ ಸಗಣಿ ಬಳಸಿ ಗೊಬ್ಬರ ತಯಾರಿಸುವುದು, ಗೋಮೂತ್ರ, ಹಾಲು, ಮೊಸರು, ತುಪ್ಪ, ಕೊಬ್ಬರಿ, ಬೆಲ್ಲ ಬೇವು, ಲೋಳೆಸರ, ಧಾನ್ಯಗಳ ಹಿಟ್ಟು, ದತ್ತೂರಿ, ಸೀತಾಫಲದ ಎಲೆ, ಬೇಲಿ ಸೊಪ್ಪು, ನಕಲಿ ಸೊಪ್ಪು, ಹಸಿ ಶುಂಠಿಯಂತಹ ಪ್ರಕೃತಿ ಪೂರಕ ವಸ್ತುಗಳನ್ನು ಬಳಸಿ ಸಸ್ಯ ಜನ್ಯ ಕೀಟನಾಶಕಗಳನ್ನು ತಯಾರಿಸಿಕೊಳ್ಳುವ ಬಗ್ಗೆ  ಮಾಹಿತಿ ನೀಡಲಾಗುತ್ತದೆ. ಜೊತೆಗೆ ಅವುಗಳನ್ನು ಬಳಸುವ ಕುರಿತೂ ತರಬೇತಿ ನೀಡುತ್ತೇವೆ’ಎನ್ನುತ್ತಾರೆ.

ಸಂಸ್ಥೆಯ ಮಾರ್ಗದರ್ಶನದಲ್ಲೇ ರೈತರು ಗೊಬ್ಬರ, ಕೀಟನಾಶಕ ತಯಾರಿಸಿಕೊಂಡು ಬಳಸುತ್ತಿದ್ದಾರೆ. ಈ ಒಳಸುರಿಗಳ ನೆರವಿನಿಂದ ಬದನೆ, ಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ, ಹುರುಳಿಕಾಯಿ, ಬಿಟ್‌ರೊಟ್, ಕ್ಯಾರೆಟ್, ಪಾಲಕ್, ಕೊತ್ತಂಬರಿ ಇತ್ಯಾದಿ ತರಕಾರಿಗಳನ್ನು ಬೆಳೆಯುವಲ್ಲಿ ರೈತರು ಸಫಲರಾಗಿದ್ದಾರೆ. ಇಂಥ ತರಕಾರಿಗಳಿಗೆ ಸಂಸ್ಥೆಯವರೇ ಮಾರುಕಟ್ಟೆ ಕಲ್ಪಿಸಿದರೆ ಉತ್ತಮ ಎನ್ನುವುದು ರೈತರ ಅಭಿಪ್ರಾಯ.

ಈ ಕಾರ್ಯಕ್ಕೆ ಸರ್ಕಾರ ನೆರವು ನೀಡುತ್ತದೆ. ಯೋಜನೆಗೆ ಒಳಪಡುವ ರೈತರಿಗೆ ಒಂದು ಹೆಕ್ಟೆರ್‌ಗೆ ಸರ್ಕಾರದಿಂದ 10 ಸಾವಿರ ರೂ ಸಹಾಯ ಧನ ಸಿಗುತ್ತದೆ. ಈ ಹಣದಿಂದ ರೈತರಿಗೆ ಅಗತ್ಯ ಬೀಜ, ನೈಸರ್ಗಿಕ ಗೊಬ್ಬರ, ಕೀಟನಾಶಕಗಳನ್ನು ಒದಗಿಸಲಾಗುತ್ತದೆ. ನಂತರ ಅವುಗಳನ್ನು ರೈತರೇ ತಯಾರಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಗುತ್ತದೆ.

ಒಂದು ವರ್ಷ ಪೂರ್ಣಗೊಂಡ ಬಳಿಕ ರೈತರಿಗೆ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ಬಗ್ಗೆ ಮೊದಲ ವರ್ಷದ ದೃಢೀಕರಣ ಪತ್ರ ನೀಡುತ್ತೇವೆ. ನಂತರದ ಎರಡು ವರ್ಷಗಳ ನಂತರ  ಸಂಪೂರ್ಣವಾಗಿ ಸಾವಯವದಲ್ಲಿ ತೊಡಗಿಸಿಕೊಂಡಿದ್ದಾರೆಂದು ‘ದೃಢೀಕರಣ ಪ್ರಮಾಣ ಪತ್ರ’ ನೀಡುತ್ತೇವೆ. ಪ್ರಮಾಣ ಪತ್ರ ಪಡೆದ ರೈತರು ಬೆಳೆದ ಬೆಳೆಗಳಿಗೆ ಅಗತ್ಯವಾದ ಮಾರುಕಟ್ಟೆ ವ್ಯವಸ್ಥೆ, ಇನ್ನಿತರ ಸೌಲಭ್ಯ,  ಮಾರ್ಗದರ್ಶನಗಳನ್ನು ಸಂಸ್ಥೆಯೇ ಒದಗಿಸುತ್ತದೆ ಎನ್ನುತ್ತಾರೆ ಮಹದೇವ್.

ಯೋಜನೆ ಕುರಿತು ಮಾತನಾಡಿದ ಫಲಾನುಭವಿ ಜಿಂಕೆಬಚ್ಚಹಳ್ಳಿಯ ರೈತ ಬಿ.ಟಿ. ಶ್ರೀನಿವಾಸ್, ‘ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವುದರಿಂದ ಆಹಾರ ವಿಷವಾಗುವ ಹಾಗೂ ಮಣ್ಣಿನ ಫಲವತ್ತತೆ ನಶಿಸುವ ಕುರಿತು ಇಕೊವಾ ಸಂಸ್ಥೆ ಅಧಿಕಾರಿಗಳು ಅರಿವು ಮೂಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಾಸಾಯನಿಕಗಳನ್ನು ಬಿಟ್ಟಿದ್ದೇವೆ. ಧೈರ್ಯವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇವೆ’ ಎನ್ನುತ್ತಾರೆ.

ರಾಸಾಯನಿಕ ಕೀಟನಾಶಕ ಬಳಸದೆ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಗೊಬ್ಬರ ತಯಾರಿಸಿಕೊಂಡರೆ ಖರ್ಚು ಉಳಿಯುತ್ತದೆ, ಭೂಮಿಯೂ ಆರೋಗ್ಯವಾಗಿರುತ್ತದೆ. ಪೌಷ್ಟಿಕ ಆಹಾರವೂ ಲಭ್ಯವಾಗುತ್ತದೆ. ಈ ವಿಚಾರಗಳನ್ನು ರೈತರಿಗೆ ತಿಳಿಸಿಕೊಡಬೇಕು. ಹಂತ ಹಂತವಾಗಿ ಸಾವಯವ ಕೃಷಿಯನ್ನು ಎಲ್ಲ ರೈತರು ಅಳವಡಿಸಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಮಹದೇವ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT