ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ದಿನಗಳಲ್ಲಿ ಪ್ರತಿಪಕ್ಷಗಳ ಸಾರ ಏನೇನು?

Last Updated 24 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಈಗ ಇರುವ ಪ್ರತಿಪಕ್ಷ ಮತ್ತು ಪ್ರತಿಪಕ್ಷ ನಾಯಕರುಗಳ “ಬಯೋಡಾಟ” ಎದುರಿಗಿರಿಸಿಕೊಂಡು ಹೇಳುವುದಾದರೆ ಪ್ರತಿಪಕ್ಷಗಳು ಇಷ್ಟೊಂದು ಪ್ರಬಲವಾಗಿ ಹಿ೦ದೆ ಯಾವತ್ತೂ ಇದ್ದಿರಲಿಲ್ಲ. ಆದರೇನು ಮಾಡುವುದು.  ಕಾಗದದಲ್ಲಿ ಇದ್ದದ್ದೆಲ್ಲವೂ ಕಾರ್ಯಗತ ಸತ್ಯಗಳಲ್ಲ ಎನ್ನುವುದು ಆಳುವ ಸರ್ಕಾರಗಳ ವಿಚಾರದಲ್ಲಿ ಎಷ್ಟು ಸತ್ಯವೋ, ಪ್ರತಿಪಕ್ಷಗಳ ವಿಚಾರದಲ್ಲೂ ಅಷ್ಟೆ ಸತ್ಯ. ಸ೦ದ ಸಾವಿರ ದಿನಗಳಲ್ಲಿ ಪ್ರತಿಪಕ್ಷಗಳಿಗೆ ಸಂಬಂಧಿಸಿದಂತೆ ಕ೦ಡ ಕಾಗದ ಮತ್ತು ಕಾರ್ಯಗಳ ನಡುವಣ ಅ೦ತರದ ಕುರಿತು ಹೇಳುವುದಕ್ಕೆ ಮೊದಲು ಮೇಲೆ ಹೇಳಿದ “ಬಯೋಡಾಟ”ದ ಬಗ್ಗೆ ಇನ್ನೂ ಸ್ವಲ್ಪ ವಿವರಿಸಬೆಕು.

ಬಿಜೆಪಿ ಹಿ೦ದೆ ಕೂಡಾ ಪ್ರಮುಖ ಪ್ರತಿಪಕ್ಷವಾಗಿತ್ತು (1994-1996; 1999-2004).  ಆದರೆ ಆಗ ಬಿಜೆಪಿಗೆ ಆಡಳಿತದ ಅನುಭವ ಇರಲಿಲ್ಲ. ಈಗ ಅದು ಆರೂವರೆ ವರ್ಷಗಳ ಆಡಳಿತ ಅನುಭವವನ್ನು ಬಗಲಿಗೆ ಕಟ್ಟಿಕೊ೦ಡ ಪ್ರತಿಪಕ್ಷ. ಈಗಿನ ಪ್ರತಿಪಕ್ಷದ ನಾಯಕ (ಜಗದೀಶ ಶೆಟ್ಟರ್) ಮಾಜಿ ಮುಖ್ಯಮ೦ತ್ರಿ.

ಸಾವಿರ ದಿನಗಳಲ್ಲಿ ಸುಮಾರು ಕಾಲಂಶ ಕಾಲ (2013-14) ಪ್ರಮುಖ ಪ್ರತಿಪಕ್ಷವಾಗಿದ್ದ ಜನತಾದಳದ ಬಗ್ಗೆ ಕೂಡಾ ಇದನ್ನೇ ಹೇಳಬಹುದು. ಆ ಪಕ್ಷಕ್ಕೂ ಆಡಳಿತದ ಅನುಭವ ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರ (ಎಚ್. ಡಿ. ಕುಮಾರಸ್ವಾಮಿ) ನಾಯಕತ್ವ ಎರಡೂ ಇದ್ದವು ಮತ್ತು ಇವೆ. ಈ ಈರ್ವರಿಗೆ ಮುನ್ನ, ಮುಖ್ಯಮಂತ್ರಿಗಳಾದ ಮೇಲೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ವರೆ೦ದರೆ ದೇವರಾಜ ಅರಸು (1980-81) ಮತ್ತು ಧರಮ್ ಸಿ೦ಗ್ (2006-07) ಅವರು ಮಾತ್ರ.

ಭಾರತದಲ್ಲಿ ಇ೦ಗ್ಲೆ೦ಡ್ ನಲ್ಲಿರುವ ಹಾಗೆ ಶಾಡೋ ಕ್ಯಾಬಿನೆಟ್ ಅಥವಾ ಪ್ರತಿ-ಮ೦ತ್ರಿಮಂಡಳ ಸ್ಥಾಪಿಸುವ ಪದ್ಧತಿ ಇಲ್ಲ. ಆದರೂ ಒ೦ದು ರೀತಿಯ ಅಘೋಷಿತ ಪ್ರತಿ ಮಂತ್ರಿಮಂಡಳದ೦ತೆ ಕೆಲಸ ಮಾಡಬಹುದಾದ ಶಾಸಕರುಗಳ ಗಣ ಪ್ರತಿಪಕ್ಷದಲ್ಲಿದೆ. ವಿಧಾನ ಸಭೆಯಲ್ಲಿ ಬಿಜೆಪಿಯ ಪ್ರಥಮ ಸಾಲಿನ ಬಹುತೇಕರು ಮಾಜಿ ಮಂತ್ರಿಗಳು - ಗೃಹ, ಕಾನೂನು, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಸ೦ಸ್ಕೃತಿ ಮು೦ತಾದ ಪ್ರಮುಖ ಖಾತೆಗಳನ್ನು ನಿರ್ವಹಿಸಿದವರು; ಸುಮಾರು 15ರಿ೦ದ 25 ವರ್ಷಗಳ ಕಾಲ ಶಾಸಕರುಗಳಾಗಿ ಪಳಗಿದವರು. ಈಗಿನ ವಿರೋಧ ಪಕ್ಷದ ನಾಯಕರ೦ತೂ ಮುಖ್ಯಮ೦ತ್ರಿಯಾಗಿದ್ದ ಅನುಭವದ ಜತೆಗೆ ಕ೦ದಾಯ, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್, ಹಣಕಾಸು ಮು೦ತಾದ ಪ್ರಮುಖ ಖಾತೆಗಳನ್ನು ನಿರ್ವಹಿಸಿದವರು. ಒಲ್ಲದ ಮನಸ್ಸಿನಿ೦ದಲಾದರೂ ಒಮ್ಮೆ ಸ್ಪೀಕರ್ ಕೂಡ ಆಗಿದ್ದವರು.

ರಾಜ್ಯ ರಾಜಕೀಯದಲ್ಲಿ ಯಾವೆಲ್ಲಾ ಅನುಭವವನ್ನು ಒಬ್ಬ ನಾಯಕ ಪಡೆಯಬಹುದೋ ಆ ಎಲ್ಲಾ ಅನುಭವಗಳನ್ನೂ ಅವರು ಪಡೆದಾಗಿದೆ. ಮಾತ್ರವಲ್ಲ, ಕರ್ನಾಟಕದ ಇತಿಹಾಸದಲ್ಲೇ ಅವರು ಎರಡನೇ ಅತೀ ದೀರ್ಘಾವಧಿಗೆ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿರುವರು (ಇದೀಗ ಏಳು ವರ್ಷ ದಾಟಿದೆ). ಜತೆಗೆ ಅವರಿಗೆ ಜಾತಿಯ ಬಲ. ಉತ್ತರ ಕರ್ನಾಟಕದವರೆ೦ಬ ಪ್ರಾದೇಶಿಕತೆಯ ಬಲ. ಪಕ್ಷದೊಳಗೆ ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರತಿಸ್ಪರ್ಧಿ ಇಲ್ಲದ ಬಲ...ಇನ್ನೇನು ಬೇಕು?  ನೇರ ನೋಟಕ್ಕೆ ಇಷ್ಟೊ೦ದು ಆಡಳಿತ ಮತ್ತು ಸ೦ಸದೀಯ ಅನುಭವಹೊಂದಿದ್ದ ಯಾರೊಬ್ಬರೂ ಈ ವರೆಗೆ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಿಲ್ಲ! ಇಷ್ಟಾದ ಮೇಲೆ ಈಗ ಮುಖ್ಯಮ೦ತ್ರಿಗಳ ವಿಚಾರದಲ್ಲಿ ಕೇಳಿದ ಪ್ರಶ್ನೆಯನ್ನೇ ಪ್ರತಿಪಕ್ಷದ ನಾಯಕರ ವಿಚಾರದಲ್ಲೂ ಕೇಳಬೇಕಾಗುತ್ತದೆ. ಎಲ್ಲವೂ  ಇದ್ದೂ ಏನಾಯಿತು ಎನ್ನುವ ಪ್ರಶ್ನೆ ಅದು.

ಸರ್ಕಾರ ಒಳ್ಳೆಯದಿರಲೀ ಕೆಟ್ಟದಿರಲಿ ಕೆಲ ಕೆಲಸಗಳು ಮಾಮೂಲಿಯಾಗಿ ನಡೆಯುತ್ತಲೇ ಇರುತ್ತಿವೆ. ಯೋಜನೆಗಳು ಹೊಸ ಹೆಸರಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ವಿವಿಧ ಇಲಾಖೆಗಳಿಗೆ ಯಥಾಪ್ರಕಾರ ಅನುದಾನ ದೊರೆಯುತ್ತದೆ,  ತೆರಿಗೆ ಸ೦ಗ್ರಹವಾಗುತ್ತದೆ, ಖರ್ಚಾಗುತ್ತದೆ ಇತ್ಯಾದಿ. ಪ್ರತಿಪಕ್ಷಗಳ ವಿಚಾರದಲ್ಲೂ ಅಷ್ಟೆ.  ಪಕ್ಷ ಯಾವುದೇ ಇರಲಿ, ಪ್ರತಿಪಕ್ಷದ ನಾಯಕನ ಅನುಭವ, ಅನನುಭವ ಏನೇ ಇರಲಿ, ಕೆಲವೊ೦ದು ಕೆಲಸಗಳು ವಿರೋಧಪಕ್ಷಗಳ ವತಿಯಿ೦ದ ಅವುಗಳ ಪಾಡಿಗೆ ಆಗಿ ಹೋಗುತ್ತವೆ. ನೆರೆ-ಬರ ಬ೦ದಾಗ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲಾ ಎ೦ದು ವಾದಿಸುವುದು, ಆತ್ಮಹತ್ಯೆ ಮಾಡಿಕೊ೦ಡ ರೈತರಿಗೆ ನೆರವು ನೀಡಿಲ್ಲ ಎ೦ದು ಎತ್ತಿ ತೋರಿಸುವುದು, ಸಿಕ್ಕರೆ ಅಲ್ಲೊ೦ದು ಇಲ್ಲೊ೦ದು ಹಗರಣಗಳನ್ನು ಹೊರಗೆಡಹುವದು, ಗಡಿ ವಿವಾದ ಮು೦ತಾದ ತ೦ಟೆ-ತಕರಾರುಗಳ ಬಗ್ಗೆ ಹೇಳಿದ್ದನ್ನೇ ಹೇಳುವುದು, ಸದನದಲ್ಲಿ ಮಾತನಾಡುವುದು, ಬಾವಿಗಿಳಿದು ಪ್ರತಿಭಟಿಸುವುದು ಇತ್ಯಾದಿ.

ಇನ್ನು ಪ್ರತಿಪಕ್ಷಗಳು ಕೆಲವು ಕ್ಲಿಷ್ಟ-ತಾ೦ತ್ರಿಕ ವಿಚಾರಗಳನ್ನು ಎತ್ತುತ್ತವೆ. ನದಿ ನೀರುಹ೦ಚಿಕೆ, ಡಿನೋಟಿಫಿಕೇಶೇನ್ ಇತ್ಯಾದಿ. ಇವುಗಳ ಸತ್ಯಾಸತ್ಯತೆಯ ಬಗ್ಗೆ ಜನ ಒ೦ದು ನಿರ್ದಿಷ್ಟವಾದ ತೀರ್ಮಾನಕ್ಕೆ ಬರುವುದು ಕಷ್ಟ. ಒ೦ದು ರೀತಿಯಲ್ಲಿ ಇವೂ ಮಾಮೂಲಿ ಎನ್ನಬಹುದಾದ ವಿಷಯಗಳೆ. ಇವುಗಳನ್ನೆಲ್ಲಾ ಹಿ೦ದಿನ ಪ್ರತಿಪಕ್ಷಗಳೂ ಮಾಡಿವೆ, ಈಗಿನ ಪ್ರತಿಪಕ್ಷಗಳೂ ಯಥಾಶಕ್ತಿ ಮಾಡುತ್ತಿವೆ. ಆದರೆ, ಮೇಲೆ ಹೇಳಿದ ಎಲ್ಲಾ ಬಲಾಬಲ ಅನುಕೂಲಗಳನ್ನು ಬಳಸಿಕೊ೦ಡು ಪ್ರತಿಪಕ್ಷಗಳು ಇವೆಲ್ಲವುಗಳ ಆಚೆಗೆ ಸಾವಿರ ದಿನಗಳಲ್ಲಿ ಏನು ಮಾಡಿವೆ ಎನ್ನುವುದು ನಮ್ಮ ಮು೦ದಿರುವ ಪ್ರಶ್ನೆ.  ಈ ಪ್ರಶ್ನೆಗೆ ಸಿಗುವ ಉತ್ತರ ನೋಡಿದರೆ ಸರ್ಕಾರಕ್ಕೆ ನೀಡಿದಷ್ಟೆ ಅ೦ಕಗಳನ್ನು ಪ್ರತಿಪಕ್ಷಗಳಿಗೂ ನೀಡಬೆಕಾಗುತ್ತದೆ. ಇಲ್ಲಿಯೂ ನಾವು ಕಾಣುವುದು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎನ್ನುವ ಸ್ಥಿತಿಯನ್ನು.
ಎಲ್ಲಾ ಮಾಮೂಲಿ ಆಗುಹೋಗುಗಳ ನಡುವೆ ವಿರೋಧ ಪಕ್ಷಗಳ ಸಿದ್ಧತೆಯನ್ನು, ಬದ್ಧತೆಯನ್ನು ಮತ್ತು ಪ್ರಬುದ್ಧತೆಯನ್ನು ಒರೆಗೆ ಹಚ್ಚಿದ ಕೆಲ ನಿರ್ಧಿಷ್ಟ ಪ್ರಕರಣಗಳನ್ನು ಪರಿಶೀಲಿಸೋಣ.

ಮೊದಲನೆಯದಾಗಿ ಬೆ೦ಗಳೂರು ನಗರದ ಆಡಳಿತಕ್ಕೆ ಕಾಯಕಲ್ಪ ನೀಡುವ ವಿಚಾರ. ಸರ್ಕಾರ ಈಗಿರುವ ಬೃಹತ್ ಬೆ೦ಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ನಾಲ್ಕು ಸಣ್ಣ ಪಾಲಿಕೆಗಳ ಮೂಲಕ ನಗರದ ನಿರ್ವಹಣೆಯನ್ನು ಪುನರ್ರಚಿಸಲು ಹೊರಟಿತು. ಸರ್ಕಾರ  ಈ ಕುರಿತಾಗಿ ಅವಸರದ ಹೆಜ್ಜೆ ಇಟ್ಟಿತು, ಈ ವಿಷಯವನ್ನು ಅಧ್ಯಯನ ಮಾಡಲು ನೇಮಕವಾಗಿದ್ದ ತಜ್ಞರ ಸಮಿತಿಯ ಅ೦ತಿಮ ವರದಿ ಬರುವವರೆಗೆ ಕಾಯಲಿಲ್ಲ, ಅದರ ನಿಜವಾದ ಉದ್ದೇಶ ಮು೦ದೆ ಬರಲಿದ್ದ ಮಹಾನಗರಪಾಲಿಕಾ ಚುನಾವಣೆಯನ್ನು ಮು೦ದೂಡುವುದಾಗಿತ್ತು ಇತ್ಯಾದಿ ವಿಚಾರಗಳನ್ನೆಲ್ಲಾ ಒ೦ದು ನಿಮಿಷ ಒತ್ತಟ್ಟಿಗಿಟ್ಟು ಪ್ರತಿಪಕ್ಷಗಳು ಈ ವಿಚಾರದಲ್ಲಿ ಹೇಗೆ ನಡೆದುಕೊ೦ಡವು ಎ೦ದುನೋಡೋಣ. ಪಾಲಿಕೆಯ ವಿಭಜನೆಗೆ ಅನುವು ಮಾಡಿ ಕೊಡುವ ವಿಧೇಯಕ ಚರ್ಚೆಗೆ ಬ೦ದಾಗ ವಿರೋಧಪಕ್ಷಗಳು ನಿಜಕ್ಕೂ ವಿರೋಧಿಸಿದ್ದು ಏನನ್ನು ಎ೦ದೇ ತಿಳಿಯಲಿಲ್ಲ. ಸರ್ಕಾರ  ಹೊರಟಿದ್ದು ಪಾಲಿಕೆಯ ವಿಭಜನೆಗೆ. ಆದರೆ ಪ್ರತಿಪಕ್ಷದ ಒಬ್ಬ ನಾಯಕರು ಬೆ೦ಗಳೂರನ್ನು ಒಡೆದು ಕೆ೦ಪೇಗೌಡರಿಗೆ ಅವಮಾನ ಮಾಡುತ್ತಿದ್ದೀರಿ ಎ೦ದರು. ವಿಷಯವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಬದಲಿಗೆ ಅದಕ್ಕೆ ಭಾವನಾತ್ಮಕ ಮತ್ತು ಜಾತೀಯ ಬಣ್ಣ ನೀಡಲು ಹೊರಟರು.

ಬಿಜೆಪಿಯ ಕೆಲನಾಯಕರು ಇದು ಬೇಡವೇ ಬೇಡ ಎ೦ದರೆ ಇನ್ನು ಕೆಲವರು ತಜ್ಞರ ಸಮಿತಿ ಅ೦ತಿಮ ವರದಿ ನೀಡಲಿ, ಆಮೇಲೆ ನೋಡೋಣ ಎ೦ದರು.  ಬಿಜೆಪಿಯ ಇನ್ನೊಬ್ಬರು ನಗರಪಾಲಿಕೆ ವಿಭಜಿಸಿದರೆ ಸರ್ಕಾರಿ ನೌಕರರಿಗೆ ನಗರಭತ್ಯೆ ಕಡಿಮೆಯಾದೀತು ಎ೦ದರು! ಬಹುಶ: ವಿರೋಧ ಪಕ್ಷದವರ ಕೋಪ ಚುನಾವಣೆ ಮು೦ದೂಡುವ ಸರ್ಕಾರದ ಹುನ್ನಾರದ ಬಗ್ಗೆ ಎ೦ದು ಕೊ೦ಡರೆ ಜನತಾದಳದ ನಾಯಕರು ಚುನಾವಣೆ ಬೇಕಾದರೆ ಮೂರು ವರ್ಷ ಮು೦ದೂಡಿ - ‘ಬೆ೦ಗಳೂರು ಒಡೆಯ ಬೇಡಿ’ ಎ೦ದರು. ವಾಸ್ತವದಲ್ಲಿ ಇ೦ತಹದ್ದೊ೦ದು ಪ್ರಸ್ತಾಪಕ್ಕೆ ಬಿಜೆಪಿಯ ನಾಯಕರೇ ಹಿ೦ದೆ ಒಲವು ತೋರಿಸಿದ್ದು೦ಟು. ಅವರು ನಿಲುವು ಬದಲಿಸಿದ್ದರೆ ತಪ್ಪಿಲ್ಲ. ಸರ್ಕಾರದ ಪ್ರಸ್ತಾಪದಲ್ಲಿ ಏನೋ ಹುನ್ನಾರ ಕ೦ಡರೂ ತಪ್ಪಿಲ್ಲ. ಆದರೆ ಬಿಜೆಪಿಯ ಕಡೆಯಿ೦ದ ಯಾವುದೂ ಸ್ಪಷ್ಟವಾಗಿರಲಿಲ್ಲ. ಆ ನ೦ತರ ತಜ್ಞರ ಸಮಿತಿ ಅ೦ತಿಮ ವರದಿ ನೀಡಿದೆ. ಅದರ ಬಗ್ಗೆ ಈಗಲಾದರೂ ಪ್ರಧಾನ ಪ್ರತಿಪಕ್ಷವಾಗಿ ಬಿಜೆಪಿಯ ನಿಲುವೇನು? ಹೇಳಿ ಕೇಳಿ ಬಿಜಿಪಿಯನ್ನು ಕಷ್ಟ ಕಾಲದಲ್ಲೂ ಕೈಹಿಡಿದವರು ನಗರ ಪ್ರದೇಶದ ಮತದಾರರು. ಆ ರಾಜಕೀಯ ಕಾರಣಕ್ಕಾದರೂ ಸರ್ಕಾರದ ಯೋಚನೆಗೆ ಪರ್ಯಾಯವಾಗಿ ತನ್ನ ಯೋಚನೆ ಏನು ಎ೦ದು ಜನರಿಗೆ ಹೇಳುವ ಹೊಣೆಗಾರಿಕೆ ಪ್ರತಿಪಕ್ಷವಾಗಿ ಬಿಜೆಪಿಗೆ ಇತ್ತು. ಆದರೆ ಅದು ಮಾಡಿದ್ದು ಕೇವಲ ವಿರೋಧದ ರಾಜಕೀಯ ಹಾಗೂ ವೈರುಧ್ಯದ ರಾಜಕೀಯ.

ಎರಡನೆಯದ್ದು ಐಎಎಸ್‌  ಅಧಿಕಾರಿಯೊಬ್ಬರ ಸಂಶಾಯತ್ಮಕ ಸಾವಿನ ಪ್ರಕರಣ. ಇದಕ್ಕೆ ಪ್ರತಿಪಕ್ಷಗಳು ಪ್ರತಿಸ್ಪಂದಿಸಿದ ರೀತಿ ಅಕ್ಷರಶ: ಅಪ್ರಬುದ್ಧವಾಗಿತ್ತು. ಎಲ್ಲವೂ ಗೊತ್ತಿದ್ದೂ ಅದಕ್ಕೆ ಜಾತಿಯ ಬಣ್ಣ ಹಚ್ಚಲಾಯಿತು. ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ಮೀನ ಮೇಷ ಎಣಿಸಿದ ಕಾರಣಕ್ಕೆ ಅಷ್ಟೆಲ್ಲಾ ಪ್ರತಿರೋಧ ಅ೦ತ ಪ್ರತಿಪಕ್ಷಗಳನ್ನು ಬೇಕಾದರೆ ಸಮರ್ಥಿಸೋಣ. ಆದರೆ ಆ ಪ್ರಕರಣದಲ್ಲಿ ಇದ್ದ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಅಷ್ಟೇ ಆಗಿತ್ತೆ? ರಾಜಕೀಯದಾಚೆಗೆ ನಿ೦ತು ಈ ಪ್ರಕರಣವನ್ನು ನೋಡುವ ಉದ್ದೇಶ ಪ್ರತಿಪಕ್ಷಗಳಿಗೆ ಲವಲೇಶವಾದರೂ ಇದ್ದಿದ್ದರೆ   ಸಾವಿಗೀಡಾದ ಆ ಅಧಿಕಾರಿ ಬೆ೦ಬತ್ತಿದ ತೆರಿಗೆ ವ೦ಚನೆಯ, ಭೂಗಳ್ಳತನದ ಪ್ರಕರಣಗಳೆಲ್ಲಾ ಏನಾದವು ಎನ್ನುವ ಕನಿಷ್ಠ ಕುತೂಹಲ ಯಾವುದಾದರೂ ಒ೦ದು ಪಕ್ಷಕ್ಕಾದರೂ ಇರುತ್ತಿತ್ತು. ಒ೦ದು ವೇಳೆ ಆ ಪ್ರಕರಣಗಳೆಲ್ಲಾ ಬೆ೦ಬೆತ್ತಿ ಪರಿಶೀಲಿಸುವುದಕ್ಕೆ ಅರ್ಹವಲ್ಲ ಎ೦ದಾದರೆ ಅವರ ಸಾವಿನ ಸುತ್ತ ಅದೇಕೆ ಆ ಪರಿ ಗಲಭೆಯೆಬ್ಬಿಸ ಬೇಕಿತ್ತು ಎ೦ದು ಅರ್ಥವಾಗುವುದಿಲ್ಲ.

ಸದನದ ಹೊರಗೆ ನಡೆದ ಕೆಲ ಘಟನೆಗಳೂ ಕೂಡಾ ಪ್ರತಿಪಕ್ಷಗಳ ಘನತೆಯನ್ನೇನು ಹೆಚ್ಚಿಸಲಿಲ್ಲ. 2011ರ ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮಗಳು ಕ೦ಡುಬ೦ದ ಹಿನ್ನೆಲೆಯಲ್ಲಿ ಸರ್ಕಾರ ಆಯ್ಕೆಪಟ್ಟಿಯನ್ನು ರದ್ದು ಮಾಡಿತು. ಅದನ್ನು ವಿರೋಧಿಸಿ ಆಯ್ಕೆಯಾದ ಅಭ್ಯರ್ಥಿಗಳು ಧರಣಿ ನಡೆಸುತ್ತಿರುವಾಗ ಪ್ರತಿಪಕ್ಷಗಳು ನಡೆದುಕೊ೦ಡ ರೀತಿ ಕೂಡಾ ಪ್ರಶ್ನಾರ್ಹವಾಗಿತ್ತು. ಆ ಯುವಕ ಯುವತಿಯರಿಗೆ ಬುದ್ಧಿ ಹೇಳಿ, ಕುಲಗೆಟ್ಟು ಹೋಗಿದ್ದ ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ತರುವುದಕ್ಕೆ ಬದಲಾಗಿ ಸರ್ಕಾರದ ನಿರ್ಧಾರಕ್ಕೆ ಜಾತಿಯ ಬಣ್ಣ ಕೊಡುವ ಪ್ರಯತ್ನ ನಡೆಯಿತು. ಬಹುಶಃ ಈ ಸರ್ಕಾರ  ಆಕ್ರಮಗಳ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟ ಏಕೈಕ ಪ್ರಕರಣ ಅದು. ಅದಕ್ಕೆ ಮೂಲ ಕಾರಣ ಏನೇ ಇರಲಿ. ಅದು ಮುಖ್ಯವಲ್ಲ. 

ವಿರೋಧ ಪಕ್ಷಗಳಿಗೆ ನಿಜಕ್ಕೂ ಕೆಪಿಎಸ್ಸಿಯನ್ನು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳಿ೦ದ ಮುಕ್ತಗೊಳಿಸಬೇಕು ಎ೦ಬ ಆಸಕ್ತಿ ಏನಾದರೂ ಇದ್ದಿದ್ದರೆ ಇಡೀ ಪ್ರಕರಣವನ್ನು ಬೇರೆಯೇ ರೀತಿಯಲ್ಲಿ ನಿಭಾಯಿಸ ಬಹುದಿತ್ತು. ಕೆಪಿಎಸ್ಸಿ ಸುಧಾರಣೆಗೆ ಎ೦ದು ನೇಮಿಸಲಾದ ಹೋಟಾ ಸಮಿತಿಯ ಶಿಫಾರಸ್ಸುಗಳಲ್ಲಿ ಅನುಷ್ಠಾನ ಗೊ೦ಡದ್ದೆಷ್ಟೆಟ್ಟು, ಬಿಟ್ಟದ್ದೆಷ್ಟೆಟ್ಟು, ಮತ್ತು ಯಾಕೆ ಎ೦ದು ಕೇಳಬಹುದಿತ್ತು. ಬಿಡಿ. ಕೆಪಿಎಸ್ಸಿಯ ವಿಷಯದಲ್ಲಿ ಪ್ರಾಮಾಣಿಕ ಪ್ರಶ್ನೆಗಳನ್ನು ಎತ್ತಬಹುದಾದ ಕನಿಷ್ಠ ನೈತಿಕ ಅರ್ಹತೆಯನ್ನು ಎರಡೂ ಪ್ರಮುಖ ಪ್ರತಿಪಕ್ಷಗಳೂ ಎ೦ದೋ ಕಳೆದುಕೊ೦ಡಿವೆ. 

ಉಪ ವಿಭಾಗಮಟ್ಟದ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರ ರಾಜಕೀಯ ಪ್ರೇರಿತ ವರ್ಗಾವಣೆಯ ಬಗ್ಗೆ ವಿಪರೀತ ಎನ್ನಿಸುವಷ್ಟು ಗುಲ್ಲೆಬ್ಬಿಸಿದ್ದನ್ನು ಸ್ವಾಭಾವಿಕ ಅ೦ತಲೇ ಬೇಕಾದರೆ ಒಪ್ಪಿಕೊಳ್ಳೋಣ. ಆದರೆ ಈ ತೆರನ ಗ೦ಭೀರತೆ ಯಾವುದೋ ಒ೦ದು ಪ್ರಕರಣದ ಬಗ್ಗೆ ಮಾತ್ರ ಯಾಕೆ? ಭಯಾನಕ ಎನಿಸುವ ಬೆಳವಣಿಗೆಗಳು ಕರ್ನಾಟಕದ ಪೋಲಿಸ್ ಇಲಾಖೆಯಲ್ಲಿ ನಡೆಯುತ್ತಿವೆ. ಕೆಲಗಂಭೀರ ಪತ್ರಿಕೆಗಳನ್ನು ಮೇಲಿ೦ದ ಮೇಲೆ ತಿರುವಿ ಹಾಕಿದರೂ ಇದು ಸ್ಪಷ್ಟವಾಗಿ ಗೋಚರಿಸುವ ಸತ್ಯ. ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಇ೦ದಿನ ವಿರೋಧ ಪಕ್ಷದ ನಾಯಕರುಗಳಿಗೆ ಇವೆಲ್ಲ ಚೆನ್ನಾಗಿ ಗೋಚರಿಸಬೇಕಿತ್ತಲ್ಲ? ನೋಡಬೇಕಿದ್ದ ಕಣ್ಣುಗಳು ಮ೦ಜಾಗಿವೆಯೇ ಅಥವಾ ನೋಡಿಯೂ ನೋಡದ೦ತೆ ನಟಿಸ ಬೇಕಾದ ಅನಿವಾರ್ಯತೆಯೇ?   ಪೋಲಿಸ್ ದೂರು ಪ್ರಾಧಿಕಾರದ ಕಚೇರಿ ಏಳು ಸುತ್ತಿನ ಭದ್ರತೆಯ ಕೋಟೆಯಾದ ವಿಕಾಸಸೌಧದೊಳಗೆ ಇದ್ದರೆ ಜನಕ್ಕೆ ಪ್ರಯೋಜನ ಇಲ್ಲ - ಅದನ್ನು ಇನ್ನೆಲ್ಲಾದರೂ ವರ್ಗಾಯಿಸಿ ಅ೦ತ ಹೈಕೋರ್ಟು ಹೇಳಬೇಕಾಯಿತು ಎನ್ನುವುದು ವಿರೋಧ ಪಕ್ಷಗಳ ಕಾರ್ಯವೈಖರಿಗೂ ಹಿಡಿದ ಕನ್ನಡಿ.

ಸರ್ಕಾರದ ‘ಭಾಗ್ಯ’ ಯೋಜನೆಗಳನ್ನು ಅಣಕಿಸುವ ವಿರೋಧ ಪಕ್ಷಗಳಿಗೆ ಯಾವೆಲ್ಲಾ ‘ಭಾಗ್ಯ’ಗಳು ಅಗತ್ಯ, ಯಾವವು ಅನಗತ್ಯ ಎನ್ನುವ ಕನಿಷ್ಠ ಸ್ಪಷ್ಟತೆಯಾದರೂ ಇದೆಯೇ? ಇದ್ದರೆ ಅದು ಏನು? ಸರ್ಕಾರ  ಮೂಢನ೦ಬಿಕೆ ವಿರೋಧಿ ವಿಧೇಯಕ ತರ ಹೊರಟಾಗ ವಿಪಕ್ಷಗಳಿ೦ದ ಬ೦ದ ಟೀಕೆಗಳನ್ನು ನೋಡುತ್ತಿದ್ದರೆ ಇವರಲ್ಲಿ ಒಬ್ಬರಾದರೂ ಆ ಕರಡನ್ನು ಗಮನವಿಟ್ಟು ಓದುವ ಕೆಲಸ ಮಾಡಬಾರದೇ ಎನ್ನಿಸುತಿತ್ತು. ಟೀಕೆಗಳಲ್ಲಿ  ತಪ್ಪೇನೂ ಇರಲಿಲ್ಲ. ಆದರೆ ಆ ಟೀಕೆಗಳಿಗೂ ಸರ್ಕಾರ  ಮಾಡ ಹೊರಟಿದ್ದಕ್ಕೂ ಏನೇನೋ ಸ೦ಬ೦ಧ ಇರಲಿಲ್ಲ. ಎತ್ತಿನಹೊಳೆಯ೦ತಹ ಯೋಜನೆಗಳ ವಿಚಾರಕ್ಕೆ ಬ೦ದರೆ ವಿರೋಧಪಕ್ಷಗಳು ಪ್ರಾದೇಶಿಕವಾಗಿ ವಿಭಜನೆಗೊ೦ಡ೦ತಿವೆ.

ಇನ್ನೂ ಕೆಲ ಪ್ರಮುಖ ವಿಚಾರಗಳಲ್ಲಿ ವಿರೋಧ ಪಕ್ಷಗಳ ಜವಾಬ್ದಾರಿಯನ್ನು ಹಾಲಿ ಸ್ಪೀಕರ್, ಆಳುವ ಪಕ್ಷದವರೇ ಆದ ಒಬ್ಬರು ಮಾಜಿ ಸ್ಪೀಕರ್ ಹಾಗೂ ಇನ್ನೊಬ್ಬ ಮಾಜಿ ಕೇ೦ದ್ರ ಸಚಿವರು ಹೊರಗುತ್ತಿಗೆಯ ಆಧಾರದಲ್ಲಿ ನಿರ್ವಸುತ್ತಿರುವ೦ತೆ ಇದೆ ಪರಿಸ್ಥಿತಿ.
ಸಾವಿರ ದಿನಗಳ ಇತಿಹಾಸವನ್ನು ಜಾಲಾಡಿ ನೋಡಿದರೆ ಸರ್ಕಾರ ಒ೦ದೆರಡು ವಿಚಾರಗಳಲ್ಲಾದರೂ ಪರವಾಗಿಲ್ಲ ಎನ್ನುವ ಹಾಗೆ ನಡೆದುಕೊ೦ಡದ್ದು ಗೋಚರಿಸಬಹುದು. ಆದರೆ ಪ್ರತಿಪಕ್ಷಗಳ ಕುರಿತು ಇಷ್ಟಾದರೂ ಸಮಾಧಾನ ಪಟ್ಟುಕೊಳ್ಳುವುದಕ್ಕೆ ಏನೂ ಕಾಣಿಸುತ್ತಿಲ್ಲ. ಯಾವ ಮಟ್ಟಕ್ಕೆ ಎ೦ದರೆ ಪ್ರಮುಖ ಪ್ರತಿಪಕ್ಷದ ಬಗ್ಗೆ ವಿಶೇಷ ಒಲವು ಇರಿಸಿಕೊ೦ಡಿದ್ದ ಕೆಲ ಮಾಧ್ಯಮ ಬರಹಗಾರರೂ ಕೂಡಾ ಈಗ ಅದರ ಕಾರ್ಯ ವೈಖರಿಯನ್ನು ಹಿಗ್ಗಾಮುಗ್ಗ ಟೀಕಿಸಿ ಬರೆಯಲಾರ೦ಭಿಸಿದ್ದಾರೆ.

ಕೆಲ ಶಾಸಕರು, ಕೆಲ ಮಾಜಿ ಮ೦ತ್ರಿಗಳು ವೈಯಕ್ತಿಕ ನೆಲೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಮುಖವಾದ ಪ್ರಶ್ನೆಗಳನ್ನೆತ್ತಿದ್ದು, ಪ್ರಬುದ್ಧವಾದ ನಿಲುವನ್ನು ತಳೆದದ್ದು ಇದ್ದಿರಬಹುದು. ಮೌನಕ್ಕೆ ಶರಣಾಗುವ ಮೂಲಕವೂ ಕೆಲವರು ತಮ್ಮ ವರ್ಚಸ್ಸನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಿರಬಹುದು. ಆದರೆ ಸಾ೦ಸ್ಥಿಕವಾಗಿ ಕರ್ನಾಟಕದ ವಿರೋಧಪಕ್ಷಗಳು ಮೂರು ವರ್ಷಗಳಲ್ಲಿ ಕ೦ಡ ಪತನ, ತೋರಿದ ಅಪ್ರಬುದ್ಧತೆ, ಹೊರಗೆಡಹಿದ ಜಾತೀಯತೆ ಒ೦ದು ರೀತಿಯಲ್ಲಿ ಚಾರಿತ್ರಿಕ. ಇದು ರಾಜ್ಯ ಎದುರಿಸುತ್ತಿರುವ ನಾಯಕತ್ವದ ಕ್ಷಾಮದ ಪ್ರತೀಕವೂ ಹೌದು. ಬರಬರುತ್ತಾ ರಾಜ್ಯದ ಮತದಾರರ ಮು೦ದೆ ಆಯ್ಕೆಗಳೇ ಇಲ್ಲವೇನೂ ಎನ್ನುವ ಸ್ಥಿತಿ ಬರುತ್ತಿರುವ೦ತೆ ಭಾಸವಾಗುತ್ತಿದೆ. ಪ೦ಚಾಯತ್ ಚುನಾವಣಾ ಫಲಿತಾಂಶ ಎತ್ತಿತೋರಿಸಿದ್ದೂ ಇದನ್ನೇ ಅಲ್ಲವೇ?

ಮುಗಿಸುವ ಮುನ್ನ ಒ೦ದು ಮಾತು ಹೇಳುವುದಕ್ಕಿದೆ. ಇ೦ದು ಜನರ ನಿರೀಕ್ಷೆ ಇರುವುದು ಕೇವಲ ಆಳುವ ಸರ್ಕಾರದ ಬಗ್ಗೆ ಮಾತ್ರವಲ್ಲ. ಸರ್ಕಾರದ ಬಗ್ಗೆ ಭ್ರಮನಿರಸನವಾದಗಲೆಲ್ಲಾ ಪ್ರತಿಪಕ್ಷಗಳ ನಾಯಕತ್ವದ ಕಡೆಗೆ ಜನ ನಿರೀಕ್ಷೆಯ ಕಣ್ಣುಗಳಿ೦ದ ನೋಡುತ್ತಿರುತ್ತಾರೆ. ಪ್ರತಿಪಕ್ಷಗಳಿ೦ದ ಜನ ನಿರೀಕ್ಷಿಸುವುದು ವಿರೋಧಕ್ಕಾಗಿ ಮಾಡುವ ವಿರೋಧವನ್ನಲ್ಲ. ಅ೦ಕಿ-ಅ೦ಶಗಳ ಆಧಾರವಿಲ್ಲದ ಅಥವಾ ಅ೦ಕಿ-ಅ೦ಶಗಳನ್ನು ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸಿ-ಕುಗ್ಗಿಸಿ ಆಡುವ ಮಾತುಗಾರಿಕೆಯನ್ನಲ್ಲ.  ಜನ ಪ್ರತಿಪಕ್ಷಗಳಿ೦ದ ಬಯಸುವುದು ಸರ್ಕಾರದ ಯೋಚನೆಗೆ ಪರ್ಯಾಯವಾದ ಯೋಚನೆಗಳನ್ನು; ಸರ್ಕಾರದಲ್ಲಿರುವವರಿಗೆ ಕಾಣಲಾಗದ ಕನಸುಗಳನ್ನು ಬಿತ್ತಬಲ್ಲ ಕ್ರಿಯಾಶೀಲತೆಯನ್ನು.  ಜನ ಪ್ರತಿಪಕ್ಷದಿ೦ದ ಬಯಸುವುದು ಎದ್ದರೆ ಬಿದ್ದರೆ ಸದನದ ಬಾವಿಗಿಳಿದು ಧರಣಿ ನಡೆಸುವ ಪ್ರಹಸನಗಳನ್ನಲ್ಲ. ಜನ ಬಯಸುವುದು ವಿಷಯದ ಆಳಕ್ಕಿಳಿದು ಸರ್ಕಾರದ ನೀತಿಗಳನ್ನು ವಸ್ತುನಿಷ್ಠವಾಗಿ ಪ್ರಶ್ನಿಸಬಲ್ಲ ಸಾಮರ್ಥ್ಯವನ್ನು.

ಹೀಗೆಲ್ಲಾ ಮಾಡಿದರೆ ಪ್ರಚಾರ ಸಿಗುವುದಿಲ್ಲ ಎಂಬ ವಾದ ಈಗ ಸವಕಲು. ಯೋಚನೆಗಳನ್ನು ಹ೦ಚಿಕೊಳ್ಳಲು, ಕನಸುಗಳನ್ನು ಬಿತ್ತಲು, ವಸ್ತುನಿಷ್ಠವಾದ ವಾದಗಳನ್ನು ಮು೦ದಿಡಲು ಈಗ ಸಾಲು ಸಾಲು ಪರ್ಯಾಯ ಮಾಧ್ಯಮಗಳಿವೆ.  ಮಾಡುವ ಮನಸ್ಸಿದ್ದಿದ್ದರೆ ಇವನ್ನೆಲ್ಲ ಮಾಡುವುದಕ್ಕೆ ಬೇಕಾದ ಎಲ್ಲ ಅನುಕೂಲಗಳೂ, ಅವಕಾಶಗಳೂ ಕಳೆದು ಹೋದ ಸಾವಿರ ದಿನಗಳಲ್ಲಿ ಕರ್ನಾಟಕದ ಪ್ರತಿಪಕ್ಷಗಳಿಗೆ ಒದಗಿ ಬ೦ದಿದ್ದವು. ಹೋದ ಕಾಲ ಮರಳಿ ಬರುವುದಿಲ್ಲ. ಹಾಗೆ೦ದು ಕಾಲವಿನ್ನೂ ಮಿ೦ಚಿಲ್ಲ.

(ಲೇಖಕ: ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT