ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ದಂಪತಿಗಳಿಂದ ರುದ್ರಾಭಿಷೇಕ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಸಾಕ್ಷಾತ್ ಕೈಲಾಸದಲ್ಲೇ ಇದ್ದ ಹಾಗಿದೆ~ ಎಂದರು ಗುಲ್ಬರ್ಗದ ಕಲ್ಯಾಣರಾವ್ ಬುಜರ್ಕೆ.
ನಗರದ ಸಿದ್ಧಾರೂಢಸ್ವಾಮಿ ಮಠದಲ್ಲಿ ಕೈಲಾಸ ಮಂಟಪದ ಎದುರು ನಡೆದ ಮಹಾ ರುದ್ರಾಭಿಷೇಕದಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.

`ಮುಂಜಾನೆ 8.30 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಅಂದರೆ 4 ತಾಸುಗಳವರೆಗೆ ಮಹಾರುದ್ರಾಭಿಷೇಕದಲ್ಲಿ ಪಾಲ್ಗೊಂಡೆ. 108 ಸಲ ಶಿವಾಯ ನಮಃ ಹೇಳಿದೆ~ ಎಂದು ಅವರು ಸಂತಸಪಟ್ಟರು.

ಅವರ ಹಾಗೆ ಕೈಲಾಸ ಮಂಟಪದ ಎದುರು ಕುಳಿತ ಒಟ್ಟು 1,000 ದಂಪತಿಗಳಿಗೆ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಭಾವಚಿತ್ರ ಮತ್ತು ಸಿದ್ಧಾರೂಢರ ಪುಟ್ಟ ಮೂರ್ತಿಯನ್ನು ನೀಡಲಾಗಿತ್ತು. ಅವರೆಲ್ಲ ಮೂರ್ತಿಗೆ ಬಿಲ್ವಪತ್ರೆ ಹಾಗೂ ಹೂವುಗಳನ್ನು ಅರ್ಪಿಸಿ, ಊದುಬತ್ತಿ ಬೆಳಗಿ ಪೂಜಿಸಿದರು.

ಇದು ಸಿದ್ಧಾರೂಢ ಸ್ವಾಮಿಗಳ 175ನೇ ಜನ್ಮೋತ್ಸವ ಹಾಗೂ ಗುರುನಾಥರೂಢರ 100ನೇ ಜನ್ಮೋತ್ಸವ, ವಿಶ್ವಶಾಂತಿ ಹಾಗೂ ಲೋಕಕಲ್ಯಾಣಾರ್ಥ ಮತ್ತು ಸಕಲ ಸಂಕಷ್ಟಗಳಿಂದ ಮುಕ್ತರಾಗಲು ನಡೆದ ಕಾರ್ಯಕ್ರಮ. ಕಳೆದ ವರ್ಷದ ನವೆಂಬರ್ 1ರಿಂದ ಫೆಬ್ರುವರಿ 10ರ ವರೆಗೆ ಹಮ್ಮಿಕೊಂಡಿರುವ 1 ಲಕ್ಷ ಮಹಾರುದ್ರಾಭಿಷೇಕದ ಕಾರ್ಯಕ್ರಮ ಆರಂಭವಾಗಿ ಹೊಸ ವರ್ಷದ ಮೊದಲ ದಿನವಾದ ಭಾನುವಾರಕ್ಕೆ 60 ದಿನಗಳಾದ ಪ್ರಯುಕ್ತ 1,000 ದಂಪತಿಗಳಿಂದ ಮಹಾರುದ್ರಾಭಿಷೇಕ ನಡೆಯಿತು.

ಮಹಾರಾಷ್ಟ್ರದ ನಾಗಪುರ, ಸೊಲ್ಲಾಪುರ, ಅಹ್ಮದ್‌ನಗರ, ನಾಸಿಕ್, ರಾಜ್ಯದ ಬೀದರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ವಿಜಾಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ ಮೊದಲಾದ ಜಿಲ್ಲೆಗಳಿಂದ ಆಗಮಿಸಿದ ದಂಪತಿಗಳು ಮಹಾ ರುದ್ರಾಭಿಷೇಕದಲ್ಲಿ ಪಾಲ್ಗೊಂಡರು.

`ಪ್ರತಿ ವರ್ಷ ಹೊಸ ವರ್ಷವನ್ನು ಮಹಾ ರುದ್ರಾಭಿಷೇಕ ಮೂಲಕ ಸಿದ್ಧಾರೂಢ ಮಠದಲ್ಲಿ ಆಚರಿಸೋಣ~ ಎಂದು ಬೀದರಿನ ಶಿವಕುಮಾರ ಸ್ವಾಮೀಜಿ ಸಲಹೆ ನೀಡಿದರು. ಇಂಡಿಯ ಸ್ವರೂಪಾನಂದ ಸ್ವಾಮೀಜಿ, ಮಠದ ಮುಖ್ಯ ಆಡಳಿತಾಧಿಕಾರಿಯಾದ ನ್ಯಾಯಮೂರ್ತಿ ಕೆ. ನಟರಾಜನ್, ಮಹಾರುದ್ರಾಭಿಷೇಕ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಂಠಿ, ರಂಗಾ ಬದ್ದಿ, ಧರ್ಮದರ್ಶಿ ಶ್ಯಾಮಾನಂದ ಪೂಜಾರಿ ಮೊದಲಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT