ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವದಲ್ಲಿ ಅನಾನಸ್

ಅಕ್ಷರ ಗಾತ್ರ

ಸಕಲೇಶಪುರ ತಾಲ್ಲೂಕಿನ ಕೊರಡಿ ಗ್ರಾಮದ ಚಂದ್ರು - ಪರಿಮಳ ದಂಪತಿ ಕಳೆದ ಎಂಟು ವರ್ಷದಿಂದ ಯಶಸ್ವಿಯಾಗಿ ಅನಾನಸ್ ಬೆಳೆಯುತ್ತಿದ್ದಾರೆ. ಮೂಲತಃ ಕಾಫಿ ಬೆಳೆಗಾರರಾದ ಅವರು ಮನೆಯ ಸಮೀಪದ ಒಂದು ಎಕರೆಯಲ್ಲಿ  ಖರ್ಚಿಲ್ಲದೆ ಅನಾನಸ್ ಬೆಳೆದು ನಿರಂತರ ಆದಾಯವನ್ನು  ಪಡೆಯುತ್ತಿದ್ದಾರೆ.

ಅನಾನಸ್ ಸಸಿಗಳನ್ನು ನಾಟಿ ಮಾಡುವಾಗ ಮೊದಲು 3 ಅಡಿ ಆಳದ ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ತುಂಬಿಸಿದ್ದು ಬಿಟ್ಟರೆ ಮತ್ತೇನೂ ಹಾಕಿಲ್ಲ. ವರ್ಷದಲ್ಲಿ ಎರಡು ಸಲ ಬೆಳೆಗೆ ತುಂತುರು ನೀರಾವರಿ ಮಾಡುತ್ತಾರೆ.

ಅವರು ಸಸಿಗಳನ್ನು ಭೂಮಿಯಲ್ಲಿ ಸಾಕಷ್ಟು ಆಳದಲ್ಲಿ ನೆಡದಿದ್ದರೆ ಹಣ್ಣಿನ ಭಾರವನ್ನು ಗಿಡಗಳು ತಡೆಯುವುದಿಲ್ಲ ಎಂಬುದು ಅವರ ಅನುಭವ. 3ಆಡಿ2 ಅಂತರದಲ್ಲಿ  ಅವರು ಆರು ಸಾವಿರ ಕ್ವೀನ್ ಹಾಗೂ ನಾಟಿ ಅನಾನಸ್ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಒಂದೊಂದು ಹಣ್ಣುಗಳು 8 ಕಿ.ಲೋವರೆಗೆ ತೂಗುತ್ತವೆ.

ಈ ದಂಪತಿಗೆ ಹಣ್ಣುಗಳ ಮಾರಾಟ ಎಂದೂ ಸಮಸ್ಯೆ ಅನ್ನಿಸಿಲ್ಲ. ಸುತ್ತಮುತ್ತಲಿನ ಸಂತೆಗಳಿಗೆ ತಮ್ಮದೇ ಟ್ರಾಕ್ಟರ್‌ನಲ್ಲಿ ಹಣ್ಣು ತುಂಬಿಕೊಂಡು ಹೋಗುತ್ತಾರೆ. ಚಂದ್ರಣ್ಣನ ತೋಟದ ಅನಾನಸ್ ಹಣ್ಣು ಬಲು ರುಚಿ ಎಂದು ಗ್ರಾಹಕರು  ಸಂಜೆ ವೇಳೆಗೆ ಎಲ್ಲವನ್ನೂ ಖರೀದಿಸಿ ಒಯ್ಯುತ್ತಾರೆ.

ಸನಿಹದ ಮೂಡಿಗೆರೆ, ಸಕಲೇಶಪುರದಲ್ಲಿ ಅಧಿಕ ಮಳೆ ಬೀಳುವುದರಿಂದ ಮಳೆಗಾಲದಲ್ಲಿ ಶೀತ, ಗೂರಲು, ದಮ್ಮು ಇರುವವರು ಮುಗಿಬಿದ್ದು ಕೊಳ್ಳುತ್ತಾರೆ. ಸ್ಥಳೀಯ ಮದುವೆ ಸಮಾರಂಭಗಳಲ್ಲೂ ಹಣ್ಣಿಗೆ ಬೇಡಿಕೆಯಿದೆ.

ಬಡವರಿಗೆ, ತವರಿಗೆ ಬಂದ ಹೆಣ್ಣು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ನೀಡುತ್ತಾರೆ. ಮೂಲವ್ಯಾಧಿ ಸಮಸ್ಯೆಗೂ ಅನಾನಸ್ ಅತ್ಯುತ್ತಮ ಔಷಧ.

ಖರ್ಚು ವೆಚ್ಚ: ಎಂಟು ವರ್ಷಗಳ ಹಿಂದೆ ಹಾಕುವಾಗ ಅನಾನಸ್ ನಾಟಿ ಮಾಡುವಾಗ 12,000 ರೂ ಖರ್ಚು  ಮಾಡಿದ್ದರು. ಮೊದಲ ವರ್ಷ 24,000 ಆದಾಯ ಬಂದಿತ್ತು. ಈಗಲೂ ವರ್ಷಕ್ಕೆ 5000 ದಿಂದ 6000 ಹಣ್ಣು ಸಿಗುತ್ತವೆ.

ಒಂದು ಹಣ್ಣಿಗೆ 10 ರಿಂದ 25 ರೂಗಳ ವರೆಗೂ ಮಾರಾಟವಾಗುತ್ತದೆ. ಸಸಿಗಳನ್ನು ಎರಡು ರೂಗಳಂತೆ ಮಾರಾಟ ಮಾಡುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರಗಳ ಹಾಕದೇ ಇರುವುದರಿಂದ ಅನಾನಸ್ ಹಣ್ಣುಗಳು ಅತ್ಯಂತ ಸಿಹಿಯಾಗಿವೆ.
ಚಂದ್ರು ಅವರು ಕಾಫಿ ತೋಟದ ಕಡೆ ಗಮನ ನೀಡುತ್ತಾರೆ. ಪತ್ನಿ ಪರಿಮಳ ಅನಾನಸ್ ತೋಟ ನಿರ್ವಹಣೆ ಮಾಡುತ್ತಾರೆ. ಅವರೇ ಹಣ್ಣುಗಳನ್ನು ಜೀಪ್‌ನಲ್ಲಿ ತುಂಬಿಕೊಂಡು ಸಂತೆಗಳಿಗೆ ಸಾಗಿಸುತ್ತಾರೆ.

ಗಿಡದ ಅಕ್ಕಪಕ್ಕ ಬೀಳುವ ಗರಿಗಳನ್ನು ಸವರುವ ಕೆಲಸವನ್ನೂ ಅವರೇ ಮಾಡುತ್ತಾರೆ. ಹಣ್ಣು ಕೊಯ್ಲು ಸಮಯದಲ್ಲಿ ಮಾತ್ರ ಆಳುಗಳನ್ನು ಅವಲಂಬಿಸುತ್ತಾರೆ. ಎಂಟು ವರ್ಷಗಳಲ್ಲಿ ಒಮ್ಮೆಯೂ ಅನಾನಸ್ ಗಿಡಗಳಿಗೆ ಯಾವುದೇ ಕೀಟ,ರೋಗ ಭಾದೆ ತಗುಲಿಲ್ಲ. ರಾತ್ರಿ ಹೊತ್ತು ಹಾಳಿ ಇಡುವ ಇಲಿ, ಹೆಗ್ಗಣ ಹಾಗೂ ಅಳಿಲುಗಳನ್ನು ಓಡಿಸಲು ತಮ್ಮ ಎರಡು ನಾಯಿಗಳಿಗೆ ತರಬೇತಿ ನೀಡಿದ್ದಾರೆ.
 
ಆಸಕ್ತರು ಅನಾನಸ್ ಬೇಸಾಯದ ಬಗ್ಗೆ ಮಾಹಿತಿ ಪಡೆಯಬಹುದು. ಚಂದ್ರು ಅವರ ಮೊಬೈಲ್ ನಂಬರ್-  9449707629.                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT