ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಪದಗಳ ಸಂಜೆ...

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಸ್ವರ್ಗಕ್ಕೆ ಕಿಚ್ಚು ಹಚ್ಚಿರುವ ಕಲ್ಕತ್ತೆಯ ಮಸಣ. ಯಾರದೋ ಬರುವಿಕೆಗೆ ಕಾದ ಮಹಿಳೆ. ಸರೋವರದ ಬಿಂಬದಲ್ಲಿ ಮಿಂದ ಅರಮನೆ. ಪಿಳಿ ಪಿಳಿ ಕಣ್ಣಿನ ಆನೆಮರಿ. ನಿರ್ಜನ ಕಟ್ಟಡಗಳು. ಒಬ್ಬಂಟಿ ಮನುಷ್ಯರು...

ಹಲವು ಒಳಗಣ್ಣುಗಳ ಛಾಯಾಗ್ರಾಹಕ ಡೆರ‌್ರಿ ಮೂರ್. ಭಾವಚಿತ್ರ, ವಾಸ್ತುಶಿಲ್ಪ ಹಾಗೂ ಒಳಾಂಗಣ ಛಾಯಾಗ್ರಹಣಕ್ಕೆ ಹೊಸ ಸ್ಪರ್ಶ ನೀಡಿದ ಮೇರು ಪ್ರತಿಭೆ.

ಡೆರ‌್ರಿ ಹುಟ್ಟಿದ್ದು 1937ರಲ್ಲಿ, ಇಂಗ್ಲೆಂಡ್‌ನ ಪ್ರತಿಷ್ಠಿತ ಕುಟುಂಬವೊಂದರಲ್ಲಿ. ಎಟನ್‌ನಲ್ಲಿ ಶಿಕ್ಷಣ ಪೂರೈಕೆ. ನಂತರ ಆಸ್ಟ್ರಿಯಾದತ್ತ ಪಯಣ. `ಆಸ್ಕರ್ ಕೊಕೊಶ್ಕಾ ನೋಡುವ ಶಾಲೆ~ಯಲ್ಲಿ ಚಿತ್ರಕಲಾಭ್ಯಾಸ. ಅವರ ಛಾಯಾಚಿತ್ರಗಳು ಕುಂಚದಲ್ಲಿ ಅದ್ದಿ ತೆಗೆದಂತಿರಲು ಈ ಕಲಾ ಪರಿಣತಿಯೂ ಕಾರಣವೇ? ನ್ಯೂಯಾರ್ಕ್ ನಗರದಲ್ಲಿ ಪ್ರವಾಸಿ ಏಜೆಂಟ್ ಆಗಿ ದುಡಿದ ಬಳಿಕ ಬ್ರಿಲ್ ಬ್ರಾಂಟ್ ಬಳಿ ಛಾಯಾಗ್ರಹಣ ಕಲಿಕೆ.

`ನೆಸ್ಟ್~ ಪತ್ರಿಕೆಯ ಸಂಪಾದಕ ಜೋಸೆಫ್ ಹಾಲ್ಟ್ಸ್‌ಮನ್ ಹೇಳುವಂತೆ, `ಗಾಳಿಯನ್ನೂ ನೀರವ ಸ್ಥಳಗಳನ್ನೂ ಲೀಲಾಜಾಲವಾಗಿ ಹಿಡಿಯಬಲ್ಲ ಮಾಂತ್ರಿಕ~ ಡೆರ‌್ರಿ. ಹೌದು, ಅವರ ಬಹುತೇಕ ಛಾಯಾಚಿತ್ರಗಳಲ್ಲಿ ಮೌನ ಮಾತಿಗಿಳಿಯುತ್ತದೆ.

ರಾಣಿ ಎರಡನೇ ಎಲಿಜಬೆತ್, ಕಲಾವಿದ ಸಾಲ್ವಡೋರ್ ಡಾಲಿ, ಭಾರತೀಯ ಸಂಗೀತ ಲೋಕದ ಸುಬ್ಬುಲಕ್ಷ್ಮೀ, ಸಿತಾರ್ ವಿದ್ವಾಂಸ ರವಿಶಂಕರ್ ಮುಂತಾದ ಸುಪ್ರಸಿದ್ಧರು ಅವರ ಕ್ಯಾಮೆರಾ ಕಣ್ಣಲ್ಲಿ ಬೆಳಗಿದ್ದಾರೆ. ಅಲ್ಲದೆ ಡೆರ‌್ರಿ ಬರಹಗಾರರು ಕೂಡ. `ಇನ್ ಹೌಸ್~, `ನಾಟಿಂಗ್ ಹಿಲ್~, ಭಾರತೀಯ ಛಾಯಾಚಿತ್ರಗಳನ್ನು ಒಳಗೊಂಡ `ಈವೆನಿಂಗ್ ರಾಗಾಸ್~ ಸೇರಿದಂತೆ ಹದಿಮೂರಕ್ಕೂ ಹೆಚ್ಚು  ಗ್ರಂಥಗಳು ಅವರ ಲೇಖನಿಯಿಂದ ಮೂಡಿವೆ.

ಡೆರ‌್ರಿ ಭಾರತಕ್ಕೆ ಮೊದಲು ಬಂದದ್ದು 1976ರಲ್ಲಿ. ಆಗ ರಾಜಾಡಳಿತದ ನಂತರ ದೇಶ ಹೇಗಿತ್ತು ಎಂಬುದನ್ನು ನೋಡುವ ಯತ್ನ ಮೊದಲುಗೊಂಡಿತು. ಖಾಲಿ ಕುರ್ಚಿಗಳ ಅಂತಃಪುರ, ಹುಲಿಚರ್ಮಗಳನ್ನು ಮೆತ್ತಿಕೊಂಡ ರಾಜಸ್ತಾನಿ ಮಹಲು, ಪ್ರತಿಮೆಯ ಎದುರು ಪ್ರತಿಮೆಯೇ ಆಗಿರುವ ಎಳೆಯ... ಎಷ್ಟೊಂದು ಅರ್ಥಗಳು, ಸೂರ್ಯ ಮುಳುಗದ ಸಾಮ್ರಾಜ್ಯ ಎನಿಸಿಕೊಂಡಿದ್ದ ಬ್ರಿಟನ್‌ನ ಪ್ರಜೆಯೊಬ್ಬ ಮಾತ್ರ ತೆಗೆಯಬಹುದಾದ ಚಿತ್ರಗಳು.
ಈ ನೆಲದ ಆ ದಿನಗಳನ್ನು ಅವರು ನೆನೆಯುವುದು ಹೀಗೆ. `ಈಗ ಇಂಥ ಛಾಯಾಚಿತ್ರಗಳನ್ನು ತೆಗೆಯುವುದು ಸಾಧ್ಯವೇ ಇಲ್ಲ. ಕಳೆದ 22 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾಗಿದೆ. ಕೇವಲ `ಅಂತರರಾಷ್ಟ್ರೀಯ ಏಕತಾನತೆ~ಗೆ ತುತ್ತಾದ ಕಟ್ಟಡಗಳಲ್ಲಿ ಮಾತ್ರವಲ್ಲ.

ತಮ್ಮದೇ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಮನುಷ್ಯರೊಳಗೂ ಈ ಬದಲಾವಣೆ ಕಾಣುತ್ತಿದೆ...~

ಅವರ ಕಲಾಕೃತಿಗಳು ಹಾಗೂ ಗ್ರಂಥಗಳ ಸಂಗ್ರಹ ನ್ಯೂಯಾರ್ಕ್‌ನ ಮೆಟ್ರೊಪಾಲಿಟನ್ ವಸ್ತು ಸಂಗ್ರಹಾಲಯ, ಲಂಡನ್‌ನ ರಾಷ್ಟ್ರೀಯ ಭಾವಚಿತ್ರ ಗ್ಯಾಲರಿ ಮಾತ್ರವಲ್ಲದೆ ಅನೇಕ ಖಾಸಗಿ ಸಂಗ್ರಹಕಾರರ ಬಳಿ ಇವೆ.

ಇಂಥ ಡೆರ‌್ರಿ ಅರವತ್ತಕ್ಕೂ ಹೆಚ್ಚು `ಸಂಜೆಯ ರಾಗ~ಗಳನ್ನು ಹೊತ್ತು ಬೆಂಗಳೂರಿಗೆ ಬರುತ್ತಿದ್ದಾರೆ. ಅರ್ಥಾತ್ ಅವರ ಅರವತ್ತಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನ `ಡೆರ‌್ರಿ ಮೂರ್: ಈವೆನಿಂಗ್ ರಾಗಾಸ್~ ಇದೇ ಅ.15ರಿಂದ ನವೆಂಬರ್ 30ರವರೆಗೆ ನಡೆಯಲಿದೆ. ಆಧುನಿಕ ಪೂರ್ವ ಭಾರತದ ಒಳಾಂಗಣ ದೃಶ್ಯ, ವಾಸ್ತುಶಿಲ್ಪ ಹಾಗೂ ಭಾವಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಎಲ್ಲಾ ಛಾಯಾಚಿತ್ರಗಳ ಮೇಲೂ ಡೆರ‌್ರಿ ಸಹಿ ಇರುವುದು ವಿಶೇಷ.

ತಸ್ವೀರ್ ಆರ್ಟ್ಸ್ ತನ್ನ ಏಳನೇ ಪ್ರದರ್ಶನಾ ಋತುವಿನ ಅಂಗವಾಗಿ ಡೆರ‌್ರಿ ಅವರ ಛಾಯಾಚಿತ್ರಗಳನ್ನು ಅನಾವರಣಗೊಳಿಸುತ್ತಿದೆ. ದಮಿಯಾನಿ ಜ್ಯೂಯಲರ್ ಹಾಗೂ ಲಕ್ಷೂರ್ ಲೂಯಿಸ್ ಫಿಲಿಪ್ಪೆ ಪ್ರದರ್ಶನದ ಪ್ರಾಯೋಜಕರು. ಸ್ಥಳ: ದಿ ಗ್ಯಾಲರಿ ಅಟ್ ಸುವಾ ಹೌಸ್, 26/1, ಕಸ್ತೂರಬಾ ಕ್ರಾಸ್ ರಸ್ತೆ. ಬೆಂಗಳೂರು 560001. ಸಮಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ. ಭಾನುವಾರ ರಜೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.tasveerarts.com

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT