ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು-ಬದುಕಿನ ಮಧ್ಯೆ ಕಾಡುಕೋಣ

Last Updated 16 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಕಳಸ: ಎಸ್.ಕೆ.ಮೇಗಲ್ ಗ್ರಾಮದ ಕಾಫಿ ತೋಟದಲ್ಲಿ ಕಾಡುಕೋಣ ಗಾಯಗೊಂಡು ಬಿದ್ದು ಬುಧವಾರಕ್ಕೆ ವಾರ ತುಂಬಿದೆ. ಆದರೆ ಕಾಡುಕೋಣದ ಪ್ರಾಣ ಉಳಿಸಲು ನಡೆದಿರುವ ಪ್ರಯತ್ನದ ಗಂಭೀರತೆಯ ಬಗ್ಗೆ ಗ್ರಾಮಸ್ಥರಿಗೆ ತೃಪ್ತಿ ಇಲ್ಲ.

ಕಳೆದ ಗುರುವಾರ ಅಲ್ಲಿನ ಹಡ್ಲು ಯುವರಾಜ ಅವರ ತೋಟದಲ್ಲಿ ಗಾಯಗೊಂಡು ಏಳಲಾರದ ಸ್ಥಿತಿಯಲ್ಲಿ ಪತ್ತೆಯಾದ ಕಾಡುಕೋಣ ವಾರದ ನಂತರವೂ ಅದೇ ಸ್ಥಿತಿಯಲ್ಲಿ ಇದೆ.

ಸೊಂಟದ ಮೂಳೆ ಮುರಿದು ನಡೆಯಲಾರದ ಸ್ಥಿತಿಯಲ್ಲಿ ಇರುವ ಸುಮಾರು 10 ವರ್ಷ ಪ್ರಾಯದ ದೃಢಕಾಯದ ಕಾಡುಕೋಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಮೂರು ದಿನಗಳಿಂದ ಕಳಸದ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋವು ನಿವಾರಕ ಔಷಧಿಗಳನ್ನು ನೀಡುತ್ತಿದ್ದಾರೆ. ಆದರೆ ಅಷ್ಟರಿಂದಲೇ ಕಾಡುಕೋಣವನ್ನು ಬದುಕಿಸುವುದು ಸಾಧ್ಯವೇ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸ್ಥಳೀಯರು ಮೈಸೂರಿನ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪ್ರಾಣಿಯನ್ನು ಅಲ್ಲಿಗೆ ಕರೆದೊಯ್ದು ಚಿಕಿತ್ಸೆ ನೀಡಲು ಮನವಿ ಮಾಡಿದ್ದಾರೆ. ಈ ಯತ್ನದ ಫಲವಾಗಿ ಮೃಗಾಲಯದ ನಿರ್ದೇಶಕ ಬಿ.ಪಿ. ರವಿ ಮೃಗಾಲಯದ ವೈದ್ಯರೊಂದಿಗೆ ಮಾತನಾಡಿ ಕಳಸದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ನಾಲ್ಕೈದು ಬಾರಿ ಎದ್ದು ಕೆಲ ಹೆಜ್ಜೆ ಓಡಾಡಿ ಕೋಣ ಮತ್ತೆ ಬೀಳುತ್ತಿದೆ. ಇದರಿಂದಾಗಿ ಕೋಣಕ್ಕೆ ಮತ್ತಷ್ಟು ಗಾಯ ಆಗುತ್ತಿದೆ. ಆದ್ದರಿಂದ ಪಶುವೈದ್ಯ ಡಾ.ಪ್ರದೀಪ್, ಕೋಣ ಅಡ್ಡಾಡದಂತೆ ಸುತ್ತಲೂ ತಡೆಯನ್ನು ನಿರ್ಮಿಸುವಂತೆ ಸೋಮವಾರವೇ ಸಲಹೆ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಮಾತ್ರ ಕರ್ತವ್ಯ ಮರೆತಂತೆ ನಿರ್ಲಕ್ಷ್ಯ ತೋರುತ್ತಿದೆ ಎಂದು ತೋಟದ ಮಾಲೀಕ ಯುವರಾಜ್ ಆರೋಪಿಸಿದ್ದಾರೆ.

ಕಾಡುಕೋಣದ ಹಿಂಗಾಲಿನ ಮೂಳೆ ಮುರಿದು ಅದು ವಾರದಿಂದ ಸರಿಯಾಗಿ ಆಹಾರ ಸೇವಿಸದಿರುವುದರಿಂದ ಅದು ಬದುಕುವ ಸಾಧ್ಯತೆ ಶೇ.50 ಮಾತ್ರ ಇದೆ. ಹಾಸನದ ಪಶು ವೈದ್ಯಕೀಯ ಕಾಲೇಜಿನ ಡೀನ್ ವನ್ಯ ಮೃಗಗಳ ಶುಶ್ರೂಷೆಯಲ್ಲಿ ನಿಪುಣರಾಗಿದ್ದಾರೆ. ಆದರೆ ಅರಣ್ಯ ಇಲಾಖೆಯಂತೂ ಕೋಣದ ಬಗ್ಗೆ ಅತ್ಯಂತ ಬೇಜವಾಬ್ದಾರಿ ತೋರುತ್ತಿದೆ ಎಂದೂ ವೈದ್ಯ ಡಾ.ಪ್ರದೀಪ್ ತಿಳಿಸಿದರು.

`ವಿದೇಶದಲ್ಲಾಗಿದ್ದರೆ ಹೆಲಿಕಾಪ್ಟರ್ ಮೂಲಕ ಪ್ರಾಣಿಯನ್ನು ಎತ್ತಿಕೊಂಡು ಹೋಗಿ ಶುಶ್ರೂಷೆ ನೀಡುತ್ತಿದ್ದರು. ಆದರೆ ಇಲ್ಲಿ ಕೋಣದ ಪ್ರಾಣ ಉಳಿಸಲು ಯಾವುದೇ ಬದ್ಧತೆ ಇಲ್ಲವಾಗಿದೆ. ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಸ್ಥಳದ್ಲ್ಲಲೇ ಇದ್ದರೂ ಯಾವುದೇ ನಿರ್ಧಾರ ಕೈಗೊಳ್ಳದೆ ಸಹಾಯಕರಂತೆ ಕಂಡು ಬರುತ್ತಾರೆ~ ಎಂಬುದು ಸ್ಥಳೀಯರ ಆಕ್ರೋಶ.

ಒಂದೆರಡು ದಿನದಲ್ಲಿ ಕೋಣ ಯಾವ ಸ್ಥಿತಿಗೆ ತಲುಪುತ್ತದೆ ಎಂಬ ಆಧಾರದ ಮೇಲೆ ಅದರ ಬದುಕುವ ಸಾಧ್ಯತೆಗಳು ಅವಲಂಬಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT