ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವವೇ ಎಲ್ಲಾ...

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಅಂತರರಾಷ್ಟ್ರೀಯ ಕೃಷಿ ಮೇಳದಲ್ಲಿ ರೈತರಿಗೆ ನೀಡಿರುವ ‘ಅಗೌರವಪೂರ್ವಕ’ ಪ್ರಶಸ್ತಿಯನ್ನು ತಿರಸ್ಕರಿಸಿ ಸರ್ಕಾರದ ವಿರುದ್ಧ ದನಿ ಎತ್ತಿದ ಸುಂದರೇಶ್‌ ಹೆಸರು ಈಗ ಮನೆಮಾತು.

ಪ್ರಶಸ್ತಿ ಫಲಕಗಳನ್ನು ಮೇಜಿನ ಮೇಲಿಟ್ಟು ನೀವೇ ತೆಗೆದುಕೊಳ್ಳಿ ಎಂದು ರೈತರಿಗೆ ಸಂಘಟಕರು ಹೇಳಿದ್ದನ್ನು ವಿರೋಧಿಸಿದ್ದ ರಾಮನಗರ ಸಮೀಪದ ದೊಡ್ಡಗಂಗವಾಡಿಯ ರೈತ ಸುಂದರೇಶ್‌ ಅವರ ಕೃಷಿ ಪದ್ಧತಿಯೂ ಈಗ ಅಷ್ಟೇ ಜನಜನಿತ. ರಾಸಾಯನಿಕ ಕೃಷಿಯನ್ನು ಧಿಕ್ಕರಿಸಿ ಸಾವಯವದ ಹಾದಿ ತುಳಿದು ಅದರಲ್ಲಿಯೇ ಮಿಶ್ರ ಬೆಳೆ ಬೆಳೆದು ಇತರ ರೈತರಿಗೂ ಮಾದರಿಯಾಗಿದ್ದಾರೆ ಇವರು.

‘ಇಂದಿನ ಆಹಾರ ಪದ್ಧತಿಯಿಂದಲೇ ನಾವು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಇದರ ನಡುವೆಯೇ ನಮ್ಮ ಅರಿವಿಗೆ ಬಂದರೂ ರಾಸಾಯನಿಕಯುಕ್ತ ಆಹಾರವನ್ನು ಸೇವಿಸುತ್ತೇವೆ. ಹೀಗಾದರೆ ನಮ್ಮ ಆರೋಗ್ಯ ಹೇಗೆ ಉಳಿದೀತು’ ಎನ್ನುವ  ಪ್ರಶ್ನೆಯನ್ನು ತಮ್ಮಲ್ಲಿಯೇ ಹಾಕಿಕೊಂಡು ಉತ್ತರ ಕಂಡು ಕೊಂಡಿದ್ದಾರೆ ಇವರು.

ಬೇಸಾಯ ಮತ್ತು ಬದುಕನ್ನು ಸಮ್ಮಿಳಿಸಿ ನೋಡುವ ಸುಂದರೇಶ್, ಆರೋಗ್ಯ ಮತ್ತು ನೆಮ್ಮದಿಗೆ ಹಣ ಎಷ್ಟು ಮುಖ್ಯವೋ ಕೃಷಿಯೂ ಅಷ್ಟೇ ಪೂರಕ ಎಂಬುದನ್ನು ತಿಳಿದವರು.   

ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರಿಗೆ  ಅಧ್ಯಾಪಕನಾಗುವ ಅವಕಾಶವಿದ್ದರೂ ತೊಡಗಿಕೊಂಡಿದ್ದು ವ್ಯವಸಾಯ­ದಲ್ಲಿ. ಶಿಕ್ಷಣದ ಅಂತಿಮ ಹಾದಿ­ಯ­ಲ್ಲಿಯೇ ಅವರು ಕೃಷಿಯಲ್ಲಿ ತೊಡಗುವ ನಿರ್ಧಾರ ಮಾಡಿದ್ದರು. 

ಮಿಶ್ರಬೆಳೆಯಿಂದ ಆದಾಯ
ಒಂದೇ ಬೆಳೆಯಿಂದ ಆದಾಯ (ಬದುಕು) ಸಾಧ್ಯವಿಲ್ಲ. ಅಲ್ಲದೆ ಎಲ್ಲ ಕಾಲಕ್ಕೂ ಒಂದೇ  ಬೆಳೆಗೆ ಬೇಡಿಕೆ ಇರುವುದಿಲ್ಲ ಎನ್ನುವ ಆರ್ಥಿಕ ಲೆಕ್ಕಾಚಾರದ ಅರಿವು ಅವರಿಗಿದೆ.   ತೆಂಗು ಮತ್ತು ರಾಗಿಯನ್ನು ಪ್ರಧಾನವಾಗಿ  ಬೆಳೆದರೂ, ತೊಗರಿ, ಅವರೆ, ಹರಳು, ಜೋಳವನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ.  ರೈತರಿಗೆ ನಿರಂತರವಾಗಿ ಆದಾಯವನ್ನು ಗಳಿಸಿಕೊಡಬಲ್ಲದು ಎನ್ನುವ ಕಾರಣಕ್ಕೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುತ್ತಾರೆ.

‘ಸಾಮಾನ್ಯವಾಗಿ ತರಕಾರಿಗೆ ಬೆಲೆ ಕುಸಿಯುವುದಿಲ್ಲ. ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದರಿಂದ ಒಂದರ ಬೆಲೆ ಕುಸಿದರೂ ಮತ್ತೊಂದು ಕೈ ಹಿಡಿಯುತ್ತದೆ’ ಎಂದು ತರಕಾರಿ ಬೇಸಾಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ.

ಸುಂದರೇಶ್‌ ಅವರು ಸಾವಯವ ಬೇಸಾಯದಲ್ಲಿ ತೊಡಗಲು ಮುಖ್ಯ ಕಾರಣ ಆರೋಗ್ಯ ಕಾಳಜಿ. ಮೊದಲು ರಾಸಾಯನಿಕ ಗೊಬ್ಬರವನ್ನೇ ಬಳಸಿ ಕೃಷಿ ಮಾಡುತ್ತಿದ್ದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಇದು ನನ್ನ ಅರಿವಿಗೆ ಬಂತು. ಈ ಸಮಯದಲ್ಲಿ ಸ್ನೇಹಿತರಿಂದ ಸಾವಯವ ಕೃಷಿಯ ಉಪಯೋಗ ತಿಳಿದುಕೊಂಡೆ. ಅಂದಿನಿಂದ ಕೃಷಿಯಲ್ಲಿ ನನ್ನದೇ ರೀತಿ ನೀತಿಗಳನ್ನು ಅನುಸರಿಸಲು ನಿರ್ಧರಿಸಿದೆ ಎಂದು ಸಾವಯವದ ಆಯ್ಕೆ ಬಗ್ಗೆ ವಿವರಿಸುತ್ತಾರೆ.

ಮೂರು ವರ್ಷಗಳಿಂದ ಸಾವಯವ ಮಾದರಿಯಲ್ಲಿ ಬೆಳೆ ಬೆಳೆಯುತ್ತಿರುವ ಅವರು ಒಂದೇ ವೇಳೆಗೆ ಸಾವಯವ ಕೃಷಿಗೆ ತೊಡಗಿದವರಲ್ಲ. ಒಂದೇ ಬಾರಿ ಸಾವಯವದಲ್ಲಿ ತೊಡಗುವುದರಿಂದಾಗುವ ಪರಿಣಾಮ ಗಳನ್ನು ಬಲ್ಲವರು ಅವರು.

ಅವರಿಗೆ ಒಟ್ಟು ಆರು ಎಕರೆ ಜಮೀನಿದೆ. ಮೊದಲು ಮೂರು ಎಕರೆಯನ್ನು ರಾಸಾಯನಿಕದಿಂದ ಮುಕ್ತಗೊಳಿಸಿದ ಅವರು ಈಗ ಮತ್ತೆ ಉಳಿದ ಮೂರು ಎಕರೆಯನ್ನೂ ಸಾವಯವಕ್ಕೆ ಒಗ್ಗಿಸುವ ಹಾದಿಯಲ್ಲಿದ್ದಾರೆ.

‘ಒಮ್ಮೆಯೇ ರಾಸಾಯನಿಕ ಬಳಕೆ ನಿಲ್ಲಿಸಿದರೆ ಇಳುವರಿ ಶೂನ್ಯವಾಗುತ್ತದೆ. ಬದುಕಿಗೂ ಕಷ್ಟ. ಹಂತ ಹಂತವಾಗಿ ಜಮೀನಿಗೆ ವಿಷ ಉಣಿಸುವುದನ್ನು ಬಿಡಬೇಕು ಎನ್ನುತ್ತಾರೆ.

ಹೈನುಗಾರಿಕೆ ಮತ್ತಿತರ ಉಪಕಸುಬುಗಳು ಕೃಷಿಗೆ ಪೂರಕವಾದ್ದರಿಂದ 4 ನಾಟಿ ಹಸು, 4 ಎಮ್ಮೆ, 4 ಕುರಿಗಳನ್ನು ಸಾಕಿದ್ದಾರೆ. ಈ ರಾಸುಗಳ ಗೊಬ್ಬರವೇ ಜಮೀನಿಗೆ ಪೋಷಕಾಂಶ.

ಸಾವಯವ ಪದ್ಧತಿಯಲ್ಲಿ ಯಶ ಗಳಿಸಬೇಕಾದರೆ ಕೆಲವು ಅಂಶಗಳನ್ನು  ತಿಳಿದುಕೊಳ್ಳುವುದು ಅವಶ್ಯ.  ಹಾಗಾಗಿ ‘ಸಂವಾದ’ ಸಂಸ್ಥೆಯಲ್ಲಿ ಸುಸ್ಥಿರ ಕೃಷಿ ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನೂ ಪಡೆದಿದ್ದಾರೆ.  ಆಹಾರ ಪದ್ಧತಿಯಲ್ಲಿನ ಅಸಮತೋಲನ, ನಾವು ಉಣ್ಣುತ್ತಿರುವ ಆಹಾರ ರಾಸಾಯನಿಕ ಯುಕ್ತವಾಗಿರುವ ಬಗ್ಗೆ ನಿರರ್ಗಳವಾಗಿ ಮಾತನಾಡುವ ಅವರು ಈ ಎಲ್ಲ ಅನುಭವ ಕೃಷಿ ಮೂಲದಿಂದ ಬಂದಿದ್ದು ಎನ್ನುತ್ತಾರೆ.

ಆದಷ್ಟೂ ಕೃಷಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ನೀತಿ ಅಳವಡಿಸಿಕೊಂಡಿರುವ ಸುಂದರೇಶ್,  ಬೆಳೆಗಳಿಗೆ ಅಗತ್ಯವಾದ ಗೊಬ್ಬರವನ್ನು  ತಾವೇ ತಯಾರಿಸಿಕೊಳ್ಳುತ್ತಾರೆ.    ಸಗಣಿ, ಹಸಿರೆಲೆ ಮತ್ತಿತರ ನೈಸರ್ಗಿಕ ಜನ್ಯ ವಸ್ತುಗಳಿಂದ  ಗೊಬ್ಬರ ತಯಾರಿಸುತ್ತಾರೆ. ಪ್ರತಿ ವರ್ಷ ಬಿತ್ತನೆ ಬೀಜವನ್ನು ಶೇಖರಿಸಿಕೊಳ್ಳುತ್ತಾರೆ. ‘ಕೃಷಿ ವೆಚ್ಚ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ವೆಚ್ಚ ಕಡಿಮೆಯಾದಷ್ಟು ಲಾಭ–ನಷ್ಟದ ಬಗ್ಗೆ ಹೆಚ್ಚು ವಿಚಾರವನ್ನು ಮಾಡುವುದಿಲ್ಲ’ ಎಂದು ಅನುಭವವೇದ್ಯ ಕೃಷಿ ಬದುಕನ್ನು ಸ್ಮರಿಸುತ್ತಾರೆ. 
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT